ADVERTISEMENT

ಕಲಿಯೋಣ ಬನ್ನಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
ಕಲಿಯೋಣ ಬನ್ನಿ
ಕಲಿಯೋಣ ಬನ್ನಿ   

ನಾವೆಷ್ಟೇ ಗಣಿತದಿಂದ ದೂರವಿದ್ದರೂ ಗಣಿತ ನಮ್ಮಿಂದ ದೂರವಿರುವುದಿಲ್ಲ. ನಿತ್ಯದ ಬದುಕಿನಲ್ಲಿ ಅಂಕಿಗಳ ಆಟ ದೊಡ್ಡದು. ಮತ್ತೆ ಈ ಅಂಕಿಗಳದ್ದೇ ಮತ್ತೊಂದು ಭಾಷೆ. ಅನೇಕ ಸಂದರ್ಭಗಳಲ್ಲಿ ಇದನ್ನು ಅರ್ಥ ಮಾಡಿಕೊಳ್ಳದೆ ನಾವು ಗಣಿತ ದ್ವೇಷಿಗಳಾಗಿಬಿಟ್ಟಿರುತ್ತೇವೆ.

ಬೀಜಗಣಿತವೆಂದರೆ ಅನೇಕರಿಗೆ ಅಸಂಬದ್ಧಗಳ ಕಂತೆಯಂತೆ ಕಾಣಿಸುತ್ತದೆ. ಅರ್ಥವೇ ಆಗದ ಅಮೂರ್ತ ಬೀಜಾಕ್ಷರಗಳಲ್ಲಿ ಹೇಳುವುದು ಅದ್ಯಾವ ಸೀಮೆಯ ಗಣಿತ ಎಂದು ಕಟಕಿಯಾಡುವವರೇನೂ ಕಡಿಮೆಯಲ್ಲ. ಆದರೆ ಕಲಿಯುತ್ತಾ ಹೋದರೆ ಇದು ಹೊಸತೊಂದು ಲೋಕವನ್ನೇ ಅನಾವರಣಗೊಳಿಸುತ್ತದೆ.

ಜಗತ್ತಿನ ಅತಿ ಸುಂದರ ವೈಜ್ಞಾನಿಕ ಪರಿಕಲ್ಪನೆಗಳೆಲ್ಲವೂ ಅನಾವರಣಗೊಂಡದ್ದು ಬೀಜಗಣಿತದಲ್ಲೇ. ಅತ್ಯಂತ ಸಂಕೀರ್ಣವಾದ ಸಾಪೇಕ್ಷತಾ ಸಿದ್ಧಾಂತವನ್ನು ಅರಿಯುವುದಕ್ಕೆ ಬೀಜಗಣಿತ ಬೇಕು. ಸೊಟ್ಟಾಗಿರುವ ನಿವೇಶನವೊಂದರ ನಿಜ ಅಳತೆ ಅರಿಯುವುದಕ್ಕೂ ಬೀಜಗಣಿತವೇ ಬೇಕು.

ಸ್ಟಾಕ್ ಮಾರ್ಕೆಟ್‌ನಿಂದ ಚುನಾವಣಾ ವಿಶ್ಲೇಷಣೆ ತನಕ ಬೀಜಗಣಿತ ಇಲ್ಲದೇ ಇರುವ ಕ್ಷೇತ್ರವೇ ಇಲ್ಲ. ಇದರ ಕಲಿಕೆಯನ್ನು ಸರಳಗೊಳಿಸುವ ಉದ್ದೇಶದಿಂದಲೇ ‘ಸ್ಕೂಲ್ ಯುವರ್‌ಸೆಲ್ಫ್’ ಸಂಸ್ಥೆ ಮುಕ್ತ ಹಾಗೂ ಉಚಿತ ಕೋರ್ಸ್ ರೂಪಿಸಿದೆ.

ಬೀಜಗಣಿತದ ಕಲಿಕೆಗೆ ಅಗತ್ಯವಿರುವ ಬೀಜ ರೂಪದ ಪರಿಕಲ್ಪನೆಗಳನ್ನು ಅತ್ಯಂತ ಸರಳವಾಗಿ ವಿವರಿಸುವುದು ಇದರ ಹೆಗ್ಗಳಿಕೆ. ಗಣಿತ ಬೋಧನೆಯಲ್ಲಿ ಪರಿಣತರಾಗಿರುವ ಬಳಗ ಕೋರ್ಸ್ ರೂಪಿಸಿದೆ.

ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಂಡು ಗಣಿತ ಕಲಿಯುವ ಪ್ರಕ್ರಿಯೆ ನಿಜಕ್ಕೂ ಆನಂದದಾಯಕ. ಜುಲೈ ಒಂದರಿಂದಲೇ ಆರಂಭವಾಗುತ್ತಿರುವ ಈ ಕೋರ್ಸ್ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳ ಅರಿವನ್ನು ನೆಲೆಗಟ್ಟನ್ನಾಗಿ ಇಟ್ಟುಕೊಂಡಿದೆ.

ಕೋರ್ಸ್‌ಗೆ ಸೇರಲು ಇಚ್ಛಿಸುವವರು ಇಲ್ಲಿರುವ ಲಿಂಕ್ ಬಳಸಬಹುದು: https://goo.gl/7YKo6D

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.