ADVERTISEMENT

ಕಬಡ್ಡಿ: ಪಲ್ಟನ್‌, ಪೈರೆಟ್ಸ್‌ಗೆ ಜಯ

ಪಿಟಿಐ
Published 19 ಸೆಪ್ಟೆಂಬರ್ 2017, 20:22 IST
Last Updated 19 ಸೆಪ್ಟೆಂಬರ್ 2017, 20:22 IST
ಪಟ್ನಾ ಪೈರೆಟ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡದ ಅಜಯ್‌ ಕುಮಾರ್ ಪಾಯಿಂಟ್ ಗಳಿಸಲು ಶ್ರಮಿಸಿದ ಕ್ಷಣ
ಪಟ್ನಾ ಪೈರೆಟ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡದ ಅಜಯ್‌ ಕುಮಾರ್ ಪಾಯಿಂಟ್ ಗಳಿಸಲು ಶ್ರಮಿಸಿದ ಕ್ಷಣ   

ರಾಂಚಿ : ಆಲ್‌ರೌಂಡ್ ಆಟ ಆಡಿದ ಪುಣೇರಿ ಪಲ್ಟನ್ ತಂಡದವರು ಪ್ರೊ ಕಬಡ್ಡಿ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯ ಸಾಧಿಸಿದರು.

ಸಂದೀಪ್ ನರ್ವಾಲ್‌ (9 ಪಾಯಿಂಟ್ಸ್‌) ಹಾಗೂ ರಾಜೇಶ್‌ ಮಂಡಲ್‌ (7 ಪಾಯಿಂಟ್ಸ್‌) ಅವರ ಅಮೋಘ ಆಟದ ಬಲದಿಂದ ಈ ತಂಡ 37–25 ಪಾಯಿಂಟ್‌ಗಳ ಜಯಭೇರಿ ಮೊಳಗಿಸಿತು.

ತಂಡಕ್ಕೆ ರೈಡರ್‌ಗಳು 15 ಪಾಯಿಂಟ್‌ಗಳನ್ನು ತಂದುಕೊಟ್ಟರೆ ಟ್ಯಾಕ್ಲಿಂಗ್ ವಿಭಾಗದವರು 17 ಪಾಯಿಂಟ್‌ಗಳನ್ನು ಗಳಿಸಿದರು. ಒಂಬತ್ತು ಪಾಯಿಂಟ್ ಗಳಿಸಿದ ಸುರ್ಜೀತ್ ಸಿಂಗ್ ಏಕಾಂಗಿ ಹೋರಾಟ ನಡೆಸಿದರೂ ಸ್ಟೀಲರ್ಸ್‌ಗೆ ಜಯದ ಸನಿಹ ಸುಳಿಯುವುದಕ್ಕೂ ಸಾಧ್ಯವಾಗಲಿಲ್ಲ.

ADVERTISEMENT

ಈ ಜಯದೊಂದಿಗೆ ಪುಣೇರಿ ಪಲ್ಟನ್‌ ‘ಎ’ ವಲಯದಲ್ಲಿ 11 ಪಂದ್ಯಗಳಲ್ಲಿ ಒಟ್ಟು 42 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿತು. ಸೋತರೂ ಹರಿಯಾಣ ಸ್ಟೀಲರ್ಸ್‌ನ ಎರಡನೇ ಸ್ಥಾನಕ್ಕೆ ಧಕ್ಕೆಯಾಗಲಿಲ್ಲ. ಈ ತಂಡ ಒಟ್ಟು 16 ಪಂದ್ಯಗಳನ್ನು ಆಡಿದೆ.

ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ಪುಣೇರಿ ಮೊದಲ ನಿಮಿಷದಲ್ಲೇ 2–0 ಅಂತರದ ಮುನ್ನಡೆ ಸಾಧಿಸಿತು. ಹರಿಯಾಣ ಸ್ಟೀಲರ್ಸ್‌ಗೆ ಎರಡನೇ ನಿಮಿಷದಲ್ಲಿ ವಜೀರ್ ಸಿಂಗ್ ರೈಡಿಂಗ್ ಮೂಲಕ ಮೊದಲ ಪಾಯಿಂಟ್ ಗಳಿಸಿಕೊಟ್ಟರು. ಆದರೆ ಐದು ನಿಮಿಷ ಗಳು ಮುಕ್ತಾಯಗೊಂಡಾಗ ಎರಡೂ ತಂಡದವರು ಸಮಬಲದ ಹೋರಾಟದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಒಂಬತ್ತನೇ ನಿಮಿಷದಲ್ಲಿ ರಾಜೇಶ್ ಮಂಡಲ್‌ ಪರಿಣಾಮಕಾರಿ ರೈಡಿಂಗ್ ಮೂಲಕ ತಂಡಕ್ಕೆ 7–4ರ ಮುನ್ನಡೆ ತಂದುಕೊಟ್ಟರು. ಉತ್ತರಾರ್ಧದ ಆರಂಭದಲ್ಲಿ ಸ್ಟೀಲರ್ಸ್ ಉತ್ತಮ ಆರಂಭ ಕಂಡರೂ ಅದರ ಲಾಭವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಮತ್ತೊಂದು ಪಂದ್ಯದಲ್ಲಿ ಬೆಂಗ ಳೂರು ಬುಲ್ಸ್ ತಂಡ ಪಟ್ನಾ ಪೈರೆಟ್ಸ್‌ ವಿರುದ್ಧ 32–36ರಿಂದ ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.