ADVERTISEMENT

ಭಾನುವಾರ ಡಯಟ್‌ಗೂ ರಜೆ!

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 19:30 IST
Last Updated 15 ಡಿಸೆಂಬರ್ 2017, 19:30 IST
ಹನ್ಸಿಕಾ ಮೊಟ್ವಾನಿ
ಹನ್ಸಿಕಾ ಮೊಟ್ವಾನಿ   

'ಬಿಂದಾಸ್‌' ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ‘ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ’ ಎಂದು ಕುಣಿದು ಅಭಿಮಾನಿಗಳ ಎದೆಯಲ್ಲಿ ಕಚಗುಳಿ ಇಟ್ಟವರು ಮುದ್ದು ಮೊಗದ ನಟಿ ಹನ್ಸಿಕಾ ಮೊಟ್ವಾನಿ. ಸದ್ಯ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.

‘ಪ್ರತಿಯೊಬ್ಬರಿಗೂ ಏನಾದರೊಂದು ದೌರ್ಬಲ್ಯ ಅಂತ ಇದ್ದೇ ಇರುತ್ತದೆ. ಹೊರಗಿನ ಊಟ ತಿನ್ನಲಾಗದ್ದು ನನ್ನ ದೌರ್ಬಲ್ಯ ಎನ್ನಬಹುದು. ನನಗೆ ಮನೆ ಊಟವೇ ಬೇಕು’ ಎಂದು ಬಿಂದಾಸ್‌ ಆಗಿಯೇ ಹೇಳುತ್ತಾರೆ ಹನ್ಸಿಕಾ.

ಆಹಾರ ಸೇವನೆ ಮತ್ತು ದೇಹದಂಡನೆಯಲ್ಲಿಯೂ ಅವರು ಶಿಸ್ತು ಪಾಲಿಸುತ್ತಾರೆ. ‘ನಾನು ನನ್ನ ವರ್ಕ್‌ಔಟ್‌ ಅನ್ನು ಪ್ರತಿದಿನವೂ ನನಗೇ ಆಸಕ್ತಿದಾಯಕವಾಗುವಂತೆ ಮಾಡುತ್ತೇನೆ. ಬೆಳಿಗ್ಗೆ ಬೇಗ ಏಳುವುದೂ ನನಗೆ ಇಷ್ಟ. ಜಿಮ್‌ಗೆ ನಡೆದುಕೊಂಡೇ ಹೋಗುತ್ತೇನೆ. ತೂಕ ಹೆಚ್ಚು ಮಾಡಿಕೊಳ್ಳುವ  ಸಲುವಾಗಿ ಮಾಡುವ ವ್ಯಾಯಾಮಗಳು ಬರೀ ಬೋರಿಂಗ್‌. ನಾನು ಈಗ ಹೇಗಿದ್ದೇನೋ ಹಾಗೇ ಇರಲು ಬಯಸುತ್ತೇನೆ. ವರ್ಕ್‌ಔಟ್‌ ಸಹ ಪ್ರತಿದಿನ ವಿಭಿನ್ನವಾಗಿ ಮಾಡಲು ಇಷ್ಟಪಡುತ್ತೇನೆ. ಹೀಗಾಗಿ ಯಾವುದೇ ನಿರ್ದಿಷ್ಟ ವ್ಯಾಯಾಮ, ವರ್ಕ್ಔಟ್‌ ಅನುಕರಣೆ ಮಾಡುವುದಿಲ್ಲ’ ಎಂಬುದು ಅವರ ವಿವರಣೆ.

ADVERTISEMENT

ಎರಡು ದಿನಗಳಿಗೊಮ್ಮೆ ಈಜು, ಪ್ರತಿದಿನ ಯೋಗ– ಹನ್ಸಿಕಾ ತಪ್ಪಿಸುವುದಿಲ್ಲ. ಮನಸು ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಈ ಎರಡೂ ಸಹಾಯಕ ಎಂಬುದು ಅವರ ಅನುಭವದ ಮಾತು.

ಡಯಟ್‌: ಬೆಳಿಗ್ಗೆ ಎದ್ದ ಕೂಡಲೇ ಎರಡು ಗ್ಲಾಸ್‌ ನೀರು ಸೇವಿಸಿ, ಬಳಿಕ ಸಕ್ಕರೆ ರಹಿತ ಗ್ರೀನ್‌ ಟೀ ಕುಡಿಯುತ್ತಾರೆ. 15 ನಿಮಿಷಗಳ ಬಳಿಕ ಒಂದು ಬೌಲ್‌ ಪಪ್ಪಾಯಿ ಹಣ್ಣು ತಿಂದು ಜಿಮ್‌ನತ್ತ ನಡಿಗೆ.

ಅಲ್ಲಿಂದ ಬಂದು ಮೂರು ಮೊಟ್ಟೆಯ ಬಿಳಿಭಾಗದಿಂದ ಮಾಡಿದ ಆಮ್ಲೆಟ್‌ ಹಾಗೂ ಮೊಳಕೆಕಾಳು ತಿಂದರೆ ಬೆಳಗ್ಗಿನ ಉಪಾಹಾರ ಮುಗಿಯುತ್ತದೆ. ಮಧ್ಯಾಹ್ನದ ಊಟದಲ್ಲಿ ತರಕಾರಿಗೆ ಆದ್ಯತೆ. ರಾತ್ರಿಯೊಳಗೆ 4ರಿಂದ 5 ಲೀಟರ್‌ ಕುಡಿಯುವುದು ಹನ್ಸಿಕಾಗೆ ಕಡ್ಡಾಯ.

ಆಮೇಲೆ ಏನಾದರೂ ಉಪಾಹಾರ ಸೇವಿಸಿ, ರಾತ್ರಿಯ ಊಟವನ್ನು ಸಂಜೆ ಆರು ಗಂಟೆಗೇ ಮುಗಿಸುತ್ತಾರೆ. ಬೇಯಿಸಿದ ತರಕಾರಿ ಮತ್ತು ಹಣ್ಣುಗಳ ಸಲಾಡ್‌ ಅಷ್ಟೇ ರಾತ್ರಿ ಊಟಕ್ಕೆ. ಆ ಬಳಿಕ ಹನ್ಸಿಕಾ ಏನನ್ನೂ ತಿನ್ನುವುದಿಲ್ಲ. ಭಾನುವಾರ ಮಾತ್ರ ಡಯಟ್‌ಗೆ ರಜೆ. ಏನೇನು ತಿನ್ನಬೇಕೆನಿಸಿತ್ತೋ ಅದನ್ನೆಲ್ಲಾ ತಿನ್ನುತ್ತಾರಂತೆ. ಮನೆಯಡುಗೆ ಅಥವಾ ದೇಸಿ ಅಡುಗೆ ಅಂದ್ರೆ ಮೊಟ್ವಾನಿಗೆ ತುಂಬ ಇಷ್ಟ. ಡಯಟಿಂಗ್‌ ಮಾಡುತ್ತಿರುವಾಗ ಈ ಎರಡು ವಿಷಯಗಳಿಗೆ ಆದ್ಯತೆ ಕೊಡುತ್ತಾರೆ. ಇದೇ ತಮ್ಮ ವೀಕ್‌ನೆಸ್‌ ಎನ್ನುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಅವರು ಎಣ್ಣೆ ಪದಾರ್ಥಗಳನ್ನು ತಿನ್ನುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.