ADVERTISEMENT

ಕಳೆ ಎಂದರೆ ಸಾಕು, ಕಾಂಗ್ರೆಸ್‌ ಬೇಡ!

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 19:30 IST
Last Updated 7 ಏಪ್ರಿಲ್ 2018, 19:30 IST

ಧಾರವಾಡ: ಚುನಾವಣಾ ದಿನಾಂಕ ಘೋಷಣೆಗೂ ಮೊದಲು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಪ್ರಹ್ಲಾದ ಜೋಶಿ, ಪಾಲಿಕೆ ಒಡೆತನದ ಆಸ್ತಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಂಸದರ ಅಬ್ಬರಕ್ಕೆ ವೇದಿಕೆ ಮೇಲಿದ್ದ ಜಿಲ್ಲಾಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ ಕೂಡಾ ಮೌನಕ್ಕೆ ಶರಣಾಗಿದ್ದರು.

ಪಾಲಿಕೆ ಒಡೆತನದ ಉದ್ಯಾನಗಳಲ್ಲಿ ಕಳೆ ಬೆಳೆದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜೋಶಿ, ‘ಕಾಂಗ್ರೆಸ್‌ ಕಳೆ ಎಲ್ಲೆಡೆ ವ್ಯಾಪಿಸಿದೆ. ಉದ್ಯಾನದ ಉಸ್ತುವಾರಿ ಹೊತ್ತವರಿಗೆ, ಸಹಾಯಕ ಆಯುಕ್ತರಿಗೆ ಕನಿಷ್ಠ ಪಕ್ಷ ಕಾಂಗ್ರೆಸ್‌ ಕಳೆ ಕೀಳಿಸಲೂ ಸಾಧ್ಯವಿಲ್ಲವೇ’ ಎಂದು ಏರುದನಿಯಲ್ಲಿ ತರಾಟೆಗೆ ತೆಗೆದುಕೊಂಡರು. ಪಕ್ಕದಲ್ಲೇ ಇದ್ದ ಡಾ. ಬೊಮ್ಮನಹಳ್ಳಿ ತಕ್ಷಣ ಸಂಸದ ಜೋಶಿ ಕಡೆ ವಾಲಿ, ‘ಸರ್‌ ಕಳೆ ಎಂದರೆ ಸಾಕು. ಕಾಂಗ್ರೆಸ್ ಎಂದರೆ ವಿವಾದ ಉಂಟಾದೀತು’ ಎಂದು ಸಂಸದರನ್ನು ಎಚ್ಚರಿಸಿದರು. ಜೋಶಿ ಸಹಿತವಾಗಿ ಇಡೀ ಸಭೆಯೇ ಗೊಳ್ ಎಂದಿತು.
– ಇ.ಎಸ್‌. ಸುಧೀಂದ್ರ ಪ್ರಸಾದ್‌

**
ಬಂದ್ರು... ಸೇರಿದ್ರು... ಬಿಟ್ಟರು!
ಬಾಗಲಕೋಟೆ:
ತಾಲ್ಲೂಕಿನ ರಾಂಪುರದಲ್ಲಿ ಇತ್ತೀಚೆಗೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಸಮಾವೇಶ ನಡೆಯಿತು. ಜಿಲ್ಲಾ ಪಂಚಾಯ್ತಿ ಸದಸ್ಯೆ ಹನುಮವ್ವ ಕರಿಹೊಳಿ (ಕಾಂಗ್ರೆಸ್‌) ಅವರ ಮೈದುನ ದ್ಯಾಮಣ್ಣ ಕರಿಹೊಳಿ ಅವರ ನೇತೃತ್ವದಲ್ಲಿ ನೂರಾರು ಮಂದಿ ಬಿಜೆಪಿಗೆ ಸೇರ್ಪಡೆಯಾದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಕೈಯಿಂದ ಕೊರಳಿಗೆ ಕೇಸರಿ ಶಾಲು ಹಾಕಿಸಿಕೊಂಡು, ಬಿಜೆಪಿಯ ಬಾವುಟ ಹಿಡಿದು ಫೋಟೊಗೆ ಪೋಸು ನೀಡಿದ್ದೂ ಆಯಿತು.

ADVERTISEMENT

‘ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಕಾರ್ಯಶೈಲಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ’ ಎಂದೂ ಹೇಳಿದರು.

ಈ ವೇಳೆ ಮಾಧ್ಯಮ ಗ್ಯಾಲರಿಯಲ್ಲಿ ಕುಳಿತಿದ್ದ ಹಿರಿಯ ಪತ್ರಕರ್ತರೊಬ್ಬರು, ‘ಈ ಕಾರ್ಯಕ್ರಮದ ಫೋಟೊ ನಾಳಿನ ಪೇಪರ್‌ನಾಗ ಬಂದ ಕೂಡಲೇ ಚಿತ್ರಣಾನಾ ಬ್ಯಾರೆ ಆಕ್ಕೇತಿ ನೋಡ್ರಿ, ಮೇಟಿ ಸಾಹೇಬ್ರು ಈ ಫೋಟೊ ನೋಡಿದ ಕೂಡಲೇ, ಯಾರ‍್ಯಾರು ಬಿಜೆಪಿ ಸೇರ‍್ಯಾರೋ ಅವರ ಮನಿಗೆ ಹೋಗ್ತಾರ, ಅವರ ಕೈ ಹಿಡಿದು, ‘ನೀವು ನಮ್ಮವರೋ ತಮ್ಮಾ, ನಾ ನಿಮಗ ಏನ್‌ ಅನ್ಯಾಯ ಮಾಡೇನಿ, ಪಕ್ಷ ಬಿಡೂವಂಥ ತಪ್ಪ ನಾ ಏನ ಮಾಡೀನಿ’ ಅಂತಾ ಕಣ್ಣೀರ ಹಾಕ್ತಾರ. ಮತ್‌ ಅವರನ್ನೆಲ್ಲ ಕಾಂಗ್ರೆಸ್‌ಗೆ ಸೇರಿಸ್ಕೋತಾರ ನೋಡ್ತಿರ‍್ರಿ’ ಎಂದು ಭವಿಷ್ಯ ನುಡಿದಿದ್ದರು.

ಈ ಕಾರ್ಯಕ್ರಮ ಮುಗಿದು ಎರಡು ದಿನಗಳ ನಂತರ, ಪತ್ರಿಕಾ ಕಚೇರಿಗಳಿಗೆ ಕಾಂಗ್ರೆಸ್‌ ಕಚೇರಿಯಿಂದ ಪ್ರಕಟಣೆಯೊಂದು ಬಂತು. ‘ಕಾಂಗ್ರೆಸ್‌ಗೆ ಮರು ಸೇರ್ಪಡೆ’ ಕುರಿತ ಸುದ್ದಿಯ ಫೋಟೊದಲ್ಲಿ ಮೇಟಿ ಸಾಹೇಬ್ರು ಅದೇ ಕಾರ್ಯಕರ್ತರ ಹೆಗಲ ಮೇಲೆ ಕೈ ಹಾಕಿ ಪೋಸು ಕೊಟ್ಟಿದ್ದರು !
– ವೆಂಕಟೇಶ ಜಿ.ಎಚ್.
**
‘ಸಾಯೋಕ್‌ ಮುಂಚೆ ಎಂಎಲ್‌ಎ ಆಗೋ ಆಸೆ..!’
ವಿಜಯಪುರ: ‘ನಮ್ಮ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಸಾಯೋಕ್‌ ಮುಂಚೆ ಮತ್ತೊಮ್ಮೆ ಎಂಎಲ್‌ಎ ಆಗ್ಬೇಕು ಅಂತ ಆಸೆ ಹುಟ್ಟೈತೆ. ಅದಕ್ಕಾಗಿಯೇ ಸಚಿವರಾದ ಬಳಿಕ ಸತತ ನಾಲ್ಕು ಬಾರಿ ಬಿದ್ರೂ ಮತ್ತೊಮ್ಮೆ ಚುನಾವಣೆಗೆ ತಯಾರಾಗ್ತಿದ್ದಾರೆ. ಮತ ಕ್ಷೇತ್ರದಲ್ಲೇ ಬ್ಯುಸಿ ಆಗಿದ್ದಾರೆ. ಕುಮಾರಣ್ಣ, ಗೌಡ್ರು ಇತ್ತ ಬಂದಾಗ ಮಾತ್ರ ಅವ್ರು ಬರ್ತಾರೆ. ಉಳಿದಂತೆ ನಾವೇ ಎಲ್ಲವನ್ನೂ ನಿಭಾಯಿಸ್ತೇವೆ...’

ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ, ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಘೋಷಿತ ಅಭ್ಯರ್ಥಿ ಎಂ.ಸಿ.ಮನಗೂಳಿ ಕುರಿತಂತೆ, ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಮುಖಂಡ ಎಂ.ಆರ್‌.ಪಾಟೀಲ ಪತ್ರಕರ್ತರ ಪ್ರಶ್ನೆಯೊಂದಕ್ಕೆ ನಗೆ ಚಟಾಕಿ ಮೂಲಕವೇ ಉತ್ತರಿಸಿದ ಪರಿಯಿದು.

ಗೋಷ್ಠಿಯ ನಡುವೆ ಪತ್ರಕರ್ತರು ಜಿಲ್ಲಾ ಘಟಕದ ಅಧ್ಯಕ್ಷರ ಗೈರು ಹಾಜರಿ ಕುರಿತು ಪ್ರಸ್ತಾಪಿಸುತ್ತಿದ್ದಂತೆ, ಪಾಟೀಲ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಈ ಬಾರಿ ನೀವ್‌ ಏನಾದ್ರೂ ತಿಳ್ಕೋಳಿ. ನಮ್‌ ಮನಗೂಳಿಗೆ ನಾವು ಹಾರ ಹಾಕೋದು ಖಚಿತ. ವಯಸ್ಸಾಗಿದ್ದರಿಂದ ಇಲ್ಲಿಗೆ ಅವ್ರು ಬಂದಿಲ್ಲ. ಸಾಯೋಕು ಮುಂಚೆ ಮತ್ತೊಮ್ಮೆ ಶಾಸಕನಾಗಲೇಬೇಕು ಎಂದು ಹಠ ತೊಟ್ಟು ಮನೆ ಮನೆ ತಿರಾಗ್ತಾರೆ. ಜನರ ಮನವೊಲಿಸುತ್ತಿದ್ದಾರೆ’ ಎನ್ನುತ್ತಿದ್ದಂತೆ ನೆರೆದಿದ್ದವರೆಲ್ಲರೂ ನಗೆಗಡಲಲ್ಲಿ ತೇಲಿದರು.
– ಡಿ.ಬಿ.ನಾಗರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.