ADVERTISEMENT

ಕೊಳವೆ ಅಳವಡಿಕೆ ಕಾಮಗಾರಿಗೆ ಬಂಡೆಗಲ್ಲು ಅಡ್ಡಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಬ್‌ ಏರ್‌ ವ್ಯವಸ್ಥೆ ಕೆಲಸ

ಪ್ರಮೋದ ಜಿ.ಕೆ
Published 8 ಸೆಪ್ಟೆಂಬರ್ 2016, 19:42 IST
Last Updated 8 ಸೆಪ್ಟೆಂಬರ್ 2016, 19:42 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಬ್‌ ಏರ್‌ ಸೌಲಭ್ಯ ಅಳವಡಿಕೆ ಕಾರ್ಯಕ್ಕೆ ಅಡ್ಡಿಯಾಗಿರುವ ಬಂಡೆಗಲ್ಲುಗಳನ್ನು ಒಡೆಯುವ ಕಾಮಗಾರಿಯ ದೃಶ್ಯ –ಪ್ರಜಾವಾಣಿ ಚಿತ್ರ/ಆನಂದ ಭಕ್ಷಿ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಬ್‌ ಏರ್‌ ಸೌಲಭ್ಯ ಅಳವಡಿಕೆ ಕಾರ್ಯಕ್ಕೆ ಅಡ್ಡಿಯಾಗಿರುವ ಬಂಡೆಗಲ್ಲುಗಳನ್ನು ಒಡೆಯುವ ಕಾಮಗಾರಿಯ ದೃಶ್ಯ –ಪ್ರಜಾವಾಣಿ ಚಿತ್ರ/ಆನಂದ ಭಕ್ಷಿ.   

ಬೆಂಗಳೂರು:  ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಬ್‌ ಏರ್‌ ಸೌಲಭ್ಯ ಅಳವಡಿಕೆ ಕಾರ್ಯಕ್ಕೆ ಬಂಡೆಗಲ್ಲುಗಳು ಅಡ್ಡಿಯಾಗಿವೆ. ಆದ್ದರಿಂದ ಕೊಳವೆ ಆಳವಡಿಕೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.

ಕ್ರೀಡಾಂಗಣದ ಶೇ 90ರಷ್ಟು ಭಾಗದಲ್ಲಿ ಜಲ್ಲಿಕಲ್ಲು ಮತ್ತು ಆಂಧ್ರದ ಗೂಡೂರಿನಿಂದ ತಂದಿರುವ ಮರಳನ್ನು ಹಾಕಲಾಗಿದೆ. ಚಿಕ್ಕ ಕೊಳವೆಗಳ ಮೂಲಕ ದೊಡ್ಡಕೊಳವೆಗೆ ಸಂಪರ್ಕ ಕಲ್ಪಿಸುವ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ. ಆದರೆ ಬೌಂಡರಿ ಗೆರೆಯ ಬಳಿ ಎರಡು ಭಾಗಗಳಲ್ಲಿ ಬಂಡೆ ಒಡೆಯುವ ಕಾರ್ಯ ಒಂದು ವಾರದಿಂದ ನಡೆಯುತ್ತಿದೆ.

ಮೈದಾನದಲ್ಲಿ ಇರುವ ಎಲೆಕ್ಟ್ರಾನಿಕ್‌ ಪರದೆಯ ಬಳಿ ಕೊಳವೆಗಳನ್ನು ಹಾಕಲು ಭೂಮಿ ಅಗೆಯಲಾಗಿದೆ. ಅಲ್ಲಿಯೂ ಬಂಡೆಗಲ್ಲುಗಳಿಂದಾಗಿ ಅಡಚಣೆ ಉಂಟಾಗಿದೆ. ನಾಲ್ಕು ದಿನಗಳ ಹಿಂದೆ ಅಲ್ಲಿದ್ದ ಬಂಡೆಗಲ್ಲುಗಳನ್ನು ಒಡೆದು ಹಾಕಿರುವ ಕಾರ್ಮಿಕರು ಇದೀಗ ಕೊಳವೆ ಅಳವಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಈ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಪಿಚ್‌ ಕ್ಯುರೇಟರ್‌ ಶ್ರೀರಾಮ್‌ ಅವರು ‘ಪ್ರಜಾವಾಣಿ’ಗೆ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.

‘ದೊಡ್ಡ ಅಳತೆಯ ಕೊಳವೆಗಳನ್ನು ಹಾಕಲು ಮೈದಾನದ ಬೌಂಡರಿ ಗೆರೆಯ ಸುತ್ತಲೂ 12 ಅಡಿ ಆಳ ಭೂಮಿ ಅಗೆಯ ಲಾಗಿದೆ. ಎರಡು ಕಡೆ ಬಂಡೆಗಲ್ಲುಗಳು ಅಡ್ಡಿಪಡಿಸಿವೆ. ಕಲ್ಲುಗಳನ್ನು ಸ್ಪೋಟಿಸಿ ಭೂಮಿಯಲ್ಲಿ ಹುದುಗಿರುವ ಬಂಡೆಗಲ್ಲು ಗಳನ್ನು ತೆಗೆಯಲು ಆಗುವುದಿಲ್ಲ. ಇದ ರಿಂದ ಅಕ್ಕಪಕ್ಕದ ಕೆಲಸಕ್ಕೂ ಅಪಾಯ ವಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಯಂತ್ರ ಬಳಸದೇ ಕೈಕೆಲಸದ ಮೂಲಕ ವೇ ಬಂಡೆಗಲ್ಲುಗಳನ್ನು ಒಂದೊಂದಾಗಿ ತೆಗೆಯಲಾಗುತ್ತಿದೆ’ ಎಂದು ಶ್ರೀರಾಮ್ ತಿಳಿಸಿದ್ದಾರೆ.

‘ಜೂನ್‌ನಲ್ಲಿ ಆರಂಭವಾದ ಕಾಮಗಾರಿಯನ್ನು ಈ ತಿಂಗಳ ಅಂತ್ಯಕ್ಕೆ ಮುಗಿಸುವ ಗುರಿ ಹಾಕಿಕೊಂಡಿದ್ದೆವು. ಆದರೆ ಪದೇ ಪದೇ ಮಳೆ ಅಡ್ಡಿಪಡಿಸಿದ ಕಾರಣ ಆರಂಭದಲ್ಲಿಯೇ ಕಾಮಗಾರಿ ನಿಧಾನವಾಯಿತು. ಮೈದಾನದಲ್ಲಿನ ಮಣ್ಣನ್ನು ಆಲೂರಿನ ಮೈದಾನಕ್ಕೆ ಸಾಗಿಸ ಲು ಸಾಕಷ್ಟು ಸಮಯ ಹಿಡಿಯಿತು’ ಎಂದೂ ಅವರು ಹೇಳುತ್ತಾರೆ.

‘ಕೊಳವೆ ಅಳವಡಿಸಲು ಅಡ್ಡಿ ಯಾಗಿರುವ ಬಂಡೆಗಲ್ಲುಗಳನ್ನು ತೆಗೆ ಯುವ ಕೆಲಸ ಮುಗಿದ ಬಳಿಕ ಆ ಸ್ಥಳವನ್ನು ಸಮತಟ್ಟಾಗಿ ಮಾಡಲು ಮಣ್ಣು ಬಳಸಲಾಗುತ್ತದೆ. ಮೈದಾನದ ಸುತ್ತಲೂ ಹಾಕಲಾಗಿರುವ ಕೊಳವೆಗಳನ್ನು ಸಮತಟ್ಟಾಗಿ ಇರುವಂತೆ ನೋಡಿಕೊಳ್ಳ ಲಾಗಿದೆ. ಬಂಡೆಗಲ್ಲು ತೆಗೆದ ಸ್ಥಳದಲ್ಲಿ ಇನ್ನೂ ಹೆಚ್ಚು ಮಣ್ಣನ್ನು ಹಾಕಿ ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದೆ’ ಎಂದು ಶ್ರೀರಾಮ್‌ ಮಾಹಿತಿ ನೀಡಿದ್ದಾರೆ.

ಕಾರ್ಮಿಕರ ಸಂಖ್ಯೆ ಇಳಿಮುಖ: ಆಂಧ್ರ ಮೂಲದ ಗ್ರೇಟ್‌ ಸ್ಪೋರ್ಟ್ಸ್‌ ಇನ್‌ಫ್ರಾ ಗುತ್ತಿಗೆ ಸಂಸ್ಥೆ ಸಬ್‌ ಏರ್ ಸೌಲಭ್ಯ ಅಳವಡಿಸುವ ಕಾಮಗಾರಿ ನಿರ್ವಹಿಸು ತ್ತಿದೆ. ಕಾಮಗಾರಿಯ ಆರಂಭದಲ್ಲಿ ನೂರು ಕಾರ್ಮಿಕರು ಕೆಲಸ ಮಾಡು ತ್ತಿದ್ದರು. ಈಗ ಕಾರ್ಮಿಕರ ಸಂಖ್ಯೆ 70ಕ್ಕೆ ಇಳಿದಿದೆ.

‘ಸಬ್‌ ಏರ್‌ ಸೌಲಭ್ಯ ಅಳವಡಿಕೆ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಆದ್ದರಿಂದ ಈಗ ಹೆಚ್ಚು ಕೆಲಸವೇನಿಲ್ಲ. ಆದ್ದರಿಂದ ಕೆಲವು ಕಾರ್ಮಿಕರನ್ನು ಆಂಧ್ರಕ್ಕೆ ವಾಪಸು ಕಳುಹಿಸಲಾಗಿದೆ. ಬಂಡೆಗಲ್ಲು ಒಡೆಯುವ ಕಾರ್ಯ ಪೂರ್ಣಗೊಂಡರೆ ಬೇಗನೆ ಕಾಮಗಾರಿ ಯೂ ಮುಗಿಯಲಿದೆ’ ಎಂದು ಗ್ರೇಟ್‌ ಸ್ಪೋರ್ಟ್ಸ್ ಸಂಸ್ಥೆಯ ಸಿಬ್ಬಂದಿ ಹೇಳುತ್ತಾರೆ.

‘ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರ ಹುಲ್ಲು ಹಾಸಲಾಗುತ್ತದೆ. ಅದು ಮೈದಾನಕ್ಕೆ ಹೊಂದಿಕೊಳ್ಳಲು ಕನಿಷ್ಠ 45 ದಿನ ವಾದರೂ ಸಮಯ ಬೇಕಾಗುತ್ತದೆ. ನಂತರ ಪಂದ್ಯ ಆಯೋಜಿಸಲು ಮೈದಾನ ಮುಕ್ತವಾಗುತ್ತದೆ’ ಎಂದು ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವವರಲ್ಲಿ ಒಬ್ಬರಾದ ಪ್ರಶಾಂತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.