ADVERTISEMENT

ಒಂದೆರಡು ಒಳ್ಳೆ ಕೆಲಸ...

ಪೃಥ್ವಿರಾಜ್ ಎಂ ಎಚ್
Published 25 ಮೇ 2016, 19:32 IST
Last Updated 25 ಮೇ 2016, 19:32 IST
ನಿಶಿತಾ ರಜಪೂತ್
ನಿಶಿತಾ ರಜಪೂತ್   

ನಿಶಿತಾ ರಜಪೂತ್
ಗುಜರಾತ್ ಮೂಲದ ನಿಶಿತಾ ರಜಪೂತ್ ಅವರು ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಕಾಯಕದಲ್ಲಿ ನಿರತರಾಗಿದ್ದಾರೆ. ‘ನಿಶಿತಾ ಮಿಷನ್’ ಸಂಸ್ಥೆ ಮೂಲಕ ಶಿಕ್ಷಣ ಸೇವೆ ಮಾಡುತ್ತಿದ್ದಾರೆ. ಅತಿ ಕಿರಿಯ ವಯಸ್ಸಿಗೆ ಹಿರಿದಾದ ಸಾಧನೆ ಅವರದ್ದು.

24 ವರ್ಷದ ನಿಶಿತಾ ವಾಣಿಜ್ಯ ಪದವೀಧರೆ. ತಮ್ಮ ಮನೆಗೆ ಕೆಲಸ ಮಾಡಲು ಬರುತ್ತಿದ್ದ 10 ವರ್ಷದ ಶಿಕ್ಷಣ ವಂಚಿತ ಬಾಲಕಿಯ ಪ್ರಭಾವದಿಂದಾಗಿ ನಿಶಿತಾ ಮಿಷನ್ ಆರಂಭಿಸಿರುವುದಾಗಿ ಅವರು ಹೇಳುತ್ತಾರೆ.

ಕೌಟುಂಬಿಕ ದೌರ್ಜನ್ಯ, ಬಡತನದಿಂದಾಗಿ ಶಿಕ್ಷಣದಿಂದ ದೂರ ಉಳಿದು ಮನೆ ಕೆಲಸ, ಹೋಟೆಲ್‌ ಕೆಲಸ ಸೇರಿದಂತೆ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಬಾಲಕಿಯರನ್ನು ಗುರುತಿಸಿ ಅವರಿಗೆ  ವಸತಿಯುತ ಶಿಕ್ಷಣ ಕೊಡುವ ಕೆಲಸವನ್ನು ನಿಶಿತಾ ಮಿಷನ್ ಮಾಡುತ್ತಿದೆ.

ಇದಕ್ಕಾಗಿ ಸರ್ಕಾರದಿಂದ ನಯಾ ಪೈಸೆ ನೆರವನ್ನೂ ಪಡೆಯದಿರುವುದು ವಿಶೇಷ. ಪಾರದರ್ಶಕವಾಗಿ ದೇಣಿಗೆ ಸಂಗ್ರಹಿಸುವ ಮೂಲಕ ಹೆಣ್ಣು ಮಕ್ಕಳಿಗೆ ಆಸರೆಯಾಗಿದ್ದಾರೆ.

2011ರಿಂದ ಇಲ್ಲಿಯವರೆಗೂ ನೂರಾರು ವಿದ್ಯಾರ್ಥಿನಿಯರು ಆರ್ಥಿಕ ನೆರವು ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಿಶಿತಾ ಪ್ರತಿ ವರ್ಷವು 30 ರಿಂದ 40 ಲಕ್ಷ ರೂಪಾಯಿ ದೇಣಿಗೆ ಸಂಗ್ರಹ ಮಾಡುತ್ತಾರೆ. ಪ್ರಸಕ್ತ ವರ್ಷದಲ್ಲಿ 50 ಲಕ್ಷ ರೂಪಾಯಿ ಸಂಗ್ರಹ ಮಾಡಿರುವುದು ವಿಶೇಷ. 

ಶಿಕ್ಷಣ ವಂಚಿತ ಹೆಣ್ಣು ಮಕ್ಕಳು ಹಾಗೂ ಅವರ ಪೋಷಕರೊಂದಿಗೆ ಆಪ್ತಸಮಾಲೋಚನೆ ನಡೆಸಿದ ಬಳಿಕವೇ ಅವರ ಸಮಸ್ಯೆಗಳನ್ನು ಅರಿತು ಪುನರ್ವಸತಿ ಕಲ್ಪಿಸಲಾಗುವುದು.

ಆ ಮಕ್ಕಳು ಓದ ಬಯಸುವ ಶಾಲೆಗೆ ದಾಖಲಿಸಿ ಪಿಯುಸಿವರೆಗೂ ಶಿಕ್ಷಣ ಕೊಡಿಸಲಾಗುವುದು. ತಮ್ಮ ಮಿಷನ್ ಮೂಲಕ ಸಾಕಷ್ಟು ಹಣ ಸಂಗ್ರಹಿಸಿ ಇನ್ನೂ ಹೆಚ್ಚಿನ ಹೆಣ್ಣು ಮಕ್ಕಳಿಗೆ ನೆರವಾಗಬೇಕು ಎಂಬುದು ನಿಶಿತಾ ಅವರ ಹಂಬಲ.
www.nishitamission.org

***
ರಾಜೇಶ್ ಕುಮಾರ್

ಅದು ಯಮುನಾ ನದಿಯ ತೀರ. ದೆಹಲಿ ಮೆಟ್ರೊ ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವಂತೆ ನಾಲ್ಕು ಮೇಲ್ಸೇತುವೆಗಳು ಕೂಡಿಕೊಂಡಿರುವ ಸ್ಥಳ ಅದು. ಆ ಸೇತುವೆ ಕೆಳಗೆ ಚಿಕ್ಕ ಮೈದಾನದಷ್ಟಿರುವ ಖಾಲಿ ಜಾಗ. ಸಂಜೆ ಆಗುತ್ತಲೇ ಆ ಜಾಗದಲ್ಲಿ ಕೊಳೆಗೇರಿ ಮಕ್ಕಳು ಬಂದು ಸೇರುತ್ತಾರೆ. ಕೆಲಸ ಮುಗಿಸಿಕೊಂಡು ಬರುವ ಶಿಕ್ಷಕರೊಬ್ಬರು ಪಾಠ ಮಾಡಲು ಮುಂದಾಗುತ್ತಾರೆ. ಆಗ ಎಲ್ಲ ಮಕ್ಕಳು ನಿಶ್ಶಬ್ದವಾಗಿ ಪಾಠವನ್ನು ಆಲಿಸುತ್ತಾರೆ.

ಕಳೆದ ಆರು ವರ್ಷಗಳಿಂದ ಇಲ್ಲಿನ ಸ್ಥಳೀಯ ನಿವಾಸಿ ರಾಜೇಶ್ ಕುಮಾರ್ ಕೊಳೆಗೇರಿ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನು ಹೊಂದಿರುವ ರಾಜೇಶ್, ಇಲ್ಲಿನ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ದೂರದೃಷ್ಟಿಯನ್ನು ಹೊಂದಿದ್ದಾರೆ.

ವಿಜ್ಞಾನ ವಿಷಯದಲ್ಲಿ ಪಿಯುಸಿ ಓದಿರುವ ರಾಜೇಶ್‌ಗೆ ಎಂಜಿನಿಯರ್ ಆಗುವ ಆಸೆ ಇತ್ತು. ಆದರೆ ಆರ್ಥಿಕ ಮುಗ್ಗಟ್ಟಿನಿಂದ ಮುಂದಕ್ಕೆ ಓದಲು ಸಾಧ್ಯವಾಗಲಿಲ್ಲ. ಓದನ್ನು ಮೊಟಕುಗೊಳಿಸಿ ಶಾಪ್‌ಕೀಪರ್ ಆಗಿ ಕೆಲಸಕ್ಕೆ ಸೇರಿಕೊಂಡರು.

ಈ ಮೇಲ್ಸೇತುವೆ ಸಮೀಪ ನಿತ್ಯವೂ ಹಾದು ಹೋಗುವಾಗ, ಮಕ್ಕಳು ಆಟವಾಡುತ್ತಿರುವುದು, ಮತ್ತೆ ಕೆಲವರು ಮಲಗಿಕೊಂಡಿರುವ ದೃಶ್ಯವನ್ನು ಕಾಣುತ್ತಿದ್ದರಂತೆ! ಆ ಮಕ್ಕಳನ್ನು ನೋಡಿದಾಗ ಮುಂದಿನ ದಿನಗಳಲ್ಲಿ ಇವರು ಕೂಡ ನನ್ನಂತೆ ಹಣಕಾಸಿನ ತೊಂದರೆಯಿಂದ ವಿದ್ಯಾಭ್ಯಾಸದಿಂದ ವಂಚಿತರಾಗಬಹುದೆನೋ ಎಂಬ ಆಲೋಚನೆಗಳು ಬರುತ್ತಿದ್ದವಂತೆ!

ಒಂದು ದಿನ ಆ ಸ್ಥಳವನ್ನು ಸ್ವಚ್ಛಗೊಳಿಸಿ ಮಕ್ಕಳಿಗೆ ಇಂಗ್ಲಿಷ್ ಮತ್ತು ಗಣಿತ ಪಾಠ ಮಾಡಲು ಆರಂಭಿಸಿದರು. ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಾಯಿತು ಎಂದು ರಾಜೇಶ್ ಹೇಳುತ್ತಾರೆ.

‘ಬೆಳಿಗ್ಗೆಯಿಂದ ಸಂಜೆ 5 ಗಂಟೆವರೆಗೂ ಶಾಪ್‌ಕೀಪರ್ ಕೆಲಸ ಮಾಡಿ, 6 ರಿಂದ ರಾತ್ರಿ 8 ಗಂಟೆಯವರೆಗೂ ಪ್ರತಿ ದಿನ ಪಾಠ ಮಾಡುತ್ತೇನೆ. ಶನಿವಾರ ಮಕ್ಕಳಿಗೆ ಆಟ ಮತ್ತು ಯೋಗ ಹೇಳಿಕೊಡುತ್ತೇನೆ’ ಎನ್ನುತ್ತಾರೆ ರಾಜೇಶ್. ಒಟ್ಟಿನಲ್ಲಿ ಅವರ ಕೆಲಸ ಶ್ಲಾಘನೀಯ ಮತ್ತು ಮಾದರಿಯಾದುದು.

***
ಅಂಜುಮ್–ಸಾವಿತ್ರಿ

ರಸ್ತೆಗಳಲ್ಲಿ ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದರೂ ಜನರು ಅವರ ನೆರವಿಗೆ ಬರುವುದಿಲ್ಲ! ಕೆಲವರು ನೋಡಿಯೂ ನೋಡದಂತೆ, ಮತ್ತೆ ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಫೋಟೊ ಅಥವಾ ವಿಡಿಯೊ ಚಿತ್ರಣ ಮಾಡುತ್ತಿರುತ್ತಾರೆ. ಆಂಬುಲೆನ್ಸ್ ಬರುವುದರೊಳಗೆ ಕೆಲವರ ಪ್ರಾಣಪಕ್ಷಿಯೇ ಹಾರಿ ಹೋಗಿರುತ್ತದೆ! ಇಂತಹ ಹೃದಾಯವಿದ್ರಾವಕ ಸಂದರ್ಭಗಳಲ್ಲಿ ನೆರವಿಗೆ ಧಾವಿಸಿ ಬರುವ ಇಬ್ಬರು ಯುವ ವೈದ್ಯರ ಕಥೆ ಇದು.

ಸಿಖಂದರಾಬಾದಿನ ಅಪೋಲೊ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಾ. ಫಯಾಜ್ ಅಂಜುಮ್ ಮತ್ತು ಡಾ. ಸಾವಿತ್ರಿ ದೇವಿಯರ ಕಥೆ ಇದು. ಅಪಘಾತದ ಸುದ್ದಿ ತಿಳಿದ ಕೂಡಲೇ ಅಲ್ಲಿಗೆ ಆಂಬುಲೆನ್ಸ್‌ನಲ್ಲಿ ತೆರಳಿ ಸ್ಥಳದಲ್ಲೇ ತ್ವರಿತವಾಗಿ ಚಿಕಿತ್ಸೆ ನೀಡಿ ಸಂಭವಿಸಬಹುದಾದ ಪ್ರಾಣಹಾನಿಯನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಈ ಇಬ್ಬರು.

ಇವರಿಬ್ಬರು ಸೇರಿ ಅಪಘಾತಕ್ಕೆ ಒಳಗಾದ ನೂರಾರು ಜನರ ಜೀವ ಉಳಿಸಿರುವುದು ವಿಶೇಷ. ‘ನಮ್ಮ ವೃತ್ತಿಯನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಇದರಲ್ಲಿ ಯಾವ ವಿಶೇಷತೆಯೂ ಇಲ್ಲ’ ಎನ್ನುತ್ತಾರೆ ಈ ಯುವ ವೈದ್ಯರು.

ಒಮ್ಮೆ ಬಸ್ಸಿನಲ್ಲಿ ತೆರಳುವಾಗ ರಸ್ತೆಯಲ್ಲಿ ಪಾದಚಾರಿ ವ್ಯಕ್ತಿಯೊಬ್ಬರಿಗೆ ಬಸ್ಸೊಂದು ಗುದ್ದಿಕೊಂಡು ಹೋಗಿತ್ತು. ಆ ವ್ಯಕ್ತಿಯ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಆತನ ನೆರವಿಗೆ ಧಾವಿಸದೆ ಜನರು ಮೊಬೈಲ್‌ಗಳಲ್ಲಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ಇದನ್ನು ಗಮನಿಸಿದ ನಾವು ಗುಂಪನ್ನು ಚದುರಿಸಿ ಆ ವ್ಯಕ್ತಿಯ ಹತ್ತಿರ ಬಂದೆವು. ನಮ್ಮ ಬಳಿ ಯಾವ ವೈದ್ಯಕೀಯ ಸಲಕರಣೆಗಳೂ ಇರಲಿಲ್ಲ.

ನಾಲಿಗೆ ಕೆಳಗೆ ಪೆನ್ನು ಇಟ್ಟು ಉಸಿರಾಟ ಬಂದ್ ಮಾಡಿದೆವು. ಪತ್ರಿಕೆಯನ್ನು ಸುರಳಿ ಮಾಡಿಕೊಂಡು ಲಂಗ್ಸ್‌ಗೆ ಜೋಡಿಸಿ ಉಸಿರು ತುಂಬುತ್ತ ಎದೆಯನ್ನು ಕುಲುಕುವ (ಸಿಪಿಎರ್) ಮೂಲಕ ಆ ವ್ಯಕ್ತಿಗೆ ಮರು ಜೀವ ನೀಡಿದೆವು ಎನ್ನುತ್ತಾರೆ ಸಾವಿತ್ರಿ.

ನಂತರ ಆ ವ್ಯಕ್ತಿಯನ್ನು ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಲಾಯಿತು ಎನ್ನುತ್ತಾರೆ ಅವರು. ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಈ ಯುವ ವೈದ್ಯರ ಸೇವೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.
Savithridevi/facebook/appolo

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.