ADVERTISEMENT

ದೋನಿ ಸ್ಫೂರ್ತಿ ತುಂಬಿದ್ದಾರೆ

ಕ್ರಿಕೆಟ್‌ ಶಿಬಿರದಲ್ಲಿರುವ ಸಹಾ ಮುಕ್ತಮಾತು

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST

ಬೆಂಗಳೂರು: ‘ಟೆಸ್ಟ್‌ ಮಾದರಿಯಿಂದ ಮಹೇಂದ್ರ ಸಿಂಗ್ ದೋನಿ ಅವರು ನಿವೃತ್ತಿಯಾದ ಬಳಿಕ ಆ  ಸ್ಥಾನವನ್ನು ತುಂಬುವುದು ಅತ್ಯಂತ ಕಠಿಣವಾಗಿದೆ. ನನ್ನಲ್ಲಿ ದೋನಿ ಸ್ಫೂರ್ತಿ ತುಂಬಿದ್ದಾರೆ’ ಎಂದು ಭಾರತ ತಂಡದ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಹಾ ಹೇಳಿದ್ದಾರೆ.

ದೋನಿ 2014ರಲ್ಲಿ ಟೆಸ್ಟ್‌ನಿಂದ ನಿವೃತ್ತಿಯಾದ ಬಳಿಕ ಸಹಾ ವಿಕೆಟ್‌ ಕೀಪಿಂಗ್ ಜವಾಬ್ದಾರಿ ನಿಭಾಯಿಸುತ್ತಿ ದ್ದಾರೆ. ಆದರೆ ಅವರ ಸ್ಥಾನ ತುಂಬುವುದು ಸುಲಭವಲ್ಲ ಎಂದು ಅವರು ಹೇಳಿದರು.

ವೆಸ್ಟ್‌ ಇಂಡೀಸ್‌ ವಿರುದ್ಧದ ಕ್ರಿಕೆಟ್‌ ಸರಣಿಗೆ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ಉದ್ಯಾನನಗರಿಯಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದೆ. ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ಹಂಚಿಕೊಂಡರು. ಸಹಾ 11 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ.

‘ವಿಕೆಟ್‌ ಕೀಪಿಂಗ್ ಜವಾಬ್ದಾರಿಯ ಜೊತೆಗೆ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ದೋನಿ ಮಹತ್ವದ ಪಾತ್ರ ವಹಿಸಿದ್ದಾರೆ. ಅನೇಕ ಪಂದ್ಯಗಳಲ್ಲಿ ಜಯದ ರೂವಾರಿಯೂ ಆಗಿದ್ದಾರೆ. ಅವರ ಸ್ಥಾನ ತುಂಬಲು ಪ್ರತಿ ಪಂದ್ಯದಲ್ಲಿಯೂ ಯತ್ನಿಸುತ್ತಿದ್ದೇನೆ. ಕಳೆದ ಒಂದು ವರ್ಷದಿಂದ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ವೆಸ್ಟ್‌ ಇಂಡೀಸ್‌ ವಿರುದ್ಧವೂ ಚೆನ್ನಾಗಿ ಆಡುತ್ತೇವೆ. ಸರಣಿ ಜಯಿಸುತ್ತೇವೆ’ ಎಂದು ಸಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ವಂತ ತೀರ್ಮಾನ: ‘ಆಟಗಾರರು ಸ್ವಂತ ತೀರ್ಮಾನ ತೆಗೆದುಕೊಳ್ಳಲು ಅನಿಲ್‌ ಕುಂಬ್ಳೆ ಅವರು ಮುಕ್ತ ಅವಕಾಶ ನೀಡಿದ್ದಾರೆ. ಕೋಚ್‌ ಆಗಿ ಬಂದ ಬಳಿಕ ಅವರೊಂದಿಗೆ ನಾವೆಲ್ಲರೂ ಸಂವಾದ ನಡೆಸಿದ್ದೇವೆ. ಈಗಿನ ತಂಡದಲ್ಲಿ ಯುವ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮಗೆಲ್ಲರಿಗೂ ಅವರು ಸ್ಫೂರ್ತಿ’ ಎಂದು ವಿಂಡೀಸ್‌ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಕರ್ನಾಟಕದ ಕೆ.ಎಲ್‌. ರಾಹುಲ್‌ ಹೇಳಿದರು.

ಟೆಸ್ಟ್ ಸವಾಲಿನ ಮಾದರಿ: ‘ಏಕದಿನ ಮತ್ತು ಟ್ವೆಂಟಿ–20ಗಿಂತ ಟೆಸ್ಟ್ ಮಾದರಿ ಅತ್ಯಂತ ಸವಾಲಿನಿಂದ ಕೂಡಿರುತ್ತದೆ. ನಿಧಾನವಾಗಿ ಇನಿಂಗ್ಸ್‌ ಕಟ್ಟುವ ಕೌಶಲ ಮುಖ್ಯವಾಗುತ್ತದೆ. ಶ್ರೀಲಂಕಾ ವಿರುದ್ಧದ ಟೆಸ್ಟ್‌ ಪಂದ್ಯದಿಂದಲೇ ಈ ಮಾದರಿ ಯಲ್ಲಿ ಖುಷಿಯಿಂದ ಆಡುತ್ತಿದ್ದೇನೆ’ ಎಂದು ರಾಹುಲ್‌ ನುಡಿದರು.

‘ವಿಂಡೀಸ್‌ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆಡುವ ಮೊದಲು ಎರಡು ಅಭ್ಯಾಸ ಪಂದ್ಯ ಗಳನ್ನು ಆಡುತ್ತೇವೆ. ಸ್ಥಳೀಯ ವಾತಾವರ ಣಕ್ಕೆ ಹೊಂದಿಕೊಳ್ಳಲು ಅಭ್ಯಾಸ ಪಂದ್ಯ ಗಳು ಅನುಕೂಲವಾಗಿವೆ. ಹೊಸ ಸವಾಲಿಗೆ ಸಜ್ಜಾಗಲು ಉತ್ತಮ ಸಮಯ ಲಭಿಸಿದೆ’ ಎಂದೂ ಅವರು ನುಡಿದರು.
ರಾಹುಲ್ ಐದು ಟೆಸ್ಟ್ ಪಂದ್ಯಗಳ ನ್ನಾಡಿದ್ದು ಒಟ್ಟು 256 ರನ್ ಕಲೆ ಹಾಕಿ ದ್ದಾರೆ. ಎರಡು ಶತಕ ಬಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.