ADVERTISEMENT

ಫಾಂಟಮ್‌ ಸ್ಟ್ರೈಕರ್ಸ್‌ಗೆ ಪ್ರಶಸ್ತಿ

ಟೆನ್‌ಪಿನ್‌ ಬೌಲಿಂಗ್‌; ಚೆನ್ನೈ ಟರ್ಕಿಸ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಟ್ರೋಫಿಯೊಂದಿಗೆ ಫಾಂಟಮ್‌ ಸ್ಟ್ರೈಕರ್ಸ್‌ ಬೆಂಗಳೂರು ತಂಡದವರ ಸಂಭ್ರಮ
ಟ್ರೋಫಿಯೊಂದಿಗೆ ಫಾಂಟಮ್‌ ಸ್ಟ್ರೈಕರ್ಸ್‌ ಬೆಂಗಳೂರು ತಂಡದವರ ಸಂಭ್ರಮ   

ಬೆಂಗಳೂರು: ಆಕರ್ಷಕ ಆಟ ಆಡಿದ ಫಾಂಟಮ್‌ ಸ್ಟ್ರೈಕರ್ಸ್‌ ಬೆಂಗಳೂರು ತಂಡದವರು ಎರಡನೇ ಎಆರ್‌ಸಿ ಕೆಎಸ್‌ಟಿಬಿಎ ‘ಟೀಮ್‌ ಆಫ್‌ 5’ ಟೆನ್‌ಪಿನ್‌ ಬೌಲಿಂಗ್‌ ಟೂರ್ನಿಯಲ್ಲಿ ಪ್ರಶಸ್ತಿಯ ಸಾಧನೆ ಮಾಡಿದ್ದಾರೆ.

ಅಮೀಬಾ ಬೌಲಿಂಗ್‌ ಸೆಂಟರ್‌ನಲ್ಲಿ ನಡೆದ ಫೈನಲ್‌ನಲ್ಲಿ ಸಾಹಿಲ್‌ ಪಂಜಾಬಿ, ಎಸ್‌. ಚೇತನ್‌, ಶೋಮಿಕ್‌ ದತ್ತಾ, ರಕ್ತಿಮ್‌ ಮಹಾಂತ ಮತ್ತು ಆರ್‌. ಕೃಷ್ಣಾ ಅವರಿದ್ದ ಬೆಂಗಳೂರಿನ ತಂಡ 365–301ರಲ್ಲಿ ಚೆನ್ನೈ ಟರ್ಕಿಸ್‌ ತಂಡವನ್ನು ಪರಾಭವಗೊಳಿಸಿತು.

ತವರಿನ ಅಭಿಮಾನಿಗಳ ಬೆಂಬಲ ದೊಂದಿಗೆ ಕಣಕ್ಕಿಳಿದಿದ್ದ ಫಾಂಟಮ್‌ ತಂಡ ಮೊದಲ ಗೇಮ್‌ನಲ್ಲಿ ಉತ್ತಮ ಸ್ಟ್ರೈಕ್‌ರೇಟ್‌ ಕಾಪಾಡಿಕೊಳ್ಳಲು ವಿಫಲ ವಾಯಿತು. ಆತಿಥೇಯರು 182 ಪಿನ್‌ ಗಳನ್ನು ಹೆಕ್ಕಿದರೆ, ಚೆನ್ನೈ ತಂಡ 157 ಪಿನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ಎರಡನೇ ಗೇಮ್‌ನಲ್ಲಿ ಫಾಂಟಮ್‌ ತಂಡದ ಬೌಲರ್‌ಗಳು ಮಿಂಚಿದರು. ಹೀಗಾಗಿ ಗೆಲುವು ಸುಲಭವಾಯಿತು. ನಾಕೌಟ್‌ ಹಂತದ ಹೋರಾಟದಲ್ಲಿ ಫಾಂಟಮ್‌  394–325ರಲ್ಲಿ ಚೆನ್ನೈ ಸ್ಟ್ರೈಕರ್ಸ್‌ ತಂಡವನ್ನು ಹಣಿಯಿತು. ಈ ಮೂಲಕ ಚಿನ್ನದ ಪದಕ ಮತ್ತು ₹ 1.25 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿತು.

ಮೂರು ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಬೆಂಗಳೂರು, ಚೆನ್ನೈ, ನವದೆಹಲಿ, ಮುಂಬೈ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಕೋಲ್ಕತ್ತದ 24 ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.