ADVERTISEMENT

ದಕ್ಷಿಣ ವಲಯಕ್ಕೆ ಗೆಲುವು

ಪಿಟಿಐ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಗುರುವಾರ ಅರ್ಧಶತಕ ಹೊಡೆದ ದಕ್ಷಿಣ ವಲಯ ತಂಡದ ಮಯಂಕ್‌
ಗುರುವಾರ ಅರ್ಧಶತಕ ಹೊಡೆದ ದಕ್ಷಿಣ ವಲಯ ತಂಡದ ಮಯಂಕ್‌   
ಮುಂಬೈ: ಮೊದಲ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ದಕ್ಷಿಣ ವಲಯ ತಂಡ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಕೊನೆಗೂ  ಗೆಲುವು ದಾಖಲಿಸಿದೆ.
 
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪಶ್ಚಿಮ ವಲಯ ನಿಗದಿತ 20 ಓವರ್‌ಗಳಲ್ಲಿ 141 ರನ್‌ ಕಲೆ ಹಾಕಿತು. ಈ ಸಾಧಾರಣ ಗುರಿಯನ್ನು ಕರ್ನಾಟಕದ ವಿನಯ್‌ ಕುಮಾರ್‌ ನಾಯಕತ್ವದ ದಕ್ಷಿಣ ವಲಯ 17.4 ಓವರ್‌ಗಳಲ್ಲಿ ಸುಲಭವಾಗಿ ತಲುಪಿ  ನಾಲ್ಕು ಪಾಯಿಂಟ್ಸ್‌ ಪಡೆಯಿತು.
 
ಪೂರ್ವ ವಲಯ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ 12 ಪಾಯಿಂಟ್ಸ್‌ನಿಂದ ಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿದೆ. ಕೇಂದ್ರ ವಲಯ ಎಂಟು ಪಾಯಿಂಟ್ಸ್‌ನಿಂದ ಎರಡನೇ ಸ್ಥಾನ ದಲ್ಲಿದೆ. ಉಭಯ ತಂಡಗಳಿಗೂ ತಲಾ ಒಂದು ಪಂದ್ಯ ಬಾಕಿಯಿರುವ ಕಾರಣ ಚಾಂಪಿಯನ್‌ ಪಟ್ಟ ಯಾರಿಗೆ ಎನ್ನುವ ಕುತೂಹಲವಿದೆ.
 
 ಪಶ್ಚಿಮ ವಲಯ  ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ  ಶೆಲ್ಡನ್ ಜಾಕ್ಸನ್‌, ಕೇದಾರ್‌ ಜಾಧವ್‌, ಅಭಿಷೇಕ್‌ ನಾಯರ್  ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾದ ಕಾರಣ ತಂಡಕ್ಕೆ ಸವಾಲಿನ ಗುರಿ ನೀಡಲು ಸಾಧ್ಯವಾಗಲಿಲ್ಲ.
 
ಮಯಂಕ್‌ ಅರ್ಧಶತಕ: ಹಿಂದಿನ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಕರ್ನಾಟಕದ ಮಯಂಕ್‌ ಅಗರವಾಲ್‌ (70, 46 ಎಸೆತ, 9 ಬೌಂಡರಿ, 2 ಸಿಕ್ಸರ್‌) ದಕ್ಷಿಣ ವಲಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 
 
ಸಂಕ್ಷಿಪ್ತ ಸ್ಕೋರು:
ಪಶ್ಚಿಮ ವಲಯ 20  ಓವರ್‌ಗಳಲ್ಲಿ 9 ವಿಕೆಟ್‌ಗೆ 140 ( ದೀಪಕ್ ಹೂಡಾ 32, ಚಾಮಾ ಮಿಲಿಂದ 41ಕ್ಕೆ3, ವಿಜಯ್‌ ಶಂಕರ್ 21ಕ್ಕೆ2).
ದಕ್ಷಿಣ ವಲಯ 17.4 ಓವರ್‌ ಗಳಲ್ಲಿ 5 ವಿಕೆಟ್‌ಗೆ 141 (ವಿಷ್ಣು ವಿನೋದ್‌ 36, ಮಯಂಕ್‌ ಅಗರ ವಾಲ್‌ 70, ದಿನೇಶ್ ಕಾರ್ತಿಕ್‌ 17; ಇರ್ಫಾನ್‌ ಪಠಾಣ್‌ 22ಕ್ಕೆ1).
ಫಲಿ ತಾಂಶ: ದಕ್ಷಿಣ ವಲಯಕ್ಕೆ ಐದು ವಿಕೆಟ್ ಗೆಲುವು ಹಾಗೂ ನಾಲ್ಕು ಪಾಯಿಂಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.