ADVERTISEMENT

ಟೆಂಡರ್‌ ಪ್ರಕ್ರಿಯೆ ಮುಂದೂಡಿಕೆ ಸಾಧ್ಯತೆ

ಪಿಟಿಐ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST

ನವದೆಹಲಿ (ಪಿಟಿಐ):  ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)  ಟೆಂಡರ್‌ ಹಂಚಿಕೆ ಹಕ್ಕಿನ ಅವಧಿಯು ಗೊಂದಲಮಯವಾಗಿದೆ ಎಂದು ಲೋಧಾ ಸಮಿತಿ ಹೇಳಿದೆ.

ಈ ಕುರಿತು ಸಮಿತಿಯು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಸ್ಪಷ್ಟನೆ ಕೇಳಿದೆ. ಹೀಗಾಗಿ ಮಂಗಳವಾರ ನಡೆಸಲು ಉದ್ದೇಶಿಸಿರುವ  10ನೇ ಆವೃತ್ತಿಯ ಟೆಂಡರ್‌  ಪ್ರಕ್ರಿಯೆ ಮುಂದೂಡಲಾಗುವ ಸಾಧ್ಯತೆ  ದಟ್ಟವಾಗಿದೆ. ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ 18 ಪ್ರಮುಖ ಕಂಪೆನಿಗಳು ಈ ಬಾರಿ ಐಪಿಎಲ್‌ ಮಾಧ್ಯಮ  ಹಕ್ಕು ಪಡೆಯಲು ಬಿಡ್‌ ಸಲ್ಲಿಸಿವೆ.

ಲೋಧಾ ಸಮಿತಿಯ ಅನುಮತಿ ಯಿಲ್ಲದೆ ಟೆಂಡರ್‌ ಹಂಚಿಕೆ ಮಾಡದಂತೆ ಸುಪ್ರೀಂಕೋರ್ಟ್‌ ಹೋದ ವಾರ ಬಿಸಿಸಿಐಗೆ ತಾಕೀತು ಮಾಡಿದ್ದರಿಂದ   ಕಾರ್ಯದರ್ಶಿ ಅಜಯ್‌ ಶಿರ್ಕೆ ಅವರು  ಸಮಿತಿಯ ಮುಖ್ಯಸ್ಥ  ಲೋಧಾ ಅವರಿಗೆ ಪತ್ರ   ಬರೆದಿದ್ದರು.

ಪತ್ರದಲ್ಲಿ ಅವರು ‘ಐಪಿಎಲ್‌ ಮಾಧ್ಯಮ ಹಕ್ಕುಗಳಿಗಾಗಿ ಕರೆದಿರುವ ಟೆಂಡರ್‌ ಪ್ರಕ್ರಿಯೆಯನ್ನು ಪಾರದರ್ಶಕ ವಾಗಿ ನಡೆಸಲು   ತೀರ್ಮಾನಿಸಿದ್ದು ಸುಪ್ರೀಂ ಕೋರ್ಟ್‌ ಆದೇಶಕ್ಕೂ ಮುನ್ನವೇ ಡೆಲೊಯಿಟ್‌ ಲೆಕ್ಕಪರಿ ಶೋಧನಾ ಸಂಸ್ಥೆಯನ್ನು ಮೇಲ್ವಿ ಚಾರಣೆಗೆ ನೇಮಿಸಿದ್ದೇವೆ. ಅದರ ಉಸ್ತು ವಾರಿಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯ ಲಿದೆ. ಇದರಲ್ಲಿ ಬಿಸಿಸಿಐ  ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು. ಜೊತೆಗೆ  ಈ ವಿಷಯದಲ್ಲಿ ಸಮಿತಿ ನೀಡುವ ನಿರ್ದೇಶನಗಳನ್ನು ಪಾಲಿಸಲು  ತಯಾರಿದ್ದೇವೆ ಎಂದೂ ತಿಳಿಸಿದ್ದರು.

ಈ ಕುರಿತು ಶಿರ್ಕೆ ಅವರಿಗೆ ಪತ್ರ ಬರೆದಿರುವ ಲೋಧಾ ಸಮಿತಿಯ ಕಾರ್ಯದರ್ಶಿ ಗೋಪಾಲ ಶಂಕರ ನಾರಾಯಣನ್‌ ‘ನೀವು ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸಿದರೆ ಸಮಿತಿಯು ಎಲ್ಲಾ  ಬಗೆಯಲ್ಲೂ ನಿಮಗೆ ಸೂಕ್ತ ಸಲಹೆ ಹಾಗೂ ನಿರ್ದೇಶನ ನೀಡಲಿದೆ’ ಎಂದಿದ್ದಾರೆ.

‘ನೀವು ಹಿಂದೆ 10 ವರ್ಷಗಳ ಅವಧಿಗೆ ಟೆಂಡರ್‌ ಕರೆದಿದ್ದೀರಿ. ಅದು ಯಾವಾಗ ಮುಗಿಯಲಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಹೀಗಿರುವಾಗಲೇ ತರಾತುರಿಯಲ್ಲಿ ಮತ್ತೊಮ್ಮೆ ಟೆಂಡರ್‌ ಹಂಚಿಕೆ ಮಾಡಲು ಮುಂದಾಗಿದ್ದೀರಿ. ಇದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ’ ಎಂದೂ ತಿಳಿಸಿದ್ದಾರೆ. ಈ ಬಗ್ಗೆ ಅನುರಾಗ್‌ ಠಾಕೂರ್‌ ಕೂಡಾ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.