ADVERTISEMENT

ಆಡಿಷನ್ ಫೋಬಿಯಾ ಮೀರಿದ ರಾಧಿಕಾ ಆಪ್ಟೆ

ವಿಶಾಖ ಎನ್.
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST
ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ   

ತೆಲುಗು, ಹಿಂದಿ ಎರಡೂ ಭಾಷೆಗಳಲ್ಲಿ ರಾಮ್ ಗೋಪಾಲ್ ವರ್ಮ ‘ರಕ್ತ ಚರಿತ್ರ’ ಸಿನಿಮಾ ಮಾಡಿದಾಗ ನಟಿ ರಾಧಿಕಾ ಆಪ್ಟೆ ಕಲಿತದ್ದು ಮೌನದ ಮಾತನ್ನು. ವರ್ಮ ಇಶಾರೆಗಳಲ್ಲಿ ಹುದುಗಿರುತ್ತಿದ್ದ ಕೋಪ, ಅಸಮಾಧಾನ, ಸಂತಸವನ್ನು ಅರ್ಥ ಮಾಡಿಕೊಳ್ಳಲು ದಿನಗಳೇ ಬೇಕಾದವು.

ಅದಾದ ಮೇಲೆ ‘ಶೋರ್ ಇನ್ ದಿ ಸಿಟಿ’ ಚಿತ್ರದಲ್ಲಿ ಅಭಿನಯ. ಅವಕಾಶಗಳು ಕದ ತಟ್ಟಿದರೂ, ರಾಧಿಕಾ ಅಗಳಿ ತೆಗೆಯಲಿಲ್ಲ. ಅವರು ಲಂಡನ್‌ಗೆ ಹೋಗಲು ಬಟ್ಟೆ ಜೋಡಿಸಿಟ್ಟುಕೊಳ್ಳುತ್ತಿದ್ದರು. ‘ಲಕ್ಷ್ಮಿ ಒದ್ದುಕೊಂಡು ಬರುವ ಹೊತ್ತಿಗೆ ಯಾರಾದರೂ ಕದವಿಕ್ಕುತ್ತಾರೆಯೇ?’ ಎಂದು ಅವರ ಅಪ್ಪ-ಅಮ್ಮ ಕೂಡ ಕೇಳಿದ್ದಿದೆ. ಈ ನಟಿ ಲಕ್ಷ್ಮಿಯನ್ನು ಮರೆತು, ಸರಸ್ವತಿಯ ಕಡೆಗೆ ವಾಲಿದ್ದರು. ಲಂಡನ್ ವಿಮಾನ ಹತ್ತಲು ಅವರು ನಿರ್ಧರಿಸಿದ್ದು ನೃತ್ಯ ಕಲಿಯಲು. ಟ್ರಿನಿಟಿ ಲಬಾನ್ ಕನ್ಸರ್ವೇಟೊಯ್ರ್ ಆಫ್ ಮ್ಯೂಸಿಕ್ ಅಂಡ್ ಡಾನ್ಸ್‌ನಲ್ಲಿ ಒಂದು ವರ್ಷ ಕಲಿತು ಬಂದರು. ಅಷ್ಟರಲ್ಲಿ ವಯಲಿನ್ ವಾದಕ ಬೆನೆಡಿಕ್ಟ್ ಟೇಲರ್ ಜತೆ ಸಪ್ತಪದಿ ತುಳಿದೂ ಆಗಿತ್ತು.

ಅಭಿನಯದ ಅವಕಾಶಗಳ ಅರಸುವ ನಟಿಯರು ಮದುವೆಯ ವಿಷಯವನ್ನು ಸಾಮಾನ್ಯವಾಗಿ ಜಾಹೀರು ಮಾಡುವುದಿಲ್ಲ. ರಾಧಿಕಾ ಹಾಗಲ್ಲ. ಅವರು ಲಿವ್-ಇನ್, ನಿಶ್ಚಿತಾರ್ಥ, ಮದುವೆ ಎಲ್ಲವನ್ನೂ ಹಂಚಿಕೊಂಡರು. ಕಾಲೇಜು ದಿನಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಈ ಕಥಕ್ ನೃತ್ಯಮೋಹಿ ಮೊದಲು ನಟಿಸಿದ್ದು ಮರಾಠಿ ಸಿನಿಮಾದಲ್ಲಿ. ಪುಣೆಯ ‘ಆಸಕ್ತ’ ರಂಗತಂಡದ ನಾಟಕವೊಂದರಲ್ಲಿ ರಾಧಿಕಾ ಅಭಿನಯಿಸಿದ್ದನ್ನು ಕಂಡೇ ರಾಹುಲ್ ಬೋಸ್ ಬಂಗಾಳಿ ಚಿತ್ರಕ್ಕೆ ಶಿಫಾರಸು ಮಾಡಿದರು.

ADVERTISEMENT

‘ಅಂತಹೀನ್’ ಅವರ ಅಭಿನಯದ ಮೊದಲ ಬಂಗಾಳಿ ಸಿನಿಮಾ. ಕ್ರಮೇಣ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿಯೂ ಬುಲಾವು ಬಂತು. ಎಲ್ಲಕ್ಕೂ ಮಿಗಿಲಾಗಿ ನಿರ್ದೇಶಕ ಪಾ. ರಂಜಿತ್ ಫೋನ್ ಮಾಡಿ, ರಜನೀಕಾಂತ್ ಜೋಡಿಯಾಗಿ ನಟಿಸುವಂತೆ ಆಹ್ವಾನಿಸಿದಾಗ ಈ ನಟಿ ಸ್ತಂಭೀಭೂತರಾಗಿದ್ದರಂತೆ. ಯಾರೋ ಸುಮ್ಮನೆ ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡೇ ರಂಜಿತ್ ಅವರನ್ನು ಭೇಟಿ ಮಾಡಿದ್ದ ಅವರಿಗೆ ಕಾದಿದ್ದು ಅಚ್ಚರಿ. ‘ಕಬಾಲಿ’ ತಮಿಳು ಸಿನಿಮಾ ಸೆಟ್‌ನಲ್ಲಿ ಸೂಪರ್ ಸ್ಟಾರ್ ಎದುರು ನಿಂತಾಗ ದೊಡ್ಡ ಕನಸೊಂದು ನನಸಾದ ಭಾವ.

‘ಮಾಂಝಿ-ದಿ ಮೌಂಟೆನ್ ಮ್ಯಾನ್’, ‘ಪ್ಯಾಡ್ ಮನ್’ ತರಹದ ಪ್ರಯೋಗಮುಖಿ ಸಿನಿಮಾಗಳ ಭಾಗವಾಗಿರುವ ರಾಧಿಕಾ, ‘ಅಹಲ್ಯ’ ಎಂಬ ಕಿರುಚಿತ್ರದ ಮೂಲಕ ಸ್ಟಾರ್‌ಗಳಿಂದಲೂ ಮೆಚ್ಚುಗೆ ಗಳಿಸಿದ್ದವರು. ಈಗಲೂ ಯಾರಾದರೂ ಫೋನ್ ಮಾಡಿ, ‘ಆಡಿಷನ್ ಗೆ ಬರುವಿರಾ’ ಎಂದರೆ, ರಾಧಿಕಾ ಕಂಪಿಸುತ್ತಾರೆ. ಅವರಿಗೆ ಆಗ ಹಳೆಯ ದಿನಗಳು ನೆನಪಾಗುತ್ತವೆ.

ಲೆಕ್ಕವಿಲ್ಲದಷ್ಟು ಆಡಿಷನ್‌ಗಳು!

ಮುಂಬೈಗೆ ಮರಳಿದ ಕೆಲವು ತಿಂಗಳ ನಂತರ ‘ಕಾಸ್ಟಿಂಗ್ ನಿರ್ದೇಶಕ’ ಮುಕೇಶ್ ಛಾಬ್ರಾ ಫೋನ್ ಮಾಡಿದರು. ಶ್ರೀರಾಮ್ ರಾಘವನ್ ‘ಬದ್ಲಾಪುರ್’ ಹಿಂದಿ ಸಿನಿಮಾ ನಿರ್ದೇಶಿಸಲು ಹೊರಟಿದ್ದು ಪ್ರಮುಖ ಪಾತ್ರವೊಂದರ ಆಡಿಷನ್ ಮಾಡುತ್ತಿದ್ದರು. ರಾಧಿಕಾ ಕೂಡ ಒಂದು ಕೈ ನೋಡೋಣ ಎಂದುಕೊಂಡು ಹೊರಟರು. ಆದರೆ, ಆಡಿಷನ್ ಎಂದರೆ ಅವರಿಗೆ ಅಲರ್ಜಿ.

ಪುಣೆಯಿಂದ ಮುಂಬೈಗೆ ಹೋಗಿ, ಅವಕಾಶ ಹುಡುಕಲಾರಂಭಿಸಿದ ದಿನಗಳ ಕೆಟ್ಟ ಅನುಭವ ಆ ಅಲರ್ಜಿಗೆ ಕಾರಣ. ಏಳೇ ತಿಂಗಳಲ್ಲಿ ಮುಂಬೈನ ವೇಗ ಕಂಡು ದಿಗ್ಭ್ರಾಂತರಾಗಿ ತವರಿಗೆ ಮರಳಿದ್ದು. ಅದಕ್ಕೆ ಮುಂಚೆ ಲೆಕ್ಕವಿಲ್ಲದಷ್ಟು ಆಡಿಷನ್‌ಗಳನ್ನು ಕೊಟ್ಟಿದ್ದರು. ಬಹುತೇಕ ಸಂದರ್ಭಗಳಲ್ಲಿ ನಪಾಸಾಗಿದ್ದರು. ಯಾವುದೋ ಸಿನಿಮಾದ ಸಂಭಾಷಣೆ ಹೇಳುವುದು, ತಕ್ಷಣಕ್ಕೆ ಅಪರಿಚಿತರ ಎದುರು ನಾಟಕೀಯವಾಗಿ ಭಾವನೆ ವ್ಯಕ್ತಪಡಿಸುವುದು ಅವರಿಗೆ ಸುಲಭವಿರಲಿಲ್ಲ.

ಶ್ರೀರಾಮ್ ರಾಘವನ್ ಈ ನಟಿಯ ಹಿನ್ನೆಲೆ ಅರಿತಿದ್ದರೋ ಏನೋ, ಆಡಿಷನ್ ಮಾಡದೆಯೇ ಪಾತ್ರ ಕೊಟ್ಟರು. ಆರೇ ದಿನಗಳ ಚಿತ್ರೀಕರಣ. ಸಣ್ಣ ಪಾತ್ರ. ರಾಧಿಕಾ ಅದರಲ್ಲಿ ಹೈಲೈಟ್ ಆದರು. ವಿಮರ್ಶಕರು, ಪ್ರೇಕ್ಷಕರು ಮೆಚ್ಚಿಕೊಂಡರು. ಆಮೇಲೆ ಅವರು ಬಿಡುವಿಲ್ಲದಂತೆ ನಟಿಸತೊಡಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.