ADVERTISEMENT

ಸುರಕ್ಷೆ, ಆರಾಮ ಎರಡಕ್ಕೂ ಬೆಂಜ್ ಜಿಎಲ್‌ಎ 220ಡಿ

ಜಯಸಿಂಹ ಆರ್.
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST
ಸುರಕ್ಷೆ, ಆರಾಮ ಎರಡಕ್ಕೂ ಬೆಂಜ್ ಜಿಎಲ್‌ಎ 220ಡಿ
ಸುರಕ್ಷೆ, ಆರಾಮ ಎರಡಕ್ಕೂ ಬೆಂಜ್ ಜಿಎಲ್‌ಎ 220ಡಿ   

ಮರ್ಸಿಡೆಸ್ ಬೆಂಜ್ ಅತ್ಯಂತ ದುಬಾರಿ ಕಾರು ಎಂಬುದು ಈಗ ಸುಳ್ಳು. ಭಾರತದಲ್ಲಿ ಪ್ರವೇಶಮಟ್ಟದ ಐಷಾರಾಮಿ ಕಾರುಗಳನ್ನು ಬೆಂಜ್‌ ನಮ್ಮ ರಸ್ತೆಗಿಳಿಸಿ ಹಲವು ವರ್ಷಗಳೇ ಕಳೆದಿವೆ.

ತೀರಾ ದೊಡ್ಡದಲ್ಲದ, ದುಬಾರಿ ತಂತ್ರಜ್ಞಾನವಿಲ್ಲದ, ಆದರೆ ಸುರಕ್ಷತೆ ಮತ್ತು ಆರಾಮದಾಯಕದಲ್ಲಿ ರಾಜಿಯಾಗದ ಈ ಕಾರುಗಳನ್ನು ಬೆಂಜ್ ‘ನ್ಯೂ ಜನರೇಷನ್ ಕಾರ್-ಎನ್‌ಜಿಸಿ’ ಎಂದು ಕರೆಯುತ್ತದೆ. ಇವುಗಳಲ್ಲಿ ಪ್ರವೇಶಮಟ್ಟದ ಕಾರುಗಳೆಂದರೆ ಜಿಎಲ್‌ಎ.

ಜಿಎಲ್‌ಎ, ಎರಡು ರೀತಿಯ ಡೀಸೆಲ್ ಎಂಜಿನ್ (200 ಡಿ ಮತ್ತು 220ಡಿ) ಮತ್ತು ಪೆಟ್ರೋಲ್‌ ಎಂಜಿನ್ ಅವತರಣಿಕೆಗಳಲ್ಲಿ ಲಭ್ಯವಿದೆ. ಇವುಗಳ ಎಕ್ಸ್‌ ಷೋರೂಂ ಬೆಲೆ 33 ಲಕ್ಷದಿಂದ ಆರಂಭವಾಗಿ 38 ಲಕ್ಷದವರೆಗೆ ಇದೆ. ಇದರಲ್ಲಿ 220ಡಿಯನ್ನು ಚಲಾಯಿಸಲು ಕಂಪೆನಿ ಅವಕಾಶ ಮಾಡಿಕೊಟ್ಟಿತ್ತು. ‘ಪ್ರಜಾವಾಣಿ ಟೆಸ್ಟ್‌ಡ್ರೈವ್’ ಅಂಗವಾಗಿ ಜಿಎಲ್‌ಎ 220ಡಿಯನ್ನು ಸುಮಾರು 750 ಕಿ.ಮೀ ಚಲಾಯಿಸಲಾಯಿತು.

ADVERTISEMENT

ಈ ಕಾರಿನಲ್ಲಿ ಇರುವುದು 2,173 ಸಿ.ಸಿ.ಯ ಡೀಸೆಲ್ ಎಂಜಿನ್. ವೇರಿಯಬಲ್ ಜಿಯೊಮಿಟ್ರಿ ಟರ್ಬೊಚಾರ್ಜರ್ ಇರುವುದರಿಂದ ಎಂಜಿನ್‌ ಉತ್ತಮ ಶಕ್ತಿ ಉತ್ಪಾದಿಸುತ್ತದೆ. ಎಂಜಿನ್ ವೇಗ/ಆರ್‌ಪಿಎಂ 1,400ರಷ್ಟು ಇರುವಾಗಲೇ 350 ಎನ್‌.ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಆರ್‌ಪಿಎಂ 3,800ರ ಗಡಿ ಮುಟ್ಟಿದಾಗ 168 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಇಷ್ಟೆಲ್ಲಾ ಶಕ್ತಿ ಇರುವ ಜಿಎಲ್‌ಎ 220ಡಿಯ ತೂಕ 1,650 ಕೆ.ಜಿ ಮಾತ್ರ. ಹೀಗಾಗಿ ಕಾರು ಯಾವುದೇ ಪರಿಸ್ಥಿತಿಯಲ್ಲೂ ಕ್ಷಿಪ್ರವಾಗಿ ಸ್ಪಂದಿಸುತ್ತದೆ. 100-120 ಕಿ.ಮೀ ವೇಗ ಮುಟ್ಟುವುದು ಗೊತ್ತೇ ಆಗುವುದಿಲ್ಲ. 130-140 ಕಿ.ಮೀ ವೇಗದಲ್ಲಿ ಆರಾಮವಾಗಿ ಚಲಿಸುತ್ತದೆ.

ಮರ್ಸಿಡೆಸ್‌ನ ಎಲ್ಲಾ ಎಸ್‌ಯುವಿಗಳಲ್ಲಿ ಇರುವಂತೆ ಇದರಲ್ಲೂ ಡ್ರೈವಿಂಗ್ ಮೋಡ್‌ಗಳಿವೆ. ಕಂಫರ್ಟ್- ಶಕ್ತಿ ಮತ್ತು ಇಂಧನ ಕ್ಷಮತೆಗೆ ಹೇಳಿ ಮಾಡಿಸಿದ ಮೋಡ್. ಇದು ನಗರದ ಚಾಲನೆಗೆ ಹೇಳಿ ಮಾಡಿಸಿದಂತಿದೆ. ಇನ್ನು ಸ್ಪೋರ್ಟ್ಸ್ ಮೋಡ್ ಹೆಚ್ಚು ಶಕ್ತಿ ನೀಡುವ ಮೋಡ್. ಇದರಲ್ಲಿ ಗಿಯರ್‌ಗಳು ಬೇಗನೆ ಬದಲಾಗುವುದಿಲ್ಲ. ಪ್ರತಿ ಗಿಯರ್‌ನಲ್ಲೂ ಎಂಜಿನ್‌ ಗರಿಷ್ಠ ಶಕ್ತಿ ಉತ್ಪಾದಿಸಿ ಮುಂದಿನ ಗಿಯರ್‌ಗೆ ಜಿಗಿಯುತ್ತದೆ. ಹೀಗಾಗಿ ಕ್ಷಿಪ್ರ ಓವರ್‌ಟೇಕಿಂಗ್, ಘಾಟ್‌ಗಳಲ್ಲಿ ಇದು ಹೆಚ್ಚು ಆರಾಮದಾಯಕ ಮತ್ತು ಮಜಭರಿತ ಅನುಭವ ನೀಡುತ್ತದೆ. ಕಾರು 170-180 ಕಿ.ಮೀ ವೇಗ ತಲುಪುವುದು ಅನುಭವಕ್ಕೆ ಬರುವುದೇ ಇಲ್ಲ.

ಇನ್ನು ಎಕೊ ಮೋಡ್ ಹೆಚ್ಚು ಇಂಧನ ದಕ್ಷತೆಯ ಮೋಡ್. ಇದರಲ್ಲಿ ಗಿಯರ್‌ಗಳು ಪಟಪಟನೆ ಅಪ್‌ಶಿಫ್ಟ್‌ ಆಗುತ್ತವೆ. ವೇಗ 100 ಕಿ.ಮೀ. ಗಡಿ ಸಮೀಪಿಸುವಷ್ಟರಲ್ಲೇ 7ನೇ ಗಿಯರ್ (ಟಾಪ್‌ ಗಿಯರ್) ತಲುಪಿರುತ್ತದೆ. ಇನ್ನು ಆಫ್‌ ರೋಡ್ ಮೋಡ್ ಕ್ಲಿಷ್ಟವಲ್ಲದ ಕಚ್ಚಾ ರಸ್ತೆ (ಆಫ್‌ ರೋಡಿಂಗ್‌) ಚಾಲನೆಗೆ ಮಾತ್ರ ಮೀಸಲು. ಈ ಕಾರ್‌ನಲ್ಲಿ ಇರುವುದು 4ಮ್ಯಾಟಿಕ್- ಆಲ್‌ವ್ಹೀಲ್‌ಡ್ರೈವ್ ವ್ಯವಸ್ಥೆ.

ಇದು ಟಾರ್ಕ್ ಆನ್ ಡಿಮ್ಯಾಂಡ್ ತಂತ್ರಜ್ಞಾನವನ್ನು ಅವಲಂಬಿಸಿರುವುದರಿಂದ ಪ್ರತಿ ಚಕ್ರದ ಚಲನೆಯನ್ನು ಚಾಲಕರೇ ನಿಯಂತ್ರಿಸಲು ಸಾಧ್ಯವಿಲ್ಲ. ನಾಲ್ಕೂ ಚಕ್ರಗಳಲ್ಲಿ ರಸ್ತೆ ಹಿಡಿತ ಇರುವ ಚಕ್ರಕ್ಕೆ ಮಾತ್ರ ಟಾರ್ಕ್ ರವಾನೆಯಾಗುತ್ತದೆ. ಒಂದೊಮ್ಮೆ ನಾಲ್ಕು ಚಕ್ರಗಳೂ ಹಿಡಿತ ಕಳೆದುಕೊಂಡರೆ ಕಾರು ನಿಂತಲ್ಲೇ ನಿಂತಿರುತ್ತದೆ ಮತ್ತು ಚಕ್ರಗಳು ನಿಂತಲ್ಲೇ ತಿರುಗುತ್ತಿರುತ್ತವೆ. ಹೀಗಾಗಿ ಇದನ್ನು ಕ್ಲಿಷ್ಟ ಆಫ್‌ರೋಡ್ ಚಾಲನೆಗೆ ಬಳಸುವುದು ಸಾಧ್ಯವಿಲ್ಲ. ಆದರೆ ಲಾಂಗ್ ಡ್ರೈವ್‌ನಲ್ಲಿ ಹಳ್ಳ-ತೊರೆ-ಕೆಸರುಗಳನ್ನು ನಿರಾಯಾಸವಾಗಿ ದಾಟಬಹುದು.

750 ಕಿ.ಮೀ. ಅಂತರದ ಟೆಸ್ಟ್‌ಡ್ರೈವ್‌ನಲ್ಲಿ ಕಾರನ್ನು ಬಹುಪಾಲು 110-140 ಕಿ.ಮೀ ವೇಗದಲ್ಲೇ ಚಲಾಯಿಸಲಾಗಿತ್ತು. ಸುಮಾರು 15 ಕಿ.ಮೀ ಆಫ್‌ರೋಡಿಂಗ್ ಮಾಡಲಾಗಿತ್ತು. ನಗರದ ಮಿತಿಯಲ್ಲಿ ಸುಮಾರು 25 ಕಿ.ಮೀ. ಚಲಾಯಿಸಲಾಗಿತ್ತು. ಹೀಗಿದ್ದೂ ಕಾರು ಪ್ರತಿ ಲೀಟರ್‌ಗೆ ಸುಮಾರು 16.5 ಕಿ.ಮೀ.ನಷ್ಟು ದೂರ ಕ್ರಮಿಸಿತು. ನಾವು ಚಲಾಯಿಸಿದ್ದ ವೇಗದ ತುಲನೆಯಲ್ಲಿ ಈ ಎಂಜಿನ್‌ನ ಇಂಧನ ದಕ್ಷತೆ ಹೆಚ್ಚೇ ಎಂದು ಹೇಳಬಹುದು.

ಇಷ್ಟೆಲ್ಲಾ ವೇಗ-ಶಕ್ತಿ ಇರುವ ಜಿಎಲ್‌ಎ 220ಡಿಯಲ್ಲಿ ಸುರಕ್ಷತೆ ವಿಚಾರದಲ್ಲಿ ರಾಜಿಯಾಗಿಲ್ಲ. ಕಾರಿನಲ್ಲಿ ಕಾರ್ನರ್ ಸ್ಟೆಬಿಲಿಟಿ ಪ್ರೋಗ್ರಾಂ, ಡೈನಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್‌ ಇವೆ. ಜತೆಗೆ ಎತ್ತರ ಕಡಿಮೆ ಇರುವುದರಿಂದ ತಿರುವುಗಳಲ್ಲಿ-ಘಾಟ್‌ಗಳಲ್ಲಿ ವೇಗವಾಗಿ ಚಲಾಯಿಸಿದರೂ ಚಾಲಕನಿಗೆ ಕಾರಿನ ಮೇಲೆ ನಿಯಂತ್ರಣ ತಪ್ಪುವುದಿಲ್ಲ (ವೇಗದ ಚಾಲನೆಯನ್ನು ಖಾಸಗಿ ರಸ್ತೆ ಮತ್ತು ಖಾಸಗಿ ಮೈದಾನದಲ್ಲಿ ನಡೆಸಲಾಗಿತ್ತು. ಸಾರ್ವಜನಿಕ ರಸ್ತೆಗಳಲ್ಲಿ ವೇಗದ ಚಾಲನೆ ಮತ್ತು ದಿಢೀರ್ ಲೇನ್ ಬದಲಾವಣೆ ದಂಡಾರ್ಹ ಮತ್ತು ಶಿಕ್ಷಾರ್ಹ ಅಪರಾಧ).

ಇನ್ನು ಕಾರಿನ ಬ್ರೇಕಿಂಗ್ ಚೆನ್ನಾಗಿದೆ. ನಾಲ್ಕೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳಿವೆ. ಎಬಿಎಸ್, ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರುಬ್ಯೂಷನ್ ಮತ್ತು ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್ ಇರುವುದರಿಂದ ಭಾರಿ ವೇಗದಲ್ಲಿದ್ದಾಗ ದಿಢೀರ್ ಎಂದು ಬ್ರೇಕ್ ಒತ್ತಿದಾಗಲೂ ಜಿಎಲ್ಎ 220 ಡಿ ನಿರಾಯಾಸವಾಗಿ ನಿಲ್ಲುತ್ತದೆ.

ಇವುಗಳ ಜತೆಯಲ್ಲೇ ಕಾರಿನ ಹವಾನಿಯಂತ್ರಣ ವ್ಯವಸ್ಥೆ, ಲೆದರ್‌ ಸೀಟುಗಳು ಮತ್ತು ನಯವಾದ ಸಸ್ಪೆನ್ಷನ್ ಪ್ರಯಾಣ-ಚಾಲನೆಯನ್ನು ಆರಾಮವಾಗಿಸುತ್ತದೆ. ಮ್ಯೂಸಿಕ್ ಸಿಸ್ಟಂ ಸಹ ಚೆನ್ನಾಗಿದೆ. ಆರು ಏರ್‌ಬ್ಯಾಗ್‌ಗಳು ಇರುವುದರಿಂದ ಸುರಕ್ಷತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಆದರೆ ಚಾಲನೆ ಸುರಕ್ಷಿತವಾಗಿರಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.