ADVERTISEMENT

ಭಾಷೆ... ಬೆಳಕಾಗಬೇಕು

ಪ್ರಜಾವಾಣಿ ವಿಶೇಷ
Published 4 ಅಕ್ಟೋಬರ್ 2015, 19:30 IST
Last Updated 4 ಅಕ್ಟೋಬರ್ 2015, 19:30 IST

ಇತ್ತೀಚೆಗೆ ವಿಚಾರವಾದಿಗಳು ದನಿ ಎತ್ತುತ್ತಿರುವ ಧಾರ್ಮಿಕ ಹಾಗೂ ಪುರಾಣ ವಿಚಾರಗಳು ವಿವೇಕಾನಂದ, ಕುವೆಂಪುರಂಥ ದಾರ್ಶನಿಕರು ದನಿ ಎತ್ತಿದ ಮುಂದುವರಿದ ಭಾಗಗಳು. ಜಡ್ಡುಗಟ್ಟಿದ ಧಾರ್ಮಿಕ ಕೊಳೆಯನ್ನು ಮನುಕುಲ ಉದ್ಧಾರ ದೃಷ್ಟಿಯಿಂದ ಪರಿಷ್ಕಾರಗೊಳಿಸುವುದು ಅನಿವಾರ್ಯ, ಅತ್ಯಗತ್ಯ. ಶತಶತಮಾನಗಳಿಂದ ಆ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಮನಸ್ಸುಗಳ ಕುರಿತು ಹೇಳುವಾಗ ಆ ಭಾಷೆ ಬೆಂಕಿಯಾಗದೆ ಬೆಳಕಾಗಬೇಕು.

ಜಗತ್ತಿನ ಕೌಟುಂಬಿಕ ಬೆಳವಣಿಗೆಯಲ್ಲಿ ಅನೇಕ ಹಂತಗಳಿವೆ. ‘ಅಪುತ್ರಸ್ಯ ಗತಿರ್ನಾಸ್ತಿ’ ಎಂಬ ಶ್ರದ್ಧಾನಂಬಿಕೆಯ ಕಾಲ ಘಟ್ಟದಲ್ಲಿ ಮಕ್ಕಳಿಲ್ಲದವರು ವಂಶೋದ್ಧಾರಕ ಮಗನನ್ನು ಪಡೆಯುವ ಹಂಬಲದಲ್ಲಿ ಪತ್ನಿಯಾದವಳು ತನ್ನ ಪತಿಯ ಅನುಮತಿಯ ಮೇರೆಗೆ ಅನ್ಯ ಪುರುಷನನ್ನು ಕೂಡಿ ಪುತ್ರ ಸಂತಾನ ಪಡೆಯಬಹುದಾಗಿತ್ತು. ಅದಕ್ಕೆ ಸಮಾಜದ ಅಂಗೀಕಾರವಿತ್ತು. ಅದು ನಿಯೋಗ ಪದ್ಧತಿ. ಅನ್ಯ ಮಾತಿನಲ್ಲಿ ಹೇಳುವುದಾದರೆ ಅದು ತಳಿ ಅಭಿವೃದ್ಧಿ. ದಶರಥ, ಪಾಂಡು ಪತ್ನಿಯರದು ಈ ಸಂಗತಿ. ವ್ಯಾಸ, ವಾಲ್ಮೀಕಿಗಳು ದೇವಾನುದೇವತೆಗಳ ಮರೆಯಲ್ಲಿ ಪುರಾಣೀಕರಿಸಿದ್ದು ಈ ರೀತಿಯ ರೂಪಕಗಳು.

ಹೀಗಿರುವಾಗ ನಾಗರಿಕ ಜಗತ್ತಿನಲ್ಲಿರುವ ನಾವು ಪಾಂಡವರು ಅಪ್ಪನಿಗೆ ಹುಟ್ಟಿಲ್ಲ, ಹಾದರಕ್ಕೆ ಹುಟ್ಟಿದವರು ಎಂಬ ಹಗುರ ಭಾಷೆಯಲ್ಲಿ ಹೇಳುವುದನ್ನು ಪರಂಪರೆಯು ನಿರಾಕರಿಸುತ್ತದೆ. ಮಾತೃ ಪ್ರಧಾನ ವ್ಯವಸ್ಥೆಯಲ್ಲಿದ್ದ ಇಂಥ ಸಂಗತಿಗಳನ್ನು ಕುರಿತು ಹೇಳುವಾಗ ಮಾತೆಯನ್ನು ಕಳಂಕಿನಿ ಸ್ಥಾನಕ್ಕೆ ನೂಕಿದಂತಾಗುತ್ತದೆ. ಇದು ಸಾಮಾಜಿಕ ನ್ಯಾಯ ಹಾಗೂ ಲಿಂಗ ಸಮಾನ ರೀತಿಗಳನ್ನು ಕೆಣಕುವ ವಿಧಾನ. ಭಗವದ್ಗೀತೆ, ಕಾಲಕಾಲಕ್ಕೆ ಚರ್ಚೆಯಾಗುತ್ತಿರುವ ಚರ್ಚೆಯಾಗಬೇಕಾದ ಒಂದು ಅಂತರ್‌ ಸಂವಿಧಾನ. ಎಲ್ಲಾ ಧರ್ಮೀಯ ಗ್ರಂಥಗಳಿಗೂ ಈ ಮಾತು ಅನ್ವಯಿಸುತ್ತದೆ. ಇಂತಹವುಗಳ ಪರಿಷ್ಕಾರವಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರ ಪ್ರಸ್ತಾಪವಾಗುತ್ತಿರಬೇಕು. ಹೇಳುವುದನ್ನು ಬೆಳಕಿನ ಕಡೆಗೆ ಚಲನಗೊಳಿಸುವಂತೆ ಹೇಳಬೇಕು. ಅದನ್ನು ಎಡಪಂಥೀಯರು ಒಪ್ಪುತ್ತಾರೆ. ಬಲಪಂಥೀಯರು ಕೂಡ ಸತ್ಯ ಕಂಡರೆ ಅನುಮೋದಿಸಲೇಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.