ADVERTISEMENT

ಕಾನೂರು ಸುಬ್ಬಮ್ಮ ಹೆಗ್ಗಡತಿ

e–ಪುಸ್ತಕ

​ಪ್ರಜಾವಾಣಿ ವಾರ್ತೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST
ಕಾನೂರು ಸುಬ್ಬಮ್ಮ ಹೆಗ್ಗಡತಿ
ಕಾನೂರು ಸುಬ್ಬಮ್ಮ ಹೆಗ್ಗಡತಿ   

‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಅತಿ ಮುಖ್ಯವಾದ ಸ್ಥಾನದಲ್ಲಿರುವ ಒಂದು ಗದ್ಯ ಕೃತಿ. ವಿಮರ್ಶಕರ ಭಾಷೆಯಲ್ಲಿ ಹೇಳುವುದಾದರೆ ಇದು ಕನ್ನಡ ಸಾಹಿತ್ಯದ ನಿರ್ಮಾಣಶೀಲ ಯುಗದ ಪ್ರಮುಖ ಪ್ರತಿನಿಧಿ. ಅಷ್ಟೇ ಅಲ್ಲ, ಇದೊಂದು ಪದ್ಯ ಕಾವ್ಯ. 1936ರಲ್ಲಿ ಪ್ರಕಟವಾದ ಈ ಬೃಹತ್ ಕಾದಂಬರಿಯ ಶಿಲ್ಪ, ಭಾಷಾ ಬಳಕೆ ಮತ್ತು ಒಟ್ಟು ಜೀವನದರ್ಶನದ ದೃಷ್ಟಿಯಿಂದಲೂ ಕನ್ನಡ ಕಾದಂಬರಿ ಲೋಕಕ್ಕೆ ದೊರೆತ ಅನನ್ಯ ಕಾಣಿಕೆ.

ನವೋದಯ ಕಾಲಘಟ್ಟದ ಪ್ರಮುಖ ಕವಿಯಾಗಿದ್ದ ಕುವೆಂಪು ಅವರಿಗೆ ಗದ್ಯದಲ್ಲಿನ ಅಭಿವ್ಯಕ್ತಿ ಹೊಸತೇನೂ ಆಗಿರಲಿಲ್ಲ. ನಾಟಕ, ಪ್ರಬಂಧ ಹಾಗೂ ಕಥೆಗಳಲ್ಲಿ ಅದು ಕಾಣಿಸಿಕೊಂಡಿತ್ತು. ಅವರು ತಮ್ಮ ಮಹಾಕಾವ್ಯಕ್ಕೆ ತಮ್ಮದೇ ಆದ ಛಂದಸ್ಸನ್ನು ಶೋಧಿಸಿಕೊಂಡಂತೆ ಕಾದಂಬರಿಗೆ ತಮ್ಮದೇ ಆದ ಮಾರ್ಗವೊಂದನ್ನು ಶೋಧಿಸಿಕೊಂಡರು.

ನಿರ್ದಿಷ್ಟ ಕೇಂದ್ರದೊಂದಿಗೆ ಸದಾ ಸಂವಾದಿಸುವ ಬಗೆಯ ಕಾದಂಬರಿ ಶಿಲ್ಪಕ್ಕಿಂತ ಭಿನ್ನವಾದ ಒಂದು ಮಾದರಿಯನ್ನು ಅವರು ಅಳವಡಿಸಿಕೊಂಡರು. ಭಾರತೀಯ ಮಹಾಕಾವ್ಯಗಳ ಅಭಿವ್ಯಕ್ತಿ ಮಾದರಿಯಲ್ಲಿ ಬಳಕೆಯಾಗಿರುವ ತಂತ್ರವಿದು.

ಬಹಳ ದಟ್ಟವಾದ ವಿವರಣೆಗಳು, ದ್ವೈಮಾನಿಕ ಮೌಲ್ಯ ನಿರ್ಣಯಗಳ ಆಚೆಗೆ ನಿಲ್ಲುವ ಜೀವನ ದರ್ಶನ ಮತ್ತು ರಾಜಕೀಯ ನಿಲುವುಗಳನ್ನು ಒಳಗೊಂಡು ಕಾದಂಬರಿ ರೂಪುಗೊಂಡಿತು. ಬಹುಶಃ ತಮ್ಮ ಸಮಕಾಲೀನರೆಲ್ಲರಿಗಿಂತಲೂ ಕುವೆಂಪು ಭಿನ್ನರಾಗುವುದು ಇದೇ ಕಾರಣಕ್ಕೆ.

ಈ ಕೃತಿ ಸದಾ ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ಕುವೆಂಪು ಅವರ ಕುಟುಂಬ ನೋಡಿಕೊಂಡಿದೆ. ಶಿವಮೊಗ್ಗದ ಕಾವ್ಯಾಲಯ ಪ್ರಕಾಶನ ಈ ಕಾದಂಬರಿಯನ್ನು ಆರು ಸಂಪುಟಗಳಲ್ಲಿ ಪ್ರಕಟಿಸಿತ್ತು. ಇದರ ಮೊದಲ ಎರಡು ಸಂಪುಟಗಳು ಆರ್ಕೈವ್ ತಾಣದಲ್ಲಿ ಲಭ್ಯವಿದೆ. ಆಸಕ್ತರು ಇಲ್ಲಿರುವ ಲಿಂಕ್ ಬಳಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು: http://bit.ly/2hEGpm1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT