ADVERTISEMENT

ಗ್ಲಾಮರ್ ಕಷ್ಟ, ನೃತ್ಯ ಬಲು ಇಷ್ಟ

ಸುಮಲತಾ ಎನ್, ಪದ್ಮನಾಭ ಭಟ್ಟ
Published 25 ಮಾರ್ಚ್ 2015, 19:30 IST
Last Updated 25 ಮಾರ್ಚ್ 2015, 19:30 IST
ಗ್ಲಾಮರ್ ಕಷ್ಟ, ನೃತ್ಯ ಬಲು ಇಷ್ಟ
ಗ್ಲಾಮರ್ ಕಷ್ಟ, ನೃತ್ಯ ಬಲು ಇಷ್ಟ   

‘ರಾಟೆ’ ಸಿನಿಮಾ ಬಿಡುಗಡೆ ಖುಷಿಯಲ್ಲಿರುವ ಶ್ರುತಿ ಹರಿಹರನ್ ಸದ್ಯಕ್ಕೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ಸಲೀಸಾಗಿ ಮಾತಾಡುವಷ್ಟು ಕನ್ನಡ ಕಲಿತುಕೊಂಡಿದ್ದಾರೆ. ಮುಂದೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಜನರ ಮನಸ್ಸನ್ನು ಮೆಚ್ಚಿಸುವ ಬಯಕೆಯೂ ಅವರಿಗಿದೆ. ಅವರ ಚಟಪಟ ಮಾತಿನ ವರಸೆ ಇಲ್ಲಿದೆ...‌

‘ರಾಟೆ’ ಹೇಗೆ ತಿರುಗುತ್ತಿದೆ? ರಾಟೆ ಚಿತ್ರೀಕರಣದಲ್ಲಿ ತುಂಬಾ ತಲೆ ತಿರುಗಿತ್ತಂತೆ?
ರಾಟೆ  ತುಂಬಾ ಚೆನ್ನಾಗೇ ತಿರುಗುತ್ತಿದೆ. ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವುದು ಖುಷಿ ತಂದಿದೆ. ಸಿನಿಮಾ ಮಾತ್ರವಲ್ಲ, ಚಿತ್ರೀಕರಣದ ಸಮಯವೂ ತುಂಬಾ ಚೆನ್ನಾಗಿತ್ತು.

ರಾಟೆ ಸಿನಿಮಾ ಚಿತ್ರೀಕರಣವನ್ನು ಕೆ.ಆರ್. ಮಾರುಕಟ್ಟೆಯಲ್ಲಿ  ನಡೆಸಲಾಗುತ್ತಿತ್ತು. ಹುಡುಗ ಹುಡುಗಿ ಅಲ್ಲಿ ಅಲೆಯುವುದೇ ಸೀನ್. ಮೇಕಪ್ ಇರಲಿಲ್ಲ, ಕ್ಯಾಮೆರಾವೂ ಕಾಣುತ್ತಿರಲಿಲ್ಲ. ಪೊಲೀಸ್‌ ಒಬ್ಬರು ಬಂದು, ಶೂಟಿಂಗ್ ಮಾಡುತ್ತಿದ್ದಾರಲ್ಲ, ಹೀರೊ, ಹೀರೊಯಿನ್ ಎಲ್ಲಿ ಎಂದು ಕೇಳಿದರು. ನಾವೇ ಎಂದೆವು.  ಇಬ್ಬರನ್ನೂ ಮೇಲಿಂದ ಕೆಳಗೆ ಒಮ್ಮೆ ನೋಡಿ, ನಕ್ಕು ಹೊರಟು ಹೋದರು. ನಾವಂತೂ ಅವರು ಕೇಳಿದ ರೀತಿ ನೆನೆಸಿಕೊಂಡು  ತುಂಬಾ ಹೊತ್ತು ನಗುತ್ತಲೇ ಇದ್ದೆವು.

*ಶೂಟಿಂಗ್ ಸಮಯ ಮಳೆಯಲ್ಲಿ ನೆನೆದು ಆಸ್ಪತ್ರೆ ಸೇರಿದ್ರಂತೆ?
ಹೌದು. ಅದೊಂದು ದೊಡ್ಡ ಕಥೆ.  ನನಗೆ ನೀರೆಂದರೆ ತುಂಬಾ ಭಯ. ಇದ್ದಕ್ಕಿದ್ದಂತೆ ತುಂಬಾ ಜ್ವರ ಬಂದು ಆಸ್ಪತ್ರೆ ಸೇರುವಂತಾಯಿತು. ಪ್ಯಾಕ್ ಅಪ್ ಮಾಡಿದ್ದೂ ಆಯಿತು. ಮತ್ತೆ ಹುಷಾರಾಗಿ  ಸಿನಿಮಾ ಮುಗಿಸಿದೆವು.

*ಕನ್ನಡ ಇಷ್ಟು ಬೇಗ ಕಲಿತಿದ್ದು ಹೇಗೆ?

ಬಸ್ ಸೀಟ್‌ಗೆ ಪರದಾಟ
ನಾನು ತುಂಬಾ ತರ್ಲೆ ಹುಡುಗಿ. ಕಾಲೇಜಿಗೆ ಹೋಗುವಾಗ ಬಸ್‌ ತುಂಬಾ ರಷ್ ಇರುತ್ತಿತ್ತು. ಎಷ್ಟೋ ಬಾರಿ ಫುಟ್‌ಬೋರ್ಡ್‌ ಮೇಲೆ ನಿಂತು ಬಂದದ್ದೂ ಇದೆ. ಆಗ ನಾನೊಂದು ಪ್ಲಾನ್ ಮಾಡುತ್ತಿದ್ದೆ. ಕೂತಿದ್ದವರನ್ನು, ನಿಮ್ಮ ಫ್ರೆಂಡ್  ಕರೀತಿದ್ದಾರೆ ಹಿಂದೆ ಎಂದು ಅವರನ್ನು ಹಿಂದೆ ಕಳಿಸಿ, ನಾನು ಆರಾಮಾಗಿ ಕೂರುತ್ತಿದ್ದೆ. ಅದೃಷ್ಟವಶಾತ್ ನನ್ನನ್ನು ಯಾರೂ ಬೈಯುತ್ತಿರಲಿಲ್ಲ. ಆಮೇಲಾಮೇಲೆ ನನ್ನನ್ನು ನಂಬೋದೇ ಬಿಟ್ಟುಬಿಟ್ರು. ಏನು ಹೇಳಿದರೂ ಎದ್ದು ಹೋಗುತ್ತಿರಲಿಲ್ಲ.

‘ಲೂಸಿಯಾ’ ಸಿನಿಮಾ ಮಾಡುವಾಗ  ನನಗೆ ಕನ್ನಡ ಬರುತ್ತಿರಲಿಲ್ಲ. ಆದರೆ ಈ ಚಿತ್ರದಲ್ಲಿ ಅರ್ಜುನ್, ಧನಂಜಯ್ ಎಲ್ಲರೂ ಕನ್ನಡ ಕಲಿಯಲೇಬೇಕು ಎಂದರು. ತಪ್ಪಾದರೂ ಸರಿ, ತಿದ್ದುತ್ತೇವೆ ಕನ್ನಡ ಮಾತಾಡು ಅಂತ ಎಲ್ಲರೂ ಬೆಂಬಲ ನೀಡಿದರು. ನಾನೂ ಪ್ರಯತ್ನ ಪಟ್ಟು ಕಲಿತೆ. ಈಗ ಧೈರ್ಯವಾಗಿ ಮಾತನಾಡುತ್ತೇನೆ.

ADVERTISEMENT

*ಪ್ರೀತಿ ಪ್ರೇಮದಿಂದ ದೂರವೋ ಹತ್ತಿರವೋ?
ತುಂಬಾ ಜನ ಪ್ರಪೋಸ್ ಮಾಡಿದ್ರು. ಆದರೆ ವುಮೆನ್ ಸೈಕಾಲಜಿ ಒಂದಿದೆ. ಹುಡುಗ ಹಿಂದೆ ಬಂದರೆ ಹುಡುಗಿ ದೂರ ಹೋಗೋದು. ನಾನೂ ಹಾಗೇನೆ. ರಿಜೆಕ್ಟ್ ಮಾಡಿದ್ದೇ ಹೆಚ್ಚು. ಅದೂ ಅಲ್ಲದೆ ನಾನು ಸ್ವಲ್ಪ ರೌಡಿ ಥರ ಇದ್ದಿದ್ದರಿಂದ ಲವ್ ಲೆಟರ್ ಕೊಡೋ ಧೈರ್ಯ ಯಾರೂ ಮಾಡಲಿಲ್ಲ.

*ಚಿತ್ರರಂಗಕ್ಕೆ ಬಂದದ್ದು ಅಚಾನಕ್ಕಾಗೋ ಅಥವಾ ಆಸೆಯಿಂದಲೋ?
ಎರಡೂ. ನಾನು ನೃತ್ಯ ತಂಡವೊಂದರಲ್ಲಿದ್ದೆ. ಒಮ್ಮೆ ಅವಾರ್ಡ್ ಕಾರ್ಯಕ್ರಮವೊಂದು ನಡೆದಿತ್ತು. ಪುನೀತ್, ಶಿವರಾಜ್‌ ಕುಮಾರ್, ಪ್ರಿಯಾಮಣಿ ಎಲ್ಲ ಬಂದಿದ್ದರು. ಅವರನ್ನೆಲ್ಲಾ ನೋಡಿ, ನಾನೂ ನಟಿಯಾದರೆ ಎಷ್ಟು ಚೆಂದ ಅಂತ ಅಂದುಕೊಂಡಿದ್ದೆ.  ಸಿನಿಮಾ ಬಗ್ಗೆ ಪ್ಯಾಷನ್ ಹುಟ್ಟಿಕೊಂಡಿದ್ದೂ ಆಗಲೇ. ಮೊದಲ ಬಾರಿ ಮಲಯಾಳಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.  ಮತ್ತೆ ಲೂಸಿಯಾ ಸಿನಿಮಾ ಆಡಿಷನ್‌ನಲ್ಲಿ ಗೆದ್ದೆ. ನಂತರ ಅವಕಾಶಗಳು ಸಿಕ್ಕಿದವು.

*ಶ್ರುತಿ ಅವರಿಗೆ ಕುಣಿಯೋದಂದ್ರೆ ತುಂಬಾ ಇಷ್ಟ ಅಂತೆ.
ಹೌದು ನನಗೆ ಡಾನ್ಸ್ ಅಂದರೆ ತುಂಬಾ ಇಷ್ಟ. ಭರತನಾಟ್ಯ ಕಲಿತಿದ್ದೇನೆ. ಬಾಲಿವುಡ್ ಫ್ರೀಡಾನ್ಸ್, ಸಮಕಾಲೀನ ನೃತ್ಯವನ್ನೂ ಕಲಿತೆ. ನನ್ನ ಆರೋಗ್ಯ, ಫಿಟ್‌ನೆಸ್‌ ಗುಟ್ಟೂ ಇದೆ. ಈಗ ಕಳರಿಪಯಟ್ಟು ಕಲಿಯುತ್ತಿದ್ದೇನೆ.

*ಕಳರಿಪಯಟ್ಟು ಕಲಿತು ಸಮರ ಮಾಡುತ್ತೀರ?
ಇಲ್ಲಪ್ಪ, ಇಷ್ಟ ಅಂತ ಕಲಿಯುತ್ತಿದ್ದೇನೆ ಅಷ್ಟೆ.

*ಯಾವ ರೀತಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯಿದೆ?
ಪಾತ್ರಕ್ಕೆ ಮೌಲ್ಯ ಇದೆ ಅನ್ನಿಸಿದರೆ ಸಾಕು. ಸುಮ್ಮನೆ ನಕ್ಕು, ಕುಣಿದು ಹೋಗುವ ಪಾತ್ರಗಳಿಗೆ ಬಣ್ಣ ಹಚ್ಚುವುದು ಕಷ್ಟ. ಅಮೃತವರ್ಷಿಣಿ, ಪಲ್ಲವಿ ಅನುಪಲ್ಲವಿ, ಸಿದ್ಲಿಂಗು ಈ ಚಿತ್ರದಲ್ಲಿನ ಪಾತ್ರಗಳಂತೆ ಗಟ್ಟಿತನ ಇರಬೇಕು.

*ಚಿತ್ರರಂಗಕ್ಕೆ ಬರದಿದ್ದರೆ ಏನಾಗುತ್ತಿದ್ರಿ?
ನೃತ್ಯಪಟು, ಇಲ್ಲ ಅಂದರೆ ಇವೆಂಟ್ ಮ್ಯಾನೇಜರ್ ಆಗುತ್ತಿದ್ದೆ.

*ಶ್ರುತಿ ಅವರು ಗ್ಲಾಮರಸ್ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳಲ್ಲ ಯಾಕೆ?
ನನಗೆ ಇದುವರೆಗೂ ಸಿಕ್ಕಿರುವ ಪಾತ್ರಗಳು ಅಂಥವು. ಜೊತೆಗೆ ನನಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳೋಕೂ ಭಯ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳೋದು ಡಿಸ್‌ಕಂಫರ್ಟ್ ಅನ್ನಿಸುತ್ತೆ. ಮಧ್ಯಮ ವರ್ಗದ ಹುಡುಗಿ ಪಾತ್ರ ಅಂದರೆ ತುಂಬಾ ಸಲೀಸಾಗಿರಬಹುದು.

*ಲೂಸಿಯಾದಿಂದ ಕಲಿತಿದ್ದು, ಸಿಕ್ಕಿದ್ದು...
ತುಂಬಾ ಒಳ್ಳೊಳ್ಳೆ ಅನುಭವಗಳನ್ನು ಪಡೆದುಕೊಂಡೆ. ನನಗೆ ಒಂದಷ್ಟು ಒಳ್ಳೆ ಸ್ನೇಹಿತರು ಸಿಕ್ಕಿದರು. ಕೆಲಸ ನನ್ನನ್ನು ಹುಡುಕಿಕೊಂಡು ಬಂತು.

*ಲೂಸಿಯಾ ಗುಳಿಗೆ ಸಿಕ್ಕರೆ ಏನು ಮಾಡ್ತೀರ?
ಈ ಮಾತ್ರೆ ಸಿಕ್ಕರೆ ಮೊದಲು ನಿರ್ಮಾಪಕರಿಗೆ ಕೊಡ್ತೀನಿ. ಯಾಕೆಂದರೆ ಪಾಪ, ಸಿನಿಮಾ ಶುರುವಾದಾಗಿನಿಂದ ತೆರೆ ಕಂಡು ಸ್ವಲ್ಪ ದಿನ ಆಗುವವರೆಗೂ ಅವರೆಲ್ಲ ಆತಂಕದಲ್ಲಿ ನಿದ್ದೆಯನ್ನೇ ಮಾಡಲ್ಲ. ಟೆನ್ಷನ್‌ನಲ್ಲೇ ಇರ್ತಾರೆ. ಹಾಗಾಗಿ ಅವರಿಗೆ ನುಂಗಿಸಿಬಿಡ್ತೀನಿ.

*‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದಲ್ಲಿ ತುಂಬಾ ಡಿಫರೆಂಟ್ ಪಾತ್ರ ಅಂತೆ...
ಹ್ಞೂ. ಒಂಥರಾ ಹಾಗೇ. ಹಿರಿಯ ನಟ ಅನಂತನಾಗ್ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ. ಹೆಚ್ಚು ಹೇಳೋಲ್ಲ, ಸಿನಿಮಾ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.