ADVERTISEMENT

ಪ್ರಮೀಳಾ ಸಂಗೀತ ಪ್ರೇಮ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2014, 19:30 IST
Last Updated 14 ಫೆಬ್ರುವರಿ 2014, 19:30 IST
ಡಾ.ಬಿ.ಎಸ್‌. ಪ್ರಮೀಳಾದೇವಿ.
ಡಾ.ಬಿ.ಎಸ್‌. ಪ್ರಮೀಳಾದೇವಿ.   

ಹಿಮಾಲಯದ ಓಂ ಪರ್ವತದಲ್ಲಿ ಸದಾಕಾಲ ಮಂಜು ಓಂ ಆಕಾರದಲ್ಲಿ ಚಿತ್ತಾರಗೊಂಡಿರುತ್ತದೆ. ಅದನ್ನೇ ತಮ್ಮ ಲೋಗೊವನ್ನಾಗಿಸಿಕೊಂಡು ಓಂ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಓಂ ಸಂಸ್ಥೆ ಯನ್ನು ಹುಟ್ಟುಹಾಕಿದರು ಡಾ.ಬಿ.ಎಸ್‌. ಪ್ರಮೀಳಾದೇವಿ.

ಮನಃಶಾಸ್ತ್ರಜ್ಞೆ ಆಗಿರುವ ಇವರಿಗೆ ಸಂಗೀತದ ಬಗ್ಗೆ ಮೊದಲಿನಿಂದಲೂ ಅಪಾರ ಪ್ರೀತಿ. ಹೀಗಾಗಿಯೇ 1997ರಲ್ಲಿ ಸಂಸ್ಥೆ ಸ್ಥಾಪಿಸಿ ಪ್ರತಿ ತಿಂಗಳ ಎರಡನೇ ಶನಿವಾರ ನಿರಂತರವಾಗಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಿರಿಯರಿಗಾಗಿ ಹಾಗೂ ಮಧ್ಯವಯಸ್ಕರಿಗಾಗಿ ತಾನು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇನೆ ಎನ್ನುವ ಅವರಿಗೆ ಕಿರಿಯರಲ್ಲಿ ಸಂಗೀತಾಸಕ್ತಿ ಕುಂಠಿತವಾಗಿರುವ ಬಗ್ಗೆ ಬೇಸರವಿದೆ. ‘17 ವರ್ಷದಿಂದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇನೆ. ಕಲಾವಿದರು ಸಂತೋಷದಿಂದ ಬಂದು ಕಾರ್ಯಕ್ರಮ ನೀಡುತ್ತಾರೆ. ಹೆಚ್ಚಿನ ಎಲ್ಲಾ ಪ್ರೇಕ್ಷಕರೂ ಮಧ್ಯವಯಸ್ಕರು ಹಾಗೂ ಹಿರಿಯರು.

ಕಾರ್ಯಕ್ರಮ ನೀಡಲು ಬಂದ ಕಿರಿಯರನ್ನು ಬಿಟ್ಟರೆ ಬೇರೆ ಯಾವ ಕಿರಿಯ ಪ್ರೇಕ್ಷಕರೂ ಇರುವುದಿಲ್ಲ. ಬಂದವರೂ ತಮ್ಮ ತಮ್ಮ ಪ್ರದರ್ಶನ ಮುಗಿಯುತ್ತಿದ್ದಂತೆ ತೆರಳುತ್ತಾರೆ. ಕುಳಿತು ಇನ್ನೊಬ್ಬರ ಕಾರ್ಯಕ್ರಮ ವೀಕ್ಷಿಸುವ ವ್ಯವಧಾನ ಇಂದಿನವರಲ್ಲಿ ಕಡಿಮೆಯಾಗಿದೆ’ ಎನ್ನುತ್ತಾರೆ ಅವರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆ ನೀಡುವ ಮಾಧ್ಯಮ. ಮನಸ್ಸು ಉಲ್ಲಾಸಭರಿತವಾಗಿದ್ದಷ್ಟೂ ಆರೋಗ್ಯ ಚೆನ್ನಾಗಿರುತ್ತದೆ. ಇದೇ ಉದ್ದೇಶವನ್ನಾಗಿಸಿಕೊಂಡು ಆರಂಭವಾದ ಈ ಸಂಸ್ಥೆ ಜನವರಿ ತಿಂಗಳನ್ನು ಪುರಂದರ ನಮನಕ್ಕಾಗಿ ಮುಡಿಪಾಗಿಟ್ಟಿದೆ. ಫೆಬ್ರುವರಿಯಲ್ಲಿ ತ್ಯಾಗರಾಜ ಪುರಂದರ ಆರಾಧನೆ. ಹೀಗೆ ಪ್ರತಿ ತಿಂಗಳೂ ವಿವಿಧ ಕಾರ್ಯಕ್ರಮ ನೀಡುವ ಇವರು ಕಾವ್ಯ ವಾಚನ, ಕವಿ ಕಾವ್ಯ ನಮನ, ಆಧ್ಯಾತ್ಮಿಕ, ನಗೆ, ಯುವಕರಿಗೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸುತ್ತಾರೆ. ಕನಕ ನಮನ, ಕವಿಶ್ರೇಷ್ಠರ ಕುರಿತ ಕಾರ್ಯಕ್ರಮ ಹೀಗೆ ಹತ್ತು ಹಲವು ಬಗೆಯಲ್ಲಿ ಕಲಾರಸಿಕರ ಮನ ತಣಿಸುತ್ತಿದೆ ಈ ಸಂಸ್ಥೆ.

ತಮ್ಮದು ಆಶಾವಾದಿ ಸಂಸ್ಥೆ ಎನ್ನುವ ಪ್ರಮೀಳಾ ಅವರ ಕಾರ್ಯಕ್ರಮಗಳಿಗೆ ಆನಂದ್‌ ಎನ್ನುವವರು ಉಚಿತವಾಗಿ ಸ್ಥಳಾವಕಾಶ ನೀಡಿ ಸಹಕರಿಸಿದ್ದಾರೆ. ಶತಾವಧಾನಿ ಆರ್‌. ಗಣೇಶ್‌, ಹಂಸಿನಿ ನಾಗೇಂದ್ರ, ಡಾ. ಶೇಷಪ್ರಸಾದ್‌ ಮುಂತಾದ ಅನೇಕ ಜನಪ್ರಿಯ ಕಲಾವಿದರು ಇಲ್ಲಿ ಪ್ರದರ್ಶನ ನೀಡಿದ್ದಾರೆ. ಊಟ ತಿಂಡಿಯ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗುತ್ತದೆ. ‘ಎಲ್ಲಾ ಕಲಾವಿದರು ಕಲಾಸೇವೆ ಮಾಡಲು ಇಲ್ಲಿ ಬರುತ್ತಾರೆ. ನಾನು ಸಾರಿಗೆ ವೆಚ್ಚವನ್ನು ಮಾತ್ರ ಅವರಿಗೆ ನೀಡುತ್ತೇನೆ. ಆದರೂ ಪ್ರೀತಿಯಿಂದ ಬಂದು ಕಾರ್ಯಕ್ರಮ ನೀಡುವ ಎಲ್ಲಾ ಕಲಾವಿದರ ಬಗ್ಗೆ ಖುಷಿ ಎನಿಸುತ್ತದೆ. ನಾನು ಎಂದಿಗೂ ಆಮಂತ್ರಣ ಪತ್ರ ಮುದ್ರಿಸಿ ಹಂಚಿಲ್ಲ. ಆದರೂ ಪ್ರತಿ ತಿಂಗಳ ಕಾರ್ಯಕ್ರಮಕ್ಕೆ ಆಸಕ್ತರು ಬರುತ್ತಾರೆ’ ಎನ್ನುವ ಖುಷಿ ಪ್ರಮೀಳಾ ಅವರ ಕಂಗಳಲ್ಲಿ.

ಶಾಸ್ತ್ರೀಯ ಸಂಗೀತದ ಬಗ್ಗೆ ಏನೋ ವಿಶೇಷವಾದ ಒಲವು ಪ್ರಮೀಳಾ ಅವರಿಗಿದೆಯಂತೆ. ಆದರೂ ಸಂಗೀತದ  ಎಲ್ಲಾ ಪ್ರಕಾರದಲ್ಲೂ ಇಲ್ಲಿ ಕಾರ್ಯಕ್ರಮ ನಡೆದಿದ್ದು ಮುಂದಿನ ತಿಂಗಳು ‘ಜಿಎಸ್‌ಎಸ್‌ ಗೀತ ಭಾವ ನುಡಿ ನಮನ’ ಆಯೋಜಿಸುವ ಹುಮ್ಮಸ್ಸಿನಲ್ಲಿದ್ದಾರೆ ಅವರು. ಈ ವರ್ಷದ ಜೂನ್‌ 24ರಂದು 200ನೇ ಕಾರ್ಯಕ್ರಮ ನೆರವೇರಲಿದೆಯಂತೆ.

ತ್ಯಾಗರಾಜರ ಆರಾಧನೆ ಇಂದು
ಫೆ.15ರಂದು (ಇಂದು) ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಪ್ರಮೀಳಾ ಅವರ ಆಯೋಜನೆಯಲ್ಲಿ ತ್ಯಾಗರಾಜ ಪುರಂದರ ಆರಾಧನೆ ಕಾರ್ಯಕ್ರಮ ನಡೆಯಲಿದೆ. ಡಿ. ಶಶಿಕಲಾ ಅವರ ನೇತೃತ್ವದಲ್ಲಿ ಭಾರ್ಗವಿ ಅವರಿಂದ ವಯಲಿನ್‌, ಬಿ.ಎಸ್‌. ಆನಂದ್‌ ಅವರಿಂದ ಮೃದಂಗ ವಾದನ ಕಾರ್ಯಕ್ರಮ ಇದೆ. ಡಾ. ರಾಘವೇಂದ್ರ, ನಳಿನಿ ಪ್ರಭಾಕರ್‌ ಮುಂತಾದ ಕಲಾವಿದರಿಂದ ಗೋಷ್ಠಿ ಗಾಯನ.

ಸ್ಥಳ: ಗಾಂಧಿ ಬಜಾರ್‌ ಮುಖ್ಯ ರಸ್ತೆ, ಟ್ಯಾಗೋರ್‌ ವೃತ್ತ, ಬಾಟಾ ಶೋರೂಂ ಮೂರನೇ ಮಹಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT