ADVERTISEMENT

ಒಂದೇ ಗೂಡಲ್ಲಿ ಕರಡಿ, ಸಿಂಹ, ಹುಲಿ!

ಪೃಥ್ವಿರಾಜ್ ಎಂ ಎಚ್
Published 10 ಜನವರಿ 2017, 19:30 IST
Last Updated 10 ಜನವರಿ 2017, 19:30 IST
ಒಂದೇ ಗೂಡಲ್ಲಿ  ಕರಡಿ, ಸಿಂಹ, ಹುಲಿ!
ಒಂದೇ ಗೂಡಲ್ಲಿ ಕರಡಿ, ಸಿಂಹ, ಹುಲಿ!   

ವೈರತ್ವ ಬಿಟ್ಟು ಲಿಯೋ (ಆಫ್ರಿಕಾ ಸಿಂಹ) ಭಾಲೂ (ಅಮೆರಿಕ ಕಪ್ಪು ಕರಡಿ) ಮತ್ತು ಷೇರ್‌ ಖಾನ್  (ಬಂಗಾಳದ ಹುಲಿ) ಇಲ್ಲಿ ಒಂದೇ ಗೂಡಲ್ಲಿ ಜೀವನ ನಡೆಸುತ್ತಿವೆ. ಇದು ಲಯನ್‌ಕಿಂಗ್, ಜಂಗಲ್‌ ಬುಕ್‌ ಅಥವಾ ಮಡಗಾಸ್ಕರ್‌ನಂತಹ ಯಾವುದೇ ಚಲನಚಿತ್ರಗಳ ಕಾಲ್ಪನಿಕ ಪಾತ್ರಗಳಲ್ಲ. ಅಮೆರಿಕದ ನೋಸ್‌ ಆರ್ಕ್‌ನಲ್ಲಿ ಒಟ್ಟೊಟ್ಟಿಗೆ ಜೀವಿಸುತ್ತಿರುವ ಸಿಂಹ, ಹುಲಿ ಮತ್ತು ಕರಡಿಗಳು.

ಈ ಮೂರು ಪ್ರಾಣಿಗಳು 2001ರಲ್ಲಿ ಜಾರ್ಜಿಯಾದ ಅಟ್ಲಾಂಟದಲ್ಲಿನ ಮಾದಕ ದ್ರವ್ಯ ಅಡ್ಡೆಯೊಂದರ ಮೇಲೆ ದಾಳಿ ಮಾಡಿದಾಗ  ಅರಣ್ಯ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದವು.
ಶೈಶವಾವಸ್ಥೆಯಲ್ಲಿದ್ದ ಈ ಮರಿಗಳು ಗಂಭೀರವಾಗಿ ಗಾಯಗೊಂಡಿದ್ದರಿಂದ ಕಾಡಿಗೆ ಬಿಡುವುದಕ್ಕಿಂತ ಅಭಯಾರಣ್ಯಕ್ಕೆ ಬಿಡುವುದೇ ಉತ್ತಮ ಎನಿಸಿ ಅಧಿಕಾರಿಗಳು ಅಮೆರಿಕದ ನೋಸ್‌ ಆರ್ಕ್‌ ಅಭಯಾರಣ್ಯಕ್ಕೆ ತಂದು ಬಿಟ್ಟಿದ್ದರು.

ಒಟ್ಟು 250 ಎಕರೆ ವಿಸ್ತಾರವಿರುವ ಈ ಅಭಯಾರಣ್ಯದಲ್ಲಿ ಇವುಗಳಿಗಾಗಿಯೇ 3 ಎಕರೆಯಷ್ಟು ವಿಸ್ತೀರ್ಣದ ಪ್ರದೇಶದಲ್ಲಿ ಪ್ರತ್ಯೇಕ ಧಾಮ ನಿರ್ಮಿಸಿ ಒಟ್ಟಿಗೆ ಇರಲು ಬಿಡಲಾಗಿದೆ. ಕಳೆದ15 ವರ್ಷಗಳಿಂದ ಈ ಮೂರು ಪ್ರಾಣಿಗಳು ಒಂದನ್ನೊಂದು ಬಿಟ್ಟು ಇರಲಾರದಷ್ಟು ಸ್ನೇಹ ಬೆಳೆಸಿಕೊಂಡಿವೆ.

ಭಾಲೂ ತನ್ನ ಸ್ನೇಹಿತರ ಮೇಲೆ ಪಾರಮ್ಯ ಸಾಧಿಸುತ್ತಾ, ಆತ್ಮವಿಶ್ವಾಸದಿಂದ ಸದಾ  ಹಾಯಾಗಿರುತ್ತದೆ. ಸಿಂಹ ತನ್ನ ಸ್ನೇಹಿತರೊಂದಿಗೆ ಇದ್ದರೂ ಅದಕ್ಕೆ ತನ್ನ ಮಿತಿಗಳ ಬಗ್ಗೆ ಅರಿವಿದೆ ಹಾಗಾಗಿ ಅಂತರವನ್ನು ಕಾಯ್ದುಕೊಂಡಿರುತ್ತದೆ. ಆದರೆ ಹುಲಿ ಮಾತ್ರ ಸದಾ ಖುಷಿಯಿಂದ ಇರುತ್ತದೆ ಮತ್ತು ತನ್ನ ಮಿತ್ರರೊಂದಿಗೆ ಆಟವಾಡಲು ಹೆಚ್ಚು ಇಷ್ಟ ಪಡುತ್ತದೆ ಎಂದು ಅಭಯಾರಣ್ಯ ತನ್ನ ಅಧಿಕೃತ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಿದೆ.

ಈ ಮೂರೂ ಪ್ರಾಣಿಗಳು ಒಟ್ಟಿಗೆ ಊಟ ಮಾಡುತ್ತವೆ, ಒಟ್ಟಿಗೆ ಮಲಗುತ್ತವೆ ಒಟ್ಟಿಗೆ ವಾಸಿಸುತ್ತಿವೆ ಎಂದು ಅಭಯಾರಣ್ಯದ ಸಿಬ್ಬಂದಿ ಪ್ರಾಣಿಗಳೊಂದಿಗೆ ತಮಗಿರುವ ಅನುಭವ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಕಾಡಿನಲ್ಲಿರುವ ಹುಲಿಗಳು ಒಂಟಿಯಾಗಿ ಜೀವಿಸಲು ಇಷ್ಟಪಡುತ್ತವೆ. ಆದರೆ ಷೇರ್‌ಖಾನ್‌ ತನ್ನ ಮಿತ್ರರೊಂದಿಗೆ ಖುಷಿಯಿಂದ ಆಟವಾಡುವುದಕ್ಕೆ ಹೆಚ್ಚು ಒಲವು ತೋರುತ್ತಾನಂತೆ. ದಾನಿಗಳ ಸಹಾಯದಿಂದ ಈ ಅಭಯಾರಣ್ಯವನ್ನು ಯಾವುದೇ ಲಾಭಾಪೇಕ್ಷೆ ಇಲ್ಲದೆ ನಡೆಸಲಾಗುತ್ತಿದೆ.   

1500ಕ್ಕೂ ಹೆಚ್ಚು ಪ್ರಾಣಿಗಳು ಈ ಅಭಯಾರಣ್ಯದಲ್ಲಿವೆ. ಈ ಮೂವರಿಗಾಗಿಯೇ ವಿಶೇಷ ಧಾಮ ನಿರ್ಮಿಸಲಾಗಿದೆ. ಇವರನ್ನು ನೋಡಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಅಭಯಾರಣ್ಯಕ್ಕೆ ಭೇಟಿ ನೀಡುತ್ತಾರೆ ಎಂದು  ಅಭಯಾರಣ್ಯದ ಕ್ಯುರೇಟರ್‌ ಅಲ್ಲಿಸನ್‌ ಹೆಡ್ಗೆಕಾತ್‌ ತಿಳಿಸಿದ್ದಾರೆ.

15 ವರ್ಷಗಳಿಂದ ಈ ಪ್ರಾಣಿಗಳು ಒಟ್ಟಿಗೆ ಇದ್ದರೂ ಮೂಲ ಲಕ್ಷಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುತ್ತಾರೆ ಮೃಗಾಲಯದ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.