ADVERTISEMENT

ಹಚ್ಚೆ ಚಿತ್ತಾರ, ಇವ ಕಲೆಗಾರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST
ಎಂ.ಎಸ್‌.ದೋನಿಯೊಂದಿಗೆ ಮಿಕ್ಕಿ ಮಲಾನಿ
ಎಂ.ಎಸ್‌.ದೋನಿಯೊಂದಿಗೆ ಮಿಕ್ಕಿ ಮಲಾನಿ   

ದೇಹದ ಮೇಲೆ ಚಿತ್ರ ಬಿಡಿಸುವ ಹೆಸರಾಂತ ಟ್ಯಾಟು ಕಲಾವಿದರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ಮಿಕ್ಕಿ ಮಲಾನಿ. ಭಾರತದಲ್ಲಿ ವಿವಿಧೆಡೆ ಸ್ಟುಡಿಯೊಗಳನ್ನು ಹೊಂದಿರುವ ಮಿಕ್ಕಿ ಇತ್ತೀಚೆಗೆ ಲಂಡನ್‌ನಲ್ಲೂ ಒಂದು ಸ್ಟುಡಿಯೊ ಆರಂಭಿಸಿದ್ದಾರೆ.

ಎಲ್ಲ ಹರೆಯದ ಹುಡುಗರಿಗೆ ಇರುವಂತೆ ಮಲಾನಿಗೂ ಹುಡುಗಿಯರನ್ನು ಇಂಪ್ರೆಸ್ ಮಾಡುವ ಆಸೆ ಇತ್ತು. ಏನು ಮಾಡುವುದು ಎಂದು ಯೋಚಿಸಿದಾಗ ಟ್ಯಾಟು ಸ್ಟುಡಿಯೊ ಆರಂಭಿಸುವ ಐಡಿಯಾ ಹೊಳೆಯಿತು.

‘ನಾನು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದೆ. ಅಣ್ಣನ ಸ್ನೇಹಿತರ ಜೊತೆ ಕಾಲೇಜಿನ ಸಮೀಪ ಹೋದಾಗ ಯುವತಿಯರ ಮೈಮೇಲಿದ್ದ ಟ್ಯಾಟುಗಳು ಕಣ್ಣಿಗೆ ಬಿದ್ದವು. ನಾನೇಕೆ ಟ್ಯಾಟುಗಳನ್ನು ಹಾಕಬಾರದು ಎನಿಸಿ ವೃತ್ತಿಯಾಗಿ ಸ್ವೀಕರಿಸಿದೆ’ ಎಂದು ಮಲಾನಿ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳ ಬಗ್ಗೆ ಪ್ರತಿಕ್ರಿಯಿಸುತ್ತಾರೆ.

ADVERTISEMENT

ಪ್ರಿಯಾಂಕಾ ಚೋಪ್ರಾ, ಅಮೀರ್‌ ಖಾನ್‌, ಎಂ.ಎಸ್‌. ಧೋನಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಮಲಾನಿ ಟ್ಯಾಟು ಹಾಕಿದ್ದಾರೆ. ಹಾಗೆಂದು ಇವರು ಕೇವಲ ಸೆಲೆಬ್ರಿಟಿಗಳಿಗೆ ಸೀಮಿತರಾದ ಕಲಾವಿದರಾಗಿ ಉಳಿದಿಲ್ಲ. ಸಾಮಾನ್ಯ ಜನರ ದೇಹವನ್ನೂ ಬಗೆಬಗೆ ಟ್ಯಾಟುಗಳಿಂದ ಅಲಂಕರಿಸುತ್ತಾರೆ.

‘ನಾನು ಈ ಕೆಲಸವನ್ನು ಪ್ರತಿದಿನ ಮಾಡುತ್ತೇನೆ. ಪ್ರತಿದಿನ ಜೀವನದ ಬಗ್ಗೆ ಹೊಸ ವಿಷಯಗಳನ್ನು ತಿಳಿಯುತ್ತೇನೆ. ನನ್ನ ಅತಿ ಹಿರಿಯ ಗ್ರಾಹಕ 84 ವರ್ಷದವರು. ಅವರು ನನ್ನ ಬಳಿ ಬಂದು ‘ನಾನು ನನ್ನ ಜೀವನದಲ್ಲಿ ಎಲ್ಲವನ್ನೂ ಮಾಡಿದ್ದೇನೆ. ಈಗ ಟ್ಯಾಟು ಹಾಕಿಸಿಕೊಳ್ಳುವ ಆಸೆಯಾಗಿ ಇಲ್ಲಿಗೆ ಬಂದಿದ್ದೇನೆ’ ಎಂದರು. ಅವರಿಂದ ಜೀವನದಲ್ಲಿ ನಮಗೇನಿಷ್ಟವೋ ಅದನ್ನು ಪಡೆಯಲು ಹೆಚ್ಚು ಕಾಲ ಕಾಯಬಾರದು ಎಂಬ ನೀತಿಯನ್ನು  ಕಲಿತುಕೊಂಡೆ’ ಎಂದು ಹೇಳುತ್ತಾರೆ.

‘ಸಂಗೀತಗಾರರು, ಗೃಹಿಣಿಯರು ಸೇರಿದಂತೆ ಹಲವರಿಗೆ ನಾನು ಟ್ಯಾಟು ಹಾಕಿದ್ದೇನೆ. ಅವರೆಲ್ಲಾ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡು ಅವರ ಕತೆಗೆ ಹತ್ತಿರವಾದ, ಸೂಕ್ತ ಎನ್ನಿಸುವ ಟ್ಯಾಟು ಹಾಕಿಸಿಕೊಳ್ಳುತ್ತಾರೆ. ಯಾವ ವೃತ್ತಿಯವರಿಗೆ
ಜನರ ಜೊತೆ ಇಷ್ಟೊಂದು ಆಪ್ತವಾಗಿ ಬೆರೆಯುವ ಅವಕಾಶ ಸಿಗುತ್ತದೆ ಹೇಳಿ?’ ಎಂಬುದು ಅವರ ಭಾವುಕ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.