ADVERTISEMENT

ಡ್ರೋನ್‌ ಮಾದರಿಯ ಪುಟ್ಟ ಫ್ಯಾನ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST
ಡ್ರೋನ್‌ ಮಾದರಿಯ ಪುಟ್ಟ ಫ್ಯಾನ್‌
ಡ್ರೋನ್‌ ಮಾದರಿಯ ಪುಟ್ಟ ಫ್ಯಾನ್‌   

ಮನೆಯಲ್ಲಾದರೆ ಸೆಖೆಯಾದಾಕ್ಷಣ ಗಾಳಿಗೆ ಸೀಲಿಂಗ್ ಫ್ಯಾನ್, ಟೇಬಲ್ ಫ್ಯಾನ್ ಹಾಕಿಕೊಳ್ಳಬಹುದು. ಆದರೆ ಹೊರಗೆ ಹೋದರೆ, ಅದರಲ್ಲೂ ಬಿಸಿಲಿನಲ್ಲಿ ತಿರುಗಾಡುವಾಗ ಕೈಯಲ್ಲಿ ಎಷ್ಟೆಂದು ಗಾಳಿ ಬೀಸಿಕೊಳ್ಳುವುದು? ಅದೊಂದು ಕಿರಿಕಿರಿ.

ಇದೇ ಉದ್ದೇಶ ಪೂರೈಸಲು ಪೋರ್ಟೆಬಲ್ ಕೂಲಿಂಗ್ ಫ್ಯಾನ್‌ಗಳು ಲಭ್ಯವಿದ್ದರೂ, ನಡೆದಾಡುವಾಗ ಬಳಕೆಗೆ ಸಾಧ್ಯವಿಲ್ಲ. ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು, ಜೊತೆಗೆ ಬೇಕಾದಂತೆ ಗಾಳಿ ಬೀಸಿಕೊಳ್ಳಲು ಪುಟ್ಟ ಡ್ರೋನ್‌ ಮಾದರಿ ಫ್ಯಾನ್ ವಿನ್ಯಾಸಗೊಂಡಿದೆ.

ಈಗಂತೂ ವೈಯಕ್ತಿಕ ಬಳಕೆಯ ಗ್ಯಾಜೆಟ್‌ಗಳಲ್ಲಿ ಆಯ್ಕೆಗಳು ಸಾಕಷ್ಟಿವೆ. ಆ ಪಟ್ಟಿಯಲ್ಲಿ ಈಗ ಫ್ಯಾನ್ ಕೂಡ ಸೇರಿಕೊಂಡಿದೆ. ಡ್ರೋನ್‌ ಮಾದರಿಯ ಈ ಫ್ಯಾನ್ ವಿನ್ಯಾಸಗೊಳಿಸಿರುವುದು ಸಿಂಗಪುರ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಡಿಸೈನ್‌ನ ಯಿಂಗ್ ಹಾಂಗ್.

ಮಾನವರಹಿತ ವಾಯುವಾಹನ ತಂತ್ರಜ್ಞಾನ (ಅನ್‌ಮ್ಯಾನ್ಡ್‌ ಏರಿಯಲ್ ವೆಹಿಕಲ್‌ ಟೆಕ್ನಾಲಜಿ) ವಿಷಯದಲ್ಲಿ ಪರಿಣತಿ ಹೊಂದಿರುವ ಯಿಂಗ್ ಹಾಂಗ್ ಜೊತೆ ಚೀನಾದ ಝೆಜಿಯಾಂಗ್ ವಿಶ್ವವಿದ್ಯಾಲಯದ ಲಿಂಗಾಂಗ್, ಕ್ವಿಂಗ್, ಸಿಜೀ ಎಂಬುವರು ಈ ಪ್ರಯೋಗದಲ್ಲಿದ್ದಾರೆ.

ಪುಟ್ಟದಾದ ಮತ್ತು ಕೊಂಡೊಯ್ಯಲು ಸುಲಭವಾದ ಈ ಸಾಧನದ ಹೆಸರು ಟೋನ್‌ಬೊ. ಇದರ ನಿಯಂತ್ರಣಕ್ಕೆ ಯಾವುದೇ ಕಂಟ್ರೋಲರ್ ಬೇಕಿಲ್ಲ. ನಡೆದಾಡುತ್ತಲೇ ಆ ಫ್ಯಾನ್ ಆನ್ ಮಾಡಿ, ನಾವು ನಡೆದಾಡುವ ಕಡೆ, ನಮ್ಮ ಮೇಲೆ ಅದನ್ನು ಗಾಳಿ ಬೀಸುವಂತೆ ಮಾಡಬಹುದು. ಫ್ಯಾನ್‌ ಕೆಳಗೆ ನೀಡಿರುವ ದಾರ ಎಳೆದು ಹಿಡಿದುಕೊಂಡರೆ ಸಾಕು, ಈ ಡ್ರೋನ್‌ ತಲೆ ಮೇಲೆ ಸುತ್ತಲು ಶುರುವಾಗುತ್ತದೆ.

ಅದನ್ನು ಹಿಡಿದು ಗಾಳಿಯೊಂದಿಗೆ ನಡೆಯಬಹುದು. ರಿಚಾರ್ಜೆಬಲ್ ಬ್ಯಾಟರಿಯೊಂದಿಗೆ ಅತಿ ಹೆಚ್ಚು ಶಕ್ತಿಯ ನಾಲ್ಕು ಬ್ರಷ್‌ಲೆಸ್‌ ಮೋಟಾರು ಅಳವಡಿಸಲಾಗಿದೆ.

ಫ್ಯಾನ್ ಅಷ್ಟೇ ಅಲ್ಲ, ಕ್ಯಾಮೆರಾವನ್ನೂ ಅಳವಡಿಸಲಾಗಿದ್ದು, ಪ್ರವಾಸದ ಕ್ಷಣಗಳನ್ನು ಹಿಡಿದಿಟ್ಟುಕೊಳ್ಳಬಹುದು. ಇದು ಹಗುರವಾಗಿದ್ದು, ಸಪಾಟಾಗಿ ಮಡಚಿ ಚೀಲದಲ್ಲಿ ಹಾಕಿಕೊಳ್ಳಬಹುದು. ಇದಿನ್ನೂ ಮಾದರಿ ಹಂತದಲ್ಲಿದೆ.

ಗಾಳಿ ಬೀಸುವಾಗ ಬರುವ ಶಬ್ದದ ಮಟ್ಟ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಸಾಗುತ್ತಿದೆ. ಪೂರ್ಣಗೊಂಡ ನಂತರ ಮಾರುಕಟ್ಟೆಗೆ ಲಭ್ಯ ಎಂದು ತಂಡ ಹೇಳಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.