ADVERTISEMENT

ಈ ‘ರಾಜು’ಗೆ 100% ಬುದ್ಧಿ

ಸಂದರ್ಶನ

ಗಣೇಶ ವೈದ್ಯ
Published 15 ಮಾರ್ಚ್ 2017, 19:30 IST
Last Updated 15 ಮಾರ್ಚ್ 2017, 19:30 IST
ಈ ‘ರಾಜು’ಗೆ 100% ಬುದ್ಧಿ
ಈ ‘ರಾಜು’ಗೆ 100% ಬುದ್ಧಿ   

ಗುರುನಂದನ್ ಅಂದ್ರೆ ತುಂಬಾ ಜನರಿಗೆ ಗೊತ್ತಾಗ್ಲಿಕ್ಕಿಲ್ಲ. ‘ಫಸ್ಟ್ ರ್‍ಯಾಂಕ್ ರಾಜು’ ಅಂತಂದ್ರೆ ತಕ್ಷಣಕ್ಕೆ ಒಂದು ಮುಖ ನೆನಪಿಗೆ ಬರುತ್ತದೆ. ಅದು ಈ ಗುರುನಂದನ್.

ವೃತ್ತಿ ಜೀವನದ ಆರಂಭದಲ್ಲಿ ‘ಸೈಬರ್ ಯುಗದೊಳ್ ನವಯುಗ ಮಧುರ ಪ್ರೇಮಕಾವ್ಯಂ’ ಎಂಬ ಮಾರುದ್ದ ಶೀರ್ಷಿಕೆಯ ಚಿತ್ರದಲ್ಲಿ ಗುರುನಂದನ್ ನಟಿಸಿದ್ದರೂ ಅವರಿಗೆ ಒಂದು ಇಮೇಜ್ ತಂದುಕೊಟ್ಟಿದ್ದು ‘ಫಸ್ಟ್ ರ್‍ಯಾಂಕ್ ರಾಜು’. ಹಾಗೆ ‘ಫಸ್ಟ್ ರ್‍ಯಾಂಕ್ ರಾಜು ಗುರುನಂದನ್’ ಎಂದು ಗುರ್ತಿಸಿಕೊಳ್ಳುವುದಕ್ಕೆ ಸಂಭ್ರಮಿಸುವ ಅವರು ತಮ್ಮೊಳಗಿನ ರಾಜುವನ್ನು ಮಾತಿನ ಲಹರಿಗೆ ದೂಡಿದ್ದಾರೆ.

- ನೀವು ‘ಫಸ್ಟ್ ರ್‍ಯಾಂಕ್ ರಾಜು’ ಆದದ್ದು ಹೇಗೆ?
ನರೇಶ್ ಅವರು ಸಹಾಯಕ ನಿರ್ದೇಶಕರಾಗಿದ್ದರು. ಅವರ ಜೊತೆ ಸ್ನೇಹವಿತ್ತು. ಒಂದಿನ ಕಥೆ ಹೇಳಿದರು. ಅದು ಓಕೆಯೂ ಆಯ್ತು. ಆ ಪಾತ್ರ ನನಗೆ ಸಿಕ್ಕಿದ್ದೇ ಅದೃಷ್ಟ. ಅದೊಂಥರ ಜಾದು. ನಾವು ನಿರ್ವಹಿಸಿದ ಪಾತ್ರದಿಂದ ಗುರ್ತಿಸಿಕೊಳ್ಳುವುದು ಖುಷಿ ಕೊಡುತ್ತದೆ. ಅಷ್ಟೊಂದು ಜನ ನನ್ನನ್ನು ನೋಡಿದ್ದಾರಲ್ಲ ಎಂದು.

- ‘ರಾಜು’ ನಿಮ್ಮ ಮೇಲೆ ಆವಾಹನೆ ಆಗಿದ್ದು ಹೇಗೆ?
ಪ್ರೇರಣೆ ಯಾವುದೂ ಇಲ್ಲ. ಆದರೆ ಗೆಲ್ಲಲೇಬೇಕು ಎಂಬ ಹಸಿವಿತ್ತು. ಮಾಡು ಇಲ್ಲವೇ ಮಡಿ ಪ್ರಾಜೆಕ್ಟ್ ಆಗಿತ್ತು. ಹಿಂದಿನ ಸಿನಿಮಾದಲ್ಲಿ ಸೋತಿದ್ದೆ. ‘ಫಸ್ಟ್ ರ್‍ಯಾಂಕ್ ರಾಜು’ ಪ್ರೊಡಕ್ಷನ್‌ನಿಂದ ಹಿಡಿದು ಎಲ್ಲ ಹಂತದಲ್ಲೂ ಭಾಗಿಯಾಗಿದ್ದೆ. ಹಾಗಾಗಿ ಪಾತ್ರದ ಎಳೆ, ಪ್ರತಿ ದೃಶ್ಯವೂ ಗೊತ್ತಿತ್ತು. ನಿರ್ದೇಶಕರು ಎಲ್ಲವನ್ನೂ ಹೇಳಿದ್ದರು. ಸಿನಿಮಾಕ್ಕೂ ಮೊದಲು ಬಿಡುಗಡೆ ಮಾಡಿದ್ದ ಟ್ರೈಲರ್‌ಗೆ ಜನ ಮೆಚ್ಚುಗೆ ಸೂಚಿಸಿದ್ದರು.

ಅದರಿಂದ ನನಗೆ ಪಾತ್ರವನ್ನು ಹೇಗೆ ನಿರ್ವಹಿಸಬೇಕು ಎಂದು ಗೊತ್ತಾಯ್ತು. ಮತ್ತೆ ಕೆಲವು ರ್‍ಯಾಂಕ್ ವಿದ್ಯಾರ್ಥಿಗಳನ್ನು ಗಮನಿಸಿದ್ದೆ. ಅವರು ಪುಸ್ತಕದಲ್ಲಿದ್ದ ಏನನ್ನು ಕೇಳಿದರೂ ಉತ್ತರಿಸುತ್ತಾರೆ. ಆದರೆ ವ್ಯವಹಾರ ಗೊತ್ತಿರುವುದಿಲ್ಲ, ಏನಾದರೂ ಗಲಾಟೆ ಆದರೆ ಹೇಗೆ ಪರಿಹರಿಸಬೇಕು ಎಂದು ಗೊತ್ತಾಗುವುದಿಲ್ಲ. ಇವೆಲ್ಲವನ್ನೂ ನಾನು ಕಂಡಿದ್ದೆ.

ADVERTISEMENT

- ನೀವು ಜೀವನದಲ್ಲಿ ‘ರಾಜು’ನಾ?
ಅಲ್ಲವೇ ಅಲ್ಲ. ಅದನ್ನು ಎಲ್ಲ ಕಡೆ ಹೇಳುತ್ತೇನೆ ನಾನು. ‘ವಿದ್ಯೆ 100%, ಬುದ್ಧಿ 0%’ ಎಂಬುದು ಚಿತ್ರದ ಟ್ಯಾಗ್ ಲೈನ್ ಮಾತ್ರ. ನಾನು ಅದಕ್ಕೆ ತದ್ವಿರುದ್ಧ. ಎಣ್ಣೆ ಅಂಗಡಿ ಅಂದ್ರೆ ಬ್ರಾಂದಿ ಅಂಗಡಿಯೇ ಎಂದು ಗೊತ್ತು. ಕೆಲವು ಸಂದರ್ಭ, ನಾನೇ ಬೇಕು ಬೇಕೆಂದು ಏನೂ ಗೊತ್ತಿಲ್ಲದವನಂತೆ ‘ಓಹ್ ಹೌದಾ’, ‘ಹಾಗಾ’ ಅಂತೆಲ್ಲ ನಾಟಕ ಮಾಡುತ್ತಿರುತ್ತೇನೆ. ಆಗ ನನ್ನ ಜೊತೆ ಇರುವವರು, ‘ಏನೋ, ಫಸ್ಟ್ ರ್‍ಯಾಂಕ್ ರಾಜು ಥರ ಆಡ್ತೀಯಲ್ಲ’ ಎಂದು ರೇಗಿಸ್ತಾರೆ. ‘...ರಾಜು’ ಸಿನಿಮಾದಲ್ಲಿ ಬುದ್ದು ಮತ್ತು ಬುದ್ಧಿವಂತ ಎರಡೂ ಥರದ ಪಾತ್ರ ಮಾಡುವ ಅವಕಾಶ ಸಿಕ್ಕಿತು. ನನಗದು ಅದ್ಭುತ ಅನುಭವ.

- ಪ್ರೀತಿ ಗೀತಿ ಇತ್ಯಾದಿ?
ಒಂದೆರಡು ಹಳೇ ಪ್ರೇಮ ಪುರಾಣಗಳಿವೆ. ಇಬ್ಬರೂ ನನ್ನನ್ನು ಬಿಟ್ಟು ಹೋದವರೇ. ಮೊದಲ ಪ್ರಕರಣದಲ್ಲಿ, ಮದುವೆ ಆಗಿ ಹೆಂಡತಿಯನ್ನು ಸಾಕುವಂಥ ಶಕ್ತಿ ನನಗಿರಲಿಲ್ಲ. ಅವಳು ಬೇರೆಯವರನ್ನು ಮದುವೆ ಆದಳು. ಒಂದಷ್ಟು ದಿನ ಬೇಜಾರಾಯ್ತು. ಹಾಗಾಗಿದ್ದು ಒಳ್ಳೆಯದೇ ಅನ್ನಿಸಿದೆ. ಜೀವನವನ್ನ ಸವಾಲಾಗಿ ಸ್ವೀಕರಿಸಿದೆ. ನಟನೆಯಲ್ಲಿ ಬದುಕು ಕಂಡುಕೊಳ್ಳಬೇಕು ಅಂದುಕೊಂಡೆ. ಇನ್ನೊಂದೂ ಅಂಥದ್ದೇ ಕೇಸು.

‘ನೀವು ನಟರು ಒದ್ದಾಡ್ಕೊಂಡು ಸಿನಿಮಾ ಗಿನಿಮಾ ಮಾಡಿಕೊಂಡಿರ್ತೀರಿ. ನನ್ನನ್ನ ಹೇಗೆ ಸಾಕ್ತೀರಿ’ ಎಂದು ಕೇಳಿ ಹೋದಳು. ಅದರ ಬಗ್ಗೆ ಈಗೇನೂ ಬೇಸರವಿಲ್ಲ. ಐ ಆ್ಯಮ್ ಹ್ಯಾಪಿ. ಎಲ್ಲರಿಗೂ ಒಂದು ಜೀವನ ಇದೆಯಲ್ಲ. ತಾಳ್ಮೆ, ತಪಸ್ಸು ಇದ್ದರೆ ಯಾರಾದರೂ ಉಳಿದುಕೊಳ್ಳುತ್ತಾರೆ.

- ಕಾಲೇಜು ಜೀವನ ಹೇಗಿತ್ತು?
ತುಂಬಾ ಚಿಕ್ಕದಾಗಿತ್ತು. ಮೂಡಿಗೆರೆಯಲ್ಲಿ ಪಿಯುಸಿ ಮುಗಿಸಿ ನಟನೆಯ ಕನಸು ಹೊತ್ತು ಬೆಂಗಳೂರಿಗೆ ಬಂದೆ. ಅದಾದ ನಂತರ ಓದಬೇಕೆಂದುಕೊಂಡರೂ ಸಾಧ್ಯವಾಗಿಲ್ಲ. ಅಲ್ಲಿ ಇಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು, ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. ಆದರೆ ಆಗ ನಾನು ಓದಿಕೊಂಡು ಯಾವೆಲ್ಲ ಹುದ್ದೆ ಅಲಂಕರಿಸಲು ಸಾಧ್ಯವಿತ್ತೋ ಅದನ್ನೆಲ್ಲ ಈಗ ಪಾತ್ರದ ಮೂಲಕ ಅನುಭವಿಸುತ್ತೇನೆ!

- ನಿಮಗೆ ಈ ಡಬಲ್ ಮೀನಿಂಗ್ ಡೈಲಾಗುಗಳೆಲ್ಲ ಅರ್ಥ ಆಗ್ತಾವಾ?
ಸಿನಿಮಾದಲ್ಲಿ ನಿರ್ದೇಶಕರು ಹೇಳಿಸಿದ್ದಕ್ಕೆ ಹೇಳಿದ್ದೆ. ಅದು ಬಿಟ್ಟು ಸ್ನೇಹಿತರ ಜೊತೆ ಪಾರ್ಟಿ ಗೀರ್ಟಿ ಮಾಡುವಾಗ ಸಾಮಾನ್ಯವಾಗಿ ನಮ್ಮ ವಯಸ್ಸಿನವರು ಮಾತನಾಡುವಂಥ ಮಾತುಗಳು ನನ್ನ ಬಾಯಲ್ಲೂ ಬರುತ್ತವೆ.

-‘ಸ್ಮೈಲ್ ಪ್ಲೀಸ್’ನಲ್ಲಿ ಕಾವ್ಯಾ ಶೆಟ್ಟಿ ಜೊತೆ ಸುದೀರ್ಘ ಲಿಪ್‌ಲಾಕ್ ಮಾಡಿದ್ದೀರಿ. ನೀವು ಇಮ್ರಾನ್ ಹಶ್ಮಿ ಅಂತ ಫೀಲ್ ಆಗಿದ್ದಿದ್ಯಾ?
ಹಾಗೆಲ್ಲ ಏನೂ ಅನ್ನಿಸಿಲ್ಲ. ಅದು ನಿರ್ದೇಶಕರ ಕನಸು. ನಾನು ನನಸು ಮಾಡಿದೆ. ಚುಂಬನದ ದೃಶ್ಯ ಎನ್ನುವುದಕ್ಕಿಂತ ಚಿತ್ರೀಕರಣವನ್ನು ಎಂಜಾಯ್ ಮಾಡಿದ್ದೇನೆ.

- ‘ರಾಜು’ ಸರಣಿ ಮುಂದುವರಿಯುತ್ತಾ?
ರಾಜುಗೆ ಕೊನೆಯಿಲ್ಲ. ರಾಜು ಏನು ಬೇಕಾದರೂ ಮಾಡಬಹುದು. ‘ರಾಜು ಡಾಕ್ಟರ್’, ‘ರಾಜು ಎಲ್ಎಲ್‌ಬಿ’ ಹೀಗೆ ಏನಾದರೂ...
ಈಗ ‘ರಾಜು ಕನ್ನಡ ಮೀಡಿಯಮ್’ ಕೆಲಸ ನಡೀತಾ ಇದೆ. ಕನ್ನಡ ಮಾಧ್ಯಮದವನ್ನು ಒಂಥರಾ ನೋಡುವ ಸ್ಥಿತಿ ಇದೆ. ಆದರೆ ಅವರಿಗೂ ಜೀವನವಿದೆ, ಹಳ್ಳಿಯಿಂದ ಬಂದವರು ಎಷ್ಟೆಲ್ಲ ಸಾಧನೆ ಮಾಡಿದ್ದಾರೆ ಎಂದು ಹಾಸ್ಯದ ಮೂಲಕ ಹೇಳುವ ಚಿತ್ರ. ರಾಜು ಇಲ್ಲೂ ನಗಿಸುತ್ತಾನೆ, ಗಂಭೀರನಾಗುತ್ತಾನೆ.

ಕಂಗ್ಲಿಷ್ ಭಾಷೆ ಮಜಾ ಕೊಡುತ್ತದೆ. ನರೇಶ್ ಕುಮಾರ್ ಅವರೇ ಈ ಚಿತ್ರದ ನಿರ್ದೇಶಕರು. ನನ್ನ ಜೀವನದ ಮತ್ತೊಂದು ನಿರೀಕ್ಷೆಯ ಚಿತ್ರ ಇದು. ಇನ್ನೊಂದೆರಡು ಮೂರು ವರ್ಷಗಳ ನಂತರ ‘ಫಸ್ಟ್ ರ್‍ಯಾಂಕ್ ರಾಜು’ ಚಿತ್ರದ ಮುಂದುವರಿದ ಭಾಗ ‘ರಾಜು ಮಿನಿಸ್ಟರ್’ ಚಿತ್ರವನ್ನೂ ಮಾಡುತ್ತೇವೆ.

- ಬೇರೆ ಸಿನಿಮಾಗಳು?
‘ಮಿಸ್ಸಿಂಗ್ ಬಾಯ್’, ‘ಎಂ ಟೀವಿ ಸುಬ್ಬುಲಕ್ಷ್ಮಿ’ ಚಿತ್ರಗಳು ನಡೆಯುತ್ತಿವೆ. ‘ಮಿಸ್ಸಿಂಗ್ ಬಾಯ್’ ಹುಬ್ಬಳ್ಳಿಯಲ್ಲಿ ನಡೆದ ನೈಜ ಘಟನೆಯ ಚಿತ್ರ. ರೈಲ್ವೆ ನಿಲ್ದಾಣದಲ್ಲಿ ಕಳೆದುಹೋಗಿದ್ದ ಹುಡುಗ ಮೂವತ್ತು ವರ್ಷಗಳ ನಂತರ ಹೆತ್ತವರನ್ನು ಹುಡುಕಿಕೊಂಡು ಬರುವ ಕಥೆ. ‘ಎಂ ಟೀವಿ ಸುಬ್ಬುಲಕ್ಷ್ಮಿ’ ಕಮರ್ಷಿಯಲ್ ಸಿನಿಮಾ. ಪುಢಾರಿ ಹುಡುಗನ ಕಥೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.