ADVERTISEMENT

ನೂರು ಟನ್ ಎಳೆಯುವ ಸಾಹಸ

ಜಯಸಿಂಹ ಆರ್.
Published 27 ಜುಲೈ 2016, 19:30 IST
Last Updated 27 ಜುಲೈ 2016, 19:30 IST
ನೂರು ಟನ್ ಎಳೆಯುವ ಸಾಹಸ
ನೂರು ಟನ್ ಎಳೆಯುವ ಸಾಹಸ   

ಟಾಟಾ ಸಮೂಹ ಸಂಸ್ಥೆಗಳಲ್ಲಿ ಒಂದಾದ ಹಾಗೂ ಬ್ರಿಟನ್ ಮೂಲದ ಲ್ಯಾಂಡ್ ರೋವರ್ ಒಂದು ಸಾಹಸಕ್ಕೆ ಕೈ ಹಾಕಿತ್ತು. ಅದು ನೂರು ಟನ್ ತೂಕದ ರೈಲಿನ ಬೋಗಿಗಳನ್ನು ತನ್ನ ಎಸ್‌ಯುವಿ ಬಳಸಿ ಎಳೆಯುವ ಸಾಹಸ. ಅಷ್ಟು ತೂಕದ ಬೋಗಿಗಳನ್ನು ಎಳೆಯಲು ದೊಡ್ಡ ವಾಹನವನ್ನೇ ಬಳಸಿರಬೇಕೆಂದು ಊಹಿಸಿದರೆ ಅದು ತಪ್ಪಾಗುತ್ತದೆ.

ಲ್ಯಾಂಡ್‌ ರೋವರ್‌ ಒಡಲಲ್ಲಿ ಪ್ರಚಂಡ ಶಕ್ತಿಯ 4.2 ಲೀಟರ್, 5 ಲೀಟರ್‌ ಎಂಜಿನ್‌ಗಳಿವೆ. ಎರಡು ಟನ್‌ಗಿಂತಲೂ ಹೆಚ್ಚು ತೂಗುವ ಎಸ್‌ಯುವಿಗಳನ್ನು ಏಳೆಂಟು ಕ್ಷಣಗಳಲ್ಲಿ 0ಯಿಂದ 100 ಕಿ.ಮೀ ವೇಗಕ್ಕೆ, ಅಷ್ಟೇ ಕ್ಷಿಪ್ರವಾಗಿ 200 ಕಿ.ಮೀ ವೇಗಕ್ಕೆ ಮುಟ್ಟಿಸುವ ಸಾಮರ್ಥ್ಯವಿರುವ ಈ ಎಂಜಿನ್‌ಗಳು ಸಾಕಷ್ಟು ಹೆಸರು ಮಾಡಿವೆ.

ಆದರೆ ನಿಜಕ್ಕೂ ಆಶ್ಚರ್ಯದ ವಿಚಾರವೆಂದರೆ, ನೂರು ಟನ್ ತೂಕದ ಬೋಗಿಗಳನ್ನು ಎಳೆಯಲು ಲ್ಯಾಂಡ್‌ ರೋವರ್ ಬಳಸಿದ್ದು ತನ್ನ ಡಿಸ್ಕವರಿ ಸ್ಪೋರ್ಟ್ಸ್ ಎಂಬ ಸಣ್ಣ ಎಸ್‌ಯುವಿಯನ್ನು. ಇದರ ಎಂಜಿನ್ ಸಾಮರ್ಥ್ಯ ಕೇವಲ 2 ಲೀಟರ್‌ ಅಂದರೆ 2000 ಸಿ.ಸಿ ಅಷ್ಟೆ.

ಅಂದಹಾಗೆ ಈ ಸಾಹಸ ನಡೆದದ್ದು, ಸ್ವಿಡ್ಜರ್ಲೆಂಡ್‌ನ ಉತ್ತರ ಭಾಗದ ರೀನ್ ಪ್ರಾಂತ್ಯದಲ್ಲಿ. ಅಲ್ಲಿ ಪ್ರವಾಸಿ ರೈಲು ಸಾಗುವ ಹಾದಿಯನ್ನು ಸಾಹಸಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ನಿಲ್ದಾಣವೊಂದರಲ್ಲಿ ಮೂರು ಬೋಗಿಗಳನ್ನು ರೈಲು ಎಂಜಿನ್‌ನಿಂದ ಬೇರ್ಪಡಿಸಲಾಗಿತ್ತು. ಮಾರುಕಟ್ಟೆಯಲ್ಲಿ ಲಭ್ಯವಿರುವ ಡಿಸ್ಕವರಿ ಸ್ಪೋರ್ಟ್ಸ್‌ನಲ್ಲಿ ಯಾವುದೇ ಮಾರ್ಪಾಡು ಮಾಡದೆ ಅದನ್ನು ಬೋಗಿಗಳಿಗೆ ಅಳವಡಿಸಲಾಗಿತ್ತು. ಆದರೆ ಹಳಿಯ ಮೇಲೆ ಅದರ ಚಕ್ರಗಳು ಅತ್ತಿತ್ತ ಸರಿದಾಡುವುದನ್ನು ತಪ್ಪಿಸಲು ನಾಲ್ಕೂ ಚಕ್ರಗಳ ಬಳಿ ಸಣ್ಣ ರೈಲು ಗಾಲಿಗಳನ್ನು ಅಳವಡಿಸಲಾಗಿತ್ತು.

ಡಿಸ್ಕವರಿ ಸ್ಪೋರ್ಟ್ಸ್, ಒಂದಿನಿತೂ ಜರ್ಕ್ ಹೊಡೆಯದೆ ಬೋಗಿಗಳನ್ನು ಎಳೆದಿದೆ. ಈ ಸಾಹಸ ಅಷ್ಟಕ್ಕೇ ಮುಗಿದಿಲ್ಲ. ಆ ನಿಲ್ದಾಣದಿಂದ ಮುಂದಿನ ನಿಲ್ದಾಣದವರೆಗೆ 10 ಕಿ.ಮೀ ದೂರವನ್ನು ಡಿಸ್ಕವರಿ ಸ್ಪೋರ್ಟ್ಸ್ ಆರಾಮಾಗಿ ಕ್ರಮಿಸಿದೆ. ಈ ಹಾದಿ ನಡುವೆ ಸುಮಾರು 1 ಕಿ.ಮೀ ಉದ್ದದ ನೆಲಮಟ್ಟದಿಂದ 85 ಅಡಿ ಎತ್ತರದಲ್ಲಿರುವ ಸೇತುವೆಯನ್ನು ಈ ಎಸ್‌ಯುವಿ ಹಾದು ಹೋಗಿದೆ. ಇದು ಈವರೆಗೆ ಎಸ್‌ಯುವಿಯೊಂದು ಎಳೆದಿರುವ ಗರಿಷ್ಠ ತೂಕ.

ಹಾಗಿದ್ದಲ್ಲಿ ಇದಕ್ಕಿಂತ ದೊಡ್ಡ ಎಂಜಿನ್ ಇರುವ ಬೇರೆ ಎಸ್‌ಯುವಿಗಳು ಇಂತಹ ಸಾಹಸ ಮಾಡಬಹುದೆ ಎಂಬ ಪ್ರಶ್ನೆಗೆ ‘ಗೊತ್ತಿಲ್ಲ’ ಎಂಬುದೇ ಹೆಚ್ಚು ಸಮಂಜಸವಾದ ಉತ್ತರ.ಅದನ್ನು ಪರೀಕ್ಷಿಸಿ ನೋಡಬೇಕಷ್ಟೆ.

ಆದರೆ ಡಿಸ್ಕವರಿ ಸ್ಪೋರ್ಟ್ಸ್‌ನಲ್ಲಿ ಲ್ಯಾಂಡ್‌ ರೋವರ್‌ ಅಳವಡಿಸಿರುವ ಅತ್ಯಾಧುನಿಕ ತಂತ್ರಜ್ಞಾನಗಳು ಖಂಡಿತ ಈ ಸಾಹಸದಲ್ಲಿ ನೆರವಿಗೆ ಬಂದಿದೆ ಎಂದರೆ ತಪ್ಪಾಗಲಾರದು.

ಮೊದಲೇ ಹೇಳಿದಂತೆ ಈ ಎಸ್‌ಯುವಿಯಲ್ಲಿ ಇರುವುದು 2 ಲೀಟರ್‌ ಸಾಮರ್ಥ್ಯದ ಇಂಜಿನಿಯಂ ಡೀಸೆಲ್ ಎಂಜಿನ್. ಈ ಎಂಜಿನ್ ಗರಿಷ್ಠ 185 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಜತೆಗೆ 430 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಆದರೆ ನೂರು ಟನ್ ಎಳೆಯುವಲ್ಲಿ ಈ ಶಕ್ತಿ ಸಮರ್ಪಕವಾಗಿ ಬಳಕೆಯಾಗಿದ್ದು, ಲ್ಯಾಂಡ್‌ ರೋವರ್‌ನ ಡ್ರೈವ್‌ಟ್ರೈನ್ ತಂತ್ರಜ್ಞಾನದಲ್ಲಿ. ಈ ಎಸ್‌ಯುವಿಯಲ್ಲಿ ಇರುವುದು 9 ಗಿಯರ್‌ಗಳ ಆಟೊ ಟ್ರಾನ್ಸ್‌ಮಿಷನ್.

ಫೋರ್‌ವ್ಹೀಲ್‌ ಡ್ರೈವ್ ತಂತ್ರಜ್ಞಾನಕ್ಕೇ ಆಲ್‌ವ್ಹೀಲ್‌ ಡ್ರೈವ್ ಸವಲತ್ತುಗಳನ್ನು ಈ ಟ್ರಾನ್ಸ್‌ಮಿಷನ್‌ನಲ್ಲಿ ನೀಡಲಾಗಿದೆ. ಇಲ್ಲಿ ಲೋ ಗಿಯರ್‌ ಇಲ್ಲ ಎಂಬುದು ಗಮನಿಸಬೇಕಾದ ಅಂಶ.

ಎಲ್ಲಕ್ಕಿಂತ ಮುಖ್ಯವಾಗಿ ‘ಆಲ್‌ ಟೆರೇನ್ ಪ್ರೋಗ್ರೆಸ್ ಕಂಟ್ರೋಲ್’ ತಂತ್ರಜ್ಞಾನ ಇಲ್ಲಿ ಹೆಚ್ಚು ನೆರವಿಗೆ ಬಂದಿದೆ. ಇದೊಂದು ರೀತಿಯಲ್ಲಿ ಕ್ರೂಸ್‌ ಕಂಟ್ರೋಲ್ ಇದ್ದಂತೆ. ಆದರೆ ಇದು ಕೆಲಸ ಮಾಡುವುದು 2 ಕಿ.ಮೀ ವೇಗದಿಂದ 30 ಕಿ.ಮೀ ವೇಗದ ನಡುವೆ.

ಇದು ಭಾರವನ್ನು ನಿಧಾನವಾಗಿ, ಒಂದಿನಿತೂ ಜರ್ಕ್ ಇಲ್ಲದೆ ಹಾಗೂ ನಯವಾಗಿ ಎಳೆಯುತ್ತದೆ. ಜತೆಗೆ ಲ್ಯಾಂಡ್‌ ರೋವರ್‌ನ ಖ್ಯಾತ ಮತ್ತು ಪ್ರತಿಷ್ಠಿತ ಟೆರೇನ್ ರೆಸ್ಪಾನ್ಸ್ ಸಿಸ್ಟಂ ಇಲ್ಲಿದೆ. ಈ ವ್ಯವಸ್ಥೆ ಇರುವ ಲ್ಯಾಂಡ್‌ ರೋವರ್‌ ಎಸ್‌ಯುವಿಗಳು ಸುಮಾರು 80 ಡಿಗ್ರಿಯಷ್ಟು ಕಡಿದಾದ ಏರನ್ನು ಏರಲು ಹಾಗೂ ತಗ್ಗನ್ನು ಇಳಿಯಲು ಸಮರ್ಥವಾಗಿವೆ.

ಇಷ್ಟೆಲ್ಲಾ ಇದ್ದೂ ಡಿಸ್ಕವರಿ ಸ್ಪೋರ್ಟ್ಸ್‌ಗೆ ಅನುಮತಿ ನೀಡಿರುವುದು 2.5 ಟನ್‌ ತೂಕವನ್ನು ಎಳೆಯಲು ಮಾತ್ರ. ಆದರೆ ಈ ಸಾಹಸದಲ್ಲಿ ಡಿಸ್ಕವರಿ ಸ್ಪೋರ್ಟ್ಸ್ ಸೂಚಿತ ತೂಕಕ್ಕಿಂತ 60 ಪಟ್ಟು ಹೆಚ್ಚು ತೂಕವನ್ನು ಎಳೆಯುವಲ್ಲಿ ಯಶಸ್ವಿಯಾಗಿದೆ. ಸುರಕ್ಷತೆಯಲ್ಲೂ ಇದು ಹಿಂದೆ ಉಳಿದಿಲ್ಲ. ಗ್ಲೋಬಲ್ ಎನ್‌ಸಿಎಪಿ ಕ್ರಾಶ್‌ ಟೆಸ್ಟ್‌ನಲ್ಲಿ ಡಿಸ್ಕವರಿ ಸ್ಪೋರ್ಟ್ಸ್‌ಗೆ 5 ಸ್ಟಾರ್‌ ರೇಟಿಂಗ್ ಇದೆ. ಇದೆಲ್ಲಾ ನಮಗೂ ಮುಖ್ಯವಾಗುವುದು ಏಕೆಂದರೆ, ಯಾವುದೇ ಬದಲಾವಣೆ ಇಲ್ಲದೆ ಇದೇ ಮಾದರಿಯ ಡಿಸ್ಕವರಿ ಸ್ಪೋರ್ಟ್ಸ್ ಭಾರತದಲ್ಲೂ ಲಭ್ಯವಿದೆ.​​​​​​  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.