ADVERTISEMENT

‘ನಿಲ್ಲದ ವಾಹನ’

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 19:30 IST
Last Updated 29 ಜೂನ್ 2015, 19:30 IST


ಜೂನ್‌ 22 ರಂದು ನಾವು ನಾಲ್ಕು ಮಂದಿ ವಸಂತಪುರಕ್ಕೆ ಹೋಗಲು ಬೆಳಿಗ್ಗೆ 11.45ಕ್ಕೆ ಕಾರ್ಪೋರೆಷನ್‌ ನಿಲ್ದಾಣದ ಬಳಿ ಬಸ್‌ಗಾಗಿ ಕಾಯುತ್ತಿದ್ದೆವು.  ಕುಮಾರಸ್ವಾಮಿ ಲೇಔಟ್‌ ಕಡೆಗೆ ಹೋಗುವ ಇನ್ನೂ 5–6 ಮಂದಿ ಅಲ್ಲಿ ಇದ್ದರು. ಸುಮಾರು 12.05ಕ್ಕೆ ಬೆಂ.ಮ.ನಿ.ದಿಂದ ಬಂದ 210ಆರ್‌ ಮಾರ್ಗದ ವಾಹನ ಕಾರ್ಪೋರೆಷನ್‌ ನಿಲ್ದಾಣದ ಬಳಿ ನಿಲ್ಲಿಸಲೇ ಇಲ್ಲ.

ನೇರವಾಗಿ ಮಾರ್ಕೆಟ್‌ ನಿಲ್ದಾಣದಲ್ಲಿ ಚಾಲಕ ನಿಲ್ಲಿಸಿದನೆಂದು ಆ ಬಸ್‌ನಲ್ಲಿದ್ದ ನಮ್ಮ ಸ್ನೇಹಿತರಿಂದ ನಂತರ ನಮಗೆ ತಿಳಿಯಿತು. ಆ ವಾಹನದ ಸಂಖ್ಯೆ ‘ಕೆಎ 53ಎಫ್‌ 229’ ಆಗಿರುತ್ತದೆ. ಸಾಕಷ್ಟು ಕಾದರೂ ಬಸ್‌ ಬರುವುದಿಲ್ಲ, ಆಗೊಮ್ಮೆ ಈಗೊಮ್ಮೆ ಬರುವ ಬಸ್‌ನ ಪರಿ ಈ ರೀತಿ ಆದರೆ, ಬಿ.ಎಂ.ಟಿ.ಸಿ. ವಾಹನವನ್ನೇ ನಂಬಿದವರ ಗತಿ ಏನು? ಸಂಬಂಧಪಟ್ಟ ಚಾಲಕರ– ನಿರ್ವಾಹಕರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಬೇಕೆಂದು ಸಂಸ್ಥೆಯ ಅಧಿಕಾರಿಗಳಲ್ಲಿ ಕೋರುತ್ತೇವೆ. -ನೊಂದ ಪ್ರಯಾಣಿಕರು

ಬಸ್‌ ಪುನರಾರಂಭಿಸಿ
ಈ ಹಿಂದೆ ಬನಶಂಕರಿಯಿಂದ (ಜಯನಗರ 8ನೇ ಬ್ಲಾಕ್‌) ಮಾರ್ಗ ಸಂಖ್ಯೆ 14ರ ಬಸ್ಸು ಮಲ್ಲೇಶ್ವರಂ 18ನೇ ಅಡ್ಡರಸ್ತೆಗೆ ಹಾಗೂ ಮಾರ್ಗ ಸಂಖ್ಯೆ1ರ ಬಸ್‌ ಜಯನಗರ 4ನೇ ಬ್ಲಾಕ್‌ನಿಂದ (ಬಸ್‌ ನಿಲ್ದಾಣ) ಯಶವಂತಪುರಕ್ಕೆ ಒಂದೇ ಮಾರ್ಗದಲ್ಲಿ ಪೈಪೋಟಿಯಂತೆ ಓಡಾಡುತ್ತಿತ್ತು. ಅದರಿಂದ ಗಾಂಧಿಬಜಾರ್‌, ಚಾಮರಾಜಪೇಟೆ, ಕೆ.ಆರ್‌. ಪೇಟೆ, ಮಾರ್ಕೆಟ್‌, ಮಲ್ಲೇಶ್ವರಕ್ಕೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಈಗ ಈ ಎರಡೂ ಮಾರ್ಗದ ಬಸ್‌ಗಳು ರದ್ದಾಗಿವೆ. ಹೀಗಾಗಿ ಎಂಟನೇ ಬ್ಲಾಕ್‌ನಿಂದ ಮಲ್ಲೇಶ್ವರಂ ಹಾಗೂ ಯಶವಂತಪುರಕ್ಕೆ ಹೋಗಿ ಬರುವ ಪ್ರಯಾಣಿಕರಿಗೆ ತೊಂದರೆ ಆಗಿದೆ. ಈಗ ಪುನಾ ರದ್ದಾಗಿರುವ ಈ ಎರಡೂ ಬಸ್‌ಗಳ (ಮಾರ್ಗ ಸಂಖ್ಯೆ 14  ಹಾಗೂ ಮಾರ್ಗ ಸಂಖ್ಯೆ 1) ಓಡಾಟ ಆರಂಭವಾದೀತೇ? - ಬೆಳ್ಳಾವೆ ರಮೇಶ್‌

ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿ
ನಗರದಲ್ಲಿ ಪ್ರತಿದಿನ ಶಾಲಾ ಕಾಲೇಜುಗಳಿಗೆ ವಿವಿಧ ಬಡಾವಣೆಗಳಿಂದ ಸಂಚರಿಸುವ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ವಿಶೇಷವಾದಂತಹ ಬಸ್‌ಗಳನ್ನು ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಕಲ್ಪಿಸಿಕೊಟ್ಟರೆ ವಿದ್ಯಾರ್ಥಿ ಸಮುದಾಯಕ್ಕೆ ಸಾಕಷ್ಟು ಸಮಯವೂ ಉಳಿಯುತ್ತದೆ ಮತ್ತು ತೊಂದರೆಯೂ ನಿವಾರಣೆಯಾಗುತ್ತದೆ. ವಿಧಾನಸೌಧ ಮತ್ತು ವಿಕಾಸಸೌಧದ ಮುಂಭಾಗದಲ್ಲಿ ಸರ್ಕಾರಿ ನೌಕರಿಗಾಗಿ ಬಸ್‌ ಸೌಲಭ್ಯಗಳಿರುವಂತೆ ಇವರಿಗೂ ಕಲ್ಪಿಸಿಕೊಡಿ.

ಪ್ರತಿಯೊಂದು ಬಸ್ಸಿನಲ್ಲಿಯೂ ಹತ್ತಾರು ಮಕ್ಕಳು ಇಕ್ಕಟ್ಟಿನ ನಡುವೆ ಪ್ರಯಾಣಿಸುತ್ತಲೇ ಇರುತ್ತಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಹೋಗಬೇಕಾಗಿರುವುದರಿಂದ ಅವರು ಸಿಕ್ಕಿದ ಬಸ್‌ಗಳನ್ನು ಹತ್ತುತ್ತಾರೆ. ಹೇಗಿದ್ದರೂ ಬಸ್‌ ಪಾಸ್‌ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಕೆಲವು ಬಸ್‌ಗಳ ವ್ಯವಸ್ಥೆ ಮಾಡಿದರೆ ತುಂಬಾ ಅನುಕೂಲವಾಗುತ್ತದೆ. ಮಳೆಗಾಲದಲ್ಲಿ ಪುಟ್ಟ ಮಕ್ಕಳು ಮತ್ತು ವಿದ್ಯಾರ್ಥಿನಿಯರು ಬಸ್‌ನಲ್ಲಿ ಪ್ರಯಾಣ ಮಾಡಲು ಪಡುವಂತಹ ತೊಂದರೆಗಳನ್ನು ಕಂಡರೆ ಎಂಥವರಿಗೂ ಅಯ್ಯೋ ಎನಿಸುತ್ತದೆ. ದಯಮಾಡಿ ಸಾರಿಗೆ ಸಚಿವರು ಇತ್ತ ಗಮನ ಹರಿಸಲಿ. -ಕೆ.ಎಸ್‌. ನಾಗರಾಜ್‌

ಪ್ರಚಾರದ ಹಾಳೆಗಳನ್ನು ತೆಗೆಸಿ
ಪ್ರತಿದಿನ ಸಾವಿರಾರು ಜನ ನಗರದ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಆಗ ಯಾವ ಜಾಗದಲ್ಲಿ ಬಸ್‌ ಹೋಗುತ್ತಿದೆ, ಯಾವ ಸ್ಟಾಪಿಗೆ ಬಂದಿದ್ದೇವೆ ಎಂಬುದು ತಿಳಿಯುವುದೇ ಇಲ್ಲ. ಯಾಕೆಂದರೆ ಕೆಲವು ಬಸ್‌ನ ಗಾಜುಗಳಿಗೆ ಜಾಹೀರಾತು ಪತ್ರಗಳನ್ನು ಅಂಟಿಸಲಾಗುತ್ತದೆ. ನಮ್ಮ ಸೌಕರ್ಯಕ್ಕಾಗಿ ಬಸ್‌ಗಳಿವೆ. ಆದರೆ ಜಾಹೀರಾತಿನವರು ಈ ನಮ್ಮ ಸೌಕರ್ಯವನ್ನು ದುರುಪಯೋಗ ಮಾಡಿಕೊಂಡು ನಾಗರಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಸಂಬಂಧಪಟ್ಟವರು ಗಮನಹರಿಸಿ ಈ ಜಾಹೀರಾತು ಪೇಪರುಗಳನ್ನು ತೆಗೆಸಿದರೆ ಅನುಕೂಲ. -ಉರಲಿಂಗಪ್ಪ. ಜಿ.

ಮಳೆಗಾಲದ ತೊಂದರೆ ನಿವಾರಿಸಿ
ಬಿಬಿಎಂಪಿ ಚುನಾವಣೆಯ ದಿನಾಂಕ ಪ್ರಕಟವಾಗಿದೆ. ಚುನಾವಣೆಯು ಮುಗಿದ ನಂತರ, ಬರುವ ಮಾನ್ಯ ಪ್ರಜಾಪ್ರತಿನಿಧಿಗಳು (ಕಾರ್ಪೋರೆಟರ್‌ಗಳು), ಬೆಂಗಳೂರು ನಗರದ ಮುಂದಿನ ಅಭಿವೃದ್ಧಿ ಯೋಜನೆಗಳನ್ನು ಮೊದಲು ತಮ್ಮ ಮನಸ್ಸಿಗೆ ತಂದುಕೊಳ್ಳಬೇಕು. ಜೆ.ಪಿ. ನಗರ, ಪುಟ್ಟೇನಹಳ್ಳಿ, ಸಾರಕ್ಕಿ ಕೆರೆ ಮುಂತಾದ ಹಲವು ಬಡಾವಣೆಗಳಲ್ಲಿ ರಸ್ತೆಗಳು ಸರಿಯಿಲ್ಲ. ಮಳೆಗಾಲದಲ್ಲಿ ಇನ್ನಿಲ್ಲದ ತೊಂದರೆಗಳನ್ನು ಬಸ್ಸು, ಕಾರು, ಸ್ಕೂಟರು ಚಾಲಕರಿಗೆ ತಂದೊಡ್ಡುತ್ತಿವೆ. ಮೂಲೆ ಮೂಲೆಗಳಲ್ಲಿನ ಕಸದ ಗುಡ್ಡೆಗಳು, ಇನ್ನೂ ಸಂಪರ್ಣವಾಗಿ, ಸ್ವಚ್ಛಗೊಂಡಿಲ್ಲ.

ಹೊಸದಾಗಿ ಮನೆ ಕಟ್ಟುವವರು, ರಾಶಿ ರಾಶಿ ಮರಳು, ಮಣ್ಣು, ಕಲ್ಲುಗಳನ್ನು ಮನೆ ಕೆಲಸ ಮುಗಿದ ನಂತರವೂ ಹಾಗೆಯೇ ಪೇರಿಸಿದ್ದು, ವಾಹನ ಚಾಲಕರಿಗೆ, ಸಾರ್ವಜನಿಕರಿಗೆ, ಸಲೀಸಾಗಿ ಓಡಾಡುವುದಕ್ಕೂ ತೊಂದರೆ ಮಾಡುತ್ತಿರುತ್ತಾರೆ. ನಗರಸಭಾ ಸದಸ್ಯರು ತಮ್ಮ ತಮ್ಮ ವಾರ್ಡುಗಳಲ್ಲಿನ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿ, ಅವುಗಳಿಗೆ ಸೂಕ್ತ ಪರಿಹಾರವನ್ನು ಕಲ್ಪಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ. -ನಖಾತೆ ಆನಂದರಾವ್‌

ರಸ್ತೆಯ ಅತಿಕ್ರಮಣ ತೆರವುಗೊಳಿಸಿ
ಜಯನಗರ ನಿಲ್ದಾಣದಿಂದ ಮೌಂಟ್‌ ಕಾರ್ಮಲ್‌ ಶಾಲೆಯ ತನಕ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಿರುತ್ತಾರೆ. ಇದು ನೋ ಪಾರ್ಕಿಂಗ್‌ ಸ್ಥಳವಾಗಿದ್ದು ರಸ್ತೆ ಇಕ್ಕಟ್ಟಾಗಿದೆ. ವಾಹನಗಳ ಸಂಚಾರವೂ ಅಧಿಕ. ಈ ರಸ್ತೆಯ ಎರಡೂ ಬದಿಗಳಲ್ಲಿ, ಸೈಕಲ್‌ ಸವಾರರಿಗೆಂದೇ ‘ಸೈಕಲ್‌ ಪಥ’ ಗುರುತಿಸಿದ್ದರು. ಆದರೆ ಈಗದು ‘ಪಾರ್ಕಿಂಗ್‌ ಪಥ’ವಾಗಿ ಮಾರ್ಪಟ್ಟಿದೆ. ಪಾದಚಾರಿ ಮಾರ್ಗವು ಒತ್ತುವರಿಯಾಗಿದೆ. ಚರ್ಚ್‌ ಬಳಿ ಇರುವ ಪೂರ್ಣಿಮಾ ಕನ್‌ವೆನ್‌ಷನ್‌ ಹಾಲ್‌ನಲ್ಲಿ ನಡೆಯುವ ಅದ್ದೂರಿ ಮದುವೆಗಳಿಗೆ ಬರುವ ಅತಿಥಿಗಳ ಕಾರುಗಳೆಲ್ಲ ರಸ್ತೆಬದಿಯಲ್ಲಿಯೇ ನಿಂತು ‘ಜಾಮ್‌’ ಮಾಡುತ್ತಿವೆ. ಸಂಬಂಧಪಟ್ಟ ಸಂಚಾರ ಪೊಲೀಸರು ಇತ್ತ ಗಮನಿಸಬೇಕೆಂದು ವಿನಂತಿ.- ಕೆ.ಎಂ. ಓದು ಸಿದ್ದೇಗೌಡ

ನೀರು ಚರಂಡಿ ಸೇರಲಿ
ಹಲಸೂರು ಜೋಗುಪಾಳ್ಯ ಸಮೀಪದ ಬಡಾವಣೆಯ ರಸ್ತೆ ಬದಿಗಳಲ್ಲಿ ಚರಂಡಿಗಳಿಲ್ಲದೆ ರಸ್ತೆ ಮೇಲೆ  ನೀರು ಹರಿಯುತ್ತಿರುತ್ತದೆ. ಮಳೆಗಾಲದಲ್ಲಂತೂ ಪರಿಸ್ಥಿತಿ ಕೇಳುವ ಹಾಗೇ ಇಲ್ಲ.  ಕೊಳೆತು ನಾರುತ್ತಿರುವ ಕಸ, ಪ್ಲಾಸ್ಟಿಕ್‌ಗಳೆಲ್ಲವೂ ಮಳೆ ನೀರಿನೊಂದಿಗೆ ರಸ್ತೆ ಮೇಲೆ  ಹರಿದು ರಾಡಿ ಎಬ್ಬಿಸಿರುತ್ತದೆ.  ಒಂದೆಡೆ ರಸ್ತೆ ಮೇಲೆ ತುಂಬಿದ ನೀರು, ಇನ್ನೊಂದೆಡೆ ಕೊಳೆತ ಕಸ ಸೇರಿ ಪಾದಚಾರಿಗಳಿಗೆ ರಸ್ತೆಯಲ್ಲಿ ಹೆಜ್ಜೆ ಇರಿಸಲಾಗದ ಪರಿಸ್ಥಿತಿ ಉಂಟಾಗುತ್ತದೆ.

ಕೊಳೆತ ನೀರಿನ ವಾಸನೆಗೆ ಮೂಗು ಮುಚ್ಚಿಕೊಂಡೇ ರಸ್ತೆ ಮೇಲೆ ಓಡಾಡಬೇಕಾಗುತ್ತದೆ. ಇಲ್ಲಿನ ಬಡಾವಣೆಗಳಲ್ಲಿ ರಸ್ತೆ ಕೂಡ ಚಿಕ್ಕದಿದ್ದು, ವಾಹನ ಸವಾರರು ಆ ಕೊಳಕು ನೀರಿನ ಮೇಲೆ ಗಾಡಿ ಓಡಿಸಿ ಪಾದಚಾರಿಗಳ ಮೇಲೆಲ್ಲಾ ನೀರು ಸಿಡಿಸುತ್ತಿರುತ್ತಾರೆ. ಇದರಿಂದ ಮುಂಜಾನೆ  ಆಫೀಸು ಹಾಗೂ  ಕಾಲೇಜಿಗೆ ಹೋಗುವವರ ಪಾಡಂತೂ ದೇವರಿಗೆ ಪ್ರೀತಿ. ಬೆಂಗಳೂರಿನ ಹಲವೆಡೆ ಹೀಗೆ ಚರಂಡಿ ಸಮಸ್ಯೆ ಇದ್ದು, ಮಳೆಗಾಲ ಬಂದಾಗ ಬೆಂಗಳೂರಿನ ಜನತೆ  ಪರದಾಡಬೇಕಾಗಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಅವಶ್ಯಕತೆ ಇರುವೆಡೆ ಚರಂಡಿ ನಿರ್ಮಿಸಿ ಮಳೆ ನೀರು ಸರಿಯಾಗಿ ಚರಂಡಿ ಸೇರುವಂತೆ ಮಾಡಬೇಕು.
ಹಲಸೂರು ನಿವಾಸಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT