ADVERTISEMENT

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 19:30 IST
Last Updated 25 ಜೂನ್ 2016, 19:30 IST

ತಾಸು ಕಾದರೂ ಸಿಗದ ತೂಕದ ಯಂತ್ರ !
ವಿಜಯಪುರ:
ಸರ್ಕಾರಿ ಹಾಸ್ಟೆಲ್‌ಗಳಲ್ಲಿನ ವಂಚನೆಯ ಜಾಲ ಭೇದಿಸಲೆಂದು, ಇಲ್ಲಿನ ಸರ್ಕಾರಿ ಹಾಸ್ಟೆಲ್‌ಗಳಿಗೆ ದಿಢೀರ್‌ ಭೇಟಿ ನೀಡಿದ ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ನೇತೃತ್ವದ ಸಮಿತಿ ಸದಸ್ಯರಿಗೆ ಅಧಿಕಾರಿಗಳೇ ಚಳ್ಳೆಹಣ್ಣು ತಿನ್ನಿಸಿದರು.

ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ ಈಚೆಗೆ ನಗರಕ್ಕೆ ಭೇಟಿ ನೀಡಿ, ಮೂರು ಹಾಸ್ಟೆಲ್‌ಗಳಿಗೆ ದಿಢೀರ್‌ ಭೇಟಿಯಿತ್ತು ಪರಿಶೀಲಿಸಿತು.

ಸಮಿತಿ ಸದಸ್ಯರ ಪ್ರತಿ ಪ್ರಶ್ನೆಗೂ ಅಧಿಕಾರಿಗಳು ಸಬೂಬು ಹೇಳಿದರು. ಆಹಾರ ಧಾನ್ಯ ಚೀಲಗಳ ತೂಕದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಉಗ್ರಪ್ಪ, ತೂಕದ ಯಂತ್ರ ತಂದು ಸ್ಥಳದಲ್ಲೇ ತೂಕ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಆದರೆ, ಒಂದು ತಾಸು ಕಾದರೂ ತೂಕದ ಯಂತ್ರ ಮಾತ್ರ ಹಾಸ್ಟೆಲ್‌ಗೆ ಬರಲೇ ಇಲ್ಲ. ಈ ಸಂಬಂಧ ಹೊರಹೋಗಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಎಲ್ಲರೂ ‘ಸರ್‌, ಇವತ್ತು ಹುಣ್ಣಿಮೆ. ನಮ್ಮ ಭಾಗದಲ್ಲಿ ಯಾರೊಬ್ಬರೂ ತೂಕದ ಯಂತ್ರ ಕೊಡಲ್ಲ’ ಎನ್ನುತ್ತಿದ್ದಂತೆ ಉಗ್ರಪ್ಪ ಸೇರಿದಂತೆ ಸಮಿತಿಯ ಸದಸ್ಯರೆಲ್ಲ ಬೇಸ್ತು ಬಿದ್ದು ಸುಸ್ತಾದರು. 
-ಡಿ.ಬಿ.ನಾಗರಾಜ

***
ಫಸ್ಟ್‌ ಅಂಡ್‌ ಲಾಸ್ಟ್‌ ಭೇಟಿರೀ...
ಬೆಂಗಳೂರು:
‘ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಫಸ್ಟ್‌ ಅಂಡ್‌ ಲಾಸ್ಟ್‌ ಭೇಟಿ ಆಗಿದ್ದು ಖರೇರಿ. ಅದ್ರಾಗ ಏನ್‌ ತಪ್ಪು ಅದೇರಿ...’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಕೇಳಿದರು.

ನೀವು ಪದೇಪದೇ ದೇವೇಗೌಡರನ್ನು ಭೇಟಿ ಮಾಡಿದ್ದಕ್ಕೆ ಜಗದೀಶ ಶೆಟ್ಟರ್‌ ನಿಮ್ಮ ವಿರುದ್ಧ ತಿರುಗಿಬಿದ್ದಿರಬಹುದು ಎಂಬ ಸುದ್ದಿಗಾರರ ಕುಹಕಕ್ಕೆ, ‘ಹಂಗೇನಿಲ್ರೀ. ಎರಡ್ಮೂರು ಸರ್ತಿ ಅವರನ್ನು ಭೇಟಿಯಾಗಿಲ್ರಿ. ಫಸ್ಟ್‌ ಅಂಡ್‌ ಲಾಸ್ಟ್‌ ಅವರನ್ನು ಭೇಟಿಯಾಗಿದ್ದು ಖರೇರಿ.

ವಿಜಯಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನದ ಆಯ್ಕೆಗೆ ಕಾಂಗ್ರೆಸ್‌ ಪಕ್ಷಕ್ಕಾ ಬೆಂಬಲ ಕೊಡ್ರಿ ಎಂದು ಮನವಿ ಮಾಡೋಕೆ ಹೋಗಿದ್ದೇರಿ. ನಮ್ಮ ಸಂಗಡ ಇಂಡಿ ಶಾಸಕ ಯಶವಂತಗೌಡ ಪಾಟೀಲ್‌ ಬಂದಿದ್ರಿ. ದೇವೇಗೌಡರು ನಮಗೇನೂ ಬೇರೆ ಅಲ್ರಿ. ನಮ್ ತಂದೆಯವ್ರಿಗೂ ಅವರಿಗೂ ಅಗದೀ ಸ್ನೇಹ, ಸಂಬಂಧ ಇತ್ರಿ. ಆ ಸಲುಗೆ ಇಟ್ಕೊಂಡ್‌ ದೇವೇಗೌಡರನ್ನು ಭೇಟಿ ಮಾಡಿದ್ದೇರಿ. ಅದೇ ಫಸ್ಟ್‌ ಅಂಡ್‌ ಲಾಸ್ಟ್‌ ಭೇಟಿರೀ’ ಎಂದರು.

ಲಾಸ್ಟ್‌ ಎಂದು ಹೇಗೆ ಹೇಳುತ್ತೀರಿ, ಮತ್ತೆ ಭೇಟಿಯಾಗುವ ಅವಕಾಶ ಒದಗಿಬರುವುದಿಲ್ಲವೇ ಎಂಬ ಪ್ರಶ್ನೆಗೆ, ‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಚುನಾವಣೆ, ಸಂಪುಟ ಪುನರ್‌ರಚನೆ ಎಲ್ಲಾ ಮುಗಿತಲ್ರೀ. ಇನ್ನೇನೂ ಸಂದರ್ಭ ಬರೋದಿಲ್ಲರೀ’ ಎಂದು ಒಳಗುಟ್ಟನ್ನೂ ರಟ್ಟು ಮಾಡಿದರು. 
-ವೈ.ಗ.ಜಗದೀಶ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.