ADVERTISEMENT

‘ಸೌರ ಭಾಗ್ಯ’ ಕಾಣದೇ?

ವಿಶಾಲಾಕ್ಷಿ ಶರ್ಮಾ
Published 8 ಅಕ್ಟೋಬರ್ 2015, 19:30 IST
Last Updated 8 ಅಕ್ಟೋಬರ್ 2015, 19:30 IST

ಒಂದು ಮನೆಗೆ ಹತ್ತು ಎಲ್‌ಇಡಿ ಬಲ್ಬುಗಳನ್ನು ಸರ್ಕಾರ ನೀಡಲಿದೆ. ಅಂದರೆ, ಒಂದಕ್ಕೆ ನೂರು ರೂಪಾಯಿಯಂತೆ  ಸಾವಿರ ರೂಪಾಯಿಯಾಯಿತು. ಎರಡು ಅಥವಾ ಮೂರು ಹೋಲ್ಡರ್‌ಗಳಿರುವ ಮನೆಗಳೇ ಹೆಚ್ಚಿನವು. ಇವರೂ ಹತ್ತು ಬಲ್ಬುಗಳನ್ನು  ಕಡ್ಡಾಯವಾಗಿ ತೆಗೆದುಕೊಳ್ಳಬೇಕೇ? ಈ ಕಡ್ಡಾಯವೆನ್ನುವ ಕರಾಮತ್ತಿನಲ್ಲಿ ಇನ್ನೆಷ್ಟು ಅವ್ಯವಹಾರಗಳು ನಡೆಯಲಿವೆಯೋ?

ಎಲ್ಇಡಿ ಬಲ್ಬುಗಳು ಸ್ವತಃ ವಿದ್ಯುತ್ತನ್ನೇನೂ ಉತ್ಪಾದಿಸಲಾರವು. ವಿದ್ಯುತ್‌ ಬಳಕೆಯ ಪ್ರಮಾಣವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿಯಾವು. ಮಾನ್ಯ ಮಂತ್ರಿವರ್ಯರಿಗೆ ನಿಜಕ್ಕೂ ಕಳಕಳಿಯಿದ್ದರೆ ‘ಸೌರ ಭಾಗ್ಯ’ಕ್ಕೆ ಹೆಚ್ಚು ಮಹತ್ವ ನೀಡಲಿ. ಸ್ವಂತ ಮನೆ ಹೊಂದಿದವರು, ಅಪಾರ್ಟ್‌ಮೆಂಟ್‌ಗಳ ಮಾಲೀಕರಿಗೆ, ವಾಣಿಜ್ಯ ಸಂಕೀರ್ಣಗಳಿಗೆ, ಮಾಲ್, ಸಿನಿಮಾ ಮಂದಿರಗಳ ಮಾಲೀಕರಿಗೆ ತಮ್ಮ ಕಟ್ಟಡಗಳ ಮೇಲೆ ಸೌರ ವಿದ್ಯುತ್ ಉತ್ಪಾದಿಸುವ ಪ್ಯಾನಲ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಿ.

ಸರ್ಕಾರ ಇಚ್ಛಾಶಕ್ತಿ  ತೋರಿದರೆ, ಬಿಸಿಲು ಧಾರಾಳವಾಗಿಯೇ ದೊರೆಯುವ ನಮ್ಮ ರಾಜ್ಯದಲ್ಲಿ ಇದು ಅಸಾಧ್ಯವೇನಲ್ಲ. ಇನ್ನು ಪ್ಯಾನಲ್ ಅಳವಡಿಸಿಕೊಳ್ಳಲು ಆಸಕ್ತಿಯಿದ್ದರೂ ಆರ್ಥಿಕವಾಗಿ ದುರ್ಬಲರಾದವರಿಗೆ ಅರ್ಧದಷ್ಟಾದರೂ ಧನಸಹಾಯ ಮಾಡಿ ಉತ್ತೇಜನ ನೀಡಲಿ.

ಸೌರ ವಿದ್ಯುತ್ತಿನ ಉತ್ಪಾದನೆಯನ್ನು ಕಡ್ಡಾಯಗೊಳಿಸಿದರೆ ಅಧಿಕೃತ- ಅನಧಿಕೃತ ವಿದ್ಯುತ್ ಲೋಡ್ ಶೆಡ್ಡಿಂಗ್ ಪ್ರಮೇಯವೇ ಬರಲಾರದು. ಸರ್ಕಾರ ಬಲ್ಬ್ ತಯಾರಿಕಾ ಕಂಪೆನಿಗಳು ಮತ್ತು ಪೆಟ್ರೋಲಿಯಂ ಮಾಫಿಯಾ ಹಿಡಿತದಿಂದ ಹೊರಬಂದು ನವೀಕರಿಸಬಹುದಾದ ಇಂಧನ ಮೂಲಗಳ  ಸದುಪಯೋಗದತ್ತ ಚಿಂತಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.