ADVERTISEMENT

ಫಲ ಏನು?

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST

ಕರ್ನಾಟಕದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕು. ಇದು ಹಲವು ದಲಿತ ನಾಯಕರ ಕೂಗು. ಬಿ. ಬಸವಲಿಂಗಪ್ಪ, ರಾಚಯ್ಯ, ಕೆ.ಎಚ್‌. ರಂಗನಾಥ್‌ ಮುಂತಾದ ಅನೇಕ ದಲಿತ ನಾಯಕರು ರಾಜ್ಯದಲ್ಲಿ ಮಂತ್ರಿಗಳಾಗಿದ್ದರು. ದೇಶದಲ್ಲಿ ಜಗಜೀವನರಾಮ್‌, ಮೀರಾ ಕುಮಾರ್‌ ಮುಂತಾಗಿ ಅನೇಕ ದಲಿತ ನಾಯಕರು ಕೇಂದ್ರ ಮಂತ್ರಿಗಳಾಗಿದ್ದರು. ರಾಮವಿಲಾಸ್‌ ಪಾಸ್ವಾನ್‌ ಅವರು ಬೇರೆ ಬೇರೆ ಪಕ್ಷಗಳ ನೇತೃತ್ವದ ಸರ್ಕಾರಗಳಲ್ಲಿ  ಮಂತ್ರಿಯಾಗಿದ್ದಾರೆ. ಮಂತ್ರಿಯಾದವರು ದುಂಡಗಾಗುತ್ತಾರೆ. ಆದರೆ ತುಳಿತಕ್ಕೆ ಒಳಗಾದ ಆ ಸಮುದಾಯಕ್ಕೆ  ಆದ ಲಾಭವೇನು?

ಸಿದ್ದರಾಮಯ್ಯ ಮುಖ್ಯಮಂತ್ರಿ  ಆಗಿದ್ದಾರೆ. ಕುರುಬರೆಲ್ಲ ಕುಬೇರರಾಗಿದ್ದಾರೆಯೇ? ರಾಮಕೃಷ್ಣ ಹೆಗಡೆ, ಗುಂಡೂರಾವ್‌ ಮುಖ್ಯಮಂತ್ರಿ  ಆಗಿದ್ದರು. ಬ್ರಾಹ್ಮಣರೆಲ್ಲ ಉದ್ಧಾರ ಆಗಿದ್ದಾರೆಯೇ!  ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಜೆ.ಎಚ್‌. ಪಟೇಲ್‌, ಯಡಿಯೂರಪ್ಪ, ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ  ಆಗಿದ್ದರಲ್ಲ, ಲಿಂಗಾಯತರೆಲ್ಲ ಸಮೃದ್ಧರಾಗಿದ್ದಾರೆಯೇ!?

ಝಾಕಿರ್‌ ಹುಸೇನ್‌, ಫಕ್ರುದ್ದೀನ್‌  ಅಲಿ ಅಹಮದ್‌ ರಾಷ್ಟ್ರಪತಿಗಳಾಗಿದ್ದರು. ಜಾಫರ್‌ ಷರೀಫ್‌ ಕೇಂದ್ರದಲ್ಲಿ  ಮಂತ್ರಿಗಳಾಗಿದ್ದರು. ಸಿ.ಎಂ. ಇಬ್ರಾಹಿಂ ಮಂತ್ರಿಯಾಗಿದ್ದರು. ಅಲ್ಪಸಂಖ್ಯಾತರು ಆಕಾಶಕ್ಕೇರಿದರೇ? ಎಲ್ಲರಿಗೂ ಅವಕಾಶ ಸಿಗಬೇಕು ನಿಜ. ಜಾತಿ ಕೋಟಾದಲ್ಲಿ ಪೇಟಾ ಸುತ್ತಿಕೊಂಡು ವ್ಯಕ್ತಿ ದುಂಡಗಾಗುತ್ತಾರೆ. ಸಮುದಾಯ, ಸಮಾಜ ಅಲ್ಲಿಯೇ ಉಳಿಯುತ್ತವೆ. 49 ವರ್ಷ ರಾಜಕೀಯ ಮಾಡಿ ಮುಖ್ಯಮಂತ್ರಿ ಸ್ಥಾನ ಹೊರತುಪಡಿಸಿ ಎಲ್ಲ ಸ್ಥಾನ ಅನುಭವಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸಮುದಾಯ ಇರಲಿ ತಮ್ಮ ಜಿಲ್ಲೆಗೆ ಏನು ಮಾಡಿದ್ದಾರೆಂದು ಹೇಳಬೇಕಲ್ಲವೇ?

ಶಾಲೆಯ ಸರ್ಟಿಫಿಕೇಟುಗಳಲ್ಲಿ ಜಾತಿ ಎಂಬ ಕಾಲಂ ಕಿತ್ತು ಬಿಸಾಕಿ ನಾವೆಲ್ಲ ಭಾರತೀಯರು ಎಂದು ಮೊದಲು ನಿರೂಪಿಸಿರಿ. ನಂತರ ಅವಕಾಶಗಳ ಬಗ್ಗೆ ಯೋಚಿಸೋಣ. ವೇದಿಕೆಯ ಮೇಲೆ ಜಾತ್ಯತೀತ! ಭಾಷಣ ಮಾಡಿ ಕೆಳಗೆ ಇಳಿದು ಜಾತಿ ಆಧಾರಿತ ಅವಕಾಶದ ನಾಟಕ ಮೊದಲು ನಿಲ್ಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.