ADVERTISEMENT

ಎಂಇಜಿಯಲ್ಲಿ ಕ್ರೀಡಾಪಟುಗಳ ಆಯ್ಕೆ

ಪಿಟಿಐ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಎಂಇಜಿಯಲ್ಲಿ ಕ್ರೀಡಾಪಟುಗಳ ಆಯ್ಕೆ
ಎಂಇಜಿಯಲ್ಲಿ ಕ್ರೀಡಾಪಟುಗಳ ಆಯ್ಕೆ   

ಬೆಂಗಳೂರು: ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಅಂಡ್‌ ಸೆಂಟರ್‌ನ (ಎಂಇಜಿ ಅಂಡ್‌ ಸಿ) ಬಾಯ್ಸ್‌ ಸ್ಪೋರ್ಟ್ಸ್ ಕಂಪನಿಗೆ ಯುವ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಿದೆ.

ಬಾಕ್ಸಿಂಗ್, ಹಾಕಿ, ಈಜು ಮತ್ತು ಸೇಲಿಂಗ್‌ ಪಟುಗಳ ಆಯ್ಕೆ ಟ್ರಯಲ್ಸ್‌ ಜೂನ್‌ ನಾಲ್ಕರಿಂದ ಏಳರ ವರೆಗೆ ನಡೆಯಲಿದೆ. ನಗರದ ಲೂಂಬಾ ಕ್ರೀಡಾಂಗಣದಲ್ಲಿ ಪ್ರತಿ ದಿನ ಬೆಳಿಗ್ಗೆ ಒಂಬತ್ತು ಗಂಟೆಗೆ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ.

ಆಯ್ಕೆ ಬಯಸುವವರಿಗೆ ಜೂನ್‌ ಒಂದರಂದು ಎಂಟು ವರ್ಷ ತುಂಬಿರಬೇಕು ಮತ್ತು 14 ವರ್ಷ ಮೀರಿರಬಾರದು. ಕನಿಷ್ಠ ನಾಲ್ಕನೇ ತರಗತಿ ತೇರ್ಗಡೆ ಹೊಂದಿರಬೇಕು, ಹಿಂದಿ ಮತ್ತು ಇಂಗ್ಲಿಷ್‌ ಭಾಷೆ ತಿಳಿದಿರಬೇಕು.

ADVERTISEMENT

ಎಂಟು ವರ್ಷದವರು 134 ಸೆ.ಮೀ ಎತ್ತರ ಮತ್ತು 29 ಕೆ.ಜಿ. ತೂಕ ಇರಬೇಕು, ಒಂಬತ್ತು ವರ್ಷದವರು 139 ಸೆಮಿ ಎತ್ತರ ಮತ್ತು 31 ಕೆ.ಜಿ. ತೂಕ, 10 ವರ್ಷದವರು 143 ಸೆಮೀ ಎತ್ತರ, 34 ಕೆ.ಜಿ. ತೂಕ, 12 ವರ್ಷದವರು 153 ಸೆಮೀ ಎತ್ತರ, 40 ಕೆ.ಜಿ.ತೂಕ, 13 ವರ್ಷದವರು 155 ಸೆಮೀ ಎತ್ತರ, 42 ಕೆ.ಜಿ. ತೂಕ, 14 ವರ್ಷದವರು 160 ಸೆಮೀ ಎತ್ತರ ಮತ್ತು 47 ಕೆ.ಜಿ. ತೂಕ ಇರಬೇಕು.

ಆಯ್ಕೆಯಾದವರಿಗೆ ಆರನೇ ತರಗತಿಯಿಂದ 10ನೇ ತರಗತಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಕೋಚ್‌ಗಳಿಂದ ತರಬೇತಿ ನೀಡಲಾಗುವುದು. ಹತ್ತನೇ ತರಗತಿ ತೇರ್ಗಡೆ ಹೊಂದಿದ ನಂತರ ಸೇನೆಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಬಾಯ್ಸ್ ಸ್ಪೋರ್ಟ್ಸ್ ಕಂಪನಿಯ ಪ್ರಭಾರ ಅಧಿಕಾರಿ ಕ್ಯಾಪ್ಟನ್‌ ಎ.ಕಿರಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭ್ಯರ್ಥಿಗಳು ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ, ಗ್ರಾಮ ಪಂಚಾಯ್ತಿಯಿಂದ ಪಡೆದ ಪ್ರಮಾಣಪತ್ರ, ತಹಶೀಲ್ದಾರರಿಂದ ಪಡೆದ ಪ್ರಮಾಣಪತ್ರ, ಕ್ರೀಡಾಕೂಟಗಳಲ್ಲಿ ಗಳಿಸಿದ ಪ್ರಶಸ್ತಿಗೆ ಸಂಬಂಧಿಸಿದ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡಿನ ಮೂಲ ಪ್ರತಿಯೊಂದಿಗೆ ಹಾಜರಾಗಬೇಕು.

ಈಚೆಗೆ ತೆಗೆದ ಆರು ಕಲರ್ ಭಾವಚಿತ್ರಗಳು, ಅಜ್ಜ–ಅಜ್ಜಿಯರೊಂದಿಗೆ ತೆಗೆದ ಚಿತ್ರ ಮತ್ತು ತಂದೆ ತಾಯಿಯ ಜೊತೆ ತೆಗೆದ ಚಿತ್ರಗಳನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಬರಬೇಕು ಎಂದು ಕಿರಣ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.