ADVERTISEMENT

ವಿಮಾನದಲ್ಲಿ ಸುತ್ತಾಟ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ವಿಮಾನದಲ್ಲಿ ಸುತ್ತಾಟ
ವಿಮಾನದಲ್ಲಿ ಸುತ್ತಾಟ   

‘ವಯಸ್ಸಾಯಿತು, ಕೆಲಸದಿಂದ ನಿವೃತ್ತಿಯೂ ಸಿಕ್ಕಿತು. ಇನ್ನು ಮುಂದಾದರೂ ಆರಾಮವಾಗಿರಬೇಕು’ ಎಂದು ಯೋಚಿಸುವ ಜನರ ಸಂಖ್ಯೆಯೇ ಹೆಚ್ಚು. ಆದರೆ ದಕ್ಷಿಣ ಆಫ್ರಿಕಾ ಮೂಲದ ಈ ದಂಪತಿ ಇದಕ್ಕೆ ಅಪವಾದ.

ಇಂಗ್ಲೆಂಡ್‌ನ ನಾರ್ವಿಚ್‌ ನಗರದಲ್ಲಿ ಔಷಧ ತಜ್ಞರಾಗಿದ್ದ (ಫಾರ್ಮಾಸಿಸ್ಟ್) ಬ್ರಿಯಾನ್ ಮತ್ತು ಅವರ ಪತ್ನಿ ಸಿಲ್ವಿಯಾ ಫೋಸ್ಟರ್‌ ಅವರು ಎರಡು ವರ್ಷ ಕಷ್ಟಪಟ್ಟು ವಿಮಾನವೊಂದನ್ನು ತಮಗೆ ಬೇಕಾದಂತೆ ಮಾರ್ಪಾಡು ಮಾಡಿಕೊಂಡಿದ್ದಾರೆ. ಮೊದಲು ಈ ದಂಪತಿ ದೇಶ ಪರ್ಯಟನೆಗಾಗಿ ವಿಮಾನ ಖರೀದಿಸುವ ಯೋಚನೆ ಮಾಡಿದ್ದರು. ಆದರೆ ಅವರ ಮನಸು ಬಯಸುವಂಥ ವಿಮಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ತಾವೇ ಒಂದು ವಿಮಾನ ನಿರ್ಮಿಸಿಕೊಂಡರು.

162 ದಿನಗಳ ಪಯಣದಲ್ಲಿ 52,000 ಕಿ.ಮೀ ಸಂಚರಿಸಿರುವ ಈ ಜೋಡಿ, 23 ದೇಶಗಳನ್ನು ಸುತ್ತಿ ಬಂದಿದೆ. ಅಮೆರಿಕ, ಬ್ರಿಟನ್, ತಾಂಜೇನಿಯಾ, ಐಸ್‌ಲ್ಯಾಂಡ್, ನ್ಯೂಜಿಲೆಂಡ್ ಮತ್ತು ಸೆಚಲೆಸ್‌ಗಳಲ್ಲಿ ಹಾರಾಡಿರುವ ಈ ಜೋಡಿಗೆ ಸಂಚಾರವು ಹಲವು ಮಧುರಗಳನ್ನೂ ಒದಗಿಸಿಕೊಟ್ಟಿದೆ.

ADVERTISEMENT

ನ್ಯೂಜಿಲೆಂಡ್‌ನ ಅಕ್ಲೆಂಡ್‌ ವಿಮಾನ ನಿಲ್ದಾಣದಲ್ಲಿ ಇವರ ಪುಟಾಣಿ ಆರ್‌ವಿ10 ವಿಮಾನ ಲ್ಯಾಂಡ್ ಆಗಲೆಂದು ದೊಡ್ಡ ಏರ್‌ಬಸ್ ವಿಮಾನವನ್ನು ನಿಲ್ದಾಣ ನಿಯಂತ್ರಕರು ನಿಲ್ಲಿಸಿದ್ದರು. ‘ಸಣ್ಣವರಿಗೆ ಮೊದಲ ಆದ್ಯತೆ’ ಎಂದ ನಿಯಂತ್ರಕರ ಉದ್ಘೋಷವನ್ನು ನೆನೆದು ಬ್ರಿಯಾನ್ ಇಂದಿಗೂ ಖುಷಿಪಡುತ್ತಾರೆ.

‘ವಿಮಾನ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಬ್ರಿಯಾನ್‌. ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ಬ್ರಿಯಾನ್‌ ಅದೇ ಕೆಲಸ ಮಾಡುತ್ತಿದ್ದರು. ನಮ್ಮ ಪಯಣದ ಕುರಿತಾಗಿಯೂ ಬ್ರಿಯಾನ್‌ ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದ್ದ. ಪಯಣ ತುಂಬಾ ಖುಷಿ ಕೊಟ್ಟಿತು. ಈಗಲೂ ಇದೆಲ್ಲಾ
ಕನಸೇ ಎಂದೆನಿಸುವುದೂ ಇದೆ’ ಎಂದು ಹೇಳಿಕೊಂಡಿದ್ದಾರೆ ಫೋಸ್ಟರ್.→ v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.