ADVERTISEMENT

ಬೆರ್ನಿ ಚಾಣಾಕ್ಷ ನಡೆ

ವ್ಯಕ್ತಿ

ಬಿ.ಎಂ.ಹನೀಫ್
Published 13 ಫೆಬ್ರುವರಿ 2016, 19:30 IST
Last Updated 13 ಫೆಬ್ರುವರಿ 2016, 19:30 IST
ಬೆರ್ನಿ ಚಾಣಾಕ್ಷ  ನಡೆ
ಬೆರ್ನಿ ಚಾಣಾಕ್ಷ ನಡೆ   

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಬಿಸಿ ನಿಧಾನಕ್ಕೆ ಏರತೊಡಗಿದೆ. ದ್ವಿಪಕ್ಷೀಯ ಪದ್ಧತಿ ಇರುವ ಅಮೆರಿಕದ ಪ್ರಜಾಪ್ರಭುತ್ವದಲ್ಲಿ ರಿಪಬ್ಲಿಕನ್‌ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಅಧ್ಯಕ್ಷ ಹುದ್ದೆಗೆ ನೇರ ಹಣಾಹಣಿ ನಡೆಸುತ್ತಾರೆ. ಆದರೆ ಅದಕ್ಕೂ ಮುನ್ನ ಈ ಎರಡೂ ಪಕ್ಷಗಳಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಪಕ್ಷ ಮಟ್ಟದ ಚುನಾವಣೆ ನಡೆಯುತ್ತದೆ. ಅಮೆರಿಕದ ಅಧ್ಯಕ್ಷ ಚುನಾವಣೆ ನಡೆಯಲಿರುವುದು ಈ ನವೆಂಬರ್‌ನಲ್ಲಿ. ಆದರೆ ಅದಕ್ಕೂ ಒಂದು ವರ್ಷ ಮೊದಲೇ ಎರಡೂ ಪಕ್ಷಗಳಲ್ಲಿ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಇದು ಆಯಾ ಪಕ್ಷಗಳ ಪ್ರತಿನಿಧಿಗಳು ಮಾತ್ರ ಭಾಗವಹಿಸುವ ಚುನಾವಣೆ. ಈ ಚುನಾವಣೆಯೂ ಎರಡು ಹಂತಗಳಲ್ಲಿ ನಡೆಯುತ್ತದೆ. ಮೊದಲನೆಯದಾಗಿ ಆಯಾ ರಾಜ್ಯಗಳಲ್ಲಿ ಇರುವ ಪಕ್ಷದ ಪ್ರತಿನಿಧಿಗಳು ನಡೆಸುವ ಆಯ್ಕೆ (ಪ್ರೈಮರಿ). ಎರಡನೆಯದಾಗಿ ಶಾಸನಸಭೆಗಳಲ್ಲಿ ಇರುವ ಪಕ್ಷದ ಪ್ರತಿನಿಧಿಗಳಷ್ಟೇ ಒಟ್ಟು ಸೇರಿ ನಡೆಸುವ ಆಯ್ಕೆ (ಕಾಕಸಸ್‌). ಇಲ್ಲಿ ಗೆಲುವು ಸಾಧಿಸಿದಾತ ಆಯಾ ಪಕ್ಷದಿಂದ ರಾಷ್ಟ್ರದ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗುತ್ತಾನೆ.

ರಿಪಬ್ಲಿಕನ್‌ ಪಕ್ಷದಿಂದ ತಾವೇ ಅಧ್ಯಕ್ಷೀಯ ಅಭ್ಯರ್ಥಿ ಆಗಬೇಕೆಂದು ಒಟ್ಟು 15 ಮಂದಿ ಸ್ಪರ್ಧಿಸಿದ್ದಾರೆ. ಹಾಗೆಯೇ ಡೆಮಾಕ್ರಟಿಕ್ ಪಕ್ಷದಿಂದ ಆರು ಜನ ಸ್ಪರ್ಧೆಯಲ್ಲಿದ್ದಾರೆ. ಜನವರಿಯಲ್ಲಿ ನ್ಯೂ ಹ್ಯಾಂಪ್‌ಷೈರ್‌ನಲ್ಲಿ ನಡೆದ ಪ್ರಾಥಮಿಕ ಹಂತದ ಮೊದಲ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದಲ್ಲಿ ಡೊನಾಲ್ಡ್‌ ಟ್ರಂಪ್‌ ಮೇಲುಗೈ ಸಾಧಿಸಿದ್ದರೆ, ಡೆಮಾಕ್ರಟಿಕ್ ಪಕ್ಷದಲ್ಲಿ ಬೆರ್ನಿ ಸ್ಯಾಂಡರ್ಸ್‌ ಮುನ್ನಡೆ ಗಳಿಸಿದ್ದಾರೆ.

ಮಾಧ್ಯಮಗಳಲ್ಲಿ ಅತ್ಯಂತ ದೊಡ್ಡ ಚರ್ಚೆ ಈಗ ನಡೆಯುತ್ತಿರುವುದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾರಾಗಬಹುದು ಎನ್ನುವ ಬಗ್ಗೆ. ಅದಕ್ಕೂ ಕಾರಣವಿದೆ. ಇಲ್ಲಿ ಆರು ಜನರು ಸ್ಪರ್ಧೆಯಲ್ಲಿದ್ದರೂ ಹಣಾಹಣಿ ನಡೆಯುತ್ತಿರುವುದು ಹಿಲರಿ ಕ್ಲಿಂಟನ್‌ ಮತ್ತು ಬೆರ್ನಿ ಸ್ಯಾಂಡರ್ಸ್‌ ಮಧ್ಯೆ. ಒಂದು ಕಾಲದಲ್ಲಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿ ಸಾಕಷ್ಟು ಸುದ್ದಿ ಮಾಡಿದ ಬಿಲ್‌ ಕ್ಲಿಂಟನ್‌ ಅವರ ಪತ್ನಿ ಹಾಗೂ ಈಗಿನ ಅಧ್ಯಕ್ಷ ಬರಾಕ್ ಒಬಾಮ ಸರ್ಕಾರದ ಹಿಂದಿನ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ಆಗಿದ್ದ 68ರ ‘ಹರೆಯ’ದ ಹಿಲರಿ ಕ್ಲಿಂಟನ್‌ ಜಗತ್ತಿನಾದ್ಯಂತ ಪರಿಚಿತ ಮುಖ. ನ್ಯೂಯಾರ್ಕ್‌ನ ಮಾಜಿ ಸೆನೆಟರ್‌.
ಅವರ ಪ್ರಮುಖ ಪ್ರತಿಸ್ಪರ್ಧಿ ಬೆರ್ನಿ ಸ್ಯಾಂಡರ್ಸ್‌ ಕೂಡ ಹಳೆ ತಲೆಯೇ. 74 ವರ್ಷ ವಯಸ್ಸಿನ ಅವರು ವೆರ್‌ಮೊಂಟ್‌ನ ಸೆನೆಟರ್‌. ಕಳೆದ 25 ವರ್ಷಗಳಿಂದಲೂ ಈತ ಸೆನೆಟರ್‌. ನ್ಯೂ ಹ್ಯಾಂಪ್‌ಷೈರ್‌ನಲ್ಲಿ ಸ್ಯಾಂಡರ್ಸ್‌, ಹಿಲರಿ ಕ್ಲಿಂಟನ್‌ರಿಗಿಂತ ಶೇಕಡ 20ರಷ್ಟು ಹೆಚ್ಚು ಮತಗಳನ್ನು ಗಳಿಸಿ ಗೆದ್ದಿದ್ದಾರಾದರೂ, ಮುಂದಿನ ಕ್ಷೇತ್ರಗಳಲ್ಲಿ ಹಿಲರಿ ಕ್ಲಿಂಟನ್‌ ತೀವ್ರ ಸ್ಪರ್ಧೆ ಒಡ್ಡುವುದು ಖಚಿತ ಎನ್ನಲಾಗುತ್ತಿದೆ.

ಈಗಾಗಲೇ ವಾಟ್ಸ್ಆ್ಯಪ್, ಫೇಸ್‌ಬುಕ್‌, ಟ್ವಿಟರ್‌, ರೆಡ್ಡಿಟ್‌ಗಳಲ್ಲಿ ಇಬ್ಬರ ಪರ- ವಿರೋಧದ ಚರ್ಚೆ ಭುಗಿಲೆದ್ದಿದೆ. ಟಿ.ವಿಗಳಲ್ಲಿ ಇಬ್ಬರ ನಡುವಣ ನೇರ ಚರ್ಚೆ, ವಾಗ್ವಾದಗಳನ್ನು ಅಮೆರಿಕನ್ನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಮುಖ್ಯವಾಗಿ ಇಬ್ಬರ ರಾಜಕೀಯ ಧೋರಣೆ ಮತ್ತು ಸಿದ್ಧಾಂತಗಳ ಬಗ್ಗೆ ವಾಗ್ವಾದ ನಡೆಯುತ್ತಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಗುಣಾವಗುಣಗಳ ತುಲನೆಯೂ ಜೋರಾಗಿದೆ.

ಈಗ ಆರಂಭಿಕ ಹಂತದಲ್ಲಿ ಬೆರ್ನಿ ಸ್ಯಾಂಡರ್ಸ್‌ ಜಾಗತಿಕ ಚರ್ಚೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದಾರೆ. ಹಿಲರಿ ಕ್ಲಿಂಟನ್‌ರಂತಹ ಜನಪ್ರಿಯ ಸ್ಪರ್ಧಿಯನ್ನು ಆರಂಭದಲ್ಲೇ ಸೋಲಿಸಿದ್ದು ಮಾತ್ರ ಇದಕ್ಕೆ ಕಾರಣವಲ್ಲ. ಅವರು ಚರ್ಚೆಗೆ ಎತ್ತಿಕೊಳ್ಳುತ್ತಿರುವ ವಿಷಯಗಳೂ ಕಾರಣ. ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವವರು ಕೋಟ್ಯಧಿಪತಿಗಳೇ ಆಗಿರಬೇಕು. ಅಲ್ಲವಾದಲ್ಲಿ ಮಿಲಿಯಾಧಿಪತಿಗಳಾದರೂ ಆಗಿರಬೇಕು. ಆದರೆ ಈ ಬೆರ್ನಿ ಸ್ಯಾಂಡರ್ಸ್ ಇವೆರಡೂ ಅಲ್ಲ; ಒಬ್ಬ ಸಾಮಾನ್ಯ ಸೆನೆಟರ್‌! ಆತನ ಒಟ್ಟು ನಿವ್ವಳ ಆಸ್ತಿ ಮೌಲ್ಯ ಕೇವಲ 3 ಲಕ್ಷ ಡಾಲರ್‌! (ಸ್ಪರ್ಧೆಯಲ್ಲಿ ಇನ್ನಿಬ್ಬರು ಈತನಿಗಿಂತಲೂ ಬಡವರು ಇದ್ದಾರೆ. ಒಬ್ಬಾತ ಫ್ಲೋರಿಡಾ ಸೆನೆಟರ್‌ ಮಾರ್ಕೊ ರುಬಿಯೊ- ಈತನ ನಿವ್ವಳ ಆಸ್ತಿ ಮೊತ್ತ ಕೇವಲ 1 ಲಕ್ಷ ಡಾಲರ್. ಇನ್ನೊಬ್ಬಾತ ಮಾರ್ಟಿಸ್‌ ಒಮಲ್ಲೇ- ಈತನ ನಿವ್ವಳ ಆಸ್ತಿ ಸೊನ್ನೆ!)

25 ವರ್ಷಗಳಿಂದಲೂ ಸೆನೆಟ್‌ ಸದಸ್ಯನಾಗಿದ್ದೂ ಇಷ್ಟೊಂದು ಬಡವನಾಗಿರುವುದನ್ನೇ ‘ಪ್ಲಸ್‌ ಪಾಯಿಂಟ್‌’ ಮಾಡಿಕೊಳ್ಳಲು ಸ್ಯಾಂಡರ್ಸ್‌ ಯತ್ನಿಸುತ್ತಿದ್ದಾರೆ. ‘ಕೋಟ್ಯಧಿಪತಿಗಳೇ ರಾಜಕೀಯ ಪ್ರಕ್ರಿಯೆಯ ಸ್ವಾಮ್ಯ ಹೊಂದಿರುವುದು ಎಳ್ಳಷ್ಟೂ ಸರಿಯಲ್ಲ’ ಎಂದು ಆರಂಭದಲ್ಲೇ ವಾಗ್ದಾಳಿ ಆರಂಭಿಸಿರುವ ಸ್ಯಾಂಡರ್ಸ್‌, ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಬಯಸಿರುವ ಮೊದಲ ಯಹೂದಿಯೂ ಹೌದು!

ಹಿಲರಿ ಕ್ಲಿಂಟನ್‌ ಅವರಿಗೆ ಪ್ರಚಾರಕ್ಕೆ ನಿಧಿ ಒದಗಿಸಲು ಹಲವಾರು ಕೋಟ್ಯಧಿಪತಿಗಳು ಮುಂದೆ ಬಂದಿದ್ದಾರೆ. ಆದರೆ ಸ್ಯಾಂಡರ್ಸ್‌ ಈ ನಿಟ್ಟಿನಲ್ಲೂ ಮುನ್ನಡೆ ಸಾಧಿಸಿರುವುದು ವಿಶೇಷ. ಪ್ರಚಾರ ಆರಂಭಿಸಿದ 24 ಗಂಟೆಗಳಲ್ಲೇ ಸ್ಯಾಂಡರ್ಸ್‌ಗೆ ಒಂದೂವರೆ ಲಕ್ಷ ಡಾಲರ್‌ ನಿಧಿ ಸಂಗ್ರಹವಾಗಿದೆ! ಈ ಜನವರಿ ಕೊನೆಯಲ್ಲಿ ಒಟ್ಟು 3.25 ಲಕ್ಷ ಡಾಲರ್‌ ನಿಧಿ ಶೇಖರಿಸಿದ್ದು, ಅದರಲ್ಲೂ ಉಳಿದೆಲ್ಲ ಅಭ್ಯರ್ಥಿಗಳಿಗಿಂತ (ಹಿಲರಿ ಹೊರತುಪಡಿಸಿ) ಮುಂದಿದ್ದಾರೆ. ದೊಡ್ಡ ಉದ್ಯಮಪತಿಗಳಿಗಿಂತ ಜನಸಾಮಾನ್ಯರನ್ನೇ ಹೆಚ್ಚಾಗಿ ನಂಬಿರುವ ಸ್ಯಾಂಡರ್ಸ್‌, 10, 20 ಮತ್ತು 50 ಡಾಲರ್‌ಗಳ ವೈಯಕ್ತಿಕ ನೆರವನ್ನೂ ಯಾಚಿಸಿ ಜನಮನ್ನಣೆ ಪಡೆದಿದ್ದಾರೆ.

ಸ್ಯಾಂಡರ್ಸ್‌ ಉದಾರವಾದಿ ಸೋಷಲಿಸ್ಟ್. ಚಿಕಾಗೊ ವಿಶ್ವವಿದ್ಯಾಲಯದ  ಪದವೀಧರ. ಕೋಟ್ಯಧಿಪತಿ ಉದ್ಯಮಿಗಳ ವಿರುದ್ಧ ಸದಾ ‘ಮೂರನೆಯ ಕಣ್ಣು’ ಬಿಡುವಾತ. ‘ವಾಲ್‌ಸ್ಟ್ರೀಟ್‌ ಕುಸಿತದಿಂದಾಗಿ ಆಫ್ರಿಕನ್‌- ಅಮೆರಿಕನ್ನರ ಅರ್ಧಕ್ಕೂ ಹೆಚ್ಚು ಆಸ್ತಿ ಕರಗಿಹೋಗಿದೆ’ ಎನ್ನುವ ಅವರ ವಾಗ್ದಾಳಿ ಸಾಮಾನ್ಯ ಜನರಲ್ಲಿ ಉತ್ಸಾಹ ಹುಟ್ಟಿಸಿದಂತಿದೆ. ಕಾರ್ಪೊರೇಟ್‌ ದೈತ್ಯರ ಹಿಡಿತದಲ್ಲಿ ಅಮೆರಿಕದ ಮಧ್ಯಮವರ್ಗ ಅವನತಿ ಹೊಂದುತ್ತಿರುವ ಬಗ್ಗೆ ಅವರು ಬರೆದ ‘ದಿ ಸ್ಪೀಚ್‌’ ಎನ್ನುವ ಪುಸ್ತಕವೂ ಜನಪ್ರಿಯತೆ ಹೆಚ್ಚಿಸಿದೆ.

ಅಂದಾಕ್ಷಣ ಎಲ್ಲವೂ ಅವರ ಪರವಾಗಿದೆ ಎಂದಲ್ಲ. ಹಿಲರಿ ಕ್ಲಿಂಟನ್‌ ಅಂತರರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ಸಾಕಷ್ಟು ಅನುಭವಿ. ಸ್ಯಾಂಡರ್ಸ್‌ ವಿರುದ್ಧದ ಅಂಶಗಳನ್ನೆಲ್ಲ ಹೆಕ್ಕಿ ತೆಗೆದು ಆಕೆಯ ಬೆಂಬಲಿಗರೂ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ‘ಸ್ಯಾಂಡರ್ಸ್‌ 25 ವರ್ಷಗಳಿಂದ ಸೆನೆಟರ್‌ ಆಗಿ ಅಧಿಕಾರದಲ್ಲಿದ್ದೂ ಒಂದೇ ಒಂದು ಮಸೂದೆಯನ್ನು ಪಾಸ್‌ ಮಾಡಿಸಿಲ್ಲ. ಜೀವನದಲ್ಲಿ ಒಂದು ಉದ್ಯಮವನ್ನೂ ಸ್ಥಾಪಿಸಿ ಗೊತ್ತಿಲ್ಲ. ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕಟ್ಟುನಿಟ್ಟಾಗಿ ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ. ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಸರ್ಕಾರದ ಸಾಮಾಜಿಕ ಯೋಜನೆಗಳ ಫಲಾನುಭವಿಯಾಗಿ ಬದುಕಿದವರು. ಅವರ ಜೀವನವೇ ಒಂದು ವೈಫಲ್ಯಗಳ ಮೊತ್ತ’ ಎಂಬ ಪ್ರಚಾರ ನಡೆದಿದೆ! ಜತೆಗೆ ಸ್ಯಾಂಡರ್ಸ್‌ರನ್ನು ಅಭ್ಯರ್ಥಿಯಾಗಿಸಿದರೆ ಡೆಮಾಕ್ರಟಿಕ್ ಪಕ್ಷದ ವಿರುದ್ಧ ಯಹೂದಿ ವಿರೋಧಿ ಅಲೆಯೂ ಏಳಬಹುದೆಂಬ ಆತಂಕವನ್ನೂ ತೇಲಿಬಿಡಲಾಗಿದೆ.

ಏನಿದ್ದರೂ ಸ್ಯಾಂಡರ್ಸ್‌ ಚಾಣಾಕ್ಷ. ಮೊದಲ ಸುತ್ತಿನ ಆತನ ಜಯವೂ ಅನಿರೀಕ್ಷಿತ. ಫೆಬ್ರುವರಿ, ಮಾರ್ಚಿಯಲ್ಲಿ ನಡೆಯುವ ಉಳಿದ ಪ್ರೈಮರಿಗಳ ಚುನಾವಣೆಯಲ್ಲೇ ಅಭ್ಯರ್ಥಿ ಯಾರೆಂಬುದು ಸ್ಪಷ್ಟವಾಗುತ್ತದೆ. ಜುಲೈನಲ್ಲಿ ನಡೆಯುವ ಪ್ರೈಮರಿಗೆ ಮಹತ್ವವೇ ಇರುವುದಿಲ್ಲ. ಹಾಗೆಂದೇ ಆರಂಭದ ಗೆಲುವು ಸ್ಯಾಂಡರ್ಸ್‌ರ ಉತ್ಸಾಹವನ್ನು ಉಕ್ಕೇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.