ADVERTISEMENT

ಈವರೆಗೆ ನನ್ನೆದುರು ಕೊಹ್ಲಿ ಆಟ ನಡೆದಿಲ್ಲ: ಪಾಕಿಸ್ತಾನ ವೇಗಿ ಜುನೈದ್‌

ಏಜೆನ್ಸೀಸ್
Published 27 ಮೇ 2017, 13:03 IST
Last Updated 27 ಮೇ 2017, 13:03 IST
ಈವರೆಗೆ ನನ್ನೆದುರು ಕೊಹ್ಲಿ ಆಟ ನಡೆದಿಲ್ಲ: ಪಾಕಿಸ್ತಾನ ವೇಗಿ ಜುನೈದ್‌
ಈವರೆಗೆ ನನ್ನೆದುರು ಕೊಹ್ಲಿ ಆಟ ನಡೆದಿಲ್ಲ: ಪಾಕಿಸ್ತಾನ ವೇಗಿ ಜುನೈದ್‌   

ನವದೆಹಲಿ: ಮಿನಿ ವಿಶ್ವಕಪ್‌ ಖ್ಯಾತಿಯ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪಾಕಿಸ್ತಾನ ತಂಡದ ವೇಗದ ಬೌಲರ್‌ ಜುನೈದ್‌ ಖಾನ್‌, ‘ಈವರೆಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಆಟ ನನ್ನೆದುರು ನಡೆದಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಪಾಕಿಸ್ತಾನ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಜುನೈದ್‌, ‘ಕೊಹ್ಲಿ ಉತ್ತಮ ಬ್ಯಾಟ್ಸ್‌ಮನ್‌ ಆದರೆ ಆತ ಈ ಹಿಂದೆ ಮುಖಾಮುಖಿಯಾಗಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಬಾರಿ ನನಗೆ ವಿಕೆಟ್‌ ಒಪ್ಪಿಸಿದ್ದಾರೆ’ ಎಂದಿದ್ದಾರೆ.

‘ಈ ಹಿಂದೆ ಕೊಹ್ಲಿಗೆ ಭಾರತದಲ್ಲಿ ಆತನ ಅಭಿಮಾನಿಗಳೆದುರೇ ಬೌಲಿಂಗ್‌ ಮಾಡಿದ್ದೆ. ಆದರೆ ಈ ಬಾರಿ ಇಂಗ್ಲೆಂಡ್‌ನಲ್ಲಿ ಬೌಲಿಂಗ್‌ ಮಾಡಲಿರುವುದರಿಂದ ಯಾವುದೇ ತೊಂದರೆಯಿಲ್ಲ. ಈ ಹಿಂದೆ ನನ್ನೆದುರು ಆಡಿದ್ದ ಕೊಹ್ಲಿ ಎಂದು ಭಾವಿಸಿಯೇ ನನ್ನ ಆಟ ಮುಂದುವರಿಸುತ್ತೇನೆ. ಅವರು ಸಹ ನನ್ನ ಬಗ್ಗೆ ಅದೇ ಭಾವನೆ ಹೊಂದಿರಲಿದ್ದಾರೆ’ ಎಂದು ಜುನೈದ್‌ ಹೇಳಿಕೊಂಡಿದ್ದಾರೆ.

ADVERTISEMENT

‘ಕೊಹ್ಲಿ ವಿಶ್ವದ ಎಲ್ಲಾ ಬೌಲರ್‌ಗಳಿಗೆ ಬೌಂಡರಿ ಸಿಕ್ಸರ್‌ಗಳನ್ನು ಭಾರಿಸಿದ್ದಾರೆ. ಆದರೆ ನನ್ನೆದುರು ಅವರಿಂದ ಅಂತಹ ಸಾಧನೆ ಸಾಧ್ಯವಾಗಿಲ್ಲ. ಆ ಅಂಕಿ ಅಂಶವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ– ಪಾಕಿಸ್ತಾನ ತಂಡಗಳು ಜೂನ್‌ 4ರಂದು ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.