ADVERTISEMENT

ಎಂದೆಂದಿಗೂ ಗಾಂಧಿ...

ಧನಂಜಯ್, ನಟ
Published 2 ಅಕ್ಟೋಬರ್ 2015, 11:50 IST
Last Updated 2 ಅಕ್ಟೋಬರ್ 2015, 11:50 IST

ಬರ್ಮಾದಲ್ಲಿ ಧಾರ್ಮಿಕ ವಿಷಯವಾಗಿ ನಿರಾಶ್ರಿತರ ಸಂಖ್ಯೆ ಹೆಚ್ಚಳ, ಉಗ್ರವಾದ ಇತ್ಯಾದಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮಸ್ಯೆಗಳನ್ನು ನೋಡಿದಾಗ ಪ್ರತಿ ದಿನವೂ ಗಾಂಧಿ ಕಾಡುತ್ತಾರೆ. ಅವರ ಚಿಂತನೆಗಳು ನಮಗೆ ಮತ್ತಷ್ಟು ಮತ್ತಷ್ಟು ಹತ್ತಿರವಾಗಬೇಕು ಎಂದುಕೊಳ್ಳುವೆ. ಶಾಂತಿ ಮತ್ತು ಅಹಿಂಸೆ ಇಂದಿನ ಜಗತ್ತಿಗೆ ಅತ್ಯಗತ್ಯವಾಗಿ ಬೇಕಾಗಿದೆ.

   ಫೇಸ್‌ಬುಕ್‌ನಲ್ಲೂ ದೇವರು, ಧರ್ಮ, ಜಾತಿಯ ಶ್ರೇಷ್ಠತೆ ವಿಷಯವಾಗಿ ಮಾತುಗಳು ವಿಪರೀತ ಬೆಳೆಯುತ್ತಿವೆ. ಒಬ್ಬರ ಮೇಲೊಬ್ಬರು ಮುಗಿಬೀಳುತ್ತಿದ್ದಾರೆ. ನಾನು ಚಿಕ್ಕವನಿದ್ದಾಗ ಎಲ್ಲ ಜಾತಿ–ಧರ್ಮದ ಸ್ನೇಹಿತರು ಇದ್ದರು. ಆಗ ದೊಡ್ಡವರಾಗುವ ವೇಳೆಗೆ ಈ ತಾರತಮ್ಯಗಳೆಲ್ಲ ನಿವಾರಣೆ ಆಗುತ್ತದೆ ಎಂದುಕೊಂಡಿದ್ದೆ. ಈ ವಿಷಯಗಳು ದಿನದಿಂದ ದಿನಕ್ಕೆ ಮತ್ತಷ್ಟು ಜಟಿಲವಾಗುತ್ತಲೇ ಇವೆ.

ಗಾಂಧಿ–ಬಸವಣ್ಣನಂಥವರು ಯಾವುದನ್ನೂ ಸಾಮಾನ್ಯವಾಗಿ ಒಪ್ಪಿಕೊಳ್ಳದ ಸಮಯಲ್ಲಿಯೇ ಕ್ರಾಂತಿಯ ಹೆಜ್ಜೆಗಳನ್ನು ಇಟ್ಟರು. ಆದರೆ ಇಂದು ಈ ವಿಷಯದಲ್ಲಿ ಮಾತನಾಡಿದರೆ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಅಂದು ಇಡೀ ದೇಶವೇ ಗಾಂಧಿ ಅವರ ಮಾತು ಕೇಳಿ ನಡೆಯುತ್ತಿತ್ತು. ಗಾಂಧಿ ವಿಚಾರಧಾರೆಗಳು ಭಾರತಕ್ಕೆ ಅಷ್ಟೇ ಅಲ್ಲ, ಮನುಷ್ಯ ಕುಲಕ್ಕೆ ಬೇಕಾದಂಥ ಅತ್ಯಮೂಲ್ಯ ತತ್ವಗಳು.

ಇಂದು ಅವರ ವಿಚಾರಗಳನ್ನು ಹೆಚ್ಚು ಹೆಚ್ಚು ಒಪ್ಪಿಕೊಂಡಷ್ಟೂ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ನಾನು ಗಾಂಧಿ ಚಿಂತನೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿರದಿದ್ದರೂ ಅವರ ವಿಚಾರಗಳನ್ನು ಓದಿಕೊಂಡಿದ್ದೇನೆ. ನನಗೆ ಅವರ ವಿಚಾರಗಳು ಪ್ರಮುಖ ಎನಿಸುತ್ತವೆ. ಗಾಂಧೀಜಿ ಸಮಾಜಕ್ಕೆ ಹೇಳಿದ ವಿಚಾರಗಳಿಗೆ ಬದ್ಧರಾಗಿಯೇ ಬದುಕಿದರು. ಅದು ಎಲ್ಲರಿಗೂ ಆದರ್ಶಮಯ. ಹಿಂದೆಯೂ, ಇಂದಿಗೂ, ಎಂದೆಂದಿಗೂ ಗಾಂಧಿ ನಮ್ಮೊಂದಿಗೆ ಇದ್ದೇ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.