ADVERTISEMENT

ಅಮೆರಿಕನ್ನಡತಿಯ ‘ಕನ್ನಡ ಗುಡಿ’

ಇಣುಕು ನೋಟ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2015, 19:30 IST
Last Updated 16 ಏಪ್ರಿಲ್ 2015, 19:30 IST

‘ತುಳಸಿವನ’– ಇದು ಅಮೆರಿಕನ್ನಡತಿ ತ್ರಿವೇಣಿ ಶ್ರೀನಿವಾಸರಾವ್‌ ಅವರ ಜಾಲತಾಣ. ‘ಕನ್ನಡಮ್ಮನ ದೇವಾಲಯ’ ಎನ್ನುವುದು ತಮ್ಮ ಇ–ಕಣಜದ ಬಗ್ಗೆ ತ್ರಿವೇಣಿ ಅವರ ಬಣ್ಣನೆ.

ತ್ರಿವೇಣಿ ಶ್ರೀನಿವಾಸರಾವ್‌ ಅವರ ಆಸಕ್ತಿಯ ಸೆಲೆಗಳು ಹಲವು. ಸೊಗಸಾದ ಸಣ್ಣಕಥೆಗಳನ್ನು ಬರೆದಿರುವ ಅವರಿಗೆ ಸಿನಿಮಾ ಹಾಡುಗಳ ಬಗ್ಗೆಯೂ ಮೋಹವಿದೆ. ಅಷ್ಟುಮಾತ್ರವೇಕೆ, ದಾಸ ಸಾಹಿತ್ಯದಲ್ಲೂ ಅವರಿಗೆ ಒಲವಿದೆ. ಇನ್ನು ಕನ್ನಡ ನುಡಿಯೆಂದರೆ ಅವರ ಮೈಮನಗಳಲ್ಲಿ ಪುಲಕ. ಅಮೆರಿಕದಲ್ಲಿ ಕುಳಿತೇ ಕನ್ನಡದ ಕಾವೇರಿ ಎರೆದು ‘ತುಳಸಿವನ’ ಬೆಳೆಸುವ ಪ್ರಯತ್ನ ಅವರದು.

ತುಳಸಿಯಲ್ಲಿ ಶ್ರೀ ತುಳಸಿ, ಕೃಷ್ಣ ತುಳಸಿ ಎಂದು ಬಗೆಗಳಿವೆಯಷ್ಟೇ; ಇಲ್ಲಿನ ‘ತುಳಸಿವನ’ದ ವೈವಿಧ್ಯವಂತೂ ಮತ್ತೂ ಸಮೃದ್ಧ. ಕಥೆಗಳ ಸಂಕಲನ ಇಲ್ಲಿದೆ. ದಾಸರ ಕೀರ್ತನೆಗಳ ಸಂಗ್ರಹವೂ ಇದೆ. ಅಮರ ಮಧುರ ಗೀತೆಗಳು ಎನ್ನುವಂಥ ಹಳೆಯ ಮತ್ತು ಹೊಸ ಸಿನಿಮಾಗಳ ಗೀತೆಗಳ ಸಾಹಿತ್ಯಗುಚ್ಛವಿದೆ. ಕನ್ನಡ ಕಾವ್ಯದ ಒಂದು ಪಾರ್ಶ್ವ ನೋಟವೇ ಇಲ್ಲಿದೆ. ಕುವೆಂಪು, ಬೆಂದ್ರೆ, ಕೆ.ಎಸ್‌. ನರಸಿಂಹಸ್ವಾಮಿ, ಚೆನ್ನವೀರಕಣವಿ, ಜಿ.ಎಸ್‌. ಶಿವರುದ್ರಪ್ಪ, ಎಚ್‌.ಎಸ್‌. ವೆಂಕಟೇಶಮೂರ್ತಿ– ಹೀಗೆ, ಹಲವು ಕವಿಗಳ ನೂರಾರು ಕವಿತೆಗಳನ್ನು ತ್ರಿವೇಣಿ ಸಂಗ್ರಹಿಸಿದ್ದಾರೆ. ಈ ಎಲ್ಲವೂ ಸೇರಿಕೊಂಡು ‘ಕನ್ನಡಮ್ಮನ ದೇವಾಲಯ’ ಸಾಕಾರಗೊಂಡಿದೆ. ಹಾಡು, ಮಂತ್ರ-ಸ್ತ್ರೋತ್ರ, ಅಡುಗೆ, ನೆನಪು, ಪ್ರಬಂಧ, ಪುಸ್ತಕ– ಹೀಗೆ, ಅದ್ಭುತ ಗೃಹಿಣಿಯೊಬ್ಬಳು ಒಪ್ಪವಾಗಿಸಿಕೊಂಡ ಮನೆಯಂತೆ ‘ತುಳಸಿವನ’ ಗಮನಸೆಳೆಯುತ್ತದೆ.

ತ್ರಿವೇಣಿ ಅವರ ಬರಹದ ಕಸುಬುದಾರಿಕೆಗೆ ಉದಾಹರಣೆಯಾಗಿ ‘ಪದ–ಸಂಪದ’ ವಿಭಾಗದಲ್ಲಿನ ‘ಶೆಟ್ಟಿ ಶಗಣಿ ತಿಂದ ಹಾಗೆ...’ ಬರಹವನ್ನು ಗಮನಿಸಬಹುದು: ‘‘ಶೆಟ್ಟಿ ಶಗಣಿ ತಿಂದ ಹಾಗೆ– ಇದು ನಮ್ಮ ಸಂಬಂಧಿಗಳ, ತೀರಾ ಆಪ್ತ ಸ್ನೇಹಿತರ ವಲಯದಲ್ಲಿ ಪ್ರಚಲಿತವಾಗಿರುವ ಒಂದು ತಮಾಷೆಯ ನುಡಿಗಟ್ಟು. ‘ಬೇಡ ನೋಡು, ಕೊನೆಗೆ ಶೆಟ್ಟಿ ಆಗುತ್ತೀಯಾ...’, ‘ಅಯ್ಯೋ ಎಷ್ಟು ಹೇಳಿದರೂ ಕೇಳಲಿಲ್ಲ, ಕೊನೆಗೆ ನೋಡು, ಶೆಟ್ಟಿ ಶಗಣಿ ತಿಂದ ಹಾಗಾಯ್ತು’ ಎಂದು ಬೇಸ್ತುಬಿದ್ದವರನ್ನು– ನಮ್ಮ ಮಾತಿನಲ್ಲಿಯೇ ಹೇಳುವುದಾದರೆ ಗುಂಡಿಗೆ ಬಿದ್ದವರು– ಛೇಡಿಸಲು ಈ ನುಡಿಗಟ್ಟನ್ನು ನಾವು ಉಪಯೋಗಿಸಿಕೊಳ್ಳುತ್ತೇವೆ. ಇದನ್ನು ಹುಟ್ಟುಹಾಕಿದ ಶ್ರೇಯ ನಮ್ಮಮ್ಮನಿಗೇ ಸಲ್ಲುತ್ತದೆ.
ಇರಲಿ, ಏನಿದು ಶೆಟ್ಟಿ ಶಗಣಿ ತಿಂದ ಕಥೆ?’’.

ಮುಂದಿನ ಕಥೆ ಏನು ಎಂದಿರಾ? ಅದನ್ನು tulasivana.comನಲ್ಲಿಯೇ ಓದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.