ADVERTISEMENT

ರೈತರಿಗೆ ಪರಿಹಾರ

ಮುಳ್ಳೂರು ಪ್ರಕಾಶ್‌, ಮೈಸೂರು
Published 24 ಮೇ 2016, 19:30 IST
Last Updated 24 ಮೇ 2016, 19:30 IST

ಸರ್ಕಾರ ವಶಪಡಿಸಿಕೊಂಡ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಲ್ಡರ್‌ಗಳಿಗೆ ವರ್ಗಾಯಿಸಬಾರದು. ಸ್ವಾಧೀನಪಡಿಸಿಕೊಂಡ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಬಳಸದಿದ್ದರೆ ಭೂಮಿಯನ್ನು ರೈತರಿಗೆ ಅಥವಾ ಮೂಲ ಮಾಲೀಕರಿಗೆ ವಾಪಸ್‌ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು (ಪ್ರ.ವಾ., ಮೇ 18) ಸ್ವಾಗತಾರ್ಹ.

ತಲೆಮಾರುಗಳಿಂದ ತಮ್ಮನ್ನು ಸಲಹಿದ ಭೂಮಿಯನ್ನು ರೈತರ ಒಪ್ಪಿಗೆ ಇಲ್ಲದೆ ‘ಸಾರ್ವಜನಿಕ  ಉದ್ದೇಶ’ ಎಂದು ಹೇಳಿ ಸ್ವಾಧೀನಪಡಿಸಿಕೊಂಡು, ಅಷ್ಟಿಷ್ಟು ಪರಿಹಾರ ನೀಡಿ ಅವರನ್ನು ಬೀದಿಪಾಲು ಮಾಡುತ್ತಿರುವ ಸರ್ಕಾರಗಳ ನೀತಿ ಬ್ರಿಟಿಷ್‌ ಅರಸೊತ್ತಿಗೆಯಂತೆಯೇ ಇದೆ. ವಸತಿ ಉದ್ದೇಶಕ್ಕೆ ಖಾಸಗಿ ಬಿಲ್ಡರ್‌ಗಳು ರೈತರ ಜಮೀನನ್ನು ದೊಡ್ಡ ಮಟ್ಟದಲ್ಲಿ ಖರೀದಿಸುವುದನ್ನು ತಪ್ಪಿಸಬೇಕು. ಇದಕ್ಕೆ ನಿರ್ಬಂಧ ವಿಧಿಸಬೇಕು. ಸರ್ಕಾರ ಕೂಡ ಕೈಗಾರಿಕಾ ಉದ್ದೇಶಕ್ಕೆಂದು ರೈತರ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೋದ್ಯಮಿಗಳಿಗೆ ಅಗತ್ಯಕ್ಕಿಂತ ಹೆಚ್ಚಿಗೆ ನೀಡುವುದನ್ನು ಕೈಬಿಡಬೇಕು.

ಎಕರೆ ಜಮೀನಿಗೆ ರೈತರಿಗೆ ಒಂದೆರಡು ಲಕ್ಷ ರೂಪಾಯಿ ನೀಡಿ ಖರೀದಿಸುವ ರಿಯಲ್‌ ಎಸ್ಟೇಟ್‌ ಕುಳಗಳು,  ನಂತರ ಆ ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಿ ಒಂದು ನಿವೇಶನಕ್ಕೆ ₹ 10 ಲಕ್ಷದಿಂದ ₹ 20 ಲಕ್ಷ  ದರ ನಿಗದಿಪಡಿಸಿ ಕೊಳ್ಳೆ ಹೊಡೆಯುತ್ತಿದ್ದಾರೆ.

ಜಮೀನು ಮಾಲೀಕರಿಗೆ  ಎಕರೆಗೆ ಒಂದು ನಿವೇಶನದ ಬೆಲೆಯೂ ದೊರೆಯುವುದಿಲ್ಲ. ವಸತಿ ಉದ್ದೇಶಕ್ಕೆ ಜಮೀನು ಸ್ವಾಧೀನ ಅಗತ್ಯ ಎಂದು ಭಾವಿಸುವುದಾದರೆ, ರೈತರಿಂದ ಖರೀದಿಸಿದ ಜಮೀನಿನಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳ ಮಾರಾಟದಿಂದ ದೊರೆಯುವ ಲಾಭಾಂಶದಲ್ಲಿ ರೈತರಿಗೆ ಪಾಲು ಸಿಗಬೇಕು.   ಕೈಗಾರಿಕೆಗಳ ಲಾಭಾಂಶದಲ್ಲಿಯೂ ಪಾಲು ದೊರೆಯಬೇಕು.  ಈ ನಿಟ್ಟಿನಲ್ಲಿ ಕಾನೂನು ರೂಪಿಸಿದರೆ ಮಾತ್ರ ರೈತರ ಹಕ್ಕನ್ನು ರಕ್ಷಿಸಿದಂತಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.