ADVERTISEMENT

ಸಲ್ಲಬೇಕಾದ ಗೌರವ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST

ಎ. ಸೂರ್ಯಪ್ರಕಾಶ್ ಅವರು ಸರ್ದಾರ್ ಅವರಿಗೆ ಸಲ್ಲಬೇಕಾದ ಗೌರವದ ಬಗ್ಗೆ ಅಭಿಮಾನದಿಂದ ಚರ್ಚಿಸುವಾಗ ‘ನೆಹರೂ– ಗಾಂಧಿ ಸಣ್ಣತನ ಹಾಗೂ ಅವರಲ್ಲಿಯ ಅಭದ್ರತೆಯ ಭಾವದ ಕಾರಣದಿಂದಾಗಿ ದೇಶದ ಪ್ರಜ್ಞೆಯಲ್ಲಿ ಸರ್ದಾರ್ ಅವರಿಗೆ ಸರಿಯಾದ ಸ್ಥಾನಸಿಕ್ಕಿಲ್ಲ’ ಎಂಬ ಸಣ್ಣತನದ ಮಾತನಾಡಿದ್ದಾರೆ (ಪ್ರ.ವಾ., ನ. 15). 554 ಸಂಸ್ಥಾನಗಳ ಸರಪಣಿ ಬಿಚ್ಚಿ ಭಾರತ– ಪಾಕಿಸ್ತಾನಗಳೆಂಬ ದೇಶ ಸೃಷ್ಟಿಸುವಾಗ ‘ಉಕ್ಕಿನ ಮನುಷ್ಯ’ನ ಕಠಿಣ ನಿರ್ಧಾರ ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಪ್ರಧಾನಿಯ ಪಾತ್ರ ಎಂಬುದು ಚರಿತ್ರೆ.

ಭಿನ್ನಾಭಿಪ್ರಾಯಗಳನ್ನು ಒಂದುಗೂಡಿಸುವ ತತ್ವವೇ ಪ್ರಜಾಪ್ರಭುತ್ವ. ಗೃಹ ಮಂತ್ರಿಯಾಗಿ ಪಟೇಲರು ಅದನ್ನು ಶ್ರಮವಹಿಸಿ ಮಾಡಿದರು ಸರಿ, ತಪ್ಪುಗಳು ಎಲ್ಲರಿಂದಲೂ ಆಗುತ್ತವೆ. ಅವುಗಳನ್ನು ದೊಡ್ಡದಾಗಿ ಚರಿತ್ರೆಯಲ್ಲಿ ಕೆದಕುತ್ತಾ ಹೋದರೆ ಮಹಾನ್ ನಾಯಕರು ಒಂದೊಂದು ಪಕ್ಷದ ಪಾಲಾಗಿ ಬಿಡುತ್ತಾರೆ.

ಗಾಂಧೀಜಿಯನ್ನು ‘ಕೊಲ್ಲುವವರಿದ್ದರು ಖರೆ, ಕಾಯುವವರಿದ್ದರೇ?’ ಎಂಬ ಸುಧೀಂದ್ರ ಬುಧ್ಯ ಅವರ ಲೇಖನದ (ಪ್ರ.ವಾ., ಅ.20) ಹಿನ್ನೆಲೆಯಲ್ಲಿ ನೋಡಿದರೆ ಸರ್ದಾರರು ಗೃಹ ಮಂತ್ರಿಯಾಗಿ ತಪ್ಪು ಮಾಡಿದ್ದನ್ನು ದೊಡ್ಡದಾಗಿ ಹೇಳಬಹುದು. ಮೋದಿ ನೇತೃತ್ವದ ಸರ್ಕಾರದ ‘ಸರ್ದಾರ್ ಪ್ರೀತಿ’ ಸೂರ್ಯಪ್ರಕಾಶರಿಗೆ ಮೆಚ್ಚುಗೆಯಾಗುವಾಗ ಇತರರನ್ನು ಕುಬ್ಜರನ್ನಾಗಿ ಮಾಡುವುದು, ಆಕಾಶದೆತ್ತರಕ್ಕೆ ಸರ್ದಾರರ ಪ್ರತಿಮೆ ಮಾಡುತ್ತಾ ದೇಶದ ಮಹಾನ್ ನಾಯಕರ ಮೂಲಕ ದೇಶ ವಿಭಜಿಸುವವರಿಗೆ ಮತ್ತೊಮ್ಮೆ ಏಣಿ ಹಾಕಿ ಕೊಟ್ಟಂತಾಗುತ್ತದೆ.

ADVERTISEMENT

ಯಾರೇ ಆಗಲೀ ಮಹಾನ್ ನಾಯಕರ ಬಗ್ಗೆ ಬರೆಯುವಾಗ ತೂಕದ ಅಕ್ಷರಗಳನ್ನು ಅಲ್ಲಿಡಬೇಕು. ಅವರನ್ನು ಇಡಿಗಾಳಾಗಿ ಓದುಗರಿಗೆ ಬಿತ್ತಬೇಕು. ಒಡಕು ಬೇಳೆ ನೆಲದಲ್ಲಿ ಉದಿಸುವುದಿಲ್ಲ.
–ಡಾ. ರಾಜೇಗೌಡ ಹೊಸಹಳ್ಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.