ADVERTISEMENT

ಡೇವಿಸ್‌ ಕಪ್‌: ಪೇಸ್‌–ಬೋಪಣ್ಣ: ಯಾರಿಗೆ ಸ್ಥಾನ?

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಡೇವಿಸ್‌ ಕಪ್‌:  ಪೇಸ್‌–ಬೋಪಣ್ಣ: ಯಾರಿಗೆ ಸ್ಥಾನ?
ಡೇವಿಸ್‌ ಕಪ್‌: ಪೇಸ್‌–ಬೋಪಣ್ಣ: ಯಾರಿಗೆ ಸ್ಥಾನ?   

ಬೆಂಗಳೂರು: ಮುಂದಿನ ತಿಂಗಳು ಇಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ) ಅಂಕಣದಲ್ಲಿ ಆಯೋಜನೆಯಾಗಿರುವ ಉಜ್ಬೇಕಿಸ್ತಾನ ವಿರುದ್ಧದ ಡೇವಿಸ್‌ ಕಪ್ ಪಂದ್ಯಕ್ಕೆ ಮಂಗಳವಾರ ನಾಲ್ಕು ಸದಸ್ಯರನ್ನು ಒಳಗೊಂಡ ಭಾರತದ ಅಂತಿಮ  ತಂಡವನ್ನು ಆಯ್ಕೆ ಮಾಡಲಾಗುತ್ತದೆ.

ಡೇವಿಸ್‌ ಕಪ್‌ನ ಏಷ್ಯಾ ಒಸಿನಿಯಾ ವಲಯದ ಎರಡನೇ ಸುತ್ತಿನ ಪಂದ್ಯ ಏಪ್ರಿಲ್‌ 7ರಿಂದ ಮೂರು ದಿನ ನಡೆಯಲಿದೆ. ಹೋದ ತಿಂಗಳು ಪುಣೆಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಎದುರು 4–1ರಲ್ಲಿ ಗೆಲುವು ಸಾಧಿಸಿತ್ತು.

ವಿಶ್ವ ರ‍್ಯಾಂಕ್‌ನಲ್ಲಿ 269ನೇ ಸ್ಥಾನ ಹೊಂದಿರುವ ರಾಮಕುಮಾರ್ ರಾಮನಾಥನ್ ಮತ್ತು 307ನೇ ಸ್ಥಾನದಲ್ಲಿರುವ ಯೂಕಿ ಭಾಂಬ್ರಿ ಅವರು ಸಿಂಗಲ್ಸ್‌ ಮತ್ತು ರಿವರ್ಸ್‌ ಸಿಂಗಲ್ಸ್‌ ಪಂದ್ಯಗಳಲ್ಲಿ ಆಡುವ ಸಾಧ್ಯತೆಯಿದೆ. ಆದರೆ ಕುತೂಹಲಕ್ಕೆ ಕಾರಣವಾಗಿರುವುದು ಡಬಲ್ಸ್ ತಂಡದ ಆಯ್ಕೆ.

ADVERTISEMENT

ಅನುಭವಿಗಳಾದ ಲಿಯಾಂಡರ್ ಪೇಸ್ ಮತ್ತು ಕರ್ನಾಟಕದ ರೋಹನ್ ಬೋಪಣ್ಣ ಅವರಲ್ಲಿ ಯಾರು ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. ಒಂದು ವೇಳೆ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಸ್ಥಾನ ಸಿಕ್ಕರೆ ಡಬಲ್ಸ್‌ ಜೊತೆಗಾರ ಯಾರಾಗುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಏಕೆಂದರೆ ಇತ್ತೀಚೆಗೆ ಉದ್ಯಾನನಗರಿಯಲ್ಲಿ  ನಡೆದ ಐಟಿಎಫ್‌ ಫ್ಯೂಚರ್ ಟೆನಿಸ್ ಟೂರ್ನಿಯಲ್ಲಿ ಎನ್. ಶ್ರೀರಾಮ ಬಾಲಾಜಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು.

ಆದ್ದರಿಂದ ತಮಿಳುನಾಡಿನ ಈ ಆಟಗಾರನಿಗೆ ಅಂತಿಮ ತಂಡದಲ್ಲಿ ಸ್ಥಾನ ನೀಡುವ ಬಗ್ಗೆ  ತಂಡದ ಕೋಚ್‌ ಜೀಶನ್ ಅಲಿ ಸೈಯದ್  ಆ ಟೂರ್ನಿಯ ವೇಳೆ ಸುಳಿವು ನೀಡಿದ್ದಾರೆ.

ಮೊದಲ ಬಾರಿಗೆ ‘ಆಟವಾಡದ ನಾಯಕ’ರಾಗಿರುವ ಮಹೇಶ್ ಭೂಪತಿ ಅವರು ತಂಡವನ್ನು ಆಯ್ಕೆ ಮಾಡಲಿದ್ದಾರೆ.

‘ಇತ್ತೀಚಿಗೆ ನಡೆದ ಟೂರ್ನಿಗಳಲ್ಲಿ ಆಟಗಾರರು ನೀಡಿದ ಸಾಮರ್ಥ್ಯ ವನ್ನು ಪರಿಗಣಿಸಿ ಅಂತಿಮ ನಾಲ್ಕರ ಬಳಗವನ್ನು ಆಯ್ಕೆ ಮಾಡಲಾಗುತ್ತದೆ. ಎದುರಾಳಿ ತಂಡದ ಶಕ್ತಿ ಮತ್ತು ದೌರ್ಬಲ್ಯವನ್ನು ನೋಡಿ ನಮ್ಮ ತಂಡದ ಆಯ್ಕೆ ಇರಲಿದೆ’ ಎಂದು ಮಹೇಶ್ ಭೂಪತಿ ಹೇಳಿದ್ದಾರೆ.

ಬೋಪಣ್ಣ ಮತ್ತು ಲಿಯಾಂಡರ್ ಪೇಸ್ ಅವರು ಇತ್ತೀಚಿಗೆ ನಡೆದ ಇಂಡಿಯಾನ ವೆಲ್ಸ್ ಮತ್ತು ಚಾಲೆಂಜರ್ಸ್ ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲಿ ಸೋಲು ಕಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.