ADVERTISEMENT

ನಿಂತ ನೀರು ಕಲುಷಿತವಾಗುವುದು ಖಚಿತ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2017, 19:30 IST
Last Updated 1 ಫೆಬ್ರುವರಿ 2017, 19:30 IST

ಬದುಕು ಅನೂಹ್ಯದ ಹಾದಿಯೆಂಬ ಅರಿವಿದ್ದರೂ ಪೂರ್ವಗ್ರಹ ಪೀಡನೆ, ಪೂರ್ವನಿಯೋಜಿತ ವ್ಯವಸ್ಥೆ, ಭೂತದಿಂದ ಕಲಿತ ಲೆಕ್ಕಾಚಾರ, ವರ್ತಮಾನದ ಎದುರಿಗೆ ಕುಳಿತು ಮಾಡಿದ ರಿಪೇರಿ, ಭವಿಷ್ಯದಲ್ಲಿ ಮಾಡಬೇಕಾದ ಪಿತೂರಿ. ಎಲ್ಲವೂ ನಿರೀಕ್ಷೆಯ ತಳಪಾಯದ ಮೇಲೆ ಕಟ್ಟಹೊರಟ ಬಹುಅಂತಸ್ತಿನ ಅಪಾಯಕಾರಿ ಮಹಡಿ.

ಒಂದು ರೂಪಾಯಿ ತೆರಿಗೆಯನ್ನು ಕಟ್ಟದೇ, ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಯ ಒಡೆಯ. ಹತ್ತಾರು ಸೈಟುಗಳ ಮಾಲೀಕ, ಕೆಜಿಗಟ್ಟಲೆ ಚಿನ್ನದ ವಾರಸುದಾರ, ನೂರಾರು ಎಕರೆಯ ಯಜಮಾನ. ಹೀಗೆ ಬದುಕುತ್ತಿರಬಹುದೆಂಬ ಊಹೆ ಮಾಡಲಾಗದಂತೆ ಬದುಕುತ್ತಿರುತ್ತಾರೆ. ಅದೇ ಮಾಸಲು ಅಂಗಿ, ಅಳತೆ ಸರಿಹೊಂದದ ಪ್ಯಾಂಟು, ಹೆರದುಕೊಳ್ಳದ ಗಡ್ಡ. ಲಡಕಾಸಿ ಸ್ಕೂಟರ್, ಹೆಸರಿಗೆ ಅಂತ ಹೇಳಿಕೊಳ್ಳಲು ಒಂದು ಅಡಸಾ ಬಡಸಾ ಕಾರು.

ಕಾರ್ಪೊರೇಷನ್ ಸ್ಕೂಲ್‌ನಲ್ಲಿ ಓದುವ ಮಕ್ಕಳು. ಸಾರ್ವಜನಿಕ ಬದುಕಿಗೆ ಅಂತ ನಾಮಕಾವಸ್ತೆಯ ನೌಕರಿ. ಮುಂಜಾನೆ ಹೊರಟರೆ ತಡ ರಾತ್ರಿಯ ತನಕ ವಸೂಲಾಗುವ ಬಡ್ಡಿ. ತಾನೊಂದು ಪುಣಾಣಿ ಸಾಮಾನ್ಯ ಮನೆಯಲ್ಲಿದ್ದುಕೊಂಡು, ಬಂಗಲೆಯಿಂದ ಬರುವ ಬಾಡಿಗೆಗಾಗಿ ಕಾಯುತ್ತಾ ಉಳಿಯುವ, ಬದುಕಿನ ಪೂರ್ತಿ ಕೂಡಿಡುವುದೇ ಕಾಯಕ ಮಾಡಿಕೊಂಡು ಕೈಲಾಸವಾಸಿಯಾಗುವ, ಕ್ಷುದ್ರ ಜೀವಿಗಳ ಕಂಡರೆ ಮರುಕ ಉಕ್ಕುತ್ತದೆ.

ಅವರು ಜೀವಮಾನವಿಡೀ ಮತ್ತೊಬ್ಬರಿಗಾಗಿಯೇ ದುಡಿಯುತ್ತಾ, ದಣಿಯುತ್ತಾ, ತನಗಾಗಿಯೇ ಇಷ್ಟೆಲ್ಲಾ ಅನ್ನೋ ಭ್ರಮೆಯಲ್ಲಿಯೇ ಉಸಿರು ಚೆಲ್ಲುತ್ತಾರೆ. ಅವರಿಗೆ ತುಂಬು ಬೆಳದಿಂಗಳ ರಾತ್ರಿಯ ತಂಗಾಳಿ ಅರಿವಿಗೆ ಬರುವುದೇ ಇಲ್ಲ. ತನ್ನ ಸಹಜೀವಿಯ ಆತ್ಮದಿಂದ ಹೊರಟ ನಿಶ್ಶಬ್ದದ ಹಾಡು ಆಲಿಸುವ ಕಿವಿ ಸೂಕ್ಷ್ಮತೆ ಗೊಡ್ಡುಬಿದ್ದುಹೋಗಿರುತ್ತದೆ. ಹಣದ ತೆಕ್ಕೆಯ ಭಾಷೆ ಮಾತ್ರ ಅವನಲ್ಲಿ ಜೀವಂತಿಕೆ ಹುಟ್ಟಿಸುತ್ತದೆ.

ನಿರಂತರ ದುರಾಸೆಯ ಬಳಲಿಕೆಗೆ ಬದುಕು ಕಂದಾಯ ಕಟ್ಟಿಸದೇ ಬಿಡುತ್ತಾದರೂ ಹೇಗೆ? ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ಉಡುಗೊರೆ ಕೊಟ್ಟೇಕೊಡುತ್ತದೆ. ಹಣದ ತಿಜೋರಿ ಬೆಳೆದಂತೆಲ್ಲಾ ಅರಿವಿಗೆ ಬಾರದ ಅಹಂ ಎಲ್ಲರಿಂದಲೂ ಒಂಟಿಯಾಗಿಸಿಬಿಡುತ್ತದೆ. ತನ್ನದಲ್ಲದ ಮುಖವಾಡ ತೊಡಿಸುತ್ತದೆ. ಸುಳ್ಳೇ ಹೊಸ ಮಿತ್ರರು ಹುಟ್ಟಿಕೊಳ್ಳುತ್ತಾರೆ, ಅದರ ದುಪ್ಪಟ್ಟು ಶತ್ರುಗಳು ಉದ್ಭವಿಸುತ್ತಾರೆ, ಬಿಡಿಸಿಕೊಳ್ಳಲು ಹೊರಟಷ್ಟೂ ಎಲ್ಲಾ ಗೋಜಲು ಗೋಜಲು. ಬದುಕು ಅನವಶ್ಯಕ ಸವಾಲು.

ಕೆಲಸಕ್ಕಾಗಿ ಅಲೆಯುತ್ತಾ, ಬದುಕಿನ ಸಹಜ ಸ್ಥಿತಿಗಳ ನೆಲೆಗಳ ತಾಕುತ್ತಾ, ಪ್ರತೀ ಮುಂಜಾನೆಯೂ ಈ ಬದುಕಿಗೆ ಬೋನಸ್ ಅಂದುಕೊಳ್ಳುತ್ತಾ, ಅಕಸ್ಮಾತ್ ಸಿಕ್ಕ ಅವಕಾಶವೊಂದು ಸುಖದ ಆವಿಷ್ಕಾರಕ್ಕೆ ಹಾದಿ ತೋರಿ, ಅದು ತಂತಿಯ ಮೇಲಿನ ನಡಿಗೆಯಾಗಿ, ಕೊನೆಗೆ ತೋರಿಕೆಯ ಮತ್ತು ನಿರ್ಜೀವತೆ ಸುರಿಯುವ ಸುಖ ಸಂಪತ್ತನ್ನು ಬಿಟ್ಟು ಮತ್ತೆ ಕೆಲಸ ಹುಡುಕುತ್ತಾ, ಯಾವುದೋ ಇಂಟರ್‌ವ್ಯೂಗೆ ಸರತಿ ಸಾಲಿನಲ್ಲಿ ನಿಂತು ನಿರಾಳವಾಗುವ ಪುಷ್ಪಕವಿಮಾನದ ಕಮಲಾಸನ್ ಥೇಟು ಬುದ್ಧ ಅನ್ನಿಸಿ ಮನಸಿನೊಳಗೆ ಎಂತದ್ದೋ ಹಗೂರ ನಿರಾಳ ತುಂಬಿದ ಸಂತೋಷವೊಂದು ನೆಲೆಯಾಗುತ್ತದೆ.

ಬದುಕಿಗೆ ಅಂಥದೊಂದು ಅನುಭವವೋ,ಅನುಭಾವವೋ ನೆಲೆಯಾಗಬೇಕು, ಇಲ್ಲವೆ ಹಿನ್ನೆಲೆಯಾಗಬೇಕು. ಆಗಷ್ಟೇ ಬದುಕು ಹರಿಯುವ ನೀರು. ಇಲ್ಲವಾದರೆ ನಿಂತ ನೀರು. ನಿಂತದ್ದು ಕಲುಷಿತಗೊಳ್ಳುವುದು ಖಚಿತ.–ಜೀವ ಮುಳ್ಳೂರು ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.