ADVERTISEMENT

ಹಾರ್ಲಿ ಡೇವಿಡ್‌ಸನ್‌ನ ಹೊಸ ಅವತಾರ

ಲೈವ್‌ವೈರ್‌ ವಿದ್ಯುತ್‌ ಬೈಕ್‌ ಮೋಡಿ

ನೇಸರ ಕಾಡನಕುಪ್ಪೆ
Published 4 ಮಾರ್ಚ್ 2015, 19:30 IST
Last Updated 4 ಮಾರ್ಚ್ 2015, 19:30 IST

ವಿದ್ಯುಚ್ಛಾಲಿತ ವಾಹನಗಳು ಸರಿಯಿಲ್ಲ ಎಂದು ಮೂಗು ಮುರಿಯುವವರೇ ಹೆಚ್ಚಿರುವಾಗ ಹಾರ್ಲಿ ಡೇವಿಡ್‌ಸನ್‌ ಏಕೆ ವಿದ್ಯುತ್‌ ಬೈಕ್‌ ಹೊರಬಿಟ್ಟಿದೆ ಎಂದು ಆಶ್ಚರ್ಯ ಆಗುವುದರಲ್ಲಿ ಅಸಹಜವಾದುದೇನೂ ಇಲ್ಲ. ಆದರೆ, ಹಾರ್ಲಿಗೆ ಚೆನ್ನಾಗಿ ಗೊತ್ತಿದೆ. ಭವಿಷ್ಯದ ವಾಹನಗಳು ವಿದ್ಯುಚ್ಛಾಲಿತವೇ ಎಂದು. ಅದಕ್ಕೇ ಭರವಸೆಯ ಉತ್ತಮ ಬೈಕ್‌ ಒಂದನ್ನು ನೀಡುವ ಪ್ರಯತ್ನವನ್ನು ಹಾರ್ಲಿ ಡೇವಿಡ್‌ಸನ್‌ ಮಾಡಿದ್ದು, ಅದರಲ್ಲಿ ಯಶಸ್ವಿಯೂ ಆಗಿದೆ.

ಈ ಭರವಸೆಯನ್ನು ಹೀಗೆ ಸಮರ್ಥಿಸಿಕೊಳ್ಳಬಹುದು. ಈ ವಿದ್ಯುಚ್ಛಾಲಿತ ಬೈಕ್‌ ಗರಿಷ್ಠ 150 ಕಿಲೋಮೀಟರ್‌ ವೇಗದಲ್ಲಿ ಚಲಿಸುತ್ತದೆ. ಈ ವಿದ್ಯುತ್‌ಚ್ಛಾಲಿತ ಬೈಕ್‌ ಕನಿಷ್ಠ 150 ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ. ಈ ವಿದ್ಯುಚ್ಛಾಲಿತ ಬೈಕ್‌ ಅತ್ಯುತ್ತಮ ವಿನ್ಯಾಸ ಹೊಂದಿದೆ. ಈ ವಿದ್ಯುಚ್ಛಾಲಿತ ಬೈಕ್‌ ದೀರ್ಘಕಾಲ ಬಾಳಿಕೆ ಬರಲಿದೆ.

ಇಷ್ಟು ಸಾಕು ಈ ಬೈಕ್‌ ಅನ್ನು ಸಾಂಪ್ರದಾಯಿಕ ಬೈಕ್‌ಗಳ ಜತೆ ಸರಿಸಮನಾಗಿ ನಿಲ್ಲುವಂತೆ ಮಾಡಲು. ಅಷ್ಟೇ ಏಕೆ? ಈ ಬೈಕ್‌ ಅನ್ನು ಎಲ್ಲ ಬೈಕ್‌ಗಳ ಮುಂಚೆ ನಿಲ್ಲುವಂತೆ ಮಾಡಲು, ಅಂತೆಯೇ ಹಾರ್ಲಿ ಡೇವಿಡ್‌ಸನ್‌ ಕ್ರೂಸರ್‌ ತಯಾರಿಯಲ್ಲಿ ಮೊದಲಿನಿಂದಲೂ ಮುಂದಿದೆ. ಭವಿಷ್ಯದಲ್ಲಿ ಪೆಟ್ರೋಲಿಯಂ ಇಂಧನಗಳು ಖಾಲಿಯಾದ ಮೇಲೂ ತಾನು ವಿದ್ಯುತ್‌ ಕ್ಷೇತ್ರದಲ್ಲೂ ನಾಯಕತ್ವ ಸಾಧಿಸಲು ಏನೇನು ತಯಾರಿ ಬೇಕೋ ಅದನ್ನೆಲ್ಲಾ ಹಾರ್ಲಿ ಈಗಾಗಲೇ ಮಾಡಿಕೊಂಡಂತಿದೆ. ಅದಕ್ಕೆ ಲೈವ್‌ವೈರ್‌ ಅನ್ನುವ ಈ ಹೊಸ ಬೈಕ್‌ ಸಾಕ್ಷಿಯಾಗಿದೆ.

ಸಂಪೂರ್ಣ
ವಿದ್ಯುತ್‌ ಬೈಕ್‌

ಇದರ ಹೆಸರೇ ಸೂಚಿಸುತ್ತದೆ ಇದೊಂದು ಪರಿಪೂರ್ಣ ವಿದ್ಯುಚ್ಛಾಲಿತ ಬೈಕ್‌ ಎಂದು. ಪ್ರೋಟೊಟೈಪ್‌ ಹಂತದಲ್ಲಿರುವ ಈ ಹಾರ್ಲಿ ಡೇವಿಡ್‌ಸನ್‌ ಲೈವ್‌ವೈರ್‌ ಪ್ರಪಂಚದ ಅನೇಕ ಭಾಗಗಳಲ್ಲಿ ಸಂಚರಿಸುತ್ತ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಬಹುತೇಕ ಕಡೆಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆಯೇ ಸಿಕ್ಕಿದೆ. ಇದರ ಅತ್ಯುತ್ತಮ ಗುಣಮಟ್ಟದ ಭವಿಷ್ಯತ್‌ ವಿನ್ಯಾಸ, ಟಿಎಫ್‌ಟಿ ಮಾಹಿತಿ ಪರದೆ, ಅಲಾಯ್ ಚಕ್ರಗಳು, ತೆಳುವಾದ ದೇಹ ಇದಕ್ಕೆ ಅತ್ಯುತ್ತಮ ನೋಟವನ್ನು ನೀಡಿದ್ದು, ಮೊದಲ ನೋಟದಲ್ಲೇ ಗಮನ ಸೆಳೆಯುವಂತೆ ಮಾಡುತ್ತವೆ.

ಎಂಜಿನ್‌ ಅಲ್ಲ ಮೋಟಾರ್‌!
ವಿದ್ಯುತ್‌ ವಾಹನಗಳಲ್ಲಿ ಎಂಜಿನ್‌ನ ಬದಲಾಗಿ ಮೋಟಾರ್‌ ಇರುತ್ತದೆ. ಲೈವ್‌ವೈರ್‌ನಲ್ಲಿ 75 ಬಿಎಚ್‌ಪಿ ಶಕ್ತಿಯ ಮೋಟಾರ್‍ ಇದೆ. ಈ ಎಂಜಿನ್‌ ಲೈವ್‌ವೈರ್‌ ಅನ್ನು ಗರಿಷ್ಠ 150 ಕಿಲೋಮೀಟರ್‌ ವೇಗ ಮುಟ್ಟುವಂತೆ ಮಾಡುತ್ತದೆ. ಜತೆಗೆ 0 ಇಂದ 100 ಕಿಲೋಮೀಟರ್‌ ವೇಗವನ್ನು ಕೇವಲ 4 ಸೆಕೆಂಡ್‌ಗಳಲ್ಲಿ ಮುಟ್ಟುವಂತೆ ಮಾಡುತ್ತದೆ. ಇದರ ಎರಡೂ ಅಲಾಯ್‌ ಚಕ್ರಗಳು ಅತ್ಯಂತ ಹಗುರವಾಗಿವೆ. ಕೇವಲ 7 ಕೆ.ಜಿ ತೂಕವನ್ನು ಹೊಂದಿರುವುದು ಹೆಚ್ಚು ಮೈಲೇಜ್‌ ನೀಡುವಂತೆ ಮಾಡುತ್ತವೆ. ಅಂತೆಯೇ, ಅಲಾಯ್‌ ಚಕ್ರಗಳಾಗಿರುವುದರಿಂದ ಗಡುಸಾಗೂ ಇದ್ದು, ಉತ್ತಮ ಚಾಲನೆಯನ್ನು ನೀಡುತ್ತವೆ.

ಲೈವ್‌ವೈರ್‌ನಲ್ಲಿ ಚೈನ್‌ ಡ್ರೈವ್‌ನ ಬದಲಾಗಿ ಬೆಲ್ಟ್‌ ಡ್ರೈವ್‌ ನೀಡಲಾಗಿದೆ. ಇದು ಬೈಕ್‌ಗೆ ನಿಶ್ಶಬ್ದ ಚಾಲನೆಯನ್ನು ನೀಡುವ ಜತೆಗೆ, ಕಡಿಮೆ ಘರ್ಷಣೆ ನೀಡುತ್ತದೆ. ಹಾಗಾಗಿ, ಮೈಲೇಜ್‌ ಹೆಚ್ಚುತ್ತದೆ. ಈ ಬೈಕ್‌ನಲ್ಲಿ ಕ್ಲಚ್‌ ಇಲ್ಲ, ಗಿಯರ್‌ ಇಲ್ಲ. ಕೇವಲ ಬ್ರೇಕ್‌ ಹಾಗೂ ಎಕ್ಸಿಲರೇಟರ್‌ ಮಾತ್ರ. ಜತೆಗೆ, ಬೈಕ್‌ನಲ್ಲಿ ಎರಡು ಚಾಲನಾ ವಿಧಾನಗಳನ್ನು ನೀಡಲಾಗಿದೆ. ಎಕೊ ಹಾಗೂ ಸ್ಪೋರ್ಟ್ ಎಂದು. ಎಕೊ ಮೋಡ್‌ ಹೆಚ್ಚು ಮೈಲೇಜ್‌ ನೀಡುತ್ತದೆ. ಸ್ಪೋರ್ಟ್ ಮೋಡ್‌ ಬೈಕ್‌ ಅನ್ನು ದೈತ್ಯ ಎಂಬಂತೆ ಬಿಂಬಿಸುತ್ತದೆ. ಆದರೆ, ಮೈಲೇಜ್‌ ಕುಸಿಯುತ್ತದೆ.
ಲೀಥಿಯಂ ಪಾಲಿಮರ್‌ ಬ್ಯಾಟರಿಯನ್ನು ಹೊಂದಿದ್ದು, ಅತಿ ಕಡಿಮೆ ಜಾಗವನ್ನು ಇದು ಆಕ್ರಮಿಸುತ್ತದೆ. ಜತೆಗೆ, ಬಾಳಿಕೆಯೂ ಹೆಚ್ಚು. ಹಾರ್ಲಿ ಡೇವಿಡ್‌ಸನ್‌ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್‌ ಬೈಕ್‌ಗಳು ತರಲೆಯಲ್ಲ ಎಂಬುದನ್ನೂ ಸಾಬೀತು ಮಾಡಲು ಹೊರಟಿದೆ.

ಅಂದ ಹಾಗೆ ಬೆಲೆಯ ಪ್ರಶ್ನೆ. ಈ ಬೈಕ್‌ ಭವಿಷ್ಯತ್‌ ವಿನ್ಯಾಸ ಹಾಗೂ ತಂತ್ರಜ್ಞಾನ ಹೊಂದಿರುವುದರಿಂದ ಬೆಲೆ ಹೆಚ್ಚೇ ಇರುತ್ತದೆ. ಸಾಂಪ್ರದಾಯಿಕ ಹಾರ್ಲಿ ಬೈಕ್‌ಗಳೇ 7 ಲಕ್ಷ ರೂಪಾಯಿಯಿಂದ ಆರಂಭವಾಗುತ್ತವೆ. ಇನ್ನು ಈ ಹೊಸ ತಂತ್ರಜ್ಞಾನದ ಬೈಕ್‌ನ ಬೆಲೆ ಖಂಡಿತ ಹೆಚ್ಚೇ ಇರುತ್ತದೆ. ಬೈಕ್‌ ಪರಿಣಿತರ ಅಂದಾಜಿನ ಪ್ರಕಾರ ಇದರ ಬೆಲೆ ಭಾರತದಲ್ಲಿ ಅಂದಾಜು 14 ಲಕ್ಷ ರೂಪಾಯಿ ಆಗಲಿದೆ. ಬೆಲೆ ಕೊಂಚ ಹೆಚ್ಚೇ ಆಯಿತು. ಆದರೆ, ಹಾರ್ಲಿ ಶ್ರೀಮಂತರ ಬೈಕ್‌. ವಿದ್ಯುತ್‌ ಬೈಕ್‌ ಹೊಂದುವ ಆಸೆ ಇರುವ ಶ್ರೀಮಂತರು ಖಂಡಿತ ಈ ಬೈಕ್‌ ಅನ್ನು ಕೊಂಡುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.