ADVERTISEMENT

ನಮ್ಮ ಅಡುಗೆಮನೆಯ ಯಾವ ಡಬ್ಬಿಯಲ್ಲಿ ಏನಿದೆ?

ಬೆಳದಿಂಗಳು

ಪಶ್ಚಿಮದ ಅರಿವು /ಹಾರಿತಾನಂದ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST

ಶಿಕ್ಷಣಸಂಸ್ಥೆಗಳಷ್ಟೇ ಅಲ್ಲ, ಕಲಿಕೆಯ ವಿಷಯಗಳ ಸಂಖ್ಯೆಯೂ ಈಗ ಹೆಚ್ಚಿದೆ; ಇದಕ್ಕೆ ಹೊಸ ಹೊಸ ವಿಷಯಗಳು ಸೇರುತ್ತಲೇ ಇರುತ್ತವೆ ಕೂಡ. ಗ್ರಂಥಾಲಯಕ್ಕೆ ಒಮ್ಮೆ ಹೋಗಿ ಬಂದು ಅಲ್ಲಿಯ ಗ್ರಂಥರಾಶಿಯನ್ನು ನೋಡಿದರೆ ‘ಎಷ್ಟೊಂದು ವಿಷಯಗಳಿವೆ’ ಎನ್ನುವುದು ಮನದಟ್ಟಾಗುತ್ತದೆ.

‘ಗೂಗಲ್‌’ನಲ್ಲಿ ಯಾವುದಾದರೊಂದು ವಿಷಯವನ್ನು ಹುಡುಕತೊಡಗಿದಾಗ ಸಾವಿರಾರು ಸಂಖ್ಯೆಯಲ್ಲಿ ವಿವರಗಳು ಕ್ಷಣಮಾತ್ರದಲ್ಲಿ ಕಾಣಿಸಿಕೊಳ್ಳುತ್ತವೆ. ಇಷ್ಟು ಅಗಾಧವಾದ ಜ್ಞಾನಸಂಪತ್ತು ಇರುವಾಗ ನಾವು ಏನನ್ನು ಕಲಿಯಬೇಕು? ಎಷ್ಟನ್ನು ಕಲಿಯಬೇಕು? ಕಲಿಯುವುದನ್ನು ಹೇಗೆ ಕಲಿಯಬೇಕು? ಏಕೆ ಕಲಿಯಬೇಕು? – ಇಂಥ ಮೂಲಭೂತ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಇವಕ್ಕೆ ಯುಕ್ತವಾದ ಉತ್ತರಗಳನ್ನು ಕಂಡುಕೊಳ್ಳದ ವಿನಾ ಶಿಕ್ಷಣವ್ಯವಸ್ಥೆಯಾಗಲೀ, ವಿದ್ಯೆಯ ನೆಲೆ–ಬೆಲೆಗಳಾಗಲೀ ಸಾರ್ಥಕತೆಯನ್ನು ಪಡೆಯದು. ಹಾಗಾದರೆ ನಾವು ವಿದ್ಯಾವಂತರಾಗಬಲ್ಲಂಥ ದಾರಿ ಯಾವುದು? ‘ಪಂಚತಂತ್ರ’ದ ಪದ್ಯವೊಂದು ಹೀಗಿದೆ: 

ಅನಂತಪಾರಂ ಕಿಲ ಶಬ್ದಶಾಸ್ತ್ರಂ
ಸ್ವಲ್ಪಂ ತಥಾಯುರ್ಬಹವಶ್ಚ ವಿಘ್ನಾಃ
ಸಾರಂ ತತೋ ಗ್ರಾಹ್ಯಮಪಾಸ್ಯ ಫಲ್ಗು
ಹಂಸೈರ್ಯಥಾ ಕ್ಷೀರಮಿವಾಂಬುಮಧ್ಯಾತ್‌

ADVERTISEMENT

ತಾತ್ಪರ್ಯ ಹೀಗೆ: ‘ಶಬ್ದಶಾಸ್ತ್ರ ಕೊನೆಯಿಲ್ಲದ್ದು. ಆಯುಸ್ಸೋ ಬಹಳ ಕಡಿಮೆಯಾದದ್ದು; ತೊಂದರೆಗಳೋ ಅಪಾರವಾಗಿವೆ. ಹೀಗಾಗಿ ಹಂಸಪಕ್ಷಿಯು ಹೇಗೆ ನೀರನ್ನು ಹಾಲಿನಿಂದ ಬೇರ್ಪಡಿಸಿ ಹಾಲನ್ನು ಮಾತ್ರ ತೆಗೆದುಕೊಳ್ಳುತ್ತದೆಯೋ ಹಾಗೆಯೇ ನಾವು ಕೂಡ ಅಸಾರವಾದುದನ್ನು ತ್ಯಾಗಮಾಡಿ, ಸಾರವಾದುದನ್ನಷ್ಟೆ ಗ್ರಹಿಸಬೇಕು.’

ನಮ್ಮ ಶಿಕ್ಷಣವ್ಯವಸ್ಥೆ ಇಂಥ ಸಾರಗ್ರಹಿಕೆಗೆ ನಮ್ಮನ್ನು ಸಿದ್ಧಗೊಳಿಸುತ್ತಿದೆಯೆ? ಇಲ್ಲಿ ಇನ್ನೊಂದು ಪ್ರಶ್ನೆ ತಲೆ ಎತ್ತುತ್ತದೆ. ಕೇವಲ ಕಂಠಪಾಠಕ್ಕಷ್ಟೆ ಸೀಮಿತವಾದ; ಹಾಗೇ ಕಂಠಪಾಠಮಾಡಿಕೊಂಡು ಜ್ಞಾಪಕದಲ್ಲಿರಿಸಿಕೊಂಡದ್ದನ್ನೇ ಒಂದೆರಡು ಗಂಟೆಗಳಲ್ಲಿ ಬರೆದು ಒಪ್ಪಿಸುವುದೇ ಶಿಕ್ಷಣಪದ್ಧತಿಯ ಮಾನದಂಡವಾಗಿರುವಾಗ ನಾವು ಸಾರವಾದುದನ್ನು ಹೇಗೆ ಆಯ್ದುಕೊಳ್ಳುವುದು? ಏನೇನನ್ನೋ ಕಲಿಸುವ ಉಮೇದು ಇಂದಿನ ಶಿಕ್ಷಣವ್ಯವಸ್ಥೆಯದ್ದು. ಆದರೆ ಹೀಗೆ ಕಲಿತದ್ದು ನಮ್ಮ ಬದುಕಿಗೆ ಒದಗುತ್ತಿದೆಯೆ? ಒದಗಬಲ್ಲದೆ?– ಎಂದು ಅದು ಆಲೋಚಿಸದು. ಚಿಂತಕ ಕೆ. ವಿ. ಸುಬ್ಬಣ್ಣ ಅವರ ಮಾತೊಂದು ಇಲ್ಲಿ ನೆನಪಾಗುತ್ತಿದೆ; ಅದರ ಸಾರಾಂಶ ಹೀಗೆ: ‘ನಮಗೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ವಸ್ತುಗಳ ಪರಿಚಯ ಚೆನ್ನಾಗಿರುತ್ತದೆ; ಆದರೆ ನಮ್ಮ ಅಡುಗೆಮನೆಯ ಯಾವ ಡಬ್ಬಿಯಲ್ಲಿ ಏನಿದೆ– ಎಂದು ಮಾತ್ರ ತಿಳಿದಿರುವುದಿಲ್ಲವಷ್ಟೆ!’ ನಮಗೆ ನೇರವಾಗಿ ಪ್ರಯೋಜನಕ್ಕೆ ಬಾರದ ತಿಳಿವಳಿಕೆಯನ್ನು ‘ವಿದ್ಯೆ’ ಎಂದು ಕರೆಯಬಹುದೆ? ಸಂಸ್ಕೃತಸುಭಾಷಿತವೊಂದು ಇದೇ ಮಾತನ್ನು ಇನ್ನೊಂದು ಬಗೆಯಲ್ಲಿ ಹೇಳಿದೆ:

ಅಧೀತ್ಯ ಚತುರೋ ವೇದಾನ್‌ ವ್ಯಾಕೃತ್ಯಾಷ್ಟಾದಶ ಸ್ಮೃತೀಃ
ಅಹೋ ಶ್ರಮಸ್ಯ ವೈಫಲ್ಯಂ ಆತ್ಮಾಪಿ ಕಲಿತೋ ಚ ಚೇತ್‌

‘ನಾಲ್ಕು ವೇದಗಳನ್ನೂ ಕಲಿತು, ಹದಿನೆಂಟು ಸ್ಮೃತಿಗಳನ್ನೂ ವ್ಯಾಖ್ಯಾನ ಮಾಡಿಯೂ ಆತ್ಮವನ್ನು ಸಂಪಾದಿಸದಿದ್ದರೆ ಅಷ್ಟು ಶ್ರಮವೂ ವ್ಯರ್ಥವೇ ಹೌದು!’ – ಎನ್ನುತ್ತಿದೆ, ಈ ಶ್ಲೋಕ.

ಇಲ್ಲಿ ಆತ್ಮದ ಸಂಪಾದನೆ ಎಂದರೆ ಅಧ್ಯಾತ್ಮಜ್ಞಾನ. ‘ಅಧ್ಯಾತ್ಮ’ ಎಂದರೆ ನಮ್ಮತನದ ಅರಿವು. ನಮ್ಮನ್ನು ನಾವು ಅರಿಯುವುದೇ ಎಲ್ಲ ವಿದ್ಯೆಗಳ ಮೂಲಕಾರಣವಾಗಿರಬೇಕು ಎಂಬುದು ಇದರ ತಾತ್ಪರ್ಯ. ನಮ್ಮನ್ನು ನಾವು ಅರಿಯುವುದು ಎಂಬುದಕ್ಕೆ ಬಹಳ ವಿಸ್ತೃತವಾದ ಅರ್ಥಪರಂಪರೆಯುಂಟು. ನಾವು ಮನುಷ್ಯರು – ಎಂಬ ಅರಿವೂ ಇದರಲ್ಲಿ ಸೇರುತ್ತದೆಯೆನ್ನಿ! ಯಾವ ಬ್ರಹ್ಮಾಂಡದ ಯಾವ ಗ್ರಹದಲ್ಲಿ ಎಂಥ ಜೀವಿ ಉಂಟು ಎಂಬ ತಿಳಿವಳಿಕೆಗಿಂತಲೂ, ನಾನು ಎಲ್ಲಿದ್ದೇನೆ? ನಾನಿರುವ ನೆಲಕ್ಕೂ ನನಗೂ ಏನು ಸಂಬಂಧ? ನನ್ನ ಪಕ್ಕ ಯಾರಿದ್ದಾರೆ?– ಎಂಬ ಅರಿವು ಅತ್ಯಂತ ಮುಖ್ಯ. ಈ ಅರಿವನ್ನು ನಮ್ಮ ಶಿಕ್ಷಣವ್ಯವಸ್ಥೆ ನಮಗೆ ನೀಡುತ್ತಿದೆಯೆ? – ಇದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.