ADVERTISEMENT

ಕಾಡಿನಲ್ಲಿ ಕೃಷಿ

ಚಂದ ಕಥೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2014, 19:30 IST
Last Updated 22 ನವೆಂಬರ್ 2014, 19:30 IST
ಶಶಿಧರ ಹಳೇಮನಿ
ಶಶಿಧರ ಹಳೇಮನಿ   

ಶಾಲೆಯಿಂದ ಸಂಜೆ ಹಿಂದಿರುಗಿದ ಮಕ್ಕಳೆಲ್ಲರೂ ಅಜ್ಜಿಯ ಮನೆಯ ಬಳಿ ಬಂದು ಕಥೆ ಹೇಳುವಂತೆ ಒತ್ತಾಯಿಸಿದರು. ಎಂದಿನಂತೆ ಅಜ್ಜಿಯು ಒಗಟನ್ನು ಬಿಡಿಸಲು ಮಕ್ಕಳಿಗೆ ಸೂಚಿಸಿದಳು. ಪ್ರತಿ ಬಾರಿಯೂ ಅಜ್ಜಿ ಕಥೆಯನ್ನು ಹೇಳಬೇಕೆಂದರೆ, ಮಕ್ಕಳು ಒಗಟಿಗೆ ಉತ್ತರಿಸಬೇಕಿತ್ತು. ಅಜ್ಜಿಯು ‘ಮುತ್ತಿನಂಥ ಹಕ್ಕಿ ಮುಳ್ಳಲ್ಲಿ ಮೊಟ್ಟೆ ಇಡುತ್ತದೆ’ ಈ ಒಗಟನ್ನು ಬಿಡಿಸಲು ಹೇಳಿದಳು.  ಮಕ್ಕಳು ಸ್ವಲ್ಪ ಸಮಯ ಯೋಚಿಸಿ, ‘ನಿಂಬೆ ಹಣ್ಣು’ ಎಂದು ಉತ್ತರಿಸಿದರು. ಮಕ್ಕಳ ಉತ್ತರ ಸರಿ ಇದ್ದುದರಿಂದ ಅಜ್ಜಿಯು ಕಥೆ ಹೇಳಲಾರಂಭಿಸಿದಳು:
 
ಕಾಡಾಪುರದ ಬಳಿ ಒಂದು ಸುಂದರ ಕಾಡು ಇತ್ತು. ಇದು ಹಚ್ಚ ಹಸುರಿನಿಂದ ಕಂಗೊಳಿಸುತ್ತಿತ್ತು. ಇಲ್ಲಿ ಹುಲಿ, ಸಿಂಹ, ಚಿರತೆ, ಜಿಂಕೆ, ನರಿ, ತೋಳ, ಆನೆ, ಕರಡಿ, ಕೋತಿ, ಮೊಲ ಮುಂತಾದ ಪ್ರಾಣಿಗಳೂ ಕಾಗೆ, ಗುಬ್ಬಿ, ನವಿಲು, ಕಾಡುಕೋಳಿ, ಹದ್ದು ಮುಂತಾದ ಪಕ್ಷಿಗಳೂ ಸಂತೋಷದಿಂದ ಜೀವನವನ್ನು ಸಾಗಿಸುತ್ತಿದ್ದವು.

ಹೀಗಿರುವಾಗ ಒಂದು ದಿನ ಕಾಡಿನ ರಾಜ ಸಿಂಹ ಎಲ್ಲ ಪ್ರಾಣಿಗಳ ಸಭೆಯನ್ನು ಕರೆದು ನಾವು ಆಹಾರಕ್ಕಾಗಿ ಮತ್ತೊಬ್ಬರನ್ನು ಅವಲಂಬಿಸುವ ಬದಲು, ನಾವೇ ಏಕೆ ಆಹಾರದ ಬೆಳೆಗಳನ್ನು ಬೆಳೆದು ಸ್ವಾವಲಂಬಿಗಳಾಗಿ ಜೀವನ ಸಾಗಿಸಬಾರದು? ಅದಕ್ಕಾಗಿ ನಾವು ಕೃಷಿ ಚಟುವಟಿಕೆಯನ್ನು ಪ್ರಾರಂಭಿಸೋಣ ಎಂದು ಈ ವಿಷಯದ ಬಗ್ಗೆ ಚರ್ಚಿಸಲು ಸೂಚಿಸಿತು. ಗಂಭೀರವಾಗಿ ಚರ್ಚೆ ನಡೆಯಿತು. ‘ಅದು ಕಷ್ಟ. ಆದರೂ ಬೇಸಾಯ ಮಾಡುವುದನ್ನು ಪ್ರಯತ್ನಿಸಬಹುದು. ಈ ಹಿಂದೆ ನರಿ ಹಾಗೂ ಕರಡಿ ವ್ಯವಸಾಯ ಮಾಡಿ ಆಹಾರದ ಬೆಳೆ ಬೆಳೆಯಲು ಪ್ರಯತ್ನಿಸಿದ್ದವು’ ಎಂದು ಕೋತಿ ತನ್ನ ಅಭಿಪ್ರಾಯ ಮಂಡಿಸಿತು.

‘ಎಲ್ಲರೂ ಕೂಡಿ ಪ್ರಯತ್ನಿಸಿ’ ಎಂದು ಸಿಂಹ ಸೂಚಿಸಿ, ಕೃಷಿ ಚಟುವಟಿಕೆ ಆರಂಭಿಸಲು ಹೇಳಿತು. ಕೂಡಲೇ ಪ್ರಾಣಿಗಳು ಕಾಡಿನಲ್ಲಿದ್ದ ಮರ–ಗಿಡಗಳನ್ನು ಕಡಿದು ಕೃಷಿ ಭೂಮಿಯನ್ನು ಸಿದ್ಧಗೊಳಿಸಿದವು. ಮೊದಲ ವರ್ಷ ಉತ್ತಮ ತಳಿಯ ಬೀಜವನ್ನು ಬಿತ್ತಿ, ಒಳ್ಳೆಯ ಇಳುವರಿಯನ್ನೇ ಪಡೆದವು. ಸುಗ್ಗಿಯ ದಿನದಂದು ಎಲ್ಲ ಪ್ರಾಣಿಗಳು ಹಿಗ್ಗಿ ನಲಿದವು. ತಾವೇ ಆಹಾರ ಬೆಳೆದಿರುವುದು ಅವುಗಳ ಸಂತೋಷವನ್ನು ಇಮ್ಮಡಿ ಮಾಡಿತ್ತು.

ದಿನಕಳೆದಂತೆ ಪ್ರಾಣಿಗಳ ಆಸೆ ಅತಿಯಾಗಿ ಕೃಷಿ ಭೂಮಿಯನ್ನು ವಿಸ್ತರಿಸಿಕೊಳ್ಳಬೇಕು ಎಂದು ಮರ–ಗಿಡಗಳನ್ನು ಹೆಚ್ಚೆಚ್ಚು ಕಡಿದು ಹೆಚ್ಚು ವಿಸ್ತಾರದ ಕೃಷಿಭೂಮಿಯನ್ನು ಮಾಡಿಕೊಳ್ಳತೊಡಗಿದವು. ಇದು ಮುಂದುವರಿದಂತೆ ಕಾಡಿನಲ್ಲಿ ಮರಗಿಡಗಳು ಕಡಿಮೆಯಾಗಿ, ಬಿಸಿಲಿನ ಧಗೆ ಹೆಚ್ಚಿ, ಸಕಾಲದಲ್ಲಿ ಮಳೆಯೂ ಬಾರದಂತಾಯಿತು. ಕಾಡಿಗೆ ಬರ ಬಂದು, ಆಹಾರದ ಬೆಳೆಯ ಪ್ರಮಾಣ ಕುಸಿಯಿತು.

ಹಸಿವು, ಬಾಯಾರಿಕೆ, ಬಡತನ ಹೆಚ್ಚಿದಂತೆ ಪ್ರಾಣಿ– ಪಕ್ಷಿಗಳು ಸೊರಗತೊಡಗಿದವು. ಕೂಡಲೇ ಎಲ್ಲ ಪ್ರಾಣಿಗಳು ವನರಾಜನ ಬಳಿ ಬಂದು, ಕಾಡಿನಲ್ಲಿ ಉದ್ಭವಿಸಿದ ಸಮಸ್ಯೆ ಕುರಿತು ತಿಳಿಸಿದವು. ಆಗ ವನರಾಜನು, ‘ನೋಡಿ... ನಾನು ನಿಮಗೆ ಅಗತ್ಯವಿರುವಷ್ಟು ಕೃಷಿ ಭೂಮಿ ಮಾಡಲು ಸೂಚಿಸಿದ್ದೆ. ಆದರೆ ನೀವು ಅತಿಯಾಸೆಯಿಂದ ಹೆಚ್ಚು ಹೆಚ್ಚು ಕೃಷಿ ಭೂಮಿಯನ್ನು ಮಾಡಿಕೊಳ್ಳತೊಡಗಿದಿರಿ. ಇದರ ಪರಿಣಾಮವೇ ಹೀಗಾಗಿದೆ’ ಎಂದಿತು. ‘ಹಾಗಾದರೆ ಇದಕ್ಕೆ ಪರಿಹಾರವೇನು?’ ಎಂದು ಪ್ರಾಣಿಗಳು ಕೇಳಿದವು. ಮತ್ತೊಮ್ಮೆ ಕಾಡನ್ನು ಬೆಳೆಸುವುದು, ಹೆಚ್ಚೆಚ್ಚು ಮರ–ಗಿಡಗಳನ್ನು ಬೆಳೆಸಿ, ರಕ್ಷಿಸುವುದೇ ನಮಗಿರುವ ಮಾರ್ಗ ಎಂದು ವನರಾಜ ಹೇಳಿತು. ಕೃಷಿ ಭೂಮಿ ಅವಶ್ಯವಿರುವಷ್ಟು ಮಾತ್ರ ಮಾಡಬೇಕು. ತಪ್ಪಿದರೆ ದಂಡ ತೆರಬೇಕಾಗುತ್ತದೆ ಎಂದು ರಾಜಾಜ್ಞೆ ಹೊರಡಿಸಿತು.

ಪ್ರಾಣಿಗಳು ಪರಿಶ್ರಮದಿಂದ ಕಾಡಿನಲ್ಲಿ ಹೆಚ್ಚು ಮರ– ಗಿಡಗಳನ್ನು ಬೆಳೆಸಿದವು. ಇದರಿಂದ ಕಾಡು ಮೊದಲಿನಂತಾಯಿತು. ಪ್ರಾಣಿಗಳು ನೆಮ್ಮದಿಯಿಂದ ಉಸಿರಾಡತೊಡಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.