ADVERTISEMENT

ರಂಗನ ಒಲಿಸುವ ಬಣ್ಣಗಳ ರಂಗೋಲಿ

ಎಸ್.ರಶ್ಮಿ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಣ್ಮುಚ್ಚಿ ರಂಗೋಲಿ ಅಂದೊಡನೆ ನೆನಪಾಗುವುದೇನು?

ನನ್ನ ಕಣ್ಮುಂದೆಯಂತೂ ಎರಡು ದೃಶ್ಯಗಳು ಸಾಕಾರಗೊಳ್ಳುತ್ತವೆ. ಒಂದು ನಮ್ಮ ಬೀದರ್‌ನ ಮನೆ. ವಿಶಾಲವಾದ ಅಂಗಳ. ಅದಕ್ಕೆ ಸೆಗಣಿ ಸಾರಿಸಿ, 15 ಅಕ್ಕಿ, 8 ಸಾಲಿನಾಗ ಹಾಕ್ತಿದ್ದ ರಂಗೋಲಿಗಳು. ಇನ್ನೊಂದು, ಅವೊತ್ತು ಭಾನುವಾರ ರಜೆ ಎಂದು ಘೋಷಿಸುವ ಡಿಡಿ ವಾಹಿನಿಯ ‘ರಂಗೋಲಿ’. ಒಂದು ಬೆಳಗಿನ ಚಹಾ ಬಿಸ್ಕತ್ತು ಸವಿಯುತ್ತ ಜೊತೆಗೆ ನೋಡುವ ರಂಗೋಲಿ. ಇನ್ನೊಂದು ಸಂಜೆಯ ಚಹಾ ಆದ ಮೇಲೆ ಹಾಕುತ್ತಿದ್ದ ರಂಗೋಲಿ.

ಅಂಗಳದಲ್ಲಿ ಬಿಳಿ ರಂಗೋಲಿಯ ಅಕ್ಕಿಗಳನ್ನು ಎಣಿಸುತ್ತ ರಂಗೋಲಿ ಚಿತ್ತಾರ ಬರೆಯುವ ಕ್ರಿಯೆಯ ಮುಂದೆ ಯಾವ ಧ್ಯಾನವೂ ಬೇಡ. ಪ್ರತಿ ಅಕ್ಕಿ ಇಡುವಾಗಲೂ ‘ರಂಗ ಒಲಿ’ ರಂಗ ಒಲಿ ಎಂದು ಸ್ಮರಿಸುತ್ತ ಹಾಕುತ್ತಿದ್ದರಂತೆ ರಂಗೋಲಿಯನ್ನು. ಹೆಬ್ಬೆರಳು ಮತ್ತು ತೋರು ಬೆರಳುಗಳ ನಡುವೆ ರಂಗೋಲಿಯ ಹುಡಿಯನ್ನಿಡುತ್ತ ಹೊರಟರೆ ಬಾನೊಳಗಿನ ಚುಕ್ಕಿಗಳೇ ಅಂಗಳಕ್ಕೆ ಬಂದಂತೆ. ಇನ್ನು ಇಲ್ಲಿಯ ಚುಕ್ಕಿಗೆ ಅಲ್ಲಿಯದೊಂದು ಗೆರೆ ಸೇರಿಸುತ್ತ ಗೆರೆಗೆ ಪ್ರತಿಗೆರೆ ಎಳೆಯುತ್ತ ಒಂದೊಂದು ಸುಂದರ ಚಿತ್ತಾರವಾಗುವ ಈ ಕಲೆಯ ಆರಂಭ ಎಲ್ಲಿಯದೋ?

ADVERTISEMENT

ಅಂತೂ ತಲತಲಾಂತರದಿಂದ ಬಂದ ಈ ಕಲೆಯಲ್ಲಿ ಅದೆಷ್ಟು ವಿಧ. ಐದನೇ ಕ್ಲಾಸಿಗೆ ಬಂದ ಕೂಡಲೆ ರಂಗೋಲಿಯ ಹುಕಿ ಆರಂಭವಾಗುತ್ತದೆ. ಐದಕ್ಕಿ ಐದು ಸಾಲು ಅಂದೊಡನೆ ಐದು ಉದ್ದ ಅಡ್ಡ ಸಾಲುಗಳನ್ನಿಟ್ಟು ಅಲ್ಲೊಂದು ತುಳಸಿ ಕಟ್ಟೆ ಅರಳುವುದರಿಂದಲೇ ರಂಗೋಲಿ ಕಲಿಕೆ ಆರಂಭ. ಈ ತುಳಸಿ ಕಟ್ಟೆಯ ರಂಗೋಲಿಗೂ, ತುಳಸಿ ಕಟ್ಟೆಯ ಮುಂದಿಡುವ ದೀಪದ ರಂಗೋಲಿಗೂ ಅದೇನು ಬಾಂಧವ್ಯವೋ... ಇವೆರಡನ್ನೂ ನೋಡಿದಾಗ ಟೀವಿಯಲ್ಲಿ ಬರುತ್ತಿದ್ದ ರಂಗೋಲಿಯ ಆ ಹಾಡು ನೆನಪಾಗುತ್ತದೆ. ‘ತೇರಾ ಮುಝಸೆ ಹೈ ಪೆಹಲೆ ಕಾ ನಾತಾ ಕೋಯಿ...’

ರಂಗೋಲಿ ಕಲಿಕೆಯ ಆರಂಭದಲ್ಲಿಯೇ ಬಿಡಿ ರಂಗೋಲಿ, ಚುಕ್ಕಿ ರಂಗೋಲಿ, ಎಳೆ ರಂಗೋಲಿ, ಗಂಟಿನ ರಂಗೋಲಿ ಎಂಬ ವಿಧಗಳನ್ನು ಬಿಡಿಸಿ ಹೇಳುತ್ತಿದ್ದರು. ಮೊದಲು ತುಳಸಿ ಕಟ್ಟೆಯದ್ದಾದ ನಂತರ ದೀಪದ ರಂಗೋಲಿ ನಾಲ್ಕಕ್ಕಿ ನಾಲ್ಕು ಸಾಲು. ಅದಾದ ಮೇಲೆ ಕೈ ಮೇಲೆತ್ತದಂತೆ ಮೂರಕ್ಕಿ ಮೂರು ಸಾಲಿನ ಗಂಟಿನ ರಂಗೋಲಿ ಹಾಕಿದರೆ ಸಾಕು, ಗಂಟಿನ ಎಲ್ಲ ರಂಗೋಲಿಗಳು ಬಂದಂತೆಯೇ ಎನ್ನುತ್ತಿದ್ದರು. ಎಳೆ ರಂಗೋಲಿಯಲ್ಲಿ ನಾಲ್ಕು ಕಡ್ಡಿ ಅಡ್ಡ, ನಾಲ್ಕು ಕಡ್ಡಿ ಉದ್ದ ಗೆರೆ ಎಳೆದು ಒಂದಕ್ಕೊಂದು ಜೋಡಿಸುತ್ತ ಹೋದರೆ ಸಾಕು, ಇಷ್ಟಗಲದ ಹೂ ದಳಗಳಿರುವ ಚಿತ್ತಾರ ಮೈತಳೆಯುತ್ತಿತ್ತು. ನಡುನಡುವೆ ಅದೆಷ್ಟೊಂದು ತ್ರಿಕೋನಗಳು!
ವೃತ್ತಾಕಾರದ ರಂಗೋಲಿಗೆ ಮೊದಲೆಲ್ಲ ಬಟ್ಟಲು ಹಿಡಿದು ಕೂರುತ್ತಿದ್ದೆವು. ನಂತರ ದಾರದ ಸಹಾಯದಿಂದ ಹಾಕುವುದು ಕಲಿತೆವು. ಎಷ್ಟು ತಂತ್ರಗಾರಿಕೆ, ಎಂಥ ನಾಜೂಕಿನ ಕಲೆ. ಅಕ್ಕಿಇಡಲು ಬೆರಳ ತುದಿಯಿಂದ ರಂಗೋಲಿ ಬಿಟ್ಟರೆ, ಗೆರೆ ಎಳೆಯಲು ಬೆರಳುಗಳ ಸಂದಿಯಿಂದ ಸೋಸುತ್ತ ಹೋಗುವುದು. ಎಳೆಯ ದಪ್ಪ ಯಾವುದಿರಬೇಕು ಎನ್ನುವದರ ಮೇಲೆ ಯಾವ ಬೆರಳುಗಳ ಸಂದಿಯೆಂಬುದೂ ನಿರ್ಣಯವಾಗುವುದು. ಜ್ಯಾಮಿತಿ, ರೇಖಾಗಣಿತ ಯಾವುದರ ಅರಿವಿಲ್ಲದೆಯೂ ಅಷ್ಟೆಲ್ಲ ರೇಖೆಗಳನ್ನು ಸಂಧಿಸುತ್ತ ಹೋಗುವ ಚಂದವೇ ಅನನ್ಯ.

ಅಂಗಳದ ಆ ರಂಗೋಲಿ, ಮನಸಿನೊಳಗಣ ಹಾಡು ಎರಡೂ ಒಟ್ಟೊಟ್ಟಿಗೆ ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯುವ ಈ ಕ್ರಿಯೆ ಕೇವಲ ಆಚರಣೆ ಮಾತ್ರವಲ್ಲ, ನಮ್ಮೊಳಗೆ ನಾವಾಗುತ್ತ, ನಮ್ಮೊಳಗಿನ ಸಂಭ್ರಮವನ್ನೇ ಚಿತ್ತಾರವಾಗಿಸುವ ಸಡಗರವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.