ADVERTISEMENT

ಲಾಭಕೋರ ಸಂಸ್ಥೆ?

ರಾಜು ಪಿ.
Published 9 ಫೆಬ್ರುವರಿ 2016, 19:38 IST
Last Updated 9 ಫೆಬ್ರುವರಿ 2016, 19:38 IST

ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಮರು ಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಹೊಸ ನಿಯಮಗಳು ಹಾಗೂ ಷರತ್ತುಗಳು, ವಿದ್ಯಾರ್ಥಿಗಳು ಭಾರಿ ಬೆಲೆ ತೆರಲು ಸಿದ್ಧರಾಗಬೇಕು ಎಂಬಂತಿದೆ.

ಇನ್ನು ಮುಂದೆ ಇಲಾಖೆ ಉತ್ತರ ಪತ್ರಿಕೆಗಳನ್ನು ಅಂಚೆ ಮೂಲಕ ರವಾನಿಸದೆ ವೆಬ್‌ಸೈಟಿನಲ್ಲಿ ಅಳವಡಿಸುತ್ತದೆ. ಅದನ್ನು ನೋಡಲು ಬೇಕಾಗುವ ಪಾಸ್‌ವರ್ಡ್‌ ಪಡೆಯಲು  ಪ್ರತಿ ವಿಷಯಕ್ಕೆ ₹ 504ನ್ನು ವಿದ್ಯಾರ್ಥಿಗಳು ಪಾವತಿಸಬೇಕು. ಸುಮಾರು 20–30 ಪುಟಗಳ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ವೆಬ್‌ಸೈಟಿಗೆ ಅಳವಡಿಸಲು ಇಲಾಖೆಗೆ ಇಷ್ಟೊಂದು ಹಣ ವೆಚ್ಚವಾಗುತ್ತದೆಯೇ? ಪಿ.ಯು. ಇಲಾಖೆಯು ಸರ್ಕಾರಿ ಇಲಾಖೆಯೋ ಅಥವಾ ಲಾಭಕೋರ ಖಾಸಗಿ ಸಂಸ್ಥೆಯೋ ಎಂಬ ಅನುಮಾನ ಮೂಡುತ್ತದೆ.

ವಿದ್ಯಾರ್ಥಿಗಳು ಪಾಸ್‌ವರ್ಡ್‌ ಪಡೆದರೆ ಅಷ್ಟಕ್ಕೇ ಮುಗಿಯುವುದಿಲ್ಲ. ಉತ್ತರ ಪತ್ರಿಕೆಗಳನ್ನು ನೋಡಲು ಇಂಟರ್‌ನೆಟ್ ವೆಚ್ಚ, ಅಗತ್ಯವಿದ್ದರೆ ಉತ್ತರ ಪತ್ರಿಕೆಗಳ ಮುದ್ರಣ ವೆಚ್ಚವನ್ನೂ ಹೆಚ್ಚುವರಿಯಾಗಿ ವ್ಯಯಿಸಬೇಕು. ಅಲ್ಲದೆ ಹಾಗೆ ಪಡೆದ ಪ್ರತಿಗಳನ್ನು ಯಾರಿಗೂ ತೋರಿಸುವಂತಿಲ್ಲ. ಆಗ ಅದರ ಕುರಿತು ಯಾರ ಸಲಹೆಯನ್ನೂ ಪಡೆಯಲು ಸಾಧ್ಯವಿಲ್ಲ.  ಪ್ರತಿ ವಿಷಯದ ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಮತ್ತೆ ಹೆಚ್ಚುವರಿಯಾಗಿ  ₹1,596ನ್ನು ಪಾವತಿಸಬೇಕು. ಅಷ್ಟೆಲ್ಲ ವೆಚ್ಚ ಮಾಡಿದರೂ ಫಲಿತಾಂಶದಿಂದ ತೃಪ್ತಿಯಾಗದಿದ್ದರೆ ಅದನ್ನು ಎಲ್ಲಿಯೂ ಪ್ರಶ್ನಿಸುವಂತಿಲ್ಲ. ಹಾಗೆಂದು ಮೊದಲೇ ಮುಚ್ಚಳಿಕೆ ಬರೆದುಕೊಡಬೇಕು. ಇದು ಸರಿಯೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.