ADVERTISEMENT

ಫುಟ್‌ಬಾಲ್‌: ರೇಂಜರ್ಸ್‌ ಎಫ್‌ಸಿಗೆ ಜಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 19:43 IST
Last Updated 17 ಜುಲೈ 2017, 19:43 IST

ಬೆಂಗಳೂರು: ಅಲನ್‌ ಮತ್ತು ಕಿರಣ್‌ ತಂದಿತ್ತ ತಲಾ ಎರಡು ಗೋಲುಗಳ ಬಲದಿಂದ  ರೇಂಜರ್ಸ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಸೋಮವಾರ ನಡೆದ ಪಂದ್ಯದಲ್ಲಿ ರೇಂಜರ್ಸ್‌ ಎಫ್‌ಸಿ 5–3 ಗೋಲುಗಳಿಂದ ವಿವೇಕಾನಂದ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ವಿಜಯಿ ತಂಡದ ಅಲನ್‌ 9ನೇ ಮತ್ತು 40ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿ ಮಿಂಚಿನ ಸಾಮರ್ಥ್ಯ ತೋರಿದರು.

ADVERTISEMENT

ಕಿರಣ್‌ ಅವರು 15 ಮತ್ತು 20ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು.ರೋಹನ್‌ ಅವರು 37ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ವಿವೇಕಾನಂದ ತಂಡದ ಆಟಗಾರ ರೊಮೆರಿಯೊ 30 ಮತ್ತು 51ನೇ ನಿಮಿಷಗಳಲ್ಲಿ ಎರಡು ಗೋಲು ಗಳಿಸಿದರು. ಭುವನ್‌ (1ನೇ ನಿ.) ಒಂದು ಗೋಲು ಗಳಿಸಿ ಸೋಲಿನ ನಡುವೆಯೂ ಗಮನ ಸೆಳೆದರು.

ದಿನದ ಇನ್ನೊಂದು ಪಂದ್ಯದಲ್ಲಿ ಯಂಗ್‌ ಡೈನಾಮೊಸ್‌ ಎಫ್‌ಸಿ 2–1 ಗೋಲುಗಳಿಂದ ರಬ್ಬಾನಿ ಎಫ್‌ಸಿ ತಂಡವನ್ನು ಮಣಿಸಿತು. ಡೈನಾಮೊಸ್‌ ತಂಡದ ಹರ್ಷಾ ಮತ್ತು ಪ್ರತಾಪ್‌ ಅವರು ಕ್ರಮವಾಗಿ 28 ಮತ್ತು 31ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ರಬ್ಬಾನಿ ತಂಡದ ಆರ್. ಸ್ಟೀಫನ್‌ 46ನೇ ನಿಮಿಷದಲ್ಲಿ ಗೋಲು ಗಳಿಸಿದರು. ಆದರೆ ಇತರ ಆಟಗಾರರಿಂದ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ.

ಮಂಗಳವಾರ ನಡೆಯುವ ಮೊದಲ ಪಂದ್ಯದಲ್ಲಿ ಸಿಟಿ ಕ್ಲಬ್‌ ಎಫ್‌ಸಿ, ರೆಬೆಲ್ಸ್‌ ಎಫ್‌ಸಿ ವಿರುದ್ಧ ಆಡಲಿದೆ. ದಿನದ ಇನ್ನೊಂದು ಪಂದ್ಯದಲ್ಲಿ ನ್ಯಾಷನಲ್ಸ್‌ ಎಫ್‌ಸಿ, ರೋವರ್ಸ್‌ ಎಫ್‌ಸಿ ಎದುರು ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.