ADVERTISEMENT

ಹೆಜ್ಜೆ ಗುರುತಿನ ಹಾದಿ...

ಪೃಥ್ವಿರಾಜ್ ಎಂ ಎಚ್
Published 12 ಆಗಸ್ಟ್ 2015, 19:40 IST
Last Updated 12 ಆಗಸ್ಟ್ 2015, 19:40 IST

ಪ್ರತೀಕ್‌ ದೋಸಿ

‘ಛತ್ರಿ’ ಹುಡುಗನ ಸಾಧನೆಯ ಕಥೆ ಇದು. ಪ್ರತೀಕ್‌ ದೋಸಿ ಮುಂಬೈ ಮೂಲದವರು. ಎಂಬಿಎ ಮಾಡಿದರೆ ಯಾವುದಾದರೂ ಒಂದು ಕಂಪೆನಿಯಲ್ಲಿ ಕೆಲಸ ಸಿಗುತ್ತದೆ ಎಂಬ ಕನಸಿನೊಂದಿಗೆ ಶಿಕ್ಷಣ ಪೂರೈಸಿದವರು. ಆದರೆ ಅವರ ಕನಸು ನನಸಾಗಲಿಲ್ಲ. ಮನೆಯಲ್ಲಿ ಕೆಲಸ ಹುಡುಕು ಎಂಬ ಒತ್ತಡ ಹೆಚ್ಚುತ್ತಿತ್ತು. ಇತ್ತ ಕೆಲಸ ಸಿಗುತ್ತಿರಲಿಲ್ಲ. ಕಾಲೇಜು ದಿನಗಳಲ್ಲಿ ಉಳಿತಾಯ ಮಾಡಿದ್ದ ಒಂದು ಲಕ್ಷ ರೂಪಾಯಿ ಕೈಯಲ್ಲಿತ್ತು. ಈ ಹಣದಲ್ಲಿ ಏನಾದರೂ ವ್ಯವಹಾರ ಮಾಡಬೇಕು  ಎಂದು ಯೋಚಿಸಿದರು. ನೂತನ ವಿನ್ಯಾಸದ ಆಕರ್ಷಕ ಛತ್ರಿಗಳನ್ನು ತಯಾರಿಸಿ ಮಾರಾಟ ಮಾಡುವ ಉಪಾಯ ಹೊಳೆಯಿತು. ತಡ ಮಾಡದೆ ಒಂದು ಸಾವಿರ ಕೊಡೆಗಳನ್ನು ತಯಾರಿಸಿ ಮಾರಾಟಕ್ಕೆ ನಿಂತರು.

ಪ್ರತೀಕ್‌ ಅವರ ಕೊಡೆ ವ್ಯಾಪಾರವನ್ನು ಕಂಡ ಸಂಬಂಧಿಕರು ಮತ್ತು ಗೆಳೆಯರು ಗೇಲಿ ಮಾಡುತ್ತಿದ್ದರು. ಅವರ ಚಿಕ್ಕಪ್ಪ ‘ನೀನು ಉದ್ಧಾರ ಆಗೋಲ್ಲ’ ಎಂದು ಭವಿಷ್ಯ ನುಡಿದಿದ್ದರು. ಇದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದ ಪ್ರತೀಕ್‌, ಕಾಯಕ ತತ್ವದಲ್ಲಿ ನಂಬಿಕೆ ಇಟ್ಟು ದುಡಿಯುತ್ತಿದ್ದರು. ಸಾವಿರ ಕೊಡೆಗಳು ಮಾರಾಟವಾಗಿ ಎಂಟು ಲಕ್ಷ ರೂಪಾಯಿ ಲಾಭ ಬಂದಿತ್ತು. ಇದೇ ಗೆಲುವಿನ ವಿಶ್ವಾಸದಲ್ಲಿ 2014ರಲ್ಲಿ ‘ಚುಕ್ಕಿ ಚುಂಕ್‌’ ಕೊಡೆ ತಯಾರಿಸುವ ಉದ್ಯಮ ಆರಂಭಿಸಿದರು. ಮೊದಲ ಬಾರಿಗೆ ಹತ್ತು ಸಾವಿರ ಕೊಡೆಗಳನ್ನು ತಯಾರಿಸಿದರು.

ಈ ಕೊಡೆಗಳು ಇ–ಕಾಮರ್ಸ್‌ನಲ್ಲಿ ಬಿಸಿ ದೋಸೆಯಂತೆ ಖರ್ಚಾಗಿದ್ದು ವಿಶೇಷ. ಇಲ್ಲಿಯವರೆಗೂ 25 ಸಾವಿರ ಕೊಡೆಗಳನ್ನು ತಯಾರಿಸಿ ಮಾರಾಟ ಮಾಡಿರುವ ಪ್ರತೀಕ್‌ ಕೇವಲ 12 ತಿಂಗಳ ಅಂತರದಲ್ಲಿ 40 ಲಕ್ಷ ರೂಪಾಯಿ ಲಾಭ ಪಡೆದಿದ್ದಾರೆ. ಒಮ್ಮೆ ನಿಂದಿಸಿದ್ದ ಅವರ ಚಿಕ್ಕಪ್ಪ ಅಮೆಜಾನ್‌ ಜಾಲತಾಣದಲ್ಲಿ ಪ್ರತೀಕ್‌ ಕೊಡೆಯನ್ನು ಖರೀದಿಸಿದ್ದರಂತೆ. ಇದು ಪ್ರತೀಕ್‌ ಕಂಪೆನಿಯ ಕೊಡೆ ಎಂದು ತಿಳಿದಾಗ ಪಶ್ಚಾತ್ತಾಪ ಪಟ್ಟಿದ್ದರು ಎಂದು ಪ್ರತೀಕ್‌ ಹೇಳುತ್ತಾರೆ. ಗಲ್ಲಿ ಗಲ್ಲಿಗಳಲ್ಲಿ ಕೊಡೆ ಮಾರುವವರು ಮತ್ತು ತಯಾರಕರು ಸಿಗುತ್ತಾರೆ.

ಆದರೆ ಜನರನ್ನು ಆಕರ್ಷಿಸುವಂತಹ ಕೊಡೆಗಳನ್ನು ತಯಾರಿಸಿದರೆ ಯಾವುದೇ ಕಾರಣಕ್ಕೂ ನಷ್ಟವಾಗುವುದಿಲ್ಲ ಎನ್ನುತ್ತಾರೆ ಪ್ರತೀಕ್‌. ದೇಶದ ಎಲ್ಲಾ ಮಾರುಕಟ್ಟೆಯಲ್ಲಿ ಚುಕ್ಕಿ ಚುಂಕ್‌ ಕೊಡೆಗಳು ಲಭ್ಯ. ಕಂಪೆನಿಯ ವೆಬ್‌ಸೈಟ್‌ ಮೂಲಕ  ಆಕರ್ಷಕ ವಿನ್ಯಾಸದ ಛತ್ರಿಗಳನ್ನು ಕೊಂಡುಕೊಳ್ಳಬಹುದು. ನಿಂದಕರ ಮಾತಿಗೆ ಕಿವಿ ಕೊಡದೆ ಸಾಧನೆಯ ಶಿಖರ ಮುಟ್ಟಿದ ಪ್ರತೀಕ್‌ ಸಾಧನೆ ನಿಜಕ್ಕೂ ಮಾದರಿ.
­www.cheekychunk.com/

ತ್ರೀ ಈಡಿಯಟ್ಸ್‌

ಆಸಂ ಕಂಪೆನಿಯ ಮಾಲೀಕರನ್ನು ಕಂಪೆನಿಯಲ್ಲಿ ತ್ರೀ ಈಡಿಯಟ್ಸ್ ಎಂದೇ ಕರೆಯುವ ಪರಿಪಾಠವಿದೆ. ದೆಹಲಿ ಮೂಲದ ನಿತಿನ್‌, ದೀಪಕ್‌ ಎಂ.ಟೆಕ್‌ ಪದವೀಧರರು. ಅಂಕಿತ್‌ ಮುಂಬೈ ಮೂಲದ ಎಂಜಿನಿಯರಿಂಗ್‌ ಪದವೀಧರ. ನಿತಿನ್‌ ಮತ್ತು ದೀಪಕ್‌ ಗುರಗಾಂವ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದವರು. ರಾತ್ರಿ ಸಮಯದಲ್ಲಿ ವಿದ್ಯುತ್‌ ಕೈಕೊಟ್ಟರೆ ಮಹಡಿಯ ಮೇಲೆ ಕುಳಿತು ನಕ್ಷತ್ರ ಎಣಿಸುತ್ತಿದ್ದರು. ಕೆಲಸವಿಲ್ಲದೆ ನಕ್ಷತ್ರ ಎಣಿಸುವಾಗ ಸ್ನೇಹಿತರಾದವರು ಇವರು.

ADVERTISEMENT

   ಶೂನ್ಯ ಬಂಡವಾಳದಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಟು, ಹಣವನ್ನು ಕಳೆದುಕೊಂಡರು. ಕೊನೆಗೆ ಪೋಷಕರ ಬೈಗುಳ ಅತಿಯಾದಾಗ ಕೆಲಸ ಹುಡುಕ ತೊಡಗಿದರು. ನಿತಿನ್‌ ದೆಹಲಿಯಲ್ಲಿ ಮತ್ತು ಅಂಕಿತ್‌ ಮುಂಬೈನಲ್ಲಿ ಕೆಲಸಕ್ಕೆ ಸೇರಿದರು. ಒಮ್ಮೆ ದೀಪಕ್‌ ಕೆಲಸದ ಮೇಲೆ ದೆಹಲಿಗೆ ಬಂದು ನಿತಿನ್‌ ಅವರನ್ನು ಭೇಟಿಯಾದರು. ಇದೇ ವೇಳೆಗೆ ಅಂಕಿತ್‌ ಕೂಡ ಜೊತೆಯಾದರು.

ಆಗ ಹುಟ್ಟಿದ್ದೇ ಆಸಂ ಕಂಪೆನಿ. ಇದು  ವಸ್ತುಗಳ ಬಳಕೆದಾರರ ಕೈಪಿಡಿಯನ್ನು ತಯಾರಿಸುವ ಕಂಪೆನಿ. ಯಾವುದೇ ಒಂದು ಪುಸ್ತಕದ ಸಂಕ್ಷಿಪ್ತ ಮಾಹಿತಿ, ಉತ್ಪಾದಿತ ವಸ್ತುಗಳ ಮಾಹಿತಿ ಕೈಪಿಡಿಯನ್ನು ಸಂಕ್ಷಿಪ್ತವಾಗಿ ಬರೆದು ಗ್ರಾಹಕರಿಗೆ ನೀಡುವ ಕೆಲಸ ಮಾಡುತ್ತಿದೆ. ಜಾಹೀರಾತು, ಸುದ್ದಿ, ವಸ್ತುಗಳು, ದೇಶ, ವಿದೇಶ, ಪ್ರವಾಸ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಆಸಂ ಕೆಲಸ ಮಾಡುತ್ತಿದೆ.

ಜಾಗತಿಕ ಮಟ್ಟದ ನೂರಾರು ಕಂಪೆನಿಗಳಿಗೆ ಬಳಕೆದಾರರ ಕೈಪಿಡಿಯನ್ನು ಒದಗಿಸುತ್ತಿದೆ. ಇಂದು ದೀರ್ಘವಾಗಿರುವ ಲೇಖನ, ಸುದ್ದಿ ಅಥವಾ ಬಳಕೆದಾರರ ಕೈಪಿಡಿಯನ್ನು ಓದಲು ಯಾರು ಇಚ್ಛಿಸುವುದಿಲ್ಲ? ಹೀಗಾಗಿ ಅದನ್ನು ಸರಳವಾಗಿ ಬರೆದು ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದೇವೆ ಎನ್ನುತ್ತಾರೆ ನಿತಿನ್‌. ಶೂನ್ಯ ಬಂಡವಾಳದಲ್ಲಿ ಆರಂಭವಾದ ಈ ಕಂಪೆನಿ ಇಂದು ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಸೋತು ಗೆದ್ದ ಈ ಹುಡುಗರ ಸಾಧನೆ ನಮ್ಮ ಯುವ ಜನಾಂಗಕ್ಕೆ ದಾರಿ ದೀಪ.
www.awesummly.com/

ಪೂರ್ವೇಶ್‌ ಮತ್ತು ತಂಡ

ಅದು ಬಿಹಾರ ರಾಜ್ಯದ ಸಣ್ಣ ಪಟ್ಟಣ. ಮನೆಯ ವರಾಂಡದಲ್ಲಿ ವಯೋವೃದ್ಧ ದಂಪತಿ ಸ್ಮಾರ್ಟ್‌ಫೋನ್‌ ಪರದೆಯ ಮೇಲೆ ದೃಷ್ಟಿ ನೆಟ್ಟಿದ್ದರು. ಆ ದೃಶ್ಯದಲ್ಲಿ ಅವರು ಒಂದೂವರೆ ವರ್ಷದ ಮೊಮ್ಮಗ ಸಿಹಿ ನಿದ್ರೆ ಸವಿಯುತ್ತಿದ್ದ. ಆ ಮಗು ದೆಹಲಿಯ ಶಿಶುಪಾಲನಾ ಕೇಂದ್ರದಲ್ಲಿ ನಿದ್ದೆ ಮಾಡುತ್ತಿದ್ದರೆ, ಈ ದಂಪತಿ ಬಿಹಾರದಲ್ಲಿ ಕುಳಿತು ಕಣ್ತುಂಬಿಕೊಳ್ಳುತ್ತಿದ್ದರು. ಇದು ಸಾಧ್ಯವಾಗಿದ್ದು ಪೂರ್ವೇಶ್‌ ಬಳಸಿಕೊಂಡ ತಂತ್ರಜ್ಞಾನದ ಫಲದಿಂದ. ಯುವ ಉದ್ಯಮಿ ಪೂರ್ವೇಶ್‌ ತನ್ನ ಗೆಳೆಯರ ಜೊತೆ ಸೇರಿ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಕಟ್ಟಿದ ‘ಫುಟ್‌ಪ್ರಿಂಟ್ಸ್‌’ ಕಂಪೆನಿಯ ಯಶಸ್ವಿ ಕಥೆ ಇದು.

ದೆಹಲಿಯ ಪೂರ್ವೇಶ್‌ ಶರ್ಮಾ, ರಾಜ್‌ ಸಿಂಗಾಲ್‌ ಮತ್ತು ಆಶಿಶ್ ಅಗರ್‌ವಾಲ್‌ ಮೂವರು ಗೆಳೆಯರು. ಪಿಯುಸಿ ಓದುವಾಗ ಚಡ್ಡಿ ದೋಸ್ತಿಗಳಾಗಿದ್ದವರು. ಅದ್ಯಾಕೋ ಪದವಿಯಲ್ಲಿ ಜೊತೆಯಾಗಿ ಓದಲಿಲ್ಲ. ಪೂರ್ವೇಶ್‌ ಎಂಜಿನಿಯರಿಂಗ್‌ ಸೇರಿದರೆ, ರಾಜ್‌ ಮತ್ತು ಆಶಿಶ್‌ ಕಾಮರ್ಸ್‌ ಪದವಿಗೆ ಸೇರಿದರು. ಹತ್ತು ವರ್ಷಗಳ ಬಳಿಕ ಈ ಸ್ನೇಹಿತರು ಮತ್ತೆ ದೆಹಲಿಯಲ್ಲಿ ಜೊತೆಯಾದರು. ಪೂರ್ವೇಶ್ ಸಾಫ್ಟ್‌ವೇರ್‌ ಕಂಪೆನಿ ನಡೆಸುತ್ತಿದ್ದರು. ಆಶಿಶ್‌ ಮತ್ತು ರಾಜ್‌ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಪೂರ್ವೇಶ್‌ಗೆ ಕಬೀರ್‌ ಎಂಬ ಮಗ ಹುಟ್ಟಿದ್ದ. ಎರಡು ವರ್ಷದ ಕಬೀರ್‌ನನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಪೂರ್ವೇಶ್‌ ಪತ್ನಿಯ ಜೊತೆ ಕೆಲಸಕ್ಕೆ ಹೋಗಬೇಕಾಗಿತ್ತು.

ಈ ಕೇರ್‌ ಸೆಂಟರ್‌ಗಳಲ್ಲಿ ಪರಿಣಾಮಕಾರಿ ಶಿಕ್ಷಣ ಮತ್ತು ಮಕ್ಕಳ ಮೇಲೆ ಸರಿಯಾದ ಕಾಳಜಿ ಇಲ್ಲದಿರುವುದು ಪೂರ್ವೇಶ್‌ ಗಮನಕ್ಕೆ ಬಂತು. ಮಕ್ಕಳ ಮಿದುಳಿನ ಬೆಳವಣಿಗೆ ಪಕ್ವಗೊಳ್ಳುವುದು ನಾಲ್ಕು ವರ್ಷದಿಂದ ಆರು ವರ್ಷದೊಳಗೆ ಎಂಬುದನ್ನು ಅರಿತಿದ್ದ ಪೂರ್ವೇಶ್‌ ಕಬೀರ್‌ನನ್ನು ಇಂತಹ ಕೇಂದ್ರಗಳಲ್ಲಿ ಬಿಟ್ಟರೆ ಬುದ್ಧಿಮತ್ತೆ ಬೆಳವಣಿಗೆಯಾಗುವುದಿಲ್ಲ ಎಂಬುದನ್ನು ಅರಿತು ಗೆಳೆಯರ ಜೊತೆ ಸೇರಿ  2012ರಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಿದರು. ಇಲ್ಲಿ ಪೋಷಕರು, ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೋಡಬಹುದು. ಇಲ್ಲಿ ವೈಜ್ಞಾನಿಕ ಪದ್ಧತಿಯ ಶಿಕ್ಷಣ ಮತ್ತು ಉತ್ತಮವಾಗಿ ಮಕ್ಕಳನ್ನು ಆರೈಕೆ ಮಾಡಲಾಗುವುದು. ಕಬೀರ್‌ ದೆಸೆಯಿಂದ ‘ಹೆಜ್ಜೆ ಗುರುತು’ ಹುಟ್ಟಿತು ಎನ್ನುತ್ತಾರೆ ಪೂರ್ವೇಶ್‌.
www.footprintseducation.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.