ADVERTISEMENT

ಆಗಾಗ್ಗೆ ಕಾಡುವ ಆ ನ್ಯಾಯಾಧೀಶರು...!

ಮಲ್ಲಿಕಾರ್ಜುನ ಗುಮ್ಮಗೋಳ
Published 11 ಮಾರ್ಚ್ 2017, 19:30 IST
Last Updated 11 ಮಾರ್ಚ್ 2017, 19:30 IST
ಆಗಾಗ್ಗೆ ಕಾಡುವ ಆ ನ್ಯಾಯಾಧೀಶರು...!
ಆಗಾಗ್ಗೆ ಕಾಡುವ ಆ ನ್ಯಾಯಾಧೀಶರು...!   

ಯೌವನದ ಉನ್ಮಾದಕ್ಕೆ ಯಾವ ಸಾಮಾಜಿಕ ಬಂಧ ಮತ್ತು ಶಿಕ್ಷೆಯ ಭಯವೂ ಇರುವುದಿಲ್ಲ. ಕಾನೂನು ನಿಯಮಗಳ ಅರಿವಿದ್ದರೂ ಪ್ರೇಮದ ಬಲೆಗೆ ಬಿದ್ದು ಎಸಗುವ ಅಪರಾಧವೊಂದು ಯಾವೆಲ್ಲಾ ರೂಪು ಪಡೆದುಕೊಳ್ಳುತ್ತದೆ ಎಂಬುದಕ್ಕೆ  ನನ್ನ ವೃತ್ತಿ ಜೀವನದಲ್ಲಿ ಕಂಡ ಈ ಪ್ರಕರಣವೇ ಸಾಕ್ಷಿ.

ಸುರೇಶ್‌, ಧಾರವಾಡ ಜಿಲ್ಲೆಯ ಹಳ್ಳಿಯೊಂದರ ಯುವಕ. ಕುಟುಂಬಕ್ಕಿರುವ ಒಂದು ಎಕರೆ ಹೊಲದಲ್ಲಿ ಕೆಲಸ ಮಾಡುತ್ತಲೇ ಬಿ.ಎ. ಪದವಿ ‘ಜಸ್ಟ್ ಪಾಸ್’ನಲ್ಲಿ ಮುಗಿಸಿದ. ಕೆಲಸಕ್ಕಾಗಿ ಅಲೆದಾಡಿದ. ಪ್ರಯೋಜನ ಆಗಲಿಲ್ಲ. ವಯಸ್ಸು ಮೀರತೊಡಗಿತು. ಮಗನಿಗಾಗಿ ಹುಡುಗಿ ಹುಡುಕಲು ಅಪ್ಪ–ಅಮ್ಮ ಶುರುಮಾಡಿದರು. ಕೊನೆಗೂ, ಆಗತಾನೇ ಪಿ.ಯು.ಸಿ ಮುಗಿಸಿದ 18 ವರ್ಷದ ಹುಡುಗಿ ಸುಕನ್ಯಾಳ ಜೊತೆ ಮದುವೆಯಾಯಿತು.

ಸುಕನ್ಯಾ, ಸುರೇಶನಿಗಿಂತ 12 ವರ್ಷ ಚಿಕ್ಕವಳು. ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂಬ ಕನಸು ಕಣ್ಣಲ್ಲಿ ತುಂಬಿಕೊಂಡಾಕೆ. ಆದರೆ ಆಕೆಯ ಪೋಷಕರು ಬಲವಂತದಿಂದ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಂಡರು. ಕಾಲೇಜಿಗೆ ಹೋಗಬೇಕಾದವಳು ಸಂಸಾರದ ನೊಗ ಹೊತ್ತಳು.

ADVERTISEMENT

ಇತ್ತ, ಸುರೇಶನಿಗೆ ಹೆಂಡತಿ ಮನೆಗೆ ಬರುತ್ತಿದ್ದಂತೆಯೇ ಸಂಸಾರದ ಜವಾಬ್ದಾರಿ ಹೆಚ್ಚಾಯಿತು. ದುಡಿಯುವ ಅನಿವಾರ್ಯ ಉಂಟಾಯಿತು. ಕೃಷಿಯ ಜೊತೆಗೆ ನಾಲ್ಕಾರು ಎಮ್ಮೆಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡತೊಡಗಿದ. ಸುಕನ್ಯಾಳಿಗೆ ನಿತ್ಯ ಸೆಗಣಿ ಬಾಚುವುದು, ಹಾಲು ಹಿಂಡುವುದು, ಕಸಮುಸುರೆ, ಮನೆಗೆಲಸ ಮಾಡುವುದು ಕಾಯಕವಾಯಿತು. ಓದಬೇಕೆಂಬ ಕನಸನ್ನೆಲ್ಲಾ ನುಚ್ಚುನೂರು ಮಾಡಿದ ಪೋಷಕರನ್ನು ಶಪಿಸತೊಡಗಿದಳು.

ಹೀಗೆ ಒಂದು ವರ್ಷ ಕಳೆಯಿತು. ಸುಕನ್ಯಾ ಮನೆ, ಕೊಟ್ಟಿಗೆ ಕೆಲಸ ಮಾಡುತ್ತಾ ಹೈರಾಣಾಗಿ ಹೋದಳು. ಈ ಕೆಲಸದಿಂದ ಮುಕ್ತಿ ಸಿಕ್ಕರೆ ಸಾಕು ಎಂದುಕೊಂಡು ಕಂಡಕಂಡ ಕಡೆ ನೌಕರಿಗಾಗಿ ಅರ್ಜಿ ಹಾಕತೊಡಗಿದಳು. ಅಂತೂ ಅವಳ ಆಸೆ ಈಡೇರಿತು. ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆ ಸಿಕ್ಕಿತು.

ಹೆಂಡತಿಗೆ ಕೆಲಸ ಸಿಕ್ಕಿದ್ದರಿಂದ ತಾನು ಇನ್ನು ದುಡಿಯುವ ಅವಶ್ಯಕತೆ ಇಲ್ಲ ಎಂದುಕೊಂಡ ಸುರೇಶ ಇದ್ದ ಎಮ್ಮೆಗಳನ್ನೆಲ್ಲ ಮಾರಿ ಹೆಂಡತಿಯೊಂದಿಗೆ ಧಾರವಾಡಕ್ಕೆ ಹೊರಡಲು ಸಿದ್ಧನಾದ! ಆದರೆ ಸುಕನ್ಯಾಳೋ, ಮನೆಯ ಕೆಲಸದಿಂದ ತಪ್ಪಿಸಿಕೊಂಡ ಖುಷಿಯಿಂದ ಒಬ್ಬಳೇ ಹೊರಡಲು ರೆಡಿಯಾದಳು. ‘ಒಂಬತ್ತು ತಿಂಗಳ ತರಬೇತಿ ಅವಧಿಯಲ್ಲಿ ಗಂಡ ಹೆಂಡತಿ ಒಟ್ಟಿಗೆ ಇರುವಂತಿಲ್ಲ. ನಾನೊಬ್ಬಳೇ ಸರ್ಕಾರಿ ವಸತಿ ನಿಲಯದಲ್ಲಿ ಇರಬೇಕಾಗುತ್ತದೆ. ತರಬೇತಿ ಮುಗಿಸಿ ಬರುತ್ತೇನೆ. ಅಲ್ಲಿಯವರೆಗೆ ನೀನು ಇಲ್ಲೇ ಇರು’ ಎಂದು ಹೇಳಿ ಬಟ್ಟೆ ಬರೆ ಕಟ್ಟಿಕೊಂಡು ಗಂಡನಿಗೆ ಟಾಟಾ ಮಾಡಿ ಹೊರಟೇ ಹೋದಳು.

ಒಂಬತ್ತು ತಿಂಗಳು ಮುಗಿಯಿತು. ಹೆಂಡತಿ ಬಂದು ತನ್ನನ್ನು ಕರೆದುಕೊಂಡು ಹೋಗುತ್ತಾಳೆ ಎಂದು ಕಾಯುತ್ತಿದ್ದ ಸುರೇಶನಿಗೆ ಆಘಾತವೊಂದು ಕಾದಿತ್ತು. ಅದೇನೆಂದರೆ ಸುಕನ್ಯಾ ಬದಲು ಆಕೆ ಕೋರ್ಟ್‌ ಮೂಲಕ ಕಳುಹಿಸಿದ ವಿಚ್ಛೇದನದ ನೋಟಿಸ್‌ ಅವನಿಗೆ ಬಂತು!  ಅಲ್ಲಿಯವರೆಗೆ  ಹೆಂಡತಿಯನ್ನು ಕರೆತರಲು ಆಕೆಯ ತವರು  ಮನೆಗೆಲ್ಲಾ ಎಡತಾಕಿದ್ದ ಆತ.  ಆದರೆ ಪ್ರಯೋಜನ ಆಗಿರಲಿಲ್ಲ. ತನ್ನ ಹಳ್ಳಿಯಿಂದ ಬಹಳ ದೂರದಲ್ಲಿ ನೌಕರಿ ಮಾಡುತ್ತಿದ್ದ ಹೆಂಡತಿಯ ಕಡೆಗೆ ಹೋಗಲೂ ಆತನ ಬಳಿ ಹಣವಿಲ್ಲದಂತಾಗಿತ್ತು.

ತನಗೆ ಗಂಡನ ಮನೆಯಲ್ಲಿ ಚಿತ್ರಹಿಂಸೆ ಕೊಡುತ್ತಿರುವ ಕಾರಣ ವಿಚ್ಛೇದನ ಬೇಕು ಎಂದು ಸುಕನ್ಯಾ ಅರ್ಜಿಯಲ್ಲಿ ಉಲ್ಲೇಖಿಸಿದ್ದಳು. ಈ ಆರೋಪದ ಹೊರತಾಗಿಯೂ ಹೆಂಡತಿ ಬೇಕು ಎಂದು ಕೋರಿ ಸುರೇಶ ಮರು ಅರ್ಜಿ ಸಲ್ಲಿಸಿದ. ವಕೀಲರನ್ನು ಇಟ್ಟುಕೊಳ್ಳಲು ಸಹ ತನ್ನ ಹತ್ತಿರ ಹಣವಿಲ್ಲ ಎಂದು ನ್ಯಾಯಾಧೀಶರ ಮುಂದೆ ಗೋಗರೆದ. ನ್ಯಾಯಾಧೀಶರು ಆತನಿಗೆ ಉಚಿತ ಕಾನೂನು ನೆರವಿನಡಿಯಲ್ಲಿ ವಕೀಲರ ನೆರವನ್ನು ಒದಗಿಸಿದರು.

ವಾದ, ಪ್ರತಿವಾದ ಆಲಿಸಿದ ಧಾರವಾಡದ ಜಿಲ್ಲಾ ನ್ಯಾಯಾಧೀಶರು, ‘ಹೆಂಡತಿ ನೌಕರಿಯಲ್ಲಿ ಇರುವುದರಿಂದ ಊರಿಗೆ ಹೋಗಿ  ಗಂಡನ ಜೊತೆ ಇರುವುದು ಸಾಧ್ಯವಿಲ್ಲ. ಆದ್ದರಿಂದ ಸುಕನ್ಯಾ ಇರುವಲ್ಲಿಯೇ ಸುರೇಶ್‌ ಹೋಗಬೇಕು’ ಎಂದು ಮೌಖಿಕವಾಗಿ ಆದೇಶಿಸಿದರು. ಅದಾದ ಮೇಲೂ ಸುರೇಶನನ್ನು ಸುಕನ್ಯಾ ಹತ್ತಿರ ಬಿಟ್ಟುಕೊಳ್ಳಲಿಲ್ಲ. ‘ಹೆಂಡತಿ ನನ್ನನ್ನು ಸೇರಿಸಿಕೊಳ್ಳುತ್ತಿಲ್ಲ. ಆಕೆಯ ಮನೆಗೆ ಹೋದರೆ ಸದಾ ಕೀಲಿ ಹಾಕಿರುತ್ತದೆ. ಹೀಗಾಗಿ ಅವಳೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ. ನನ್ನ ತಂದೆತಾಯಿ ವಯೋವೃದ್ಧರಾಗಿರುವುದರಿಂದ ಅವರನ್ನು ಬಿಟ್ಟು ಬೇರೆ ಕಡೆ ಇರುವುದು ಕೂಡ ಕಷ್ಟವಾಗುತ್ತಿದೆ’ ಎಂದು ಪುನಃ ಕೋರ್ಟ್‌ನಲ್ಲಿ ಅಳಲು ತೋಡಿಕೊಂಡ ಸುರೇಶ.  ಸುಕನ್ಯಾ ಒಂದಾಗುವ ಮನಸ್ಸು ಮಾಡಲಿಲ್ಲ. ವಿಚಾರಣೆಯನ್ನು ಮುಂದೂಡಲಾಯಿತು.

ಸುರೇಶ್‌ ಪರ ವಕೀಲರು ಮುಂದಿನ ವಿಚಾರಣಾ ದಿನಾಂಕವನ್ನು ಬಹಳ ತಿಂಗಳ ನಂತರ ನಿಗದಿ ಮಾಡುವಂತೆ ಕೋರಿದರು. ಆ ವೇಳೆಯಾದರೂ ದಂಪತಿ ಒಂದಾಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ನ್ಯಾಯಾಧೀಶರು ದೀರ್ಘ ಅವಧಿಯ ದಿನಾಂಕ ನೀಡಿದರು.

***
ಕೊನೆಗೂ ವಿಚಾರಣೆಯ ದಿನ ಬಂತು. ಸುರೇಶ್‌ ಪರ ವಕೀಲರು ನ್ಯಾಯಾಧೀಶರ ಹತ್ತಿರ ಹೋಗಿ ಒಂದು ಮುಚ್ಚಿದ ಲಕೋಟೆ ನೀಡಿದರು. ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರ ಕೊಠಡಿಯಲ್ಲಿ ಗುಪ್ತವಾಗಿ (ಇನ್‌ಕ್ಯಾಮೆರಾ ಪ್ರೊಸೀಡಿಂಗ್ಸ್‌– ಅಲ್ಲಿ ಕಕ್ಷಿದಾರರು ಹಾಗೂ ಅವರ ಪರ ವಕೀಲರಿಗೆ ಮಾತ್ರ ಹೋಗಲು ಅವಕಾಶ ಇರುತ್ತದೆ) ನಡೆಸಬೇಕು ಎಂದು ವಿನಂತಿಸಿಕೊಂಡರು. ಲಕೋಟೆಯನ್ನು ನೋಡಿದ ನ್ಯಾಯಾಧೀಶರು ಅವಾಕ್ಕಾಗಿ ‘ಇನ್‌ಕ್ಯಾಮೆರಾ ಪ್ರೊಸೀಡಿಂಗ್‌’ಗೆ ಒಪ್ಪಿಕೊಂಡು ವಿಚಾರಣೆ ನಡೆಸಿದರು. ಆಗಲೇ ನ್ಯಾಯಾಧೀಶರು ಏನು ಆದೇಶ ಹೊರಡಿಸಬೇಕು ಎಂದು ದೃಢ ನಿರ್ಧಾರ ಮಾಡಿಕೊಂಡಂತಿತ್ತು.
‘ಹೆಂಡತಿ ನೌಕರಿ ಮಾಡುತ್ತಾಳೆಂದು ನಾನು ಇದ್ದ ಎಮ್ಮೆಗಳನ್ನು ಮಾರಿದ್ದೇನೆ. ಬರಗಾಲದಿಂದ ನಿರುದ್ಯೋಗಿಯಾಗಿದ್ದೇನೆ. ಯಾರೂ ಹೆಣ್ಣು ಕೊಡುವುದಿಲ್ಲ. ಹೆಂಡತಿ ಬಿಟ್ಟು ಹೋಗಿದ್ದಾಳೆ ಎಂಬ ಸುದ್ದಿ ಹಳ್ಳಿಯಲ್ಲಿ ಹಬ್ಬಿದೆ. ನಮ್ಮದೇ ತಪ್ಪು ಎಂಬಂತೆ ಜನ ಮಾತನಾಡುತ್ತಿದ್ದಾರೆ. ಇದರಿಂದ ನನ್ನ ವಯೋವೃದ್ಧ ತಂದೆತಾಯಿಯೂ ಬಹಳ ನೊಂದುಕೊಂಡಿದ್ದಾರೆ’ ಎಂದು ನ್ಯಾಯಾಧೀಶರ ಮುಂದೆ  ವಿಚಾರಣೆ ವೇಳೆ ಸುರೇಶ ಅಲವತ್ತುಕೊಂಡಿದ್ದನಲ್ಲ... ಅದಕ್ಕಾಗಿ ನ್ಯಾಯಾಧೀಶರು ಆತನಿಗೆ ತಿಂಗಳಿಗೆ 800 ರೂಪಾಯಿ ಪರಿಹಾರ ನೀಡಬೇಕು ಎಂದು ಸುಕನ್ಯಾಳಿಗೆ ಆದೇಶಿಸಿದರು (ಗಂಡನಿಗೆ ಕೆಲಸ ಇಲ್ಲದಿದ್ದರೆ ಹೆಂಡತಿ ಆತನಿಗೆ ಜೀವನಾಂಶ ಕೊಡುವ ಅವಕಾಶ ಕಾನೂನಿನಲ್ಲಿ ಇದೆ).

ವಿಚ್ಛೇದನ ಪ್ರಕರಣಗಳಲ್ಲಿ, ವಿಚ್ಛೇದನದ ಆದೇಶ ಹೊರಡಿಸುವ ಮುನ್ನ ಕೊನೆಯ ಅಸ್ತ್ರವಾಗಿ ದಂಪತಿಗೆ ಮಧ್ಯಸ್ಥಿಕೆದಾರರ ಮೂಲಕ ಆಪ್ತ ಸಮಾಲೋಚನೆ ನಡೆಸಿ ಒಂದಾಗುವಂತೆ ಮನವೊಲಿಸುವ ಪ್ರಯತ್ನ ಕೋರ್ಟ್‌ನಲ್ಲಿ ನಡೆಯುತ್ತದೆ. ಅಲ್ಲಿಯೂ ಸಕಾರಾತ್ಮಕ ಸ್ಪಂದನೆ ಸಿಗದೇ ಹೋದಲ್ಲಿ ಕೋರ್ಟ್‌, ವಿಚ್ಛೇದನ ನೀಡಿ ಅಂತಿಮ ಆದೇಶ ಹೊರಡಿಸುತ್ತದೆ. ಆದರೆ ಈ ಪ್ರಕರಣದ ಆರಂಭದಲ್ಲಿ ದಂಪತಿಯನ್ನು ಒಂದುಮಾಡಲು ಪ್ರಯತ್ನಿಸಿದ್ದ ನ್ಯಾಯಾಧೀಶರು ತಮ್ಮ ಮನಸ್ಸು ಬದಲಿಸಿ ವಿಚ್ಛೇದನ ನೀಡುವ ಮನಸ್ಸು ಮಾಡಿದ್ದರು! ಪರಸ್ಪರ ಅನುಮತಿಯ (ಮ್ಯೂಚುವಲ್‌ ಕನ್ಸೆಂಟ್‌) ವಿಚ್ಛೇದನವೇ  ಆಗಬೇಕೆಂದು ಅವರು ಸೂಚಿಸಿ ಪ್ರಕರಣವನ್ನು ಮುಂದಿನ ಪ್ರಕ್ರಿಯೆಗೆ ಲೋಕ್‌ ಅದಾಲತ್‌ಗೆ ವಹಿಸಿದರು. ಅಲ್ಲಿ ವಿಚಾರಣೆ ನಡೆದು ಸುರೇಶನಿಗೆ ಮೂರು ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಸುಕನ್ಯಾಳಿಗೆ ಆದೇಶಿಸಲಾಯಿತು.

ಅಲ್ಲಿಯವರೆಗೆ ಹೆಂಡತಿ ಬೇಕು ಎನ್ನುತ್ತಿದ್ದ ಸುರೇಶ ವಿಚ್ಛೇದನ ನೀಡಲು ಮರುಮಾತನಾಡದೇ ಒಪ್ಪಿಕೊಂಡ. ಗಂಡನಿಗೆ ಪರಿಹಾರ ನೀಡಲು ಸುಕನ್ಯಾ ಅಷ್ಟೇ ಸಲೀಸಾಗಿ ಒಪ್ಪಿಕೊಂಡಳು. ಅಲ್ಲಿಗೆ  ‘ಪರಸ್ಪರ ಸಮ್ಮತಿ’ಯ ವಿಚ್ಛೇದನ ಆಯಿತು. ಪ್ರಕರಣ ಇತ್ಯರ್ಥಗೊಂಡಿತು...

***
ಹಾಗಿದ್ದರೆ ನ್ಯಾಯಾಧೀಶರು ವಿಚ್ಛೇದನ ಕೊಡಿಸುವ ತೀರ್ಮಾನಕ್ಕೆ ಬಂದದ್ದು ಏಕೆ? ಅವರೇ ವಿಚ್ಛೇದನದ ಆದೇಶ ಹೊರಡಿಸದೆ ಲೋಕ್‌ ಅದಾಲತ್‌ಗೆ ವಹಿಸಿದ್ದು ಏಕೆ? ದೊಡ್ಡ ಮೊತ್ತದ ಪರಿಹಾರ ಕೊಡಲು ಸುಕನ್ಯಾ ಸುಲಭದಲ್ಲಿ ಒಪ್ಪಿಕೊಂಡರೆ, ವಿಚ್ಛೇದನಕ್ಕೆ ಸುರೇಶ್‌ ಸಮ್ಮತಿ ನೀಡಿದ್ದು ಏಕೆ...? ಅಷ್ಟಕ್ಕೂ ವಕೀಲರು ನ್ಯಾಯಾಧೀಶರಿಗೆ ನೀಡಿದ್ದ ಮುಚ್ಚಿದ ಲಕೋಟೆಯಲ್ಲಿ ಏನಿತ್ತು...? ಇವೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ...

ಸುರೇಶ್‌ ಪರ ವಕೀಲರಿಗೆ ಅದಾಗಲೇ ಸುಕನ್ಯಾಳ ನಡವಳಿಕೆ ಬಗ್ಗೆ ಸಂದೇಹ ಮೂಡತೊಡಗಿತ್ತು. ನೂರಾರು ಕನಸು ಹೊತ್ತಿದ್ದಾಕೆಗೆ ಒತ್ತಾಯದಿಂದ ಮಾಡಿದ್ದ ಮದುವೆ ಬೇರೆ ಅದು. ಆದ್ದರಿಂದ ಕೋರ್ಟ್‌ನಿಂದ ದೀರ್ಘ ಅವಧಿಯ ದಿನಾಂಕವನ್ನು ಪಡೆದುಕೊಂಡಿದ್ದ ಅವರು ಆಕೆಯ ಮೇಲೆ ಕಣ್ಣಿಟ್ಟಿದ್ದರು. ಅದೊಂದು ರಾತ್ರಿ ತಾರಾ ಹೋಟೆಲ್‌ ಒಂದರಲ್ಲಿ ಸುಕನ್ಯಾ ಯುವಕನೊಬ್ಬನ ಭುಜಕ್ಕೆ ಭುಜ ತಾಗಿಸಿಕೊಂಡು ಕುಳಿತದ್ದು ಕಂಡರು. ಅವರನ್ನು ಹಿಂಬಾಲಿಸಿದರು. ನಗರದ ಹೊರಭಾಗದಲ್ಲಿರುವ ಮನೆಯೊಂದರ ಒಳಗೆ ಆ ಜೋಡಿ ಹೋದದ್ದನ್ನು ನೋಡಿದರು.

ಸುಕನ್ಯಾಳ ಚಲನವಲನದ ಮೇಲೆ ನಿಗಾ ಇಡಲು ತಮ್ಮ ಕಾರಕೂನನಿಗೆ ವಕೀಲರು ತಿಳಿಸಿದರು. ಅವಳಿಗಾಗಿ ಸರ್ಕಾರಿ ವಸತಿಗೃಹವಿದ್ದರೂ ಅಲ್ಲಿ ಆಕೆ ಬರುವುದು ತೀರಾ ಅಪರೂಪ ಎಂಬ ಸುದ್ದಿ ಕಾರಕೂನನಿಂದ ಸಿಕ್ಕಿತು. ಒಂದು ದಿನ ಆಕೆ ಖಾಸಗಿ ಹೆರಿಗೆ ಆಸ್ಪತ್ರೆಗೆ ಹೋಗಿದ್ದು ತಿಳಿಯಿತು. ತಡಮಾಡದೇ ಅವರು ಆಸ್ಪತ್ರೆಗೆ ಧಾವಿಸಿ ವಿಚಾರಿಸಿದರು. ವೈದ್ಯರಿಂದ ಒಂದಿಷ್ಟು ಮಾಹಿತಿ ಕಲೆ ಹಾಕಿದರು. ಆಗ ಅವರಿಗೆ ಸುಕನ್ಯಾ ತನ್ನ ಸಹೋದ್ಯೋಗಿಯೊಂದಿಗೆ ಗುಪ್ತವಾಗಿ ಮದುವೆ ಮಾಡಿಕೊಂಡಿದ್ದು, ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು ತಿಳಿಯಿತು. ಅದಕ್ಕಾಗಿ ಅವಳು ಮೊದಲ ಗಂಡನಿಂದ ವಿಚ್ಛೇದನ ಬಯಸಿದ್ದಾಳೆ ಎಂಬುದು ಅರಿವಿಗೆ ಬಂತು. ಇದೇ ವೈದ್ಯಕೀಯ ದಾಖಲೆಯನ್ನು ಅವರು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಧೀಶರಿಗೆ ಸಲ್ಲಿಸಿದ್ದು...!

ಮೊದಲ ಮದುವೆ ಊರ್ಜಿತವಾಗಿರುವಾಗಲೇ ಎರಡನೇ ಮದುವೆಯಾಗುವುದು ಅಥವಾ ಇನ್ನೊಬ್ಬನ ಜೊತೆ ಲೈಂಗಿಕ ಸಂಬಂಧ ಹೊಂದುವುದು ಶಿಕ್ಷಾರ್ಹ ಅಪರಾಧ. ಇದಕ್ಕೆ ಏಳು ವರ್ಷ ಸಜೆ ಮತ್ತು ದಂಡ ಇದೆ. ಅದರಲ್ಲೂ ಸರ್ಕಾರಿ  ನೌಕರರು ಇಂಥ ಅಪರಾಧ ಎಸಗಿದರೆ ಅದನ್ನು ಗಂಡ ಆಕ್ಷೇಪ ಮಾಡಿದ ಪಕ್ಷದಲ್ಲಿ ಹೆಂಡತಿಯನ್ನು ನೌಕರಿಯಿಂದಲೂ ವಜಾ ಮಾಡಬಹುದು.

ಇವುಗಳನ್ನೆಲ್ಲಾ ಗಮನಿಸಿದರೆ ಸುಕನ್ಯಾ ಮತ್ತು ಅವಳ ಎರಡನೆಯ ಗಂಡನ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಅವಕಾಶ ಕಾನೂನಿನಲ್ಲಿ ಇತ್ತು. ಹಾಗೆ ಆಗಿದ್ದಲ್ಲಿ ಆಕೆ ನೌಕರಿಯನ್ನೂ ಕಳೆದುಕೊಂಡು ಜೈಲು ಸೇರಬೇಕಿತ್ತು. ಆಕೆಯ ಜೊತೆಗೆ ಗರ್ಭದಲ್ಲಿದ್ದ ಮಗುವೂ ಶಿಕ್ಷೆ ಅನುಭವಿಸಬೇಕಿತ್ತು. ಹಾಗೆಯೆ ನ್ಯಾಯಾಧೀಶರೇ ವಿಚ್ಛೇದನದ ಆದೇಶ ಹೊರಡಿಸಿದರೆ ಅದನ್ನು ಸುರೇಶ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತಿದ್ದ. ಆಗ ಅಲ್ಲಿ ಏನಾಗುತ್ತಿತ್ತೋ ಗೊತ್ತಿಲ್ಲ.

ಇವೆಲ್ಲವನ್ನೂ ನ್ಯಾಯಾಧೀಶರು ಗಮನಿಸಿದರು. ಇಲ್ಲಿ ಕಾನೂನಿಗಿಂತ ನ್ಯಾಯಾಧೀಶರಿಗೆ ಮಾನವೀಯ ನೆಲೆಗಟ್ಟು ಮುಖ್ಯವಾಗಿ ಕಂಡಿತು. ಈ ಪ್ರಕರಣದಲ್ಲಿ ಅವರು ಕೇವಲ ಸುಕನ್ಯಾಳನ್ನು ನೋಡಿಲ್ಲ. ಬದಲಿಗೆ ಗರ್ಭದಲ್ಲಿದ್ದ ಮಗು, ಸುರೇಶ್‌ ಹಾಗೂ ಆತನ ವೃದ್ಧ ಪೋಷಕರ ಬಗ್ಗೆಯೂ ಯೋಚಿಸಿದರು.

ಅದಕ್ಕಾಗಿಯೇ ಅವರು, ‘ಸಮ್ಮತಿಯ ವಿಚ್ಛೇದನ’ಕ್ಕೆ ದಂಪತಿಯ ಮನವೊಲಿಸಿದರು. ಯಾವುದೇ ಪ್ರಕರಣವನ್ನು ಲೋಕ್‌ ಅದಾಲತ್‌ಗೆ ವರ್ಗಾಯಿಸಿದರೆ ಅದು ನೀಡುವ ಆದೇಶವೇ ಅಂತಿಮವಾಗಿ ಮೇಲ್ಮನವಿ ಸಲ್ಲಿಸುವ ಅವಕಾಶ ಇರುವುದಿಲ್ಲ. ಆದ್ದರಿಂದ ಸುರೇಶ್‌ ಹೈಕೋರ್ಟ್‌ಗೆ ಹೋಗುವ ಪ್ರಶ್ನೆ ಬರುವುದಿಲ್ಲ. ಈ ಕಾರಣದಿಂದಲೇ ನ್ಯಾಯಾಧೀಶರು ಪ್ರಕರಣವನ್ನು ಲೋಕ್‌ ಅದಾಲತ್‌ಗೆ ವಹಿಸಿ ದಾರಿ ಸುಗಮಗೊಳಿಸಿದರು.

ಜೈಲುವಾಸದ ಬದಲು ಪರಿಹಾರ ಕೊಡಲು ಸುಕನ್ಯಾ ಒಪ್ಪಿದಳು. ವಿಚ್ಛೇದನ ಕೊಡದೇ ಹೋದರೆ ಸುರೇಶನಿಗೆ ಹೆಂಡತಿಯೂ ದಕ್ಕುತ್ತಿರಲಿಲ್ಲ, ಪರಿಹಾರವೂ ಸಿಗುತ್ತಿರಲಿಲ್ಲ! ಅದಕ್ಕಾಗಿ ಸುರೇಶನಿಗೆ ವಿಚ್ಛೇದನ ನೀಡುವಂತೆ ಮನವೊಲಿಸಿ ಅವನಿಗೆ ಹಾಗೂ ಅವನ ಪೋಷಕರಿಗೆ ನೆರವು ಆಗುವಂತೆ ಪರಿಹಾರ ದೊರಕಿಸಿಕೊಟ್ಟರು.

ಕಾನೂನಿನ ಪರಿಧಿಯಾಚೆ ಯೋಚಿಸಿದ ನ್ಯಾಯಾಧೀಶರು ಅಂದುಕೊಂಡಂತೆ ಎಲ್ಲವೂ ನಡೆಯಿತು. ಅವರವರ ಜಾಗದಲ್ಲಿ ಎಲ್ಲರಿಗೂ ‘ನ್ಯಾಯ’ ದಕ್ಕಿತು...!
ಅಂದಹಾಗೆ, ಈ ಪ್ರಕರಣದಲ್ಲಿ ನಾನು ವಕೀಲನೂ ಅಲ್ಲ, ಕಕ್ಷಿದಾರನೂ ಅಲ್ಲ.   ಕೋರ್ಟ್‌ ಅಧಿಕಾರಿಯಾಗಿರುವ ನನ್ನ ಎದುರು ದಿನನಿತ್ಯ ಹಲವಾರು ಪ್ರಕರಣಗಳ ವಿಚಾರಣೆ ನಡೆಯುತ್ತದೆ. ಆದರೆ, ಕಾನೂನಿಗಿಂತ ಮಾನವೀಯತೆಯೇ ಮೇಲೆಂದು ಬಗೆದು ಎಲ್ಲರಿಗೂ ನ್ಯಾಯ ಕೊಟ್ಟ ಆ ಸಹೃದಯಿ ನ್ಯಾಯಾಧೀಶರನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದು ನನ್ನ ವೃತ್ತಿ ಜೀವನದಲ್ಲಿ ಕಂಡ ಬಲು ಅಪರೂಪದ ಪ್ರಕರಣ ಎನಿಸಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

(ಹೆಸರುಗಳನ್ನು ಬದಲಾಯಿಸಲಾಗಿದೆ)

***

(ಡಾ. ಮಲ್ಲಿಕಾರ್ಜುನ ಗುಮ್ಮಗೋಳ)

ಲೇಖಕರು ಹೈಕೋರ್ಟ್‌ನ ನ್ಯಾಯಾಂಗ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.