ADVERTISEMENT

ಎರಡು ಪ್ರಶ್ನೆಗಳು, ಹಲವು ಉತ್ತರಗಳು

ಬೆಳದಿಂಗಳು

ಸೃಜನಾನಂದ
Published 27 ಏಪ್ರಿಲ್ 2016, 19:30 IST
Last Updated 27 ಏಪ್ರಿಲ್ 2016, 19:30 IST

ಜಗತ್ತಿನ ಎಲ್ಲಾ ಮನುಷ್ಯರ ಸಮಸ್ಯೆಗಳ ಮೂಲಭೂತವಾಗಿ ಎರಡು ಪ್ರಶ್ನೆಗಳಲ್ಲಿ ಅಡಗಿರುತ್ತವೆ. ಮೊದಲನೆಯದ್ದು: ನಾನು ಸರಿಯಾಗಿದ್ದೇನೆ. ಆದರೆ ಇದನ್ನು ನನಗೆ ಯಾರಿಗೂ ಅರ್ಥ ಮಾಡಿಸಲು ಆಗುತ್ತಿಲ್ಲವೇಕೆ? ಎರಡನೆಯದ್ದು: ಎಲ್ಲರೂ ಸರಿಯಾಗಿದ್ದಾರೆ. ಆದರೆ ಅವರ ಹಾಗೆ ಹೇಗಿರಬೇಕೆಂದು ನನಗೆ ಅರ್ಥವಾಗುತ್ತಿಲ್ಲವೇಕೆ?

ಈ ಎರಡೂ ಪ್ರಶ್ನೆಗಳನ್ನು ಇನ್ನೂ ಅನೇಕ ರೀತಿಯಲ್ಲಿ ಪುನರ್ ರಚಿಸಬಹುದು. ಸರಿಯಾಗಿದ್ದೇನೆ ಮತ್ತು ಸರಿಯಾಗಿಲ್ಲ ಎಂಬ ಪದಗಳನ್ನು ಒಳ್ಳೆಯವರು ಮತ್ತು ಕೆಟ್ಟವರು ಎಂದು ಬದಲಾಯಿಸಿಕೊಂಡರೂ ಈ ಪ್ರಶ್ನೆ ನಿರೀಕ್ಷಿಸುತ್ತಿರುವ ಉತ್ತರದ ಸ್ವರೂಪವೇನೂ ಬದಲಾಗುವುದಿಲ್ಲ. ಆದರೆ ಈ ಎರಡೂ ಪ್ರಶ್ನೆಗಳಿಗೆ ಒಂದು ಸ್ಪಷ್ಟ ಉತ್ತರ ದೊರೆತರೂ ನಮ್ಮ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂಬುದು ವಾಸ್ತವ.

ಸರಿ-ತಪ್ಪು ಅಥವಾ ಒಳಿತು-ಕೆಡುಕು ಎಂಬ ಪರಿಕಲ್ಪನೆಗಳು ನಿರಪೇಕ್ಷ ಎಂದು ಭಾವಿಸುವುದರಿಂದ ಈ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಇವೆಲ್ಲವೂ ಸಾಪೇಕ್ಷ ಎಂದುಕೊಂಡಾಕ್ಷಣ ಈ ಪ್ರಶ್ನೆಗಳಿಗೆ ಉತ್ತರ ದೊರೆಯುವುದಿಲ್ಲ ಎಂಬುದು ಈ ಸಮಸ್ಯೆಯ ಮೂರನೇ ಮುಖ. ಈ ಮಾತುಗಳು ಓದುತ್ತಿರುವ ನಿಮಗೆ ಒಗಟಿನಂತೆ ಕಾಣಿಸುತ್ತಿರಬಹುದು. ಬರೆಯುತ್ತಿರುವಾತನಿಗೂ ಇವು ಒಗಟಿಗಿಂತ ಭಿನ್ನವಲ್ಲ. ಈ ಒಗಟನ್ನು ನಾವು ಒಟ್ಟಾಗಿ ಸೇರಿ ಬಿಡಿಸಲು ಸಾಧ್ಯವಾಗಬಹುದು.

ನಾನು ಸರಿಯಾಗಿದ್ದೇನೆ ಎಂದುಕೊಳ್ಳುವವರು ಯಾಕೆ ತಮ್ಮನ್ನು ಸರಿ ಅಂದುಕೊಂಡಿರುತ್ತಾರೆ? ‘ಸರಿ’ ಎಂಬ ಪದದ ಅರ್ಥವ್ಯಾಪ್ತಿಯಲ್ಲಿ ತಮ್ಮನ್ನು ಇಟ್ಟುಕೊಳ್ಳುವುದಕ್ಕೆ ಅವರೊಂದು ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಿರುತ್ತಾರೆ. ಈ ಸರಿ ಅಥವಾ ಒಳಿತನ್ನು ನಿರ್ದಿಷ್ಟ ಕಾಲ ದೇಶಗಳ ಚೌಕಟ್ಟಿನಲ್ಲಿ ಗ್ರಹಿಸಿರುವುದು ಒಂದು ಕಾರಣ. ಅದಕ್ಕಿಂತ ಮುಖ್ಯವಾಗಿ ಅವರು ತಮ್ಮ ಅರಿವಿನ ಮಿತಿಯನ್ನು ಗುರುತಿಸಿಕೊಳ್ಳದೆಯೇ ಈ ನಿರ್ಧಾರಕ್ಕೆ ಬಂದಿರುತ್ತಾರೆ.

ಅರಿವಿನ ಮಿತಿಯನ್ನು ಗುರುತಿಸಿಕೊಳ್ಳುವುದಕ್ಕೆ ಮುಖ್ಯವಾಗಿ ಬೇಕಾಗುವುದು ವಿನಯ ಅಥವಾ ನನ್ನ ಅನಿಸಿಕೆಯೂ ತಪ್ಪಾಗಿರಬಹುದು ಎಂಬ ಸಂಶಯ. ಇದು ಅವರನ್ನು ಕಾಡುವುದೇ ಇಲ್ಲ. ಮತ್ತೊಂದು ವರ್ಗದ ಸಂಗತಿಯೂ ಅಷ್ಟೇ. ಸರಿಯಾಗಿಲ್ಲ ಎಂಬುದನ್ನೂ ಅವರು ತಮ್ಮ ಅರಿವಿನ ಮಿತಿಗಳನ್ನು ಗುರುತಿಸಿಕೊಳ್ಳದೆಯೇ ನಿರ್ಧರಿಸುತ್ತಿರುತ್ತಾರೆ.

ಅರಿವಿನ ಮಿತಿಯ ಕುರಿತು ಅರಿಯುವುದು ಹೇಗೆ? ಬುದ್ಧನಿಗೆ ಜ್ಞಾನೋದಯವಾಯಿತು, ಶಂಕರರಿಗೆ ಜ್ಞಾನ ಸಾಕ್ಷಾತ್ಕಾರವಾಯಿತು, ವಿಶ್ವಾಮಿತ್ರನ ಎದುರು ದೇವರು ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದ ಎಂದು ನಾವು ಗುರುತಿಸುವ ಎಲ್ಲವೂ ಈ ಅರಿವಿನ ಮಿತಿಯ ಅರಿವು ಮೂಡಿದ ಕ್ಷಣಗಳು.

ವಿಶ್ವಾಮಿತ್ರ ತನ್ನ ಕ್ಷಣಾರ್ಧದ ಆಸೆಯನ್ನು ಹತ್ತಿಕ್ಕಿಕೊಳ್ಳದೇ ಮುಂದುವರಿಯುವುದೂ ಈ ಮಿತಿಯನ್ನು ಮೀರುವ ಪ್ರಯತ್ನವೇ ಹೊರತು ಅಹಂಕಾರವಲ್ಲ. ಆ ಸಂದರ್ಭದಲ್ಲಿ ಅದು ಅಹಂಕಾರದಂತೆ  ಭಾಸವಾಗುತ್ತದೆಯಷ್ಟೇ.

ಒಂದು ವೇಳೆ ಆತ ಅಹಂಕಾರವನ್ನೇ ಪ್ರತಿಪಾದಿಸುವುದಾಗಿದ್ದರೆ ಆತ ಮಹರ್ಷಿಯಾಗುತ್ತಲೇ ಇರಲಿಲ್ಲ. ದೂರ್ವಾಸರ ಕೋಪ, ಭೃಗುವಿನ ಶಾಪ ಇವುಗಳೆಲ್ಲವನ್ನೂ ಈ ಬಗೆಯಲ್ಲಿಯೇ ಅರ್ಥ ಮಾಡಿಕೊಳ್ಳಬೇಕಾಗುತ್ತವೆ. ಇವುಗಳ ಮೇಲ್ಪದರದ ಅರ್ಥಗಳನ್ನು ಮೀರುವುದಕ್ಕೆ ನಾವೂ ಕಲಿಯಬೇಕಾಗುತ್ತದೆ.

ಮಹಾಋಷಿಗಳಾದರೂ ತಪಸ್ಸನ್ನು ಮುಂದುವರಿಸುವುದರ ಹಿಂದಿರುವ ಸತ್ಯ ಇದುವೇ. ಅರಿವಿನ ಎಲ್ಲೆಗಳನ್ನು ವಿಸ್ತರಿಸುವುದಕ್ಕೆ ನಮಗೆ ಬೇಕಿರುವುದು ಈಗಿರುವುದಕ್ಕಿಂತ ದೊಡ್ಡದಾದುದನ್ನು ಕಾಣುವ ಹಂಬಲ, ಉತ್ಸಾಹ ಮತ್ತು ಅದನ್ನು ಮಾಡುತ್ತೇನೆಂಬ ಆತ್ಮವಿಶ್ವಾಸ. ಇವೆಲ್ಲವೂ ವಿನಯದ ಮೂಸೆಯೊಳಗಿಂದ ಮೂಡಿದರಷ್ಟೇ ಅರಿವು ವಿಸ್ತಾರವಾಗುತ್ತದೆ. ಇಲ್ಲವಾದರೆ ಅಹಂಕಾರದ ಬಾವಿಯೊಳಗಿನ ಕಪ್ಪೆಗಳಾಗುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.