ADVERTISEMENT

ಆಸ್ಕರ್ ಅಂಗಳದಲ್ಲಿ ಭಾರತೀಯರು

​ಪ್ರಜಾವಾಣಿ ವಾರ್ತೆ
Published 28 ಮೇ 2017, 19:30 IST
Last Updated 28 ಮೇ 2017, 19:30 IST
ಸತ್ಯಜಿತ್ ರಾಯ್
ಸತ್ಯಜಿತ್ ರಾಯ್   

ಆಸ್ಕರ್ ಅವಾರ್ಡ್! ಸಿನಿಪ್ರಪಂಚದಲ್ಲಿ ಈ ಹೆಸರನ್ನು ಕೇಳದವರೇ ಇಲ್ಲ. ಸಿನಿಮಾ ಜಗತ್ತಿನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಲಾವಿದನಿಗೂ ಈ ಪ್ರಶಸ್ತಿಯನ್ನು ಪಡೆಯಬೇಕೆಂಬ ಕನಸು ಇದ್ದೇ ಇರುತ್ತದೆ. ಆಸ್ಕರ್ ಸಿನೆಮಾ ಪ್ರಪಂಚದ ನೋಬೆಲ್ ಪ್ರಶಸ್ತಿ ಇದ್ದ ಹಾಗೆ.

ಈ ಪ್ರಶಸ್ತಿಯನ್ನು ಅಮೆರಿಕ ದೇಶದ ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆರ್ಟ್‌ ಎಂಬ ಸಂಸ್ಥೆಯು ಸಿನಿಪ್ರಪಂಚದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಪ್ರತಿವರ್ಷ ಪ್ರದಾನ ಮಾಡುತ್ತದೆ.

1929ರಲ್ಲಿ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ನೀಡುವುದನ್ನು ಆರಂಭಿಸಲಾಯಿತು. ಅತ್ಯುತ್ತಮ ಚಿತ್ರ, ನಟ, ನಟಿ, ಪೋಷಕ ನಟ ಸೇರಿದಂತೆ ಒಟ್ಟು 24 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇಲ್ಲಿಯವರೆಗೂ ಸುಮಾರು 3000ಕ್ಕೂ ಹೆಚ್ಚು ಆಸ್ಕರ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.

ಇದರಲ್ಲಿ ವಿಲಿಯಮ್ ವೈಲರ್ ನಿರ್ದೇಶನದ ‘ಬೆನ್ ಹರ್’ ಜೇಮ್ಸ್ ಕ್ಯಾಮರಾನ್ ನಿರ್ದೇಶನದ ‘ಟೈಟಾನಿಕ್’ (1997) ಹಾಗೂ ಪೀಟರ್ ಜಾಕ್ಸನ್ ನಿರ್ದೇಶನದ ‘ದಿ ಲಾರ್ಡ್ ಆಫ್ ದಿ ರಿಂಗ್: ರಿಟರ್ನ್ ಆಫ್ ದಿ ಕಿಂಗ್’ ಚಿತ್ರಗಳು ಅತಿ ಹೆಚ್ಚು ಅಂದರೆ ತಲಾ 11 ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಆಸ್ಕರ್ ಪ್ರಶಸ್ತಿ ವಿಜೇತರಿಗೆ ಚಿನ್ನ ಲೇಪಿತ ಬ್ರಟೆನ್ನಿಯಂ ಲೋಹದಿಂದ ತಯಾರಿಸಲಾದ ಮೂರ್ತಿಯನ್ನು ನೀಡಲಾಗುತ್ತದೆ. ಬಹಳಷ್ಟು ಜನರಲ್ಲಿ ಆಸ್ಕರ್ ಅನ್ನು ಪ್ರಪಂಚದ ಎಲ್ಲಾ ಭಾಷೆಯ ಚಿತ್ರಗಳಿಗೂ ನೀಡಲಾಗುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಆದರೆ ಈ ಪ್ರಶಸ್ತಿಯನ್ನು ಅಮೆರಿಕದಲ್ಲಿ ಬಿಡುಗಡೆಗೊಂಡ ಇಂಗ್ಲಿಷ್ ಚಿತ್ರಗಳಿಗೆ ಮಾತ್ರ ನೀಡಲಾಗುತ್ತದೆ.

1957 ರಿಂದ ‘ಅತ್ಯುತ್ತಮ ವಿದೇಶಿ ಚಲನಚಿತ್ರ ಪ್ರಶಸ್ತಿ’ (ಬೆಸ್ಟ್ ಫೀಚರ್ ಫಿಲ್ಮ್‌)ಯನ್ನು ಇಂಗ್ಲಿಷ್ ಭಾಷೆ ಹೊರತಾದ ಚಿತ್ರಗಳಿಗೆ ನೀಡಲಾಗುತ್ತದೆ. ಈ ವಿಭಾಗದಲ್ಲಿ ಭಾರತೀಯ ಚಿತ್ರಗಳು ಸ್ಪರ್ಧಿಸಬಹುದಾಗಿದೆ. ಇದಕ್ಕಾಗಿ ಭಾರತೀಯ ಚಲನಚಿತ್ರ ಒಕ್ಕೂಟವು (ಫಿಲ್ಮ್‌ ಫೆಡರೇಶನ್ ಆಫ್ ಇಂಡಿಯಾ) ಭಾರತದಿಂದ ಒಂದು ಚಿತ್ರವನ್ನು ಈ ವಿಭಾಗದಲ್ಲಿ ಸ್ಪರ್ಧೆಗಾಗಿ ಆಯ್ಕೆ ಮಾಡಿ ಕಳುಹಿಸುತ್ತದೆ.

ಇಲ್ಲಿಯವರೆಗೂ ನಾಮನಿರ್ದೇಶನಗೊಂಡ 16 ಚಿತ್ರಗಳಲ್ಲಿ ಯಾವೊಂದು ಚಿತ್ರವೂ ಪ್ರಶಸ್ತಿ ಪಡೆಯದಿರುವುದು ವಿಪರ್ಯಾಸ. ಆದರೆ ಭಾರತೀಯ ಕಲಾವಿದರು ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿ, ತಮ್ಮ ಪ್ರತಿಭೆ ಪ್ರದರ್ಶಿಸಿ ಆಸ್ಕರ್ ಪ್ರಶಸ್ತಿ ಪಡೆದು ಭಾರತದ ಕೀರ್ತಿಯನ್ನು ಮುಗಿಲೆತ್ತರಕ್ಕೇರಿಸಿದ್ದಾರೆ. ಇಲ್ಲಿಯವರೆಗೂ ಐವರು ಭಾರತೀಯರು ಒಟ್ಟು 6 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಸಂಕ್ಷಿಪ್ತ ಪರಿಚಯ ನಿಮಗಾಗಿ.
-ಹನುಮಂತ ಕೊಪ್ಪದ

*
ಸತ್ಯಜಿತ್ ರಾಯ್
ಭಾರತೀಯ ಚಿತ್ರರಂಗದ ಭೀಷ್ಮ. ಬಂಗಾಳಿ ನಿರ್ದೇಶಕರಾದ ಸತ್ಯಜಿತ್ ರಾಯ್ ಅವರು ಪಥೇರ್ ಪಾಂಚಾಲಿ, ಅಪು ಸಂಸಾರ್, ಅಪರಾಜಿತೊ, ದಿ ಏಲಿಯನ್, ಮಹಾನಗರ, ಜಲಸಾಗರ, ನಾಯಕ್, ಸತ್ರಂಜಿ ಕೇ ಖಿಲಾರಿ, ಅಭಿಜ್ಞಾನ ಸೇರಿದಂತೆ ಒಟ್ಟು 36 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ಬಹುತೇಕ ಚಿತ್ರಗಳು ಅಂತರರಾಷ್ಟ್ರೀಯ ಸಿನಿಮೋತ್ಸ ವಗಳಲ್ಲಿ ಪ್ರದರ್ಶನ ಕಂಡಿವೆ.

1992 ರಲ್ಲಿ ಅವರಿಗೆ ಜೀವಮಾನ ಸಾಧನೆಗಾಗಿ ಆಸ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅವರು ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ‘ದಾದಾಸಾಹೇಬ್ ಫಾಲ್ಕೆ’ ಹಾಗೂ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ ಗೌರವಕ್ಕೂ ಭಾಜನರಾಗಿದ್ದಾರೆ.

*

ADVERTISEMENT


ಎ.ಆರ್.ರೆಹಮಾನ್
ಭಾರತೀಯ ಚಿತ್ರರಂಗದ ಸಂಗೀತ ಮಾತ್ರಿಕ. 2008ರಲ್ಲಿ ಸ್ಲಂ ಡಾಗ್ ಮಿಲಿಯನರ್ ಚಿತ್ರದಲ್ಲಿ ‘ಜೈ ಹೋ’ ಗೀತೆ ರಚನೆಗಾಗಿ ಗುಲ್ಜಾರ್ ಅವರೊಂದಿಗೆ ಆಸ್ಕರ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇದೇ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಅವರು ಮತ್ತೊಂದು ಆಸ್ಕರ್ ಪ್ರಶಸ್ತಿತಯನ್ನು ಪಡೆದುಕೊಂಡಿದ್ದಾರೆ.

ಈ ಮೂಲಕ ಎರಡು ಆಸ್ಕರ್ ಪ್ರಶಸ್ತಿ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ  ಚಿತ್ರದಲ್ಲಿನ ಕೆಲಸಕ್ಕಾಗಿ ಅವರು ಎರಡು ಗ್ರ್ಯಾಮಿ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

*


ಭಾನು ಅಥಯ್ಯ
ಐತಿಹಾಸಿಕ ಹಿನ್ನೆಲೆಯ ಸಿನಿಮಾಗಳಿಗೆ ಅಧ್ಭುತವಾಗಿ ವಸ್ತ್ರವಿನ್ಯಾಸ ಮಾಡುತ್ತಿದ್ದ ಭಾನು ಅಥಯ್ಯ ಹಲವಾರು ದಿಗ್ಗಜ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ವಸ್ತ್ರವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.

1983ರಲ್ಲಿ ರಿಚರ್ಡ್ ಅಟೆನ್ ಬರೋ ನಿರ್ದೆಶನದ ಗಾಂಧಿ ಚಿತ್ರದ ವಸ್ತ್ರವಿನ್ಯಾಸಕ್ಕಾಗಿ ಭಾನುರವರು ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಮೂಲಕ ಆಸ್ಕರ್ ವಿಜೇತರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

*


ರಸೂಲ್ ಪುಕುಟ್ಟಿ
2008ರಲ್ಲಿ ಡ್ಯಾನಿ ಬಾಯ್ಲ್ ನಿರ್ದೇಶನದ ‘ಸ್ಲಂ ಡಾಗ್ ಮಿಲಿನಿಯರ್’ ಚಿತ್ರವು ಒಟ್ಟು 8 ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಈ ಚಿತ್ರದಲ್ಲಿ ಭಾರತೀಯ ಕಲಾವಿದರು ತಮ್ಮ ಕೈಚಳಕ ತೋರಿಸಿದ್ದರು. ಈ ಚಿತ್ರಕ್ಕೆ ಅದ್ಭುತವಾಗಿ ಸೌಂಡ್ ಮಿಕ್ಸಿಂಗ್ ಮಾಡಿದ್ದಕ್ಕಾಗಿ ರಸೂಲ್ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹಾಲಿವುಡ್, ಹಿಂದಿ, ಮಲಯಾಳ, ತಮಿಳು ಚಿತ್ರಗಳಲ್ಲಿ ಸೌಂಡ್ ಎಂಜಿನಿಯರ್‌ಆಗಿ ಕಾರ್ಯನಿರ್ವಹಿಸಿರುವ ರಸೂಲ್ ಕನ್ನಡದ ನಿರುತ್ತರ ಸಿನೆಮಾದಲ್ಲಿ ಕೂಡಾ ಕೆಲಸ ಮಾಡಿದ್ದಾರೆ.

*


ಗುಲ್ಜರ್
ಹಿಂದಿ ಚಿತ್ರರಂಗದ ಅತ್ಯಧ್ಭುತ ಗೀತರಚನೆಕಾರ. 1963 ರಿಂದ ಬಾಲಿವುಡ್‌ನಲ್ಲಿ ಸಕ್ರಿಯರಾಗಿರುವ ಗುಲ್ಜರ್, 2008ರಲ್ಲಿ ಸ್ಲಂ ಡಾಗ್ ಮಿಲಿನಿಯರ್ ಚಿತ್ರದಲ್ಲಿನ ‘ಜೈ ಹೋ’ ಹಾಡಿನ ಗೀತರಚನೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಎ.ಆರ್. ರೆಹಮಾನ್‌ರೊಂದಿಗೆ ಹಂಚಿಕೊಂಡಿದ್ದಾರೆ. ಇದೇ ಹಾಡಿಗಾಗಿ ಅವರು ಗ್ರ್ಯಾಮಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.