ADVERTISEMENT

ಪ್ರೇಮ ಕಾಶ್ಮೀರದ ‘ಕರ್ಫ್ಯೂ ಮಹಾರಾಜರು’!

​ಪ್ರಜಾವಾಣಿ ವಾರ್ತೆ
Published 17 ಮೇ 2017, 19:30 IST
Last Updated 17 ಮೇ 2017, 19:30 IST
ಪ್ರೇಮ ಕಾಶ್ಮೀರದ  ‘ಕರ್ಫ್ಯೂ ಮಹಾರಾಜರು’!
ಪ್ರೇಮ ಕಾಶ್ಮೀರದ ‘ಕರ್ಫ್ಯೂ ಮಹಾರಾಜರು’!   
ಕಳೆದ ವರ್ಷ ಕಾಶ್ಮೀರದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾದ ಬಳಿಕ ಅಲ್ಲಿಂದ ಬರೀ ಗಲಭೆಗಳ ಸುದ್ದಿಗಳೇ ಬರುತ್ತಿವೆ. ಗಲಭೆ ಸಂದರ್ಭದ ಅಲ್ಲಿನ ಸಾಮಾಜಿಕ ಬದುಕಿನ ಕುರಿತು ಸಿಗುವ ಮಾಹಿತಿ ತೀರಾ ಅಪರೂಪ. ಗೊತ್ತೆ? ಸುತ್ತಮುತ್ತ ಮದ್ದು ಗುಂಡುಗಳು ಹಾರುತ್ತಿದ್ದರೂ ಕಲ್ಲುಗಳ ತೂರಾಟ ಹೆಚ್ಚಾಗಿದ್ದರೂ ಅಲ್ಲಿ ಪ್ರೇಮಪುಷ್ಪಗಳು ಯಥಾಪ್ರಕಾರ ಅರಳುತ್ತಲೇ ಇವೆ.
 
ಕಾಶ್ಮೀರಿ ಹುಡುಗರು ತಮ್ಮ ಹೃದಯ ಕದ್ದ ಕನ್ನಿಕೆಯರನ್ನು ಬೀದಿಯಲ್ಲಿ ಕದ್ದು–ಮುಚ್ಚಿ ನೋಡುವ ಪರಿಪಾಠ ಕಡಿಮೆ ಆಗಿದ್ದರೂ ಸಾಮಾಜಿಕ ಜಾಲತಾಣಗಳು ಯುವಪ್ರೇಮಿಗಳ ನೆರವಿಗೆ  ಧಾವಿಸಿವೆ. ಮನದನ್ನೆಯೊಂದಿಗೆ ಹರಟಲು ಆ್ಯಪ್‌ಗಳು ಕೂಡ ಬಂದಿವೆ.
 
ಬ್ರೋಕರ್‌ಗಳ ನೆರವಿನಿಂದ ನಡೆಯುವ ಸಾಂಪ್ರದಾಯಿಕ ಮದುವೆಗಳ ಪ್ರಮಾಣವೇ ಇಲ್ಲಿ ಈಗಲೂ ಹೆಚ್ಚಾಗಿದೆ. ಶ್ರೀನಗರದಲ್ಲಿ ನಿತ್ಯ ಬೆಳಗಾದರೆ ಮನೆ–ಮನೆಗೆ ಓಡಾಡುವ ಬ್ರೋಕರ್‌ನನ್ನು ತಡೆದು ನಿಲ್ಲಿಸಿದರೆ ಹುಡುಗ–ಹುಡುಗಿಯರ ವಿವರಗಳು ಬಗಲ ಚೀಲದಲ್ಲಿರುವ ಡೈರಿಯಲ್ಲಿ ತುಂಬಿ ತುಳುಕುತ್ತಿವೆ. 
 
‘ಕಳೆದ ವರ್ಷದಿಂದ ಹೆಚ್ಚು–ಕಡಿಮೆ ಬಿಟ್ಟೂಬಿಡದೆ ಕರ್ಫ್ಯೂ ಇದ್ದೇ ಇದೆ. ಕೆಲಸವೇ ಇಲ್ಲದಿರುವ ಕಾರಣ ಹಿರಿಯರೆಲ್ಲ ಈಗ ವಯಸ್ಸಿಗೆ ಬಂದ ಮಕ್ಕಳ ಮದುವೆ ಕುರಿತು ಯೋಚಿಸುತ್ತಿದ್ದಾರೆ. ರಾತ್ರಿ 8ರಿಂದ ಬೆಳಗಿನ 9ರ ಅವಧಿಯಲ್ಲಿ ಎರಡೂ ಕುಟುಂಬಗಳ ಹಿರಿಯರ ನಡುವೆ ಮದುವೆ ಮಾತುಕತೆಗಳು ನಡೆಯುತ್ತವೆ’ ಎಂದು ಬ್ರೋಕರ್‌ ಮೊಹಮ್ಮದ್‌ ಹೇಳುತ್ತಾರೆ.
 
‘ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾದಾಗ ವರನ ಕಡೆಯವರು ಕನ್ಯೆಯ ಮನೆಗೆ, ಇಲ್ಲವೆ ಕನ್ಯೆಯ ಕಡೆಯವರು ವರನ ಮನೆಗೆ ಬಂದು ಮಾತನಾಡುವುದು ಕಷ್ಟ. ಆಗ ಮೊಬೈಲ್‌ಗಳಲ್ಲೇ ಮಾತುಕತೆಗಳು ನಡೆಯುತ್ತವೆ. ಯುವಕರು ತಮಗೆ ಸರಿಹೊಂದುವ ಜೋಡಿಯನ್ನು ತಾವೇ ಆಯ್ದುಕೊಳ್ಳುವುದು ಈಗೀಗ ಸಾಮಾನ್ಯವಾಗಿದೆ. ಆದರೆ, ನನ್ನ ವ್ಯವಹಾರಕ್ಕೆ ಏನೂ ಹೊಡೆತ ಬಿದ್ದಿಲ್ಲ’ ಎನ್ನುತ್ತಾರೆ.
 
ಗಲಭೆಯಿಂದ ಯಾವುದೇ ಮದುವೆಗೆ ತೊಂದರೆ ಆಗಿಯೇ ಇಲ್ಲ ಎಂದೇನಿಲ್ಲ. ಎಷ್ಟೋ ಮದುವೆಗಳು ಗಡಿಬಿಡಿಯಲ್ಲಿ ಮುರಿದುಬಿದ್ದಿವೆ. ನೂರಾರು ಸಂಖ್ಯೆಯಲ್ಲಿ ಮದುವೆಗಳನ್ನು ಮುಂದೂಡಲಾಗಿದೆ. ವಾರಗಟ್ಟಲೆ ನಡೆಯಬೇಕಿದ್ದ ಮದುವೆ ಸಮಾರಂಭ ಗಲಭೆ ಕಾರಣದಿಂದ ಒಂದು ದಿನಕ್ಕೆ ಇಳಿದಿದೆ. ಮೆನು ಗಾತ್ರವೂ ಕುಗ್ಗಿದೆ. ಕರ್ಫ್ಯೂ ಸಂದರ್ಭದಲ್ಲಿ ಮದುವೆ ಆದವರನ್ನು ‘ಕರ್ಫ್ಯೂ ಮಹಾರಾಣಿ’, ‘ಕರ್ಫ್ಯೂ ಮಹಾರಾಜ’ ಎಂದು ಕರೆಯುವ ಪರಿಪಾಠ ಬೆಳೆದಿದೆ.
 
ಶಾಲಾ–ಕಾಲೇಜುಗಳು ಸರಿಯಾಗಿ ನಡೆಯದಿರುವ ಕಾರಣ ಶ್ರೀನಗರದಲ್ಲಿ ಟ್ಯೂಷನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಹಶಿಕ್ಷಣದ ವ್ಯವಸ್ಥೆ ಈ ಟ್ಯೂಷನ್‌ ಕೇಂದ್ರಗಳಲ್ಲಿದ್ದು, ಯುವಕ–ಯುವತಿಯರು ಸಂಗಮ ಆಗುವುದರಿಂದ ಅವುಗಳು ಪ್ರೇಮಪುಷ್ಪ ಅರಳುವ ತಾಣಗಳಾಗಿವೆ.
 
ಕರ್ಫ್ಯೂ ಇರುವುದರಿಂದ ಉದ್ಯಾನ, ರೆಸ್ಟೊರೆಂಟ್‌, ಸರೋವರದ ಕಡೆಗೆ ಜೋಡಿಗಳು ಹೋಗುವಂತಿಲ್ಲ. ಹೀಗಾಗಿ ಇಂಟರ್ನೆಟ್‌ ರೋಮ್ಯಾನ್ಸ್‌ ಹೊಸ ಖಯಾಲಿಯಾಗಿದೆ. ಆದರೆ, ಇಂಟರ್ನೆಟ್‌ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಮೇಲೆ ನಿರ್ಬಂಧ ಹೇರಿದಾಗ ಯುವ ಜೋಡಿಗಳಿಗೆ ಭೂಮಿಯೇ ಕುಸಿದಂತಹ ಅನುಭವ. ಆದರೆ, ತಕ್ಷಣ ಸಿಕ್ಕಿತಲ್ಲ ಹೊಸಹಾದಿ! 
 
‘ಸರ್ಕಾರ ವಾಟ್ಸ್‌ ಆ್ಯಪ್‌ ನಿರ್ಬಂಧಿಸಿದರೆ ನಾವು ಹೈಕ್‌ ಬಳಸತೊಡಗಿದವು. ಅದು ಸ್ನ್ಯಾಪ್‌ಚಾಟ್‌ ಬಳಕೆ ತಡೆಯಿತು, ನಾವು ಇನ್‌ಸ್ಟಾಗ್ರಾಂ ಮೊರೆ ಹೋದೆವು. ಕರ್ಫ್ಯೂ ಕಾರಣದಿಂದ ಕುಳಿತಲ್ಲೇ ಹೆಚ್ಚಿನ ಸಮಯ ಕಳೆಯಬೇಕು ನೋಡಿ, ಹೀಗಾಗಿ ನನ್ನ ಭಾವಿ ಪತ್ನಿಯ ಜತೆಗಿನ ಇಂಟರ್ನೆಟ್‌ ಸಂವಾದ ಹೆಚ್ಚಿದೆ’ ಎನ್ನುತ್ತಾನೆ ಯುವಕನೊಬ್ಬ. ‘ಡೇಟಿಂಗ್‌ ಆ್ಯಪ್‌ಗಳು ಸಹ ಬಂದಿವೆ ಗೊತ್ತಾ’ ಎಂದು ಆತ ಕಣ್ಣು ಮಿಟುಕಿಸುತ್ತಾನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.