ADVERTISEMENT

ಫೈನಲ್‌ ಕನಸಲ್ಲಿ ದೋನಿ ಬಳಗ

ಕ್ರಿಕೆಟ್‌: ಭಾರತ– ಇಂಗ್ಲೆಂಡ್‌ ‘ಸೆಮಿಫೈನಲ್‌’ ಪಂದ್ಯ ಇಂದು

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 20:17 IST
Last Updated 29 ಜನವರಿ 2015, 20:17 IST
ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ.  ನಾಯಕ ಮಹೇಂದ್ರ ಸಿಂಗ್‌ ದೋನಿ ತಂಡವನ್ನು ಜಯದತ್ತ ಮುನ್ನಡೆಸುವರೇ?
ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ. ನಾಯಕ ಮಹೇಂದ್ರ ಸಿಂಗ್‌ ದೋನಿ ತಂಡವನ್ನು ಜಯದತ್ತ ಮುನ್ನಡೆಸುವರೇ?   

ಪರ್ತ್‌: ಸಂಘಟಿತ ಹೋರಾಟ ನೀಡಲು ಸಾಧ್ಯ ವಾಗದೆ ಒತ್ತಡದಲ್ಲಿರುವ ಭಾರತ ತಂಡ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯ ಕೊನೆಯ ಲೀಗ್‌ ಪಂದ್ಯ ದಲ್ಲಿ ಶುಕ್ರವಾರ ಇಂಗ್ಲೆಂಡ್‌ನ ಸವಾಲನ್ನು ಎದುರಿಸಲಿದೆ.

ಮಹೇಂದ್ರ ಸಿಂಗ್‌ ದೋನಿ ಬಳಗಕ್ಕೆ ಫೈನಲ್‌ ಪ್ರವೇಶಿಸಬೇಕಾದರೆ ಗೆಲುವು ಅನಿವಾರ್ಯ. ಆದ್ದರಿಂದ ಈ ಪಂದ್ಯ ಒಂದು ರೀತಿಯಲ್ಲಿ ‘ಸೆಮಿಫೈನಲ್‌’ ಹೋರಾಟ ಎನಿಸಿಕೊಂಡಿದೆ. ಭಾರತ ತಂಡ ಸರಣಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆಯಬೇಕಿದ್ದ ಪಂದ್ಯ ಮಳೆಯಿಂದ ರದ್ದುಕೊಂಡಿತ್ತು.

15 ಪಾಯಿಂಟ್‌ ಕಲೆ ಹಾಕಿರುವ ಆಸ್ಟ್ರೇಲಿಯಾ ಈಗಾಗಲೇ ಫೈನಲ್‌ ಪ್ರವೇಶಿಸಿದೆ. ಇಂಗ್ಲೆಂಡ್‌ ಐದು ಪಾಯಿಂಟ್‌ಗಳನ್ನು ಹೊಂದಿದ್ದರೆ, ಭಾರತದ ಬಳಿ ಇರುವುದು ಕೇವಲ ಎರಡು ಪಾಯಿಂಟ್‌. ಹೋದ ವಾರ ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಎಯೊನ್ ಮಾರ್ಗನ್‌ ಬಳಗ ಭಾರತದ ವಿರುದ್ಧ 9 ವಿಕೆಟ್‌ಗಳ ಗೆಲುವು ಪಡೆದಿತ್ತು.

ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ದೋನಿ ಬಳಗ 267 ರನ್‌ ಗಳಿಸಿತ್ತು. ಆದರೆ ಬೌಲರ್‌ಗಳು ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದ ಕಾರಣ ಸೋಲು ಎದುರಾಗಿತ್ತು. ಇಂಗ್ಲೆಂಡ್‌ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಭಾರತ ಕೇವಲ 153 ರನ್‌ಗಳಿಗೆ ಆಲೌಟಾಗಿತ್ತು.

ಬ್ಯಾಟ್ಸ್‌ಮನ್‌ಗಳು ಸಂಘಟಿತ ಪ್ರದರ್ಶನ ನೀಡಲು ವಿಫಲವಾಗಿರುವುದು ಭಾರತದ ಹಿನ್ನಡೆಗೆ ಪ್ರಮುಖ ಕಾರಣ. ಮೊದಲ ಪಂದ್ಯದಲ್ಲಿ ರೋಹಿತ್‌ ಶರ್ಮ ಆಕರ್ಷಕ ಶತಕ (138) ಗಳಿಸಿ ಮಿಂಚಿದ್ದರು. ಆದರೆ ಗಾಯದ ಸಮಸ್ಯೆಯ ಕಾರಣ ಅವರು ಮುಂದಿನ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಮುಂಬೈನ ಈ ಬ್ಯಾಟ್ಸ್‌ಮನ್‌ ಬುಧವಾರ ಮತ್ತು ಗುರುವಾರ ನೆಟ್‌ ಪ್ರಾಕ್ಟೀಸ್‌ನಲ್ಲಿ ಪಾಲ್ಗೊಂಡಿದ್ದರು. ಆದರೂ ಅವರು ಶುಕ್ರವಾರ ಆಡುವುದು ಅನುಮಾನ.

ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಫಾರ್ಮ್‌ ಕಂಡುಕೊಳ್ಳಲು ಪರದಾಡುತ್ತಿರುವುದು ಭಾರತದ ಚಿಂತೆಗೆ ಕಾರಣವಾಗಿದೆ. ಅವರು   ಬೇಗನೇ ವಿಕೆಟ್‌ ಒಪ್ಪಿಸುವುದರಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲಿನ ಒತ್ತಡ ಹೆಚ್ಚುತ್ತದೆ. ಅಜಿಂಕ್ಯ ರಹಾನೆ, ಅಂಬಟಿ ರಾಯುಡು ಮತ್ತು ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಲಯ ಕಂಡುಕೊಳ್ಳುವರೇ ಎಂಬುದನ್ನು ನೋಡಬೇಕು.

ಭಾರತದ ಬೌಲರ್‌ಗಳೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ವೇಗಿಗಳಾದ ಇಶಾಂತ್‌ ಶರ್ಮ,  ಭುವನೇಶ್ವರ್‌ ಕುಮಾರ್‌, ಉಮೇಶ್‌ ಯಾದವ್‌ ಮತ್ತು ಮೊಹಮ್ಮದ್‌ ಶಮಿ ಹೆಚ್ಚೆಚ್ಚು ರನ್‌ಗಳನ್ನು ಬಿಟ್ಟುಕೊಡುತ್ತಿದ್ದಾರೆ. ಆದರೆ ವಿಕೆಟ್‌ಗಳನ್ನು ಪಡೆದು ಎದುರಾಳಿಗಳ ಮೇಲೆ ಒತ್ತಡ ಹೇರುವಲ್ಲಿ ಎಡವಿದ್ದಾರೆ.

ಸ್ಪಿನ್ನರ್‌ಗಳಾದ ಆರ್‌. ಅಶ್ವಿನ್ ಮತ್ತು ಅಕ್ಷರ್‌ ಪಟೇಲ್‌ ಪ್ರಭಾವಿ  ಬೌಲಿಂಗ್‌ ಮಾಡಲು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆದರೆ ಇವರಿಗೆ ವೇಗಿಗಳಿಂದ ಸೂಕ್ತ ಬೆಂಬಲ ಲಭಿಸುತ್ತಿಲ್ಲ. ಇದರಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸುಲಭವಾಗಿ ರನ್‌ ಗಳಿಸಲು ಸಾಧ್ಯವಾಗುತ್ತಿದೆ.

ಮತ್ತೊಂದೆಡೆ ಇಂಗ್ಲೆಂಡ್‌ ಕೂಡಾ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ತಂಡ ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಬೋನಸ್‌ ಪಾಯಿಂಟ್‌ನೊಂದಿಗೆ ಗೆಲುವು ಪಡೆದಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು.

ಮೂರು ಪಂದ್ಯಗಳಿಂದ ಒಟ್ಟು 229 ರನ್‌ ಗಳಿಸಿರುವ ಇಯಾನ್‌ ಬೆಲ್‌ ಇಂಗ್ಲೆಂಡ್‌ನ ಬ್ಯಾಟಿಂಗ್‌ ಶಕ್ತಿ ಎನಿಸಿದ್ದಾರೆ. ನಾಯಕ ಎಯೊನ್‌ ಮಾರ್ಗನ್‌ ಮತ್ತು ಮೊಯೀನ್‌ ಅಲಿ ಅವರೂ ಭಾರತದ ಬೌಲರ್‌ಗಳಿಗೆ ಸವಾಲೊಡ್ಡಲು ಸಜ್ಜಾಗಿದ್ದಾರೆ.

ಆರಂಭ: ಬೆಳಿಗ್ಗೆ 8.50ಕ್ಕೆ (ಭಾರತೀಯ ಕಾಲಮಾನ), ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.