ADVERTISEMENT

ಪ್ರಿಂಟರ್‌ ಸಂಪರ್ಕಿಸುವ ಬಗೆ

ತಂತ್ರೋಪನಿಷತ್ತು

ಜೋಮನ್ ವರ್ಗಿಸ್
Published 30 ಡಿಸೆಂಬರ್ 2015, 19:30 IST
Last Updated 30 ಡಿಸೆಂಬರ್ 2015, 19:30 IST

ಹೊಸ ಪ್ರಿಂಟರ್‌ ಇನ್‌ಸ್ಟಾಲ್ ಮಾಡುವ ಮುನ್ನ ಪ್ರಿಂಟರ್‌ ಬಾಕ್ಸ್‌ ಮೇಲೆ ನೀಡಿದ ಸೂಚನೆ ಓದುವುದು ಒಳ್ಳೆಯದು. ಕಂಪ್ಯೂಟರ್‌ ಜತೆಗೆ ಪ್ರಿಂಟರ್‌ ಹೇಗೆ ಸಂಪರ್ಕಿಸಬೇಕು, ಪ್ರಿಂಟರ್ ಡ್ರೈವರ್‌ ಅಪ್‌ಡೇಟ್‌ ಮಾಡಿಕೊಳ್ಳುವುದು ಹೇಗೆ ಸೇರಿದಂತೆ ಮಾಹಿತಿಗಳು ಇಲ್ಲಿರುತ್ತವೆ.

ಪ್ರಿಂಟರ್‌ ತಯಾರಿಸಿರುವ ಕಂಪೆನಿಯ ವೆಬ್‌ಸೈಟ್‌ಗೆ (printer manufacturer’s support site) ಭೇಟಿ ನೀಡಿದರೆ ಅಲ್ಲಿಂದ ಹೊಸ ಪ್ರಿಂಟರ್‌ ಡ್ರೈವರ್‌ ಅಪ್‌ಡೇಟ್‌ ಮಾಡಿಕೊಳ್ಳಬಹುದು. ಇದು ಸೂಕ್ತ ವಿಧಾನ. ಒಮ್ಮೊಮ್ಮೆ ಪ್ರಿಂಟರ್‌ ಜತೆಗೆ ಬಂದಿರುವ ಸಿಡಿಯಲ್ಲಿ ಈ ಎಲ್ಲ ಮಾಹಿತಿಗಳು ಇರುತ್ತವೆ. ಇಲ್ಲದಿದ್ದರೆ ವೆಬ್‌ಸೈಟ್‌ನಿಂದ ಪ್ರಿಂಟರ್‌ ಮಾಡೆಲ್ ನಂಬರ್‌ ನೀಡಿ setup guideನ ಎಲೆಕ್ಟ್ರಾನಿಕ್‌ ವರ್ಷನ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಒಂದು ವೇಳೆ ಇದು ಯಾವುದೂ ಲಭ್ಯವಿಲ್ಲದಿದ್ದರೆ ಯುಎಸ್‌ಬಿ ಕೇಬಲ್‌ ಸಹಾಯದಿಂದ ಪ್ರಿಂಟರ್‌ ಅನ್ನು ಕಂಪ್ಯೂಟರ್‌ ಜತೆ ಸಂಪರ್ಕಿಸಿ. ವಿಂಡೋಸ್‌ ತಾನಾಗಿಯೇ ಕೆಲವು basic driverಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುತ್ತದೆ. ಯುಎಸ್‌ಬಿ ಬದಲಿಗೆ ಮಾಮೂಲಿ ಕೇಬಲ್‌ ಸಂಪರ್ಕ ಇದ್ದರೆ, ಪಿಸಿ ಮತ್ತು ಪ್ರಿಂಟರ್‌ ಎರಡನ್ನೂ ಸ್ವಿಚ್‌ ಆಫ್‌ ಮಾಡಿ ನಂತರವಷ್ಟೇ ಪರಸ್ಪರ ಸಂಪರ್ಕ ಕಲ್ಪಿಸಿ. 

ವಿಂಡೋಸ್‌ 7 ಕಾರ್ಯನಿರ್ವಹಣಾ ತಂತ್ರಾಂಶವಾದರೆ, ಸ್ಟಾರ್ಟ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ ಸರ್ಚ್‌ ಬಾಕ್ಸ್‌ನಲ್ಲಿ  ‘Devices and Printers’  ಎಂದು ಟೈಪ್‌ ಮಾಡಿ. ಇನ್ನುಳಿದ ಆಪರೇಟಿಂಗ್‌ ಸಿಸ್ಟಂನಲ್ಲಾದರೆ ಕಂಟ್ರೋಲ್‌ ಪ್ಯಾನೆಲ್‌ನಲ್ಲಿ Hardware and Sound, Printers ವಿಭಾಗಕ್ಕೆ ಹೋಗಿ  ‘Add a printer’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. 

ಹೀಗೆ ಮಾಡಿದಾಗ ಎರಡು ಆಯ್ಕೆಗಳು ಕಾಣಿಸುತ್ತವೆ. ಪ್ರಿಂಟರ್‌ ಜತೆಗೆ ಪಿಸಿ physically connect ಆಗಿದ್ದರೆ  ಮೊದಲ ಆಯ್ಕೆಯನ್ನು ಅಂದರೆ ‘Add a local printer’ ಎನ್ನುವುದನ್ನೂ  wireless printer ಆದರೆ ಎರಡನೇ ಆಯ್ಕೆಯನ್ನೂ ಆಯ್ದುಕೊಂಡು ಮುಂದುವರಿಯಿರಿ. ಎರಡನೇ ಹಂತದಲ್ಲಿ ಪ್ರಿಂಟರ್‌ ತಯಾರಕರ ಹೆಸರು, ಮಾಡೆಲ್‌ ನಂಬರ್‌ ಗುರುತು ಮಾಡಿಕೊಳ್ಳಿ. (ಇವೆರಡೂ ಬಾಕ್ಸ್‌ ಮೇಲೆ ಇರುತ್ತದೆ) ಈ ಪಟ್ಟಿಯಲ್ಲಿ ನೀವು ಹೊಂದಿರುವ ಪ್ರಿಂಟರ್‌ನ ಮಾಡೆಲ್‌ ನಂಬರ್‌ ಕಾಣಿಸುತ್ತಿಲ್ಲ ಎಂದರೆ ಗೊಂದಲಕ್ಕೆ ಬೀಳಬೇಡಿ. Windows Update button ಮೇಲೆ ಕ್ಲಿಕ್‌ ಮಾಡಿ ಡ್ರೈವರ್‌ ಅಪ್‌ಡೇಟ್‌ ಮಾಡಿಕೊಳ್ಳಿ. ಮೂರನೇ ಹಂತದಲ್ಲಿ ಇನ್‌ಸ್ಟಾಲ್‌ ಮಾಡುತ್ತಿರುವ ಪ್ರಿಂಟರ್‌ಗೊಂದು  ಹೆಸರು ನೀಡಿ. ಒಂದಕ್ಕಿಂತ ಹೆಚ್ಚು ಪ್ರಿಂಟರ್‌ಗಳು ಒಂದು ಪಿಸಿ ಜತೆ ಸಂಪರ್ಕದಲ್ಲಿದ್ದರೆ ಸುಲಭವಾಗಿ ಗುರುತಿಸಬಹುದಾದ ಹೆಸರಿಡುವುದು ಒಳ್ಳೆಯದು. 

ಮುಂದಿನ ಹಂತದಲ್ಲಿ ಅಗತ್ಯ ಇದ್ದರೆ ಮಾತ್ರ ಪ್ರಿಂಟರ್‌ ಶೇರಿಂಗ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಇಲ್ಲದಿದ್ದರೆ Do not share this printerಮೇಲೆ ಕ್ಲಿಕ್‌ ಮಾಡಿ. ಪ್ರಿಂಟರ್‌ ಯಶಸ್ವಿಯಾಗಿ ಇನ್‌ಸ್ಟಾಲ್‌ ಎಂದು ನೋಡಲು Click Print a test page ಮೇಲೆ ಕ್ಲಿಕ್ಕಿಸಿ. ಮುದ್ರಿತ ಪ್ರತಿ ಹೊರಬಂದರೆ ಯಶಸ್ವಿಯಾಗಿ ಇನ್‌ಸ್ಟಾಲ್‌ ಆಗಿದೆ ಎಂದರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.