ADVERTISEMENT

ಪರೀಕ್ಷೆಯೆಂಬ ಪ್ರಹಸನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 19:30 IST
Last Updated 10 ಜನವರಿ 2017, 19:30 IST

ರಾಜ್ಯ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳದಿದ್ದಲ್ಲಿ ಯಾವುದೇ ಮುಂಬಡ್ತಿ ಅಥವಾ ವಾರ್ಷಿಕ ಬಡ್ತಿ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ, ನೌಕರರು ಈ ಪರೀಕ್ಷೆಗೆ ಎದ್ದೆವೋ ಬಿದ್ದೆವೋ ಎಂದು ಹಾಜರಾಗಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಪ್ರಮಾಣಪತ್ರ ಹಾಜರುಪಡಿಸಿದವರಿಗೆ ₹ 5 ಸಾವಿರ ಪ್ರೋತ್ಸಾಹಧನ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ.

ಬಹುತೇಕರು ಹೆದರಿಕೊಂಡು ಓದಿ ಕಷ್ಟಪಟ್ಟು ಪರೀಕ್ಷೆ ಬರೆಯುತ್ತಾರಾದರೂ, ಕೆಲವರು ‘ಹೊಂದಾಣಿಕೆ’ಗೆ ಮುಂದಾಗಿರುವುದು ಸ್ಪಷ್ಟವಾಗುತ್ತದೆ. ಮೈಸೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಶನಿವಾರ ಮತ್ತು ಭಾನುವಾರಗಳಂದು ನಡೆಯುವ ಈ ಪರೀಕ್ಷಾ ಪ್ರಹಸನದಲ್ಲಿ, ಕಂಪ್ಯೂಟರ್‌ ಜ್ಞಾನ ಇಲ್ಲದ ಕೆಲ ಅಭ್ಯರ್ಥಿಗಳೂ 80 ಪ್ರಶ್ನೆಗಳಿಗೆ ಕೇವಲ ಅರ್ಧ ಗಂಟೆಯಲ್ಲಿ ಉತ್ತರಿಸಿ, 70  ಅಂಕಗಳನ್ನು ಗಳಿಸಿ ಹೊರಬಂದಿರುವುದನ್ನು ನೋಡಿದ್ದೇನೆ.

ಕೆಲವು ಸಿಬ್ಬಂದಿ ತಮ್ಮ ಕೇಂದ್ರ ಸ್ಥಾನಕ್ಕೆ ಹೊರತಾದ ಮತ್ತೊಂದು ಕೇಂದ್ರದಲ್ಲಿ ಪರೀಕ್ಷೆ ತೆಗೆದುಕೊಂಡಿರುವುದಾಗಿ ಪ್ರಮಾಣಪತ್ರ ನೀಡುತ್ತಿದ್ದಾರೆ. ವಾಸ್ತವವಾಗಿ ಅವರು ಪರೀಕ್ಷೆಗೇ ಹೋಗಿರುವುದಿಲ್ಲ. ₹ 5000 ಖರ್ಚು ಮಾಡಿದರೆ ಸಾಕು ಪರೀಕ್ಷೆ ಏಕೆ ಬರೆಯಬೇಕು ಎಂಬ ಮಾತು ಕೇಳಿಬರುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಸಿ.ಎಲ್.ಟಿ. ಎಂಬ ಈ ಪರೀಕ್ಷೆ ಕೇವಲ ಗಿಮಿಕ್ಕೇನೊ ಎಂಬ ಭಾವನೆ ಮೂಡುತ್ತದೆ.

ಆಯಾ ಜಿಲ್ಲೆಯ ಅಭ್ಯರ್ಥಿಗಳು ಅಯಾ ಜಿಲ್ಲಾ ಕೇಂದ್ರದಲ್ಲೇ ಪರೀಕ್ಷೆಗೆ ಹಾಜರಾಗಬೇಕು, ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಪ್ರೋತ್ಸಾಹಧನ ನೀಡಬೇಕು, ಪರೀಕ್ಷೆ ಪಾಸು ಮಾಡಲು 3 ಅಥವಾ 5 ಬಾರಿಯಷ್ಟೇ ಅವಕಾಶ ಎಂಬಂತಹ ನಿಯಮಗಳನ್ನು ಸರ್ಕಾರ ಜಾರಿಗೆ ತರಬೇಕು. ಇಲ್ಲದಿದ್ದರೆ ಇದು ಕೂಡ ಒಂದು ಹಗರಣಕ್ಕೆ ದಾರಿ ತೆಗೆಯಬಹುದು.
-ವಿಜಯ್ ಹೆಮ್ಮಿಗೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.