ADVERTISEMENT

ಸರೀಕರೊಡನೆ ಸಮನಡಿಗೆ...

ಗಡಿಯಲ್ಲಿ ಕನ್ನಡ ನುಡಿಶಾಲೆ

ಡಾ.ರಾಮಕೃಷ್ಣ ಮರಾಠೆ
Published 8 ಆಗಸ್ಟ್ 2014, 19:30 IST
Last Updated 8 ಆಗಸ್ಟ್ 2014, 19:30 IST
ಸರೀಕರೊಡನೆ ಸಮನಡಿಗೆ...
ಸರೀಕರೊಡನೆ ಸಮನಡಿಗೆ...   

ಕರ್ನಾಟಕ– ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳ ಚಿತ್ರ ಈಗ ಬದಲಾಗಿದೆ. ‘ಶಾಲೆ ಇಲ್ಲ, ಕಟ್ಟಡ ಇಲ್ಲ, ಶಿಕ್ಷಕರಿಲ್ಲ’ ಎಂಬ ಮೊದಲಿನ ಕೂಗು ಈಗ ಅಷ್ಟಾಗಿ ಕೇಳಿಬರುತ್ತಿಲ್ಲ. ಹಾಗೆಂದು ಇಲ್ಲಿಯ ಕನ್ನಡ ಶಾಲೆಗಳು ಸಮಸ್ಯೆಗಳಿಂದ ಪೂರ್ಣ ಪಾರಾ­ಗಿವೆ ಎಂದು ಅರ್ಥವಲ್ಲ. ಸಮಸ್ಯೆಗಳ ಸ್ವರೂಪ  ಬದಲಾಗಿದೆ.

ಕನ್ನಡ ಶಾಲೆಗಳ ಪರಿಸರ ಹಾಗೂ ಮೂಲ ಸೌಕರ್ಯ­ಕ್ಕಾಗಿಯೇ ಈ ಭಾಗದ ಕನ್ನಡಿಗರು ಹೋರಾಡಬೇಕಾ ಯಿತು. 1950ರ ಸುಮಾರು ಕಾದಂಬರಿಕಾರ ಬಸವ ರಾಜ ಕಟ್ಟೀಮನಿ ಅವರು ಬೆಳಗಾವಿಯಲ್ಲಿದ್ದ ಒಂದು ಕನ್ನಡ ಶಾಲೆಯ ಪರಿಸರ ಕಂಡು ಆಡಿದ ಮಾತುಗಳನ್ನೇ ನೋಡಿ: ‘ಪಶುಗಳ ವಾಸಕ್ಕೂ ಅಯೋಗ್ಯವಾದ ಸ್ಥಳ. ಸಾರ್ವಜನಿಕ ಚರಂಡಿಯನ್ನು ನಾಚಿಸುವಂಥ ದುರ್ಗಂ ಧದ ವಾತಾವರಣದಲ್ಲಿ ಕನ್ನಡ ಶಾಲೆ; ಶಾಲೆ ಅಲ್ಲ ಅದು ಚಿಕ್ಕ ಮಕ್ಕಳ ನರಕ’. ನಗರಸಭೆಯ ದುರ್ಲಕ್ಷ್ಯವನ್ನು ಅವರು ಹೀಗೆ ಕಟುವಾಗಿ ಟೀಕಿಸಿದ್ದರು.

ಮಹಾರಾಷ್ಟ್ರ ಗಡಿಗಂಟಿದ್ದ ಗ್ರಾಮೀಣ ಪ್ರದೇಶಗಳ ಲ್ಲಿದ್ದ ಕನ್ನಡ ಶಾಲೆಗಳ ದುಃಸ್ಥಿತಿಯಂತೂ ಇನ್ನೂ ಘೋರವಾಗಿತ್ತು. ಗಡಿಕನ್ನಡಿಗರ ಧ್ವನಿಯಾಗಿದ್ದ ಡಾ. ಅನಿಲ ಕಮತಿ  2000ದಲ್ಲಿ ಆಡಿದ ಮಾತುಗಳೆಂದರೆ: ‘ಕುರಿ ದೊಡ್ಡಿಯನ್ನು ನೆನಪಿಸುವಂಥ ಕನ್ನಡ ಶಾಲೆಗಳು, ಕಾಂಕ್ರೀಟ್‌ ಕಟ್ಟಡಗಳ ಮರಾಠಿ, ಉರ್ದು ಶಾಲೆಗಳು. ನಾಲ್ಕು ಕ್ಲಾಸುಗಳಿಗೊಬ್ಬ ಕನ್ನಡ ಶಿಕ್ಷಕ. ನಾಲ್ಕು ವಿದ್ಯಾರ್ಥಿಗಳಿಗೊಬ್ಬ ಶಿಕ್ಷಕ– ಮರಾಠಿ, ಉರ್ದು ಶಾಲೆಗಳಲ್ಲಿ. ಇಂಥ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಯಾರು ತಾನೆ ಮುಂದೆ ಬಂದಾರು?’ ಕನ್ನಡದ ಎಷ್ಟೋ ಪಾಲಕರು ತಮ್ಮ ಮಕ್ಕಳನ್ನು ಮರಾಠಿ ಶಾಲೆಗಳಿಗೆ ಕಳುಹಿಸುತ್ತಿದ್ದರಂತೆ.

2000ದಲ್ಲಿ ಆಗಿನ ಶಿಕ್ಷಣ ಸಚಿ­ವರು ‘ಸಹಸ್ರಮಾನ ದೊಂದಿಗೆ ಪ್ರಾಥಮಿಕ ಶಿಕ್ಷಣ ಸ್ಪಂದನ’ ಎಂಬ ಕಾರ್ಯಕ್ರಮ ಆಯೋಜಿಸಿ

ಸಾರ್ವಜನಿಕರ ಕುಂದು ಕೊರತೆಗಳನ್ನು ಕೇಳಿಸಿಕೊಂಡರು. ಆಗ ಗಡಿ ಭಾಗದ ಕನ್ನಡ ಶಾಲೆಗಳ ಸಮಸ್ಯೆಗಳೂ ದಾಖಲಾದವು. ಮುಂದೆ ಏಕೀಕೃತ ಕರ್ನಾಟಕಕ್ಕೆ 50 ತುಂಬಿದ ಸಂದರ್ಭದಲ್ಲಿ, ಸರ್ಕಾರವೂ ಗಡಿ­ಭಾಗದ ಕನ್ನಡ ಶಾಲೆಗಳ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಆಸಕ್ತಿ ತೋರಿತು. ಸಮಸ್ಯೆಗಳ ಸಮೀಕ್ಷೆ ನಡೆಸಿತು. ಶಿಕ್ಷಣಾಧಿ­ಕಾರಿಗಳು ತಮ್ಮ ತಮ್ಮ ಕ್ಷೇತ್ರದ ಶಾಲೆಗಳ ಕುಂದು ಕೊರತೆ­ ಪಟ್ಟಿ ಮಾಡಿದರು. ಮುಖ್ಯವಾಗಿ ಜನಸಂಖ್ಯೆ ಆಧರಿಸಿ ಮತ್ತು ಅವರ ಅಗತ್ಯಕ್ಕೆ ಅನುಗುಣವಾಗಿ ಹೊಸ  ಶಾಲೆ­ಗಳ ಆರಂಭ, ಕಟ್ಟಡಗಳ ನಿರ್ಮಾಣ, ಇರುವ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವುದು, ಕೊಠಡಿಗಳ ದುರಸ್ತಿ, ಕುಡಿಯಲು ನೀರು, ಶೌಚಾಲಯ, ಡೆಸ್ಕು, ಪ್ರತ್ಯೇಕವಾದ ಅಡುಗೆಮನೆ– ಹೀಗೆ ಬೇಡಿಕೆ ಮತ್ತು ಅಂದಾಜು ವೆಚ್ಚದ ವರದಿ ಸಿದ್ಧವಾಯಿತು. ಕೆಲವೇ ತಿಂಗಳಲ್ಲಿ ಸರ್ಕಾರ, ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಹಣವನ್ನೂ ಬಿಡುಗಡೆ ಮಾಡಿತು. ಪರಿಣಾಮ 2011–12ರ ವೇಳೆಗೆ ಬಹಳಷ್ಟು ಬೇಡಿಕೆಗಳು ಪೂರ್ಣಗೊಂಡವು. ಪ್ರತ್ಯೇಕ ಅಡುಗೆಮನೆ, ಗ್ರಂಥಾಲಯ ಸಜ್ಜೀಕರಣ ಇತ್ಯಾದಿ ಇನ್ನೂ ಆಗ­ಬೇಕಾದ ಕೆಲಸಗಳು.  ಪುಸ್ತಕ, ಬಿಸಿಯೂಟ ಎಲ್ಲ ಶಾಲಾ ಮಕ್ಕಳಂತೆ ಗಡಿ ಭಾಗದ ಮಕ್ಕಳೂ ಅನುಭವಿ­ಸುತ್ತಿದ್ದಾರೆ. ಶಾಲೆಯ ಗುಣಮಟ್ಟ ಹೆಚ್ಚಿಸುವು­ದಕ್ಕಾಗಿ ಶಿಕ್ಷಕರಿಗೆ ವರುಷದಲ್ಲಿ ಎರಡು–ಮೂರು ತರ­ಬೇತಿಗ­ಳಾ­ಗುತ್ತವೆ. ಶಿಕ್ಷಕರ ಬೋಧನೆ ಪರಿಶೀಲಿಸುವುದಕ್ಕೆ ವಿಶೇಷ ಘಟಕ ಇದೆ. ಇವೆಲ್ಲವೂ ಆಡಳಿತ ವ್ಯವಸ್ಥೆ ಒದಗಿಸಿದ ಅನು­ಕೂಲಗಳು.  ಆದರೆ, ಶಿಕ್ಷಣ  ಪವಿತ್ರವಾದ ಸಂಸ್ಕಾರ. ಅದನ್ನು ಧಾರೆ ಎರೆಯುವ ಗುಣ ಶಿಕ್ಷಕ­ನಲ್ಲಿರಬೇಕು. ಅಂದಾಗ ಉದ್ದೇಶಿತ ಗುರಿ ಮುಟ್ಟಲು ಸಾಧ್ಯ.

ಗಡಿ ಭಾಗದ ಮರಾಠಿ ಶಾಲೆಗಳ ಕಾರ್ಯವೈಖರಿ ಎದುರು ಕನ್ನಡ ಶಾಲೆಗಳು ಇವತ್ತಿಗೂ ಬಡವಾಗಿಯೇ ಕಾಣುತ್ತವೆ. ಆ ಶಾಲೆಗಳ ಸುಂದರ, ಸ್ವಚ್ಛ ಪರಿಸರದ ಕಳೆ ನಮ್ಮ ಶಾಲೆಗಳಿಗೆ ಬಂದಿಲ್ಲ. ಅಲ್ಲಿಯ ಶಿಕ್ಷಕರ ಶಿಸ್ತು, ಶ್ರದ್ಧೆ, ಭಾಷಾಭಿಮಾನದ ಗುಣಗಳು ನಮ್ಮಲ್ಲಿ ತುಂಬಿ ಕೊಳ್ಳಬೇಕಾಗಿದೆ. ಮರಾಠಿ ಶಾಲೆಗಳ ಉಸ್ತುವಾರಿಯಲ್ಲಿ ಸ್ಥಳೀಯರ ಪಾಲೂ ಇರುತ್ತದೆ. ಶಾಲಾ ಸುಧಾರಣಾ ಸಮಿತಿಯ ಸದಸ್ಯರಾಗಿ ಅವರು ಶಾಲಾ ಚಟುವಟಿಕೆ ಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವರು. ಇಂಥವರ ಭಾಷಾಭಿಮಾನದ ಅತಿರೇಕವೇ ಗಡಿಯಾಚೆಯ ಕೆಲವು ಕನ್ನಡ ಶಾಲೆಗಳಿಗೆ ಕಂಟಕವಾಗಿದ್ದೂ ಇದೆ. ಕೊಲ್ಹಾಪುರ ಪರಿಸರದ ದತ್ತವಾಡ, ದಾನವಾಡ, ಅಕ್ಕಿವಾಟ ಊರು ಗಳಲ್ಲಿ ಕನ್ನಡ ಶಾಲೆಗಳಿದ್ದವು. ಆ ಶಾಲೆಗಳು ಮುಚ್ಚಿ 15 ವರ್ಷಗಳೇ ಆದವು. ಅಲ್ಲಿಯ ಕುರುಬ, ದಲಿತ, ಜೈನ ಸಮುದಾಯದವರು ಇವತ್ತಿಗೂ ಕನ್ನಡದಲ್ಲಿಯೇ ವ್ಯವ ಹರಿಸುತ್ತಾರೆ. ಅವರ ತಕರಾರು ಎಂದರೆ ಮಹಾರಾಷ್ಟ್ರ ಸರ್ಕಾರದ ಕನ್ನಡ ವಿರೋಧಿ ನಿಲುವಿನಿಂದಾಗಿಯೇ ಕನ್ನಡ ಶಾಲೆಗಳು ಮುಚ್ಚಿ ಹೋದವು ಎಂಬುದು. ಕರ್ನಾಟಕ ಸರ್ಕಾರ ಕೂಡ ತಮ್ಮ ಹಿತರಕ್ಷಣೆ ಮಾಡುತ್ತಿಲ್ಲ. ಹಾಗಾಗಿ ಅತಂತ್ರ ಸ್ಥಿತಿಯಲ್ಲಿದ್ದೇವೆ ಎಂಬ ಕೊರಗು ಅವರದ್ದು.

ಕೊಲ್ಹಾಪುರ ಜಿಲ್ಲೆಯ ಕೆಲವು ಊರುಗಳಲ್ಲಿ ಕನ್ನಡಿಗರ ಸಂಖ್ಯೆ ಗಣನೀಯವಾಗಿದ್ದರೂ ಅಲ್ಲಿಯ ಕನ್ನಡ ಶಾಲೆಗಳು ಮುಚ್ಚಲು ಕಾರಣವೆಂದರೆ, ಸ್ಥಳೀಯ ಮರಾಠಿ ಭಾಷಾಭಿ­ಮಾ­ನಿ­ಗಳು ಮತ್ತು ಸ್ಥಳೀಯ ಅಧಿ ಕಾರಿಗಳು. ಇವರು ಒಂದಾಗಿ ಪರಸ್ಪರ ತಿಳಿವಳಿಕೆ ಯಿಂದಲೇ ಕೆಲಸ ಮಾಡಿ ಕಾನೂನಿನ ಪ್ರಕಾ­ರವೇ ಕನ್ನಡ ಶಾಲೆಗಳನ್ನು ಮುಚ್ಚಲು ಕಾರಣ­ರಾಗುತ್ತಾರೆ. ಮಹಾ ರಾಷ್ಟ್ರದ ಜತೆ ಅಲ್ಲಿಯ ಕನ್ನಡಿಗರ ಸಂಬಂಧ ನಿಕಟ­ಗೊಳ್ಳುತ್ತಿರುವುದರಿಂದ ಮತ್ತು ಅವರು ತಮ್ಮ ಮಕ್ಕಳ ಭವಿಷ್ಯ­ವನ್ನು ಮುಂಬೈ–ಪುಣೆಗಳಲ್ಲಿ ಅರಸುತ್ತಿರು ವುದರಿಂದ ಮಕ್ಕ­ಳನ್ನು ಮರಾಠಿ ಶಾಲೆಗಳಿಗೆ ಕಳುಹಿಸಲು ಮುಂದಾಗುತ್ತಿದ್ದಾರೆ.

ಇದಕ್ಕಿಂತ ಭಿನ್ನವಾದ ಚಿತ್ರ ಜತ್ತ, ಅಕ್ಕಲಕೋಟ ಪರಿಸರದ­ಲ್ಲಿದೆ. ಅಲ್ಲಿಯ ಕನ್ನಡಿಗರು ಸರ್ಕಾರದ ನೆರವನ್ನು ನೆನೆಯು­ತ್ತಾರೆ. ಜತ್ತ, ಉಮದಿ, ಸಂಕ, ಹುಟಗಿ, ಬಾಲಗಾಂವ, ಸಿಂಧೂರ, ಸೋನ್ಯಾಳ ಮುಂತಾದ ಊರುಗಳಲ್ಲಿ ಕನ್ನಡ ಶಾಲೆಗಳಿವೆ. ಕನ್ನಡ ಸಂಘಟನೆಗಳು, ಮಠಗಳು ಕನ್ನಡ ಮಾಧ್ಯಮ ಹೈಸ್ಕೂಲುಗಳನ್ನು ನಡೆಸುತ್ತವೆ. ಶಾಲೆಗಳಿಗೆ ಅಗತ್ಯ­ವಾದ ಪಠ್ಯಪುಸ್ತಕ, ಪ್ರಶ್ನೆಪತ್ರಿಕೆ, ಅನುದಾನವನ್ನು ಸರ್ಕಾರ ಸಕಾಲದಲ್ಲಿ ಒದಗಿಸುತ್ತದೆ ಎಂದು ಸಿದ್ಧಪ್ಪ ಜತ್ತಿ ಹೇಳುತ್ತಾರೆ. ಅಂದಹಾಗೆ ಎಲ್ಲಿ ಕನ್ನಡಿಗರು ಸಂಘ­ಟಿತರಾಗಿದ್ದಾರೋ ಅಲ್ಲಿಯ ಕನ್ನಡ ಶಾಲೆಗಳಿಗೆ ತೊಂದರೆ ಇಲ್ಲವೆಂದಾಯ್ತು. ಅಲ್ಲಿನ ಕನ್ನಡ ಸಂಘಟನೆಗಳ ಮುಖಂಡರು, ರಾಜಕಾರಣಿಗಳ ವೋಟು ಬ್ಯಾಂಕ್‌ ಆಗಿರುವುದರಿಂ ದಲೂ ಶಾಲೆಗಳಿಗೆ ಸೌಲಭ್ಯ­ಗಳು ದೊರಕುತ್ತಿವೆ.

ಗಮನಾರ್ಹ ಸಂಗತಿಯೆಂದರೆ ಗಡಿಯಾಚೆಯ ಕನ್ನಡ ಶಾಲೆಗಳಲ್ಲಾಗಲಿ, ಗಡಿ ಈಚೆಯ ಮರಾಠಿ ಶಾಲೆಗಳ ಲ್ಲಾಗಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತ ಇರು ವುದು. ಇದಕ್ಕೆ ಕನ್ನಡ– ಮರಾಠಿಗರಿಬ್ಬರೂ ಇಂಗ್ಲಿಷ್‌ ಮಾಧ್ಯಮ ಶಾಲೆಗಳತ್ತ ಮುಖ ಮಾಡಿರುವುದು ಒಂದು ಕಾರಣವಾದರೆ, ಮತ್ತೊಂದು, ಇರುವ ವಾಸ್ತವ ಒಪ್ಪಿ ಭವಿಷ್ಯ ರೂಪಿಸಿ­ಕೊಳ್ಳುವ ಹಂಬಲ. ಇವತ್ತು ಸಮುದಾ ಯದ ಹಿತ ಸಾಧನೆ­ಗಿಂತ ವೈಯಕ್ತಿಕ ಹಿತಸಾಧನೆಯೇ ಮುಖ್ಯವಾಗಿ ಕಾಣುತ್ತಿದೆ. ‘ಭಾಷಾಭಿಮಾನಕ್ಕೆ ಕಟ್ಟು ಬಿದ್ದು ಏಕೆ ಉದ್ಯೋಗ ಅವಕಾಶ­ಗಳಿಂದ ವಂಚಿತರಾಗ ಬೇಕು?’ ಎಂಬ ಭಾವನೆ ಎಲ್ಲರಲ್ಲಿ ಬಲೀತಾ ಇದೆ. ಗಡಿ ಭಾಗದ ಅನೇಕ ಮರಾಠಿ ಹುಡುಗರು ಇವತ್ತು ಬೆಂಗ ಳೂರಿನಲ್ಲಿ ಎಂಜಿನಿಯರ್‌ಗಳಾಗಿ ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ಅವರ ಕುಟುಂಬಗಳಿಗೆ ಗಡಿಯ ಸಲುವಾಗಿ ಹೋರಾಡುವುದು ವ್ಯರ್ಥವೆನಿಸಿದ್ದರೆ ಅದರಲ್ಲಿ ಆಶ್ಚರ್ಯ­ವಿಲ್ಲ. ಮರಾಠಿ ಪ್ರಾಬಲ್ಯವಿದ್ದ ಬೆಳಗಾವಿ ಸಮೀಪದ ಕುದರೆಮನಿ, ಉಚಗಾಂವ, ಸುಳಗಾದಂತಹ ಊರುಗಳಲ್ಲಿ ಕೂಡ ಕನ್ನಡ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.

ಕನ್ನಡ ಕಲಿತರೆ ಕರ್ನಾಟಕದಲ್ಲಿ ಉದ್ಯೋಗ ಸಿಗಬ ಹುದು ಎಂದು ಖಾನಾಪುರ ತಾಲ್ಲೂಕಿನ ಹಳ್ಳಿಯ ಜನ ಬಿಇಒ ಕಚೇರಿಗೆ ಹೋಗಿ ಕನ್ನಡ ಶಾಲೆಗಳನ್ನು ತೆರೆಯ ಬೇಕು ಎಂಬ ಮನವಿ ಮಾಡಿಕೊಂಡರಂತೆ. ಅದಕ್ಕೆ   ಸ್ಪಂದಿಸಿ ಒಂದೇ ದಿನ 18 ಶಾಲೆಗಳನ್ನು ತೆರೆದಂಥ ದಾಖಲೆಗಳು ಖಾನಾಪುರ ಬಿಇಒ ಕಚೇರಿಯಲ್ಲಿವೆ. ಗಡಿಭಾಗ­ದಲ್ಲಿಂದು ಮರಾಠಿ ಶಾಲೆಗಳಿಂದ ಕನ್ನಡ ಶಾಲೆಗಳಿಗೆ ಅಪಾಯ­ವಿಲ್ಲ. ಆದರೆ, ಕನ್ನಡ ಕಾನ್ವೆಂಟ್‌ ಹೆಸರಿನ ಶಾಲೆಗಳಿಂದ ಮಾತ್ರ ದೊಡ್ಡ ಅಪಾಯವಿದೆ.

ಹಳ್ಳಿ ಹಳ್ಳಿಯಲ್ಲೂ ಕನ್ನಡ ಕಾನ್ವೆಂಟ್‌ ಶಾಲೆಗಳು ಆರಂಭವಾಗುತ್ತಿವೆ. ಹೆಸರಿಗೆ ಇವು ಕನ್ನಡ ಶಾಲೆಗಳು. ಒಳಗೆಲ್ಲ ಇಂಗ್ಲಿಷ್‌ ಬೋಧನೆ. ಹಿಂದೆ ಆಳುವವರ ಕಟ್ಟಪ್ಪಣೆಯಿಂದ ಹೈದರಾಬಾದ್‌ ಕರ್ನಾಟಕ ಪ್ರದೇಶದ ಭಾಲ್ಕಿಯಲ್ಲಿ ಮಠದ ಸ್ವಾಮಿಗಳು ಹೊರಗೆ ಉರ್ದು ಬೋರ್ಡ್‌ ಹಾಕಿ ಒಳಗೆ ಕನ್ನಡ ಶಾಲೆ ನಡೆಸುತ್ತಿದ್ದರಂತೆ. ಇಂದು ಸರ್ಕಾರದ ಆಜ್ಞೆಗೆ ಒಣ ಮರ್ಯಾದೆ ಕೊಟ್ಟು ಹೊರಗೆ ಕನ್ನಡ ಮಾಧ್ಯಮ ಶಾಲೆ ಎಂದು ಬೋರ್ಡ್‌ ಹಾಕಿ ಒಳಗೆ ಇಂಗ್ಲಿಷ್‌ ಮಾಧ್ಯಮ ನಡೆಸುತ್ತಿದ್ದಾರೆ ಮಹಾ ಕನ್ನಡಿಗರು. ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಅನುಮತಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಣದ ವ್ಯಾಪಾರ ಮಾಡುತ್ತಿರುವ ಸಂಸ್ಥೆಗಳು ಇಂಥ ಆಟ ಹೂಡಿವೆ. ಈ ಸಂಸ್ಥೆಗಳ ಮೇಲೆ ಶಿಸ್ತಿನ ಕ್ರಮ ಜರುಗಿಸುವ ಧೈರ್ಯ ಯಾರಿಗೂ ಇಲ್ಲ. ಇವುಗಳನ್ನು ನಡೆಸುವವರಾದರೂ ಸಾಮಾನ್ಯರಲ್ಲ; ರಾಜಕಾರಣದ ಲ್ಲಿದ್ದು ಇಲ್ಲದಂತೆ ತೋರುವ ಮಾಯಾವಿಗಳಿವರು!

ಈ ಖಾಸಗಿ ಶಾಲೆಗಳಲ್ಲಿ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಊಟ ಯಾವುದೂ ಇಲ್ಲ. ಅಲ್ಲದೆ ದುಬಾರಿ ಶುಲ್ಕ, ಡೊನೇಶನ್‌ ಬೇರೆ. ಆದರೂ ಈ ಶಾಲೆಗಳ ಲ್ಲಿಯೇ ತಮ್ಮ ಮಕ್ಕಳನ್ನು ಓದಿಸಲು ತಂದೆ– ತಾಯಂ ದಿರು ಹೋರಾಟವನ್ನೇ ಮಾಡುತ್ತಾರೆ. ಇಂಥ ಶಾಲೆಗ ಳಿಂದ ಗಡಿ ಭಾಗದಲ್ಲಿಯೂ ಬಡವರ ಶಾಲೆಗಳು, ಶ್ರೀಮಂತರ ಶಾಲೆಗಳು ಒಡೆದು ಕಾಣುತ್ತಿವೆ.

ಇಂಗ್ಲಿಷ್‌ ಶಾಲೆಗಳ ಆಕರ್ಷಣೆ ಏನೇ ಇರಲಿ, ಗಡಿ ಭಾಗ­ದಲ್ಲಿರುವ ಕನ್ನಡ ಶಾಲೆಗಳನ್ನು, ಬಡವರ ಶಾಲೆಗಳನ್ನು ಶ್ರೀಮಂತವಾಗಿ ನಡೆಸುವುದು ಸರ್ಕಾರದ ಹೊಣೆಯಾಗಿದೆ. ಒಂದು ನಾಡಿನ ಭಾಷೆ, ಸಂಸ್ಕೃತಿಯ ಸಂರಕ್ಷಣೆಯಲ್ಲಿ ಗಡಿಭಾಗದ ಪಾತ್ರ ತುಂಬ ಮಹತ್ವದ್ದು. ಪರಕೀಯ ಭಾಷೆ, ಸಂಸ್ಕೃತಿಗಳಿಗೆಲ್ಲ ಗಡಿಯೇ ಪ್ರವೇಶ ದ್ವಾರ. ಹಿತವಾದುದನ್ನು ಬರಮಾಡಿಕೊಳ್ಳುವ, ಹಿತವಲ್ಲ ದ್ದನ್ನು ದೂರವಿಡುವ ಚಟು­ವಟಿಕೆ ಮೊದಲು ಅಲ್ಲಿಯೇ ಪ್ರಾರಂಭವಾಗುತ್ತದೆ. ಸೀರೆ, ಪಂಚೆಗಳಿಗೆ ಧಡಿ (ಅಂಚು) ಹೇಗೋ ಹಾಗೆ ಈ ಗಡಿಭಾಗ.

ಧಡಿ ಎಂಬುದು ಹೆಚ್ಚು ಶ್ರಮ, ಕೌಶಲ ಹಾಕಿ ಮಾಡಿದ ಗೋಪು ನೆಯ್ಗೆ. ಅದು ಬಿಗಿಯಾದಷ್ಟೂ ವಸ್ತ್ರದ ಒಳಮೈ ಗಟ್ಟಿ ಯಾಗಿರುತ್ತದೆ.
ನಮ್ಮ ಒಳ ನಾಡಿನ ಯೋಗಕ್ಷೇಮ ಕೂಡ ಗಡಿ ನಾಡನ್ನೇ ಅವಲಂಬಿಸಿರುತ್ತದೆ. ಇಂಥ ಪ್ರದೇಶದ ಶಿಕ್ಷಣ, ಸಾಹಿತ್ಯ, ಕೈಗಾರಿಕೆ, ಕೃಷಿ, ಮೂಲಸೌಕರ್ಯಗಳಿಗೆ ಸರ್ಕಾರ ಹೆಚ್ಚು ಪ್ರಾಶಸ್ತ್ಯ ಕೊಡಬೇಕು. ಮಹಾರಾಷ್ಟ್ರ ಸರ್ಕಾರವು ಗಡಿಭಾಗದಲ್ಲಿ ಓದಿದ ಮರಾಠಿ ಮಾತೃಭಾಷೆಯ ವಿದ್ಯಾ­ರ್ಥಿ­ಗಳಿಗೆ ವೃತ್ತಿ ಶಿಕ್ಷಣ­ದಲ್ಲಿ ಶೇ 2ರಷ್ಟು ಮೀಸ­ಲಾತಿ ಇಟ್ಟಿದೆ. ಇಂಥ ಪ್ರೋತ್ಸಾಹ­ದಾಯಕ ಯೋಜನೆ­ಗಳ­ನ್ನು ಕರ್ನಾಟಕ ಸರ್ಕಾರ ಗಡಿ ಕನ್ನಡಿಗರಿಗೂ ಇಡಬೇಕು.

(ಲೇಖಕರು ಸಹಪ್ರಾಧ್ಯಾಪ­ಕರು, ಕನ್ನಡ ವಿಭಾಗ, ಭಾವುರಾವ ಕಾಕತಕರ ಮಹಾ­ವಿದ್ಯಾಲಯ, ಬೆಳಗಾವಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT